ನೆರಳು | ಶಿಲ್ಪ. ಬಿ
ಯಾವ ಜನುಮಗಳ
ಗಂಟು ಹಾಕಿದ
ಋಣಾನುಬಂಧವೋ
ನನ್ನನ್ನೇ ಅರಸಿ ಹಿಂಬಾಲಿಸುತ್ತಾ
ಬರುತ್ತಿರುವೆ ನೀ..
ನನ್ನೊಂದಿಗಿಂದು.
ಬದುಕು ಕರೆದೊಯ್ಯುತ್ತಿರುವ
ಹೂವು ಮುಳ್ಳುಗಳ ಹೆದ್ದಾರಿಯಲ್ಲಿ
ನಟಿಸುತ್ತಾ ನಡೆಯುತ್ತಿರುವ
ನನ್ನನ್ನು ಅನುಕರಿಸುತ್ತಿರುವ ನಿನ್ನ
ಮಧುರ ಬಾಂಧವ್ಯಕ್ಕೆ ಆಹ್ವಾನವಿಟ್ಟ
ಸುಂದರ ಭಾವ ಯಾವುದು?
ಭೂ ಮಡಿಲ
ತುಂಬಾ ಕಂಬನಿಗಳ ಸುರಿಸಿ
ಜಗವನ್ನೇ ನಾಟ್ಯ ಲೋಕವನ್ನಾಗಿಸುವ
ಮೇಘಾಲಯದ ಮನವೇ ತಲೆ ಬಾಗಿ
ನಿಲ್ಲುವ ಮನವೇನೆ ನಿನ್ನದು?
ಸಂತಸ ವಿಷಾದಗಳ ಸೇತುವೆಯಲ್ಲಿ
ಮೌನವನ್ನೇ ಹೊತ್ತು
ಭಾವರಹಿತ ಜೀವದಂತೆ
ನಡೆಯುವ
ಆಸೆ ಏಕೆ ನಿನಗೆ?
ಸತ್ಯ ಮಾಯೆಗಳ
ಸುಳಿಯ ಬಂಧನದಲ್ಲಿ
ಸಿಲುಕಿ ಹಾರಾಡುವ ಹಕ್ಕಿಯಂತೆ
ಸೋತು ನಿಲ್ಲುವ ಸೂಚನೆ
ಏನೊ ಮನಸ್ಸಿಗಿಂದು?
ವ್ಯಕ್ತಪಡಿಸಿಬಿಡು
ನಿನ್ನ ಭಾವನೆಯನ್ನೊಮ್ಮೆ..!
ನಿನ್ನ ಮೌನದಿಂದಿರುವ
ಮಾತುಗಳನ್ನು ಹುಡುಕುವ ಯಾನದಲ್ಲಿ
ಬೆಚ್ಚಿಬಿದ್ದು ಬೆವರುತಾ
ಮೂಕವಾಗಿ ಬಿಟ್ಟಿರುವೆ ನಾನಿಂದು..
ಶಿಲ್ಪ. ಬಿ
ಪ್ರಥಮ ಪಿ.ಯು.ಸಿ
ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜು, ಮೈಸೂರು
One thought on “ನೆರಳು | ಶಿಲ್ಪ. ಬಿ”
ಚೆನ್ನಾಗಿದೆ