ಕಣ್ಣ ರೆಪ್ಪೆಗಳ ನಡುವೆ | ಶಿಲ್ಪ ಬಿ
ಯಾವ ಕವಿಯ ಜೋಡಿಸಿದ
ಸರಳ ಸುಂದರ ಪದಗಳ
ಮಹಾಕಾವ್ಯವೋ ನೀನು..?
ಯಾವ ಯೌವನದ ಸ್ಪರ್ಶ ಹೆಣೆದ
ನೂಲು ವಿನ್ಯಾಸಗಳ
ಸೀರೆಯ ಸೆರಗಿನ ಧಾರೆಯೊ ನೀನು?
ನಿನ್ನ ಕಂಡ ಆ ಕ್ಷಣದಲ್ಲಿ
ಕಣ್ಣ ರೆಪ್ಪೆಗಳ ನಡುವೆ
ಮೂಡುತ್ತಿಹುದು ಮಂದಹಾಸದ
ತನಿರಸದ ಮಾಯೆ…
ನಿನ್ನನ್ನೆ ಕಾಣುತ್ತಿರುವ ಆ ಕ್ಷಣದಲ್ಲಿ
ಮೈ ಬೆವರುತ್ತ, ಮುಗುಳು ನಗೆ ನಡಗುತ್ತ,
ಹೃದಯದೊಳಗೊಂದು ಹೃದಯ ಮಿಡಿಯುತ್ತ,
ತಣ್ಣನೆಯ ಉಸಿರನ್ನು ಆವರಿಸುತ್ತಿಹುದು
ನಿನ್ನ ನೀಲಿ ಬಣ್ಣದ ಛಾಯೆ….
ವಾಸ್ತವನ್ನೆ ಎದುರಿಸಲಾಗದೆ
ಆಶ್ಚರ್ಯದಲ್ಲಿ ಕಣ್ಮಿಟಕಿಸುತ್ತಿರುವ
ಸವಿ ಭಾವನೆಗಳ ಮನಸ್ಸೊ ಇದು..?
ವಾಸ್ತವದ ಸಾಗರದಾಚೆಗೊಂದು
ಅಸ್ತಿತ್ವವನ್ನು ಹುಡುಕಾಡುತ್ತ
ನಿನ್ನ ಕಣ್ಣಲ್ಲಿ ಕಣ್ಣನಿಟ್ಟು
ರೋಮಾಂಚನಗೊಳುತ್ತಿರುವ ಕನಸೊ ಇದು…?
ವಿಜ್ಞಾನದ ಕೋಟಿ ಕೋಟಿ ಪದಗಳೇ
ದಿವ್ಯ ಧ್ವನಿಯಲ್ಲಿ ಹಾಡುತ್ತಿದ್ದರು
ನೀ ಹುಟ್ಟಿ ಬಂದ ಜನ್ಮ ಚರಿತ್ರೆಯನ್ನು,
ನಿನ್ನಲ್ಲಿ ಮತ್ತೇನನ್ನೊ ಹುಡುಕುತ್ತಾ,
ನೋಡುತ್ತಾ, ನಲಿಯುತ್ತ,
ಹಾಡುತ್ತಾ ಕುಣಿಯುತ್ತ…
ಮಧುರ ಧ್ವನಿಗೂ, ಕುತೂಹಲದಲ್ಲಿ ಕಿವುಡಾಗುತ್ತಿಹುದು
ಮನೋಹರವಾದ ಭಾವವು ಇಂದು…
ಮಗುವಿನ ಮೃದು ಸ್ಪರ್ಶ
ಅಪ್ಪನ ಕಿರುಬೆರಳನ್ನು ಹಿಡಿದು ನಸುನಗುವಂತೆ
ನಿನ್ನನ್ನು ಅಣುಕ್ಷಣ ಸ್ಪರ್ಶಿಸಿ
ಕಿರುನಗೆಯ ಬೀರುವೆ ನಾ
ಬದುಕಿನಾಗಸದವರೆಗೆ….
–
ಶಿಲ್ಪ ಬಿ
ಪ್ರಥಮ ಪಿ ಯು ಸಿ
ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜು