Bluetooth Earphones ಗಳಿವೆ ಎಚ್ಚರ ! | ಶಿಲ್ಪ. ಬಿ
ಕಾಯಕವೇ ಕೈಲಾಸವೆಂದು ಸೂರ್ಯ ತನ್ನ ಕರ್ತವ್ಯವನ್ನೆಲ್ಲ ಮುಗಿಸಿ ಜಗಕ್ಕೊಮ್ಮೆ ಕೈ ಬಿಸಿ ವಿದಾಯ ಹೇಳುತ್ತಾ ಮನೆಗೆ ತೆರಳುವಾಗ, ಮೆಲ್ಲ ಮೆಲ್ಲನೆ ಕತ್ತಲು ಮುಸುಕುತ್ತಿದ್ದ ನೀಲಾಕಾಶವನ್ನು ಚಂದ್ರನ ಉತ್ಸಾಹದಿಂದ ಪ್ರವೇಶಿಸುತ್ತಿದ್ದನು.
ಒಂದು ಪುಟ್ಟ ಸುಂದರ ಬದುಕನ್ನು ಕಟ್ಟಿಕೊಳ್ಳಲು ಹಗಲೆಲ್ಲ ದುಡಿದು ದುಡಿದು ಆಯಾಸಗೊಂಡ ಜನರೆಲ್ಲರೂ ಮರಳಿ ಮನೆಗೆ ಹಿಂದಿರುಗಲು ಆ ಒಂದು ಬಸ್ ನಿಲ್ದಾಣದಲ್ಲಿ ನೆರೆದಿದ್ದರೂ. “ತಡವಾಗಿದ್ದಕ್ಕೆ ಅಮ್ಮನಿಗೆ ಏನು ಕಾರಣ ಹೇಳುವುದೊ?” ಎಂದು ಯೋಚಿಸುತ್ತಿದ್ದ ಕಾಲೇಜ್ ವಿದ್ಯಾರ್ಥಿಗಳು, “ಮನೆಗೆ ಹೋಗಿ ಏನು ಅಡಿಗೆ ಮಾಡುವುದೊ” ಎಂದು ಚಿಂತಿಸುತ್ತಿದ್ದ ಅಮ್ಮಂದಿರ, “ಸಂಬಳವೂ ಹೆಚ್ಚಾಗದೆ? ಮಕ್ಕಳ ಶುಲ್ಕ ಹೇಗೆ ಕಟ್ಟುವುದೂ” ಎಂದು ಬೆಂಗಳೂರಿನ ಒತ್ತಡಗಳಲ್ಲಿ ಮುಳುಗಿದ ಅಪ್ಪಂದಿರು, ಬೆಂಗಳೂರನ್ನೆ ಅನ್ವೇಷಿಸಿದರು ಒಂದು ಕೆಲಸವು ಸಿಗದೆ ನಿರಾಸೆಗೊಂಡ ಯುವಕರು, ಅಮ್ಮ ಕೊಡಿಸದ ಚಾಕ್ಲೆಟ್ನಿಂದ ಮುನಿಸಿಕೊಂಡ ಮಕ್ಕಳು,
ಇವತ್ತಾಗದಿದ್ದರೆ ಏನು, “ನಾಳೆ ಇದೆ ಅಲ್ಲವ..?” ಎಂದು ಮರಳಿ ಮೂಡುತ್ತಿದ್ದ ನವ ಭರವಸೆಯ ಭಾವನೆಗಳಿಂದ ಆ ಬಸ್ ನಿಲ್ದಾಣವು ಕೂಡಿ, ವರ್ಣ ರಂಜಿತ ವಿನ್ಯಾಸಗಳ ಕಲಾಕೃತಿಯಾಗಿತ್ತು.
ಈ ಜನರ ಕಲರವದ ನಡುವೆಯೆ ಅವಳು ಸಹ ಬಸ್ಸಿಗಾಗಿ ಕಾಯುತ್ತಾ, ಮೊಬೈಲಿನಲ್ಲಿ ಮಾತನಾಡುತ್ತಿರುವಾಗ ಮುಖದ ಮೇಲೆ ಭಯ, ಗೊಂದಲ, ಆಸೆ, ಕೋಪ, ಎಂಬ ಸಕಲರಸಗಳೆಲ್ಲವೂ ಮನೆ ಮಾಡಿ ಮಾತಿನಲ್ಲಿ ಮೂಡುತ್ತಿದ್ದ ಪದಗಳನ್ನು ತೊದಲಿಸುತ್ತಿದ್ದವು.
“ಇಲ್ಲ ಆಗಲ್ಲ. ನಾನು ಅವರನ್ನು ಸಂದರ್ಶನ ಮಾಡಲಾರೆ. ಎಷ್ಟು ಸಾರಿ ಹೇಳುವುದು ನಿಮಗೆ. ಅಷ್ಟು ಪುರಸ್ಕಾರಗಳನ್ನು ಪಡೆದು ಕರ್ನಾಟಕದಲ್ಲೆಡೆ ಪ್ರಸಿದ್ಧರಾಗಿ, ಎಲ್ಲರ ಮನ ಗೆದ್ದಿರುವ ಅವರನ್ನು ಸಂದರ್ಶಿಸುವುದು ಎಂದರೆ ತಮಾಷೆಯ ವಿಷಯವೇ. ನಾನೇನೊ ನನ್ನ ಓದಿಗಾಗಿ ನಿಮ್ಮ ಪತ್ರಿಕಾ ಮುದ್ರಾಣಾಲಯದಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿರುವೆ. ಏನು ಅನುಭವವಿಲ್ಲದ ನನ್ನನ್ನೇ ನಿಮ್ಮ ಮ್ಯಾನೇಜರ್ ಏತಕ್ಕೆ ಸಂದರ್ಶನಕ್ಕೆ ಆಯ್ಕೆ ಮಾಡಿದರೊ ತಿಳಿಯದು. ನಾನು ಮಾತ್ರ ಇದನ್ನ ಮಾಡಲಾರೆ. ನನ್ನನ್ನು ಬಿಟ್ಟುಬಿಡಿ” ಎಂದು ಮೊಬೈಲಿನಲ್ಲಿ ಅವಳು ಗೋಳಾಡುತ್ತಾ ಮಾತನಾಡುವಾಗ, ಅವಳ ಪಕ್ಕದಲ್ಲಿ ನಿಂತಿದ್ದ ಯಾರೊ ಅಪರಿಚಿತರೊಬ್ಬರು “ಯಾಕಮ್ಮ ಹೆದರುತ್ತೀಯ. ಹೋಗು ನೀನು ಮೊದಲು” ಎಂದರು. ಅವಳಿಗೆ ಅರೆಗಳಿಗೆ ಆಶ್ಚರ್ಯವಾಯಿತು. ಮೊಬೈಲಿನಲ್ಲಿ ಮಾತನಾಡುವುದನ್ನು ಒಂದು ಕ್ಷಣ ನಿಲ್ಲಿಸಿ..
“ಹಾ!… ಏನ್ ಸರ್?” ಎಂದಳು.
ಅವರು ಮತ್ತೊಮ್ಮೆ “ನಾನು ಹೇಳುತ್ತಿದ್ದೇನಲ್ಲ. ನೀನು ಹೋಗಲೇಬೇಕು ಅಷ್ಟೇ” ಎಂದರು.
ಅವಳ ಆಶ್ಚರ್ಯ ಇನ್ನಷ್ಟು ಹೆಚ್ಚಾಯಿತು. “ಸರ್.. ನೀವೇನು ಹೇಳುತ್ತಿದ್ದೀರಾ ಎಂದು ಅರ್ಥ ಆಗಲಿಲ್ಲ.” ಎಂದಳು. ಅವರು ಮತ್ತೊಮ್ಮೆ “ನೀನು ಧೈರ್ಯವಾಗಿ ಹೋಗಮ್ಮ. ಯಾತಕ್ಕೆ ಹೆದರುತ್ತೀಯ? ನೀನು ಹೀಗೆ ಹೆದರುತ್ತ ಕುಳಿತರೆ ಹೊರ ಜಗತ್ತಿಗೆ ನೀನು ಪರಿಚಯವಾಗುವುದಾದರು ಹೇಗೆ? ಧೈರ್ಯವೇ ಬದುಕಿನ ಮೂಲ ಅಲ್ಲವೇ? ನೀನು ಬದುಕನ್ನು ಕಾಣಬೇಡವೇ? ಎದುರಿಸಬೇಡವೇ? ಧೈರ್ಯವಾಗಿ ಹೋಗು. ಏನು ಆಗಲ್ಲ. ನಾನಿದ್ದೇನೆಲ್ಲ” ಎಂದರು.
ರೆಕ್ಕೆ ಮುದುಡಿ ಕೂತ ಪುಟ್ಟ ಹಕ್ಕಿಯನ್ನು ಯಾವ ಧ್ವನಿ ಹೇಗೆ ಹಾರಿಸುವುದು ಯಾರಿಗೆ ತಾನೇ ಗೊತ್ತು.
“ಸರಿ ಆಯ್ತು. ನಾನೇ ಸಂದರ್ಶನವನ್ನು ಮಾಡುವೆ ನಾಳೆ. ಮ್ಯಾನೇಜರಿಗೆ ತಿಳಿಸಿಬಿಡಿ. ಬಾಯ್. ಶುಭರಾತ್ರಿ.” ಎಂದು ಕರೆ ಕಟ್ ಮಾಡಿದಳು. ಮಾಡಿದವಳೆ ಅಪರಿಚಿತ ವ್ಯಕ್ತಿಯ ಕಡೆ ತಿರುಗಿ “ಸರ್ ನಿಮಗೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರು ಸಾಲದು. ನನಗೆ ತಿಳಿಯದೆ ನಿಮ್ಮ ಮಾತುಗಳಿಂದ ನನ್ನಲ್ಲಿ ಧೈರ್ಯ ಮೂಡಿದೆ. ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್.” ಎಂದಳು.
ಅವರು “ಸರಿ… ಗೀತಾ.. ನಾನು ಹೇಳಿದ್ದು ಅರ್ಥವಾಯಿತು ಅಲ್ವಾ! ರಾತ್ರಿಗೆ ಮೆಣಸಿನ ಕಾಯಿಯ ಬಜ್ಜಿ ಮಾಡಿರುತ್ತೀಯ ಎಂದು ಕಾಯುತ್ತಿರುತ್ತೇನೆ” ಎಂದು ತಮ್ಮ ಕಿವಿಯಲ್ಲಿದ್ದ ಬ್ಲೂಟೂತ್ ಅನ್ನು ಆಫ್ ಮಾಡಿ, Yes, ಏನ್ ಹೇಳಿದ್ರಿ ಅಂದಾ..
ಪಿಳಿಪಿಳಿ ಎಂದು ಕಣ್ಣು ಬಿಡುತ್ತಾ, ಅವಳಿಗೊಮ್ಮೆ ತನ್ನ ಮೇಲೆ ತನಗೆ ನಗು ಉಕ್ಕಿದಂತಾಯಿತು…
–ಶಿಲ್ಪ. ಬಿ
ಪ್ರಥಮ ಪಿ.ಯು.ಸಿ
ಶೇಷಾದ್ರಿಪುರಂ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು