Back To Top

 ಬಾರೋ ಅಣ್ಣ ಹೊರಡೋಣ ಜಗವ ಕಾಣಲು | ಶಿಲ್ಪ .ಬಿ

ಬಾರೋ ಅಣ್ಣ ಹೊರಡೋಣ ಜಗವ ಕಾಣಲು | ಶಿಲ್ಪ .ಬಿ

ಬಾರೋ ಅಣ್ಣ ಹೊರಡೋಣ
ಜಗವ ಕಾಣಲು
ಮನದಾಳದಲ್ಲಿ ವಸಂತ ಋತು
ರಾಗಸುಧೆ ಹಾಡುತಿಹುದು
ಭೂ ತಾಯಿಯ ಮಡಿಲಿನಲಿ ನಡೆದು ನಲಿದಾಡಲು.

ಪ್ರೀತಿಯ ವೈಫಲ್ಯದಲಿ ಮಿಂದ ಕಪ್ಪೆರಾಯನಂತೆ
ಮುನಿಸೆತಕೊ ಆ ಮುಖದ ಮೇಲೆ
ಈ ಸೆರೆಮನೆಯ ಜೀವಾವಧಿ ಶಿಕ್ಷೆಗಿಂತಲು,
ಆ ನಿರ್ಮಲ ಜಗದ ನವ ಅನುಭವಗಳಲಿ ಮಿಂದು
ಮರಣದಂಡನೆಯನ್ನೆ ಸ್ವೀಕರಿಸುವ ಬಾರೊ
ಕಾಲಧರ್ಮದ ತಾಳಕ್ಕೊಮ್ಮೆ ಹೆಜ್ಜೆಯನಿಟ್ಟು.

ಯಾರ ಪಾದ ಪದದ ಸಮ್ಮೋಹನ
ಯಾವ ಚೈತ್ರ ಗಾಳಿಯ ಮಂತ್ರಾಕ್ಷತೆ,
ಯಾವ ಹನಿಯ ಇನಿ ಧ್ವನಿಯ ವೇದಶಾಸ್ತ್ರಗಳು
ಅವರಿಸಿ ಸ್ವಾಗತಿಸುವುದೊ ನಮ್ಮನಿಂದು?
ಅರರೇ ಎಷ್ಟು ಛಂದ ಅಲ್ಲವಾ ಈ ಕಲ್ಪನೆಗಳ ಸೊಗಡು.

ಯಾರ ಬದುಕಿಗೆ ಆದರ್ಶವಾಗುವುದೊ
ನಮ್ಮ ಆ ಹೆಜ್ಜೆಯ ಗುರುತುಗಳು,
ಯಾರ ಜೀವವನ್ನು ಹಿಂಡಿ

ನಮ್ಮ ಪಾಪದ ಕೊಡ ತುಂಬಿಸುವುದೊ
ನಾವರಿಯದೆ ಇಡುವ ಆ ಸ್ವಾರ್ಥದ ಸ್ಪರ್ಶಗಳು.
ಅರರೇ ಎಷ್ಟು ಭಯಂಕರ ಅಲ್ಲವಾ, ಈ ಸತ್ಯದ ಅರಿವು?
ಆ ಕ್ಷಣ ಚೈತ್ರ ಮಾಸದ ಉತ್ಸಾಹವನ್ನು
ಚಿಮ್ಮಿದ ಮನಸ್ಸು
ಈ ಕ್ಷಣ ಮರಗುತ್ತಿರುವ ಸುಳಿವು,
ಆ ಕ್ಷಣ ಮೂಡಿತು ನಗುವು
ಈ ಕ್ಷಣ ಯಾವುದೊ ದ್ವಂದ್ವದ ನೆರಳಿನಲ್ಲಿ
ಮಿಡಿಯುತ್ತಿಹುದು ದಿಗಿಲು.

ಯಾವುದು ಶಾಶ್ವತದ ಸಂಕಟ, ಸಂತಸ
ಯಾವುದು ಬದಲಾವಣೆಗೆ ಒಳಗಾಗದ ಜೀವ
ಕಾಲವೇ ಬದುಕಿಗೊಂದು ಹೊಸತನವನ್ನು
ಪರಿಚಯಿಸಲು ಸಿದ್ಧವಾದಾಗ
ನಿರಾಕರಿಸುವ ಹಕ್ಕು ಯಾರದ್ದು?

ಬಾರೋ ಅಣ್ಣ ಹೊರಡೋಣ
ಜಗವ ಕಾಣಲು
ಮನದಾಳದಲ್ಲಿ ವಸಂತ ಋತು
ರಾಗಸುಧೆ ಹಾಡುತ್ತಿಹುದು,
ಭೂ ತಾಯಿಯ ಮಡಿಲಿನಲ್ಲಿ ನಡೆದು ನಲಿದಾಡಲು.

ಶಿಲ್ಪ .ಬಿ
ಪ್ರಥಮ ಪಿ.ಯು.ಸಿ
ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜು

Prev Post

ಹಚ್ಚ ಹಸಿರ ತನುವು ನಮ್ಮ ಪ್ರೇಮ | ಮುಖೇಶ್ ಪಿ

Next Post

ಅವಳ ದಿಗ್ವಿಜಯದ ಪ್ರೇಮ ಶಾಸನ | ಗಿರೀಶ್ ಪಿ. ಎಂ

post-bars

Leave a Comment

Related post