ಅಷ್ಟು ಜನರಲ್ಲಿ ಅವರೊಬ್ಬರೇ ಏಕೆ ಕುತೂಹಲಕಾರಿಯಾಗಿ ಕಂಡರು | ಶಿಲ್ಪ ಬಿ.
ರೈಲ್ವೇ ಗೇಟ್ ಬಳಿ ತೆರೆದುಕೊಂಡ ಸ್ವಾರಸ್ಯ ಕಥನ ಇದು. ಆ ವೃದ್ಧನ ಇಂಗ್ಲೀಷ್ ಪೇಪರ್ ಓದುವ ಉತ್ಸಾಹ, ಅದರ ಬಗ್ಗೆ ಆಕೆಯಲ್ಲಿ ಉದ್ಭವಿಸಿದ ಪ್ರಶ್ನೆ ನಿಮಗೂ ಕಾಡಿದರೆ ಅಚ್ಚರಿ ಏನಿಲ್ಲ. ಓದಿ ಅಭಿಪ್ರಾಯ ಕಮೆಂಟ್ ಮಾಡಿ..
“ಅಪ್ಪ! ಬೇಗ, ಬೇಗ, ಬೇಗ ನಡಿ, ಗೇಟ್ ಹಾಕ್ತಿದ್ದಾರೇ.” ರೈಲು ಬರಲಿದೆ ಗೇಟ್ ಮುಚ್ಚಲಾಗುತ್ತೆ ಎಂಬ ಎಚ್ಚರಿಕೆಯ ಶಬ್ದ ಹೆಚ್ಚಾದಂತೆ, ನಾನು ಅವಸರಿಸುವುದು ಹೆಚ್ಚಾಗುತ್ತಿತ್ತು. ಆದರೇ ದುರದೃಷ್ಟವಶಾತ್ ರೈಲ್ವೆ ಗೇಟ್ ಕ್ಲೋಸಾಯಿತು. ಅಪ್ಪ ಗಾಡಿ ನಿಲ್ಲಿಸಿದರು. ನಮ್ಮ ಹಿಂದೆ ಹಾರ್ನ್ ಮಾಡುತ್ತ ಅವಸರಿಸುತ್ತಿದ್ದ ವಾಹನಗಳೆಲ್ಲವು ಮೌನಕ್ಕೆ ಜಾರಿದವು. ಮೌನ! ಮಂಕು ಮೌನ! ಬಹಿರಂಗವಾಗಿ ಸ್ಮಶಾನ ಮೌನ. ಆದರೇ ಎಲ್ಲರೊಳಗೂ ಮತ್ತೊಬ್ಬರಿಗೆ ಕೇಳಿಸದ ಮಾತಿನ ರಾಗಸುಧೆ. ಅದೆಷ್ಟು ಜನ ನಮ್ಮನ್ನು ಬೈಕೊಂಡಾರೊ ಏನೊ? ನಾವು ಇನ್ನಷ್ಟು ವೇಗವಾಗಿ ಹೋಗಿದ್ದರು, ಒಂದೆರಡು ಸೆಕೆಂಡ್ಗಳಲ್ಲಿ ಅದೆಷ್ಟು ವಾಹನಗಳು ತಾನೆ ಆ ಗೇಟ್ ದಾಟಲು ಸಾಧ್ಯ?
ದಿನ ಪತ್ರಿಕೆಯಲ್ಲಿ ಓದಿದ್ದ ತಾಪಮಾನವನ್ನು ಅನುಕ್ಷಣ ನೆನಪಿಸುವ ಉರಿ ಬಿಸಿಲು. ಹೆಲ್ಮೆಟಿನ ಶಾಖಕ್ಕೆ ರೋಮಗಳಿಂದ ಹನಿ ಹನಿಯಾಗಿ ಬೀಳುತ್ತಿದ್ದ ಬೆವರು. ಯಾವಾಗ ರೈಲಿನ ಚಿಕು ಬುಕು ಕೂ….. ಕೇಳುವುದೊ, ವಾಹನಗಳು ಕೀ ಎಂದು ರಾಗ ಎಳೆಯುವುದೊ, ರೈಲ್ವೆ ಗೇಟ್ ನಿಧಾನಕ್ಕೆ ಮೇಲೆರುವುದೊ, ಅಂದೆ ಸುಖ! ಸ್ವರ್ಗ ಸುಖ. ಆದರೆ ಆ ಗಳಿಗೆ ಮೂಡುವುದೆಂದಿಗೆ? ಹೂ… ಕಾಯಬೇಕು. ಐದರಿಂದ ಹತ್ತು ನಿಮಿಷ ಕಾಯಬೇಕು. ಐದು- ಹತ್ತು ನಿಮಿಷ ಸುಮ್ಮನಿರಬೇಕೆ! ನಾವೆಲ್ಲರೂ ಎದುರಿಸುವ ಮಹಾಯುದ್ಧವದು. ಐದು ನಿಮಿಷ ಸುಮ್ಮನಿರಲಾರದಷ್ಟು ಕಾರ್ಯನಿರತವಾಗಿದೆಯೆ ನಮ್ಮೆಲ್ಲರ ಬದುಕು ಎನ್ನಿಸುವ ಸಮಯವದು.
ನಮ್ಮ ಪಕ್ಕದಲ್ಲೆ ಒಂದು Zomato ಗಾಡಿ ನಿಂತಿತ್ತು. “ಅಪ್ಪ ತಡವಾಗುತ್ತದೆ. ಹಸಿವು ಅದರೊಂದಿಗೆ. ನೋಡು ಎಂತ ಮಾಡುವ. ಪಕ್ಕದಲ್ಲೆ ಗಾಡಿ ಇಡೆ. ಬಿಸಿ ಬಿಸಿ ತಿಂಡಿ ಇರುತ್ತೆ.” ಎಂದು ಹಾಸ್ಯ ಮಾಡುತ್ತಾ ಹೊಟ್ಟೆ ಬಿರಿಯುವಂತೆ ನಗುತ್ತ ತಲೆ ಅತ್ತಿತ್ತ ತಿರುಗಿಸುವಾಗ, ಯಾರೊಬ್ಬರು ನಾನು ಅವರನ್ನು ನೋಡಿ ಸ್ಮೈಲ್ ಮಾಡುತ್ತಿದ್ದಿನೇನೊ ಎಂದು ಭ್ರಮಿಸಿ ನಸು ನಕ್ಕರು. ನನಗೆ ಏನೇನು ಅರ್ಥವಾಗದೆ ಸುಮ್ಮನೆ ನಗು ಬೀರಿದೆ. ಇಷ್ಟೆಲ್ಲ ನಡೆಯುವಾಗಲೇ ನನ್ನ ದೃಷ್ಟಿ ಹೊರಟ್ಟಿದ್ದು ಕಾಲುದಾರಿಯ ಮೇಲೆ ಕುಳಿತಿದ್ದವರೆಡೆಗೆ.
ಹರಕಲು ಶರ್ಟು, ಪ್ಯಾಂಟು ಧರಿಸಿದ ವೃದ್ಧರು. ನೆತ್ತಿಯನ್ನು ಸುಡುವಂತಹ ಬಿಸಿಲು. ಬಿಸಿಲಿನ ಶಾಖವನ್ನು ನೆಲದೊಂದಿಗೆ ಹಂಚಿಕೊಳ್ಳುತ್ತಿರುವ ಅಂಗಾಲು. ಅವರ ಸುತ್ತಲು ಹರಡಿತ್ತು ಕಲ್ಲು ಮಣ್ಣು ಕಸ ಕಡ್ಡಿ. ಅವರ ಪಕ್ಕದಲ್ಲೆ ಒಂದು ಜತೆ ಹರಿದ ಚಪ್ಪಲಿ. ಎಲ್ಲರ ಗಮನಕ್ಕು ಸಿಕ್ಕಿ, ಬಹಳ ತಲ್ಲೀನರಾಗಿ ಇಂಗ್ಲಿಷ್ ನ್ಯೂಸ್ ಪೇಪರ್ ಕೊನೆಯ ಪುಟದ ಒಂದು ವಿಷಯವನ್ನು ಮಗ್ನರಾಗಿ ಓದುತ್ತಿದ್ದರು.
ಆಹಾ! ಅದೆಂತಹ ತಲ್ಲೀನತೆ. ಅದೆಷ್ಟು ವಯಸ್ಸಾಗಿದೆ ಇವರಿಗೆ. ಹಾಗಿದ್ದರೆ ಇವರ ಹಿಂದಿನ ಬದುಕು ಹೇಗಿತ್ತು? ಕಾಲುದಾರಿಯಲ್ಲಿ ಕೂತು ಓದುವಷ್ಟು ಬಡತನವೇ ಇವರದ್ದು? ಅಥವಾ ಆ ಗಳಿಗೆಯೆ ಪತ್ರಿಕೆಯಲ್ಲಿ ಏನಿದೆಂದು ಓದಿಬಿಡುವ ಕುತೂಹಲವೇ ಅವರದ್ದು?
ತಟ್ಟನೆ ಸಂಬಂಧವೇ ಇಲ್ಲದಂತ ಒಂದು ಆಲೋಚನೆ ನನ್ನಲ್ಲಿ ಮೂಡಿತು. ಮಕ್ಕಳಿಗೆ ನಮ್ಮ ಸಮಾಜ, “ನೀನು ಇಂದಿನಿಂದಲೇ ನಿನ್ನ ಬದುಕಿಗೊಂದು ಗುರಿಯನ್ನಿಟ್ಟುಕೊಳ್ಳಬೇಕು. ಆ ಗುರಿಯನ್ನು ಸಾಧಿಸುವ ತನಕ ಓಡಬೇಕು. ಆ ಗುರಿಯೇ ನಿನ್ನ ಬದುಕನ್ನು ನಿರ್ಣಯಿಸುವುದು.” ಎಂದು ಅನುಕ್ಷಣ ಹೇಳುವ ಮಾತು ನೆನಪಾಯಿತು. ಆ ಗುರಿ 25 ವರ್ಷಗಳ ಮುಂದಿನದಾಗಿರುತ್ತದೆ. ಬದುಕು ನಿರ್ಣಯಿಸುವುದೆಂದರೇ ಏನು? ಗುರಿಯೆಂದರೇ ಕೇವಲ ವೃತ್ತಿಯೇ? ವೃತ್ತಿ ಒಂದೇ ಬದುಕೇ? ಅದು ಸಾಧಿಸಿದ ನಂತರದ ಬದುಕು ಪರಮ ಸುಖವೊ?
ಅವರನ್ನು ನೋಡಿದೆ. ಅವರು ಸಾಧಿಸಿದ ಗುರಿಯಾದರು ಏನು? ಅವರ ಮುಂದಿನ ನಿಲ್ದಾಣ ಯಾವುದು? ಆ ಗಳಿಗೆ ಯಾವ ಬಿಸಿಲು, ಜನ, ಕಸ, ಕಡ್ಡಿಯನ್ನು ಲೆಕ್ಕಿಸದೇ ಆ ಪತ್ರಿಕೆಯನ್ನು ಓದಿಬಿಡಬೇಕು. ಓದುವಾಗ ಅವರ ಮುಖ ಚಿತ್ರದಲ್ಲಿ ಸಮಧಾನ, ಏನ್ನನ್ನೊ ಒಲಿಸಿಕೊಂಡ ಖುಷಿ. ಇದೆ ಅಲ್ಲವೇ ಜ್ಞಾನದಾಹವೆಂದರೇ? ಇದೇ ಅಲ್ಲವೇ ಹುಚ್ಚುತನವೆಂದರೇ?
ನೀವು ಯಾರು? ನಿಮ್ಮ ಮನೆಯೆಲ್ಲಿದೆ? ಇಲ್ಲೇಕೆ ಓದುತ್ತಿದಿರಿ ಎಂದು ಅವರಿಗೆ ಸಾವಿರ ಪ್ರಶ್ನೆಗಳನ್ನು ಕೇಳುವ ಕುತೂಹಲ ಮೂಡಿದರು, ಉತ್ತರ ಸ್ವೀಕರಿಸುವ ತುಡಿತ ನನ್ನದಾಗಲ್ಲಿಲ್ಲ. ಕೆಲವೊಮ್ಮೆ ಪ್ರಶ್ನೆ ಕೇಳಿ ಉತ್ತರ ಸ್ವೀಕರಿಸುವದಕ್ಕಿಂತಲು, ನಮ್ಮೊಳು ಮೂಡುವ ಪ್ರಶ್ನೆಗಳಿಗೆ, ಕ್ಷಣಕ್ಕೊಮ್ಮೆ ನಾವೇ ಉಹಿಸುವ ವಿಧ ವಿಧ ಉತ್ತರಗಳು ಸಮಾಧಾನ ನೀಡುತ್ತದೆ. ಅವು ನಿಜವೋ, ಹುಸಿಯೋ ಎಂಬ ಲೆಕ್ಕೆಣಿಕೆ ಬೇಕಿರುವುದಿಲ್ಲ. ಆದರೆ ಅಷ್ಟು ಜನರಲ್ಲಿ ಅವರೊಬ್ಬರೇ ಏಕೆ ಅಷ್ಟು ಕುತೂಹಲಕಾರಿಯಾಗಿ ಕಂಡರು, ಇಂದಿಗೂ ಕಾಡುವ ಪ್ರಶ್ನೆ…..
ಶಿಲ್ಪ ಬಿ.
ಪ್ರಥಮ ಪಿ. ಯು. ಸಿ.
ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜು