Back To Top

 ಅಮ್ಮನ ಗೆಜ್ಜೆ | ಶಿಲ್ಪ ಬಿ

ಯಾವ ಮೇಘಗಳು ಸುರಿಸಿದ ಸ್ವರವೊ ಇದು?
ಯಾವ ಗುಡುಗು ಮಿಂಚು ಕೂಡಿ ಬದುಕಿಸಿದ ಪದವೊ ಇದು?
ಯಾವ ದೈವ ಸ್ಪರ್ಶ ರಚಿಸಿದ ನಾದಮೃದಂಗವೊ ಇದು?
ಏನೆಂದು ಅರಿಯದ ಈ ಭಾವನೆಯೆ ಸುಂದರವೆಂದು
ನುಡಿಯುತ್ತಿದೆ ಮನವು ಇಂದು…..

ಪಿಳಿ ಎಂದು ಕಣ್ಣು ತೆರೆಯುತ್ತಿರುವ
ಪುಟ್ಟ ಇರುವೆಗಳಿಗೊಮ್ಮೆ
ಜಗವನ್ನೇ ಗೆದ್ದು ಬರುವ
ಸವಿಯಾದ ಭರವಸೆಯ ರೆಕ್ಕೆಗಳನ್ನು ತೊಡಿಸುವ
ಚಮತ್ಕಾರಿಕ ಪಿಸುಮಾತುಗಳಡಿಗಿದೆ ಅಮ್ಮ
ನಿನ್ನ ಗೆಜ್ಜೆಯ ಸದ್ದಿನಲ್ಲಿ…

ಮುದ್ದು ತುಂಟತನದಲ್ಲಿ ಮುಳುಗಿದ
ನಮ್ಮ ಕಿನ್ನರಲೋಕವನ್ನೊಮ್ಮೆ ಪ್ರವೇಶಿಸಿದ
ನಿನ್ನ ಗೆಜ್ಜೆಯ ಸಪ್ಪಳವನ್ನು ಆಲಿಸಿ,
ಮುಗ್ಧವಾಗಿ ಮೌನವಾಗಿ ಕುಳಿತ
ವರ್ಣರಂಜಿತ ವಿನ್ಯಾಸಗಳೆಲ್ಲವು
ಸಾಲು ಸಾಲಾಗಿ ಆವರಿಸುತ್ತಿದೆ ಅಮ್ಮ
ನನ್ನ ಮನವನ್ನಿಂದು
ನಿನ್ನ ಪಾದ ಪದದ ಸಮ್ಮೋಹನದಲ್ಲಿ.

ಕೆಲವೊಮ್ಮೆ ದುಃಖವಿಶಾದಗಳಲ್ಲಿ ಮುಳುಗಿ,
ಮಗದೊಮ್ಮೆ ಸೋಲಿನ ಸೆರೆಮನೆಯಲ್ಲಿ ಸಿಲುಕಿ,
ಆಕಾಶದ ಛಾಯೆಯಲ್ಲಿ ಕುಳಿತು ಅಳುತ್ತಿರುವಾಗ,
ಮಿನುಗುವ ತಾರೆಗಳ ಹೊಂಬೆಳಕನ್ನು ಹೊತ್ತು ಬರುವ
ನಿನ್ನ ಗೆಜ್ಜೆಯ ಸದ್ದೊಂದೆ ಸಾಕಮ್ಮ,
ಸಪ್ತ ಬಣ್ಣಗಳನ್ನು ಹೊತ್ತು
ಕಾಮನಬಿಲ್ಲಾಗಿ ಮೆರೆಯುವೆ ನಾನು,
ಜಗದ ನಯನಗಳ ಹಾದಿಯಲ್ಲಿ.

ಕೋಟಿ ಕೋಟಿ ವ್ಯಕ್ತಿಗಳ ಆದರ್ಶದ ಮಾತುಗಳೇಕೆ,
ಪೂರ್ವ ವಾಸ್ತವ ಜನುಮದ
ಪಾಪ ಪುಣ್ಯಗಳ ಲೆಕ್ಕಾಚಾರಗಳೇಕೆ,
ನಿನ್ನ ಗೆಜ್ಜೆಯ ಸದ್ದಿನ ಚೈತನ್ಯವೇ ಸಾಲದೆ
ಸ್ಮಶಾನದಲ್ಲಿ ಮಲಗಿರುವ ಹೆಣದ ಹೃದಯವು
ಮಧುರ ಭಾವನೆಗಳಿಂದ ನಳನಳಿಸಿ
ಕವಿಯಾಗಿ ಕುಣಿಯಲಿಕ್ಕೆ….

ಶಿಲ್ಪ ಬಿ
ಪ್ರಥಮ ಪಿ.ಯು.ಸಿ 
ಶೇಷಾದ್ರಿಪುರಂ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು

Prev Post

ಗುಂಡು ಮುಖದ ದುಂಡು ಹೂವೆ | ಭಾಗ್ಯಶ್ರೀ ಎಸ್ ಅಡವಿ

Next Post

ಒಮ್ಮೆ ಓದಲೇಬೇಕಾದ ಚೆನ್ನಭೈರಾದೇವಿಯ ಅನನ್ಯ ಕಥನ | ಕಲಾನ್ವಿತ ಜೈನ್ ಕೆರ್ವಾಶೆ

post-bars

Leave a Comment

Related post