ಎಂದೂ ನಿರಾಕರಿಸಲಾಗದೆ ಆವರಿಸುವ ಪುಸ್ತಕ ನಿರಾಕರಣ | ದಿವ್ಯಶ್ರೀ ಹೆಗಡೆ
ಒಡಳಾಲದ ಪ್ರೀತಿಯನ್ನು ಮುಚ್ಚಿಟ್ಟು ತನ್ನ ಐವರು ಮಕ್ಕಳನ್ನು ಸ್ವತಃ ಆತನೇ ದತ್ತು ಕೊಟ್ಟು ನಿರಾಳನಾದನೇ ನರಹರಿ. ಮೊದಲಿನಿಂದಲೂ ಬಂಧನಕ್ಕೆ ಅಂಟಿಕೊಳ್ಳಲೇ ಬಾರದುದೆಂದು ಬಯಸಿ ಅಲೌಕಿಕ ಹಾದಿಯಲ್ಲಿ ಇದ್ದ ಕಥಾಪಾತ್ರ ನರಹರಿಯದು. ಆದರೂ ಕಾಲಕ್ಕೆ ತಕ್ಕಂತೆ ಸಂಸಾರ ಸಾಗರಕ್ಕೆ ಅಂಟಿಕೊಂಡು ಅಲ್ಲಿ ಇರಲೂ ಆಗದೆ, ಎದ್ದು ಬರಲೂ ಆಗದೆ, ಈಜಲಾರದೆ ಒದ್ದಾಡಿಹೋದನು. ಎಲ್ಲವನ್ನೂ ತೊರೆದು ಇಂದ್ರಿಯ ನಿಗ್ರಹಗಳಿಂದ ಜೀವನ ನಡೆಸಲು ಪ್ರಯತ್ನಿಸಿ ಸೋಲುತ್ತಾನೆ. ಮತ್ತೆ ಹಳೇ ಜೀವನದ ಹಾದಿಗೆ ಅವನನ್ನು ಕರೆದೊಯ್ಯುವುದು ಜೀವನ. ಅನಿಶ್ಚಿತವಾದ ಜೀವನದ ಹಾದಿಯನ್ನು ನಿಶ್ಚಯಿಸಿದಂತೆ ನಡೆಸಲು ಸಾಧ್ಯವೇ?.
ಇಲ್ಲಿ ಕಥಾನಾಯಕ ಯಾವುದೇ ಬಂಧನಕ್ಕೆ ಅಂಟಿಕೊಳ್ಳಬಾರದು ಎಂದು ನಿರ್ಧರಿಸಿ ಏನೂ ಮಾಡಲು ತೋಚದೆ ಆಶ್ರಮದಲ್ಲಿ ಇದ್ದು ಬಿಡುತ್ತಾನೆ. ಕೊನೆಯಲ್ಲಿ ಇಚ್ಚಾಶಕ್ತಿ, ದೃಢತೆಯಿಂದ ಅಪ್ಪನ ಮುಂದೆ ನಿಂತ ಮಗಳು ನೀನು ಏನು ಮಾಡಿದೆ ಎಂದು ಪ್ರಶ್ನಿಸುತ್ತಾಳೆ. ಈ ಪ್ರಶ್ನೆ ಬದಲಾಯಿಸಿತೆ ನರಹರಿಯನ್ನು?.
ಜೀವನದಲ್ಲಿ ಏನೂ ಬೇಡ ಎಂದೆನಿಸುವ ಆಲೋಚನೆಗಳು ಹಲವಾರು ಬಾರಿ ಬರುತ್ತದೆ. ಆಗ ಎಲ್ಲರೂ ಹೊಸ ರೀತಿಯಲ್ಲಿ ನಿರ್ಧಾರವನ್ನು ತೆಗೆದುಕೊಂಡು ಜೀವನದಲ್ಲಿ ಎನೋ ಮಾಡಿಬಿಡಬೇಕು ಎಂದು ಏನನ್ನೋ ಮಾಡಲು ಹೊರಟು ಬಿಡುತ್ತಾರೆ. ಆದರೆ ಅದರ ಸರಿಯಾದ ವಿಶ್ಲೇಷಣೆ ನಮ್ಮಲ್ಲಿ ಇರುವುದಿಲ್ಲ. ಒಟ್ಟಿನಲ್ಲಿ ಈ ಜೀವನದ ಜಂಜಾಟವನ್ನು ಬಿಡಿಸಿಕೊಳ್ಳಬೇಕು ಎಂದು ಮತ್ತದೇ ಜೀವನದ ಹೊಸ ಕಷ್ಟಗಳಿಗೆ ನಾವೇ ಸುತ್ತಿ ಹಾಕಿಕೊಳ್ಳುತ್ತೇವೆ. ಆದರೂ ಎಲ್ಲವನ್ನೂ ಬಿಡಿಸಿಕೊಳ್ಳುವ ಚಟದ ಉತ್ಕಟತೆಯನ್ನು ತಲುಪಿಬಿಡುತ್ತೇವೆ. ತಪ್ಪಲ್ಲಾ ಆದರೆ ಜೀವನದಲ್ಲಿ ಬಂದದ್ದು ಬರಲಿ ನಾವು ನಡೆಯುವ ದಾರಿ ಹೇಗೆ ಇರಲಿ ನಾವು ನಡೆಯುತ್ತಲೇ ಇರಬೇಕು ಅದಕ್ಕೆ ಬೇರೆ ಮಾರ್ಗ ನಮ್ಮಲ್ಲಿ ಇಲ್ಲ ಎಂಬ ಸತ್ಯವನ್ನು ನಾವು ತಿಳಿಯಬೇಕಿದೆ.
ಈ ಕಾದಂಬರಿಯನ್ನು ಒಮ್ಮೆ ಕೈಗೆತ್ತಿಕೊಂಡ ನಂತರ ಮತ್ತೆ ಪುಸ್ತಕ ಮುಗಿದಾಗಲೆ ಕೈ ಬಿಡುವಂತೆ ಮಾಡುತ್ತದೆ. ಒಂದೊಳ್ಳೆ ಕಾದಂಬರಿ ಓದುಗರನ್ನು ಓದಿಸಿಕೊಂಡು ಹೋಗುತ್ತದೆ. ಇದು ಭೈರಪ್ಪ ಅವರ ಅದ್ಭುತ ಕೃತಿಗಳಲ್ಲಿ ಒಂದು. ಇವರ ಕಾದಂಬರಿಗಳು ಸಾಹಿತ್ಯ ಲೋಕದಲ್ಲಿ ಒಂದು ಛಾಪನ್ನೆ ಮೂಡಿಸಿದೆ. ಅಲೌಕಿಕ, ಲೌಕಿಕ ಸಾಧನೆ, ಧರ್ಮ, ಇತಿಹಾಸ ಮುಂತಾದವುಗಳ ಕುರಿತು ಅಧ್ಯಯನ ಮಾಡಿ ಕಾದಂಬರಿ ಸರಣಿಯನ್ನೇ ಬರೆದಿದ್ದಾರೆ. ಇವರ ಕೃತಿಗಳಿಗೆ ಮನಸೊಲದವರಾರಿದ್ದಾರೆ. ಭೈರಪ್ಪನವರ ಕೃತಿಗಳೇ ಹಾಗೆ ಹೊಸ ಹೊಸ ಆಲೋಚನೆಗಳಿಗೆ ನಮ್ಮನ್ನು ದೂಡುತ್ತದೆ. ಈ ಕಾದಂಬರಿಯೂ ಅಷ್ಟೇ ಹೊಸ ಹೊಸ ಯೋಚನೆಗಳಿಗೆ ದಾರಿ ಮಾಡಿಕೊಡುತ್ತದೆ.
ದಿವ್ಯಶ್ರೀ ಹೆಗಡೆ
ಪ್ರಥಮ ಪತ್ರಿಕೋದ್ಯಮ
ಎಸ್.ಡಿ.ಎಂ ಸ್ನಾತಕೋತ್ತರ ವಿಭಾಗ ಉಜಿರೆ