ಯಾವುದೂ ಈ ಮೊದಲಿನಂತಿಲ್ಲ | ಪೂಜಾ ಹಂದ್ರಾಳ
ಹಾಸ್ಟೇಲ್ ನಲ್ಲೇ ಇರುವ ನಾನು ಪ್ರತಿ ಬಾರಿ ಮನೆಗೆ ಹೋದಾಗ ನಾನು ಗಮನಿಸದೆ ಇರುವ ಒಂದು ವಿಷಯ ಈ ಬಾರಿ ನನ್ನನ್ನ ತುಂಬಾ ಕಾಡಿತು, ಬೇಸರ ಮೂಡಿಸಿತು. ಆ ಬೇಸರಕ್ಕೆ ಕಾರಣ ಮನೆಯವರು ಅಲ್ಲ, ಸ್ನೇಹಿತರೂ ಅಲ್ಲ ಅಕ್ಕಪಕ್ಕದವರೂ ಅಲ್ಲ. ಅದು ನನ್ನೊಳಗೆ ಮೂಡಿದ ಒಂದು ಪ್ರಶ್ನೆ . ಅದೇನಂದ್ರೆ, ನಾನು ಹುಟ್ಟಿ ಬೆಳೆದ ಊರು ರಸ್ತೆ ಬೀದಿ ಇದೇನಾ ಎಂಬುದು. ನಾನು ಹುಟ್ಟಿ ಬೆಳೆದ ದಿನಗಳಂತೆ ಇಂದು ಏನು ಉಳಿದಿಲ್ಲ. ಆ ಚಿಕ್ಕರಸ್ತೆ, ಕೆಂಪು ಹಂಚಿನ ಮನೆಗಳು, ಅಂಗಡಿಗಳು, ಮಣ್ಣಿನ ಗೋಡೆಗಳು, ಪಟಿಗಲ್ಲು ನೆಲ, ರಾತ್ರಿ ಹೊತ್ತಿನಲ್ಲಿ ರಸ್ತೆಯಲ್ಲಿ ಮಿನುಗು ಕೇಸರಿ ಬಣ್ಣದ ಬೀದಿದೀಪ, ಅಂಗಡಿಗಳ ಸಣ್ಣ ಬಿಳಿ ಎಲ್ಇ ಡಿ ಲೈಟ್ ಗಳು ನೋಡಲು ಮೊದಲಿನಂತೆ ಒಂದು ಉಳಿದಿಲ್ಲ.
ಪ್ರತಿ ಸೋಮವಾರ ರಾತ್ರಿ ನಿದ್ದೆನೇ ಮಾಡಲು ಬಿಡದ ಮೆಣಸಿನಕಾಯಿ ಅಂಗಡಿಗಳಿಗೆ ಬರುತ್ತಿದ್ದ ಮೆಣಸಿನಕಾಯಿ ಲೋಡಿನ ಲಾರಿಗಳು, ಅಲ್ಲಿ ಕೆಲಸ ಮಾಡುತ್ತಿದ್ದಂತಹ ಹಮಾಲಿಗಳ ಮಾಲೀಕರ ಮಾತುಗಳು ಅಂದು ಕೋಪ ಬರಿಸುತ್ತಿದ್ದವು. ಆದರೆ ಇಂದು ಅದನ್ನು ನೆನದರೆ ಆನಂದ ಉಂಟಾಗುತ್ತದೆ. ಮರುದಿನ ಮಂಗಳವಾರ ಊರ ಸಂತೆ. ನಮ್ಮ ಬೀದಿಯಲ್ಲಿ ಮೆಣಸಿನಕಾಯಿ ಘಾಟು, ಗ್ರಾಹಕರು ಮತ್ತು ಮಾರಾಟಗಾರರ ಮಾತಿನ ಚಕಮಕಿ ಎಷ್ಟು ಸೊಗಸಾಗಿತ್ತು ಅಲ್ಲವೇ ಎನಿಸುತ್ತಿದೆ.
ಆದರೆ ಇವತ್ತಿಗೆ ಶಿರಸಿಯ ಸಿ.ಪಿ ಬಜಾರ್ ಎಂದು ಕರಿಯಲು ಪಡುವ ಚನ್ನಪಟ್ಟಣ ಬಜಾರ್ ನಲ್ಲಿ ಎರಡು ಮೂರು ಮೆಣಸಿನಕಾಯಿ ಅಂಗಡಿಗಳು ಮಾತ್ರ ಉಳಿದಿವೆ. ಮನೆಯ ಬಾಗಿಲಲ್ಲಿ ನಿಂತು ಸುತ್ತ-ಮುತ್ತ ಒಂದು ಸಲಿ ಕಣ್ಣು ಹಾಯಿಸಿದರೆ ಬಣ್ಣ ಬಣ್ಣದ ದೊಡ್ದ ಬಿರ್ಡಿಂಗ್ ಗಳು, ರಾತ್ರಿ ಆದರೆ ಗಿಜಿ ಗುಟ್ಟುವ ಜನಸಂದಣಿ, ಅಂಗಡಿಗಳ ಕಲರ್ ಕಲರ್ ಲೈಟ್ ಗಳು, ರಸ್ತೆಯಲ್ಲಿ ಇರುವೆ ಸಾಲಿನಂತೆ ಕಾಣುವ ಕಾರು ಬೈಕುಗಳು, ಜನರಿಂದ ಗಿಜಿ ಗುಟ್ಟುವ ರಸ್ತೆಯನ್ನು ನೋಡಿದರೆ ಯಾವುದೋ ಮಹಾನಗರದಲ್ಲಿ ನಿಂತಿರುವ ಅನುಭವವನ್ನು ಮೂಡಿಸುತ್ತವೆ.
ಇದರ ಹೊರತಾಗಿ ಅಪರೂಪಕ್ಕೆ ಕಾಣುವ ಹಳೆ ಮುಖಗಳು, ಅವರ ಮುಗುಳು ನಗೆ ಇಲ್ಲ ಇದು ನನ್ನೂರೇ ಎಂಬುದನ್ನು ಮತ್ತೆ ನೆನಪಿಸುತ್ತವೆ. ಅದರೊಂದಿಗೆ ವಿಷೇಶವಾಗಿ ನಮ್ಮ ಮನೆ ಎದುರಿರುವ ತಿಮ್ಮಪ್ಪ ಹೆಗಡೆ ಅವರ ಅದೇ ಹಳೆ ಅಂಗಡಿ, ಎಂದು ತೆರೆಯದ ಕಟ್ಟಿಗೆಯ ಬಾಗಿಲು, ಮಣ್ಣಿನ ಗೋಡೆ, ಧೂಳು ಹಿಡಿದಿರುವ ಕಿಟಕಿ ಇವತ್ತಿಗೂ ನನ್ನ ಬಾಲ್ಯವನ್ನು ಇಂದು ನೆನೆಯಲು ಇರುವ ಒಂದೇ ಒಂದು ಸಂಗತಿಯಾಗಿ ಉಳಿದಿದೆ. ಎಲ್ಲವೂ ಮೊದಲಿನಂತೆ ಇದ್ದರೆ ಎಷ್ಟು ಚಂದ ಎಂಬ ಭಾವ ಬರುತ್ತಿದೆ. ಆದರೆ ಅದು ಕೇವಲ ಈಗ ಕಲ್ಪನೆ ಮಾತ್ರ. 20 ವರ್ಷದಲ್ಲಿ ಆದ ಬದಲಾವಣೆ ಕಂಡರೆ ಮುಂದಿನ 20 ವರ್ಷಗಳಲ್ಲಿ ಇನ್ನೆಷ್ಟು ಬದಲಾವಣೆ ಆಗಬಹುದು ಎಂಬ ಕುತೂಹಲದ ಜೊತೆ ಬೇಸರವು ಹುಟ್ಟುತ್ತಿದೆ. ಬದಲಾವಣೆ ಎಂಬುದು ಸಹಜ ಆದರೆ ಎಲ್ಲಾ ಬದಲಾವಣೆಗಳು ಆನಂದವನ್ನು ನೀಡುವುದಿಲ್ಲ ಎಂಬುದು ನೈಜ.
– ಪೂಜಾ ಹಂದ್ರಾಳ
ಎಸ್.ಡಿ.ಎಂ. ಕಾಲೇಜು(ಸ್ವಾಯತ್ತ) ಉಜಿರೆ