ವನ್ಯ ಸಂರಕ್ಷಣೆಗೆ ನಿಂತ ‘ಕಸ್ವಿ ಹಸಿರು ದಿಬ್ಬಣ’ | ಶಶಿಸ್ಕಾರ ನೇರಲಗುಡ್ಡ
ಪ್ರಸ್ತುತ ದಿನಗಳಲ್ಲಿ ಬಿಸಿಲು ಹೆಚ್ಚಾಗುತ್ತಿದೆ, ಸೂರ್ಯನ ಶಾಖ ಜೀವ ಸಂಕುಲವನ್ನು ಸುಟ್ಟು ಹಾಕುತ್ತಿದೆ. ಕುಡಿಯುವ ನೀರಿಗೂ ತಾತ್ವಾರವಾಗಿದೆ. ಕೆರೆಯ ನೀರು ಬತ್ತಿ ಹೋಗಿವೆ, ಮರ ಕಡಿಯುವರ ಸಂಖ್ಯೆ ಏರಿದಂತೆ ಬಿಸಿಲ ಧಗೆಯು ತನ್ನ ರೌದ್ರ ನರ್ತನ ತಾಳುತ್ತಿದೆ. ಇದರಿಂದ ನೀರು ಹೆಚ್ಚಿನ ಮಟ್ಟದಲ್ಲಿ ಆವಿಯಾಗುತ್ತಿದೆ. ಇದನ್ನು ತಡೆಗಟ್ಟಲು ಇಲ್ಲೊಬ್ಬರು ವಿನೂತನ ದಾರಿ ಕಂಡುಕೊಂಡಿದ್ದಾರೆ.
ಇತ್ತೀಚಿಗೆ ಹುಟ್ಟು ಹಬ್ಬವೆಂದರೆ ಕೇವಲ ಕೇಕ್ ಕತ್ತರಿಸಿ, ಬಣ್ಣ- ಬಣ್ಣದ ಕಲರ್ ಫುಲ್ ಕಾಗದಗಳ ಶೃಂಗಾರ ಮಾಡಿ, ಉಡುಗೊರೆ ಕೊಡುವ ಮೂಲಕ ಒಂದು ದೊಡ್ಡ ಪಾರ್ಟಿ ಮಾಡಿ ಮುಗಿಸಿ ಬಿಡುತ್ತಾರೆ. ಜೊತೆಗೆ ಕೇಕ್ ಮೇಲಿರುವ ದೀಪವನ್ನು ಆರಿಸಿ ಸಂಭ್ರಮಿಸುತ್ತಾರೆ. ಕೆಲವರು ಮಾತ್ರ ಬೇರೆಯವರಿಗೂ ಬೆಳಕು ನೀಡುವಂತೆ ಜನ್ಮ ದಿನವನ್ನು ಆಚರಿಸಿಕೊಂಡು ಸ್ಮರಣೀಯವಾಗಿಸುತ್ತಾರೆ. ಅಂಥವರ ಪೈಕಿ ದಕ್ಷಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜದ ನಿವಾಸಿ ಕೇಶವ್ ಕೂಡ ಒಬ್ಬರು.
ಇವರು ಹುಟ್ಟು ಹಬ್ಬದ ಶುಭ ಸಂದರ್ಭಕ್ಕೆ ಗಿಡ ನೆಡುವ ಮುಖೇನ ಪ್ರಕೃತಿ ಪೋಷಣೆಗೆ ತೊಡಗಿದ್ದಾರೆ. ವನ್ಯ ಸಂರಕ್ಷಣೆ ಮಾಡುವಲ್ಲಿ ಕ್ರಾಂತಿಕಾರಕ ಮಾರ್ಗ ಅನುಸರಿಸುತ್ತಿದ್ದಾರೆ. ಇದಕ್ಕೆ ಪ್ರೇರಣೆಯಾದದ್ದು ಕೊರೋನ ವೈರಸ್. ತಮ್ಮ ಮಗಳಿಗೆ ಕೊರೋನಾ ವೈರಸ್ ಹೊಕ್ಕರಿಸಿದ್ದಾಗ ಉಸಿರಾಟದ ಸಮಸ್ಯೆ ಉಂಟಾಗುತ್ತದೆ, ಇದರಿಂದ ಪಾಠ ಕಲಿತ ಕೇಶವ್ ಅವರು ಆಮ್ಲಜನಕದ ಮಹತ್ವ ಅರಿತುಕೊಳ್ಳುತ್ತಾರೆ. ಕೊರೋನಾ ವೈರಸ್’ಗೆ ತುತ್ತಾಗಿದ್ದ ಮಗಳು ಕೊನೆಗೆ ಸಾವಿನಿಂದ ಪಾರಾಗಿ ಬದುಕುಳಿಯುತ್ತಾಳೆ.
ನಂತರದ ಅವಳ ಹುಟ್ಟು ಹಬ್ಬವನ್ನು ಗಿಡ ನೆಟ್ಟು ಪ್ರಕೃತಿ ಸ್ನೇಹಿಯಾಗಿ ಆಚರಿಸಲು ನಿರ್ಧರಿಸುತ್ತಾರೆ. ಇಲ್ಲಿಂದ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಕೇಶವ್ ಅವರು ಪ್ರಾರಂಭದಲ್ಲಿ ಬೇರೆ-ಬೇರೆ ಮಕ್ಕಳ ಜನ್ಮದಿನಕ್ಕು ತಾವೇ ಗಿಡಗಳನ್ನು ನೀಡಿ ಸಸಿಗಳನ್ನು ನೆಡಿಸುತ್ತಾರೆ. ಈ ಕಾರ್ಯವನ್ನು ಮತ್ತಷ್ಟು ಪ್ರೋತ್ಸಾಹಿಸುವುದಕ್ಕಾಗಿ “ಕಸ್ವಿ ಹಸಿರು ದಿಬ್ಬಣ” ಎಂಬ ಯೋಜನೆಯನ್ನು ಜಾರಿಗೆ ತಂದು ಆ ಮೂಲಕ ಗಿಡ ನೆಟ್ಟು ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಸೆಲಬ್ರೇಟ್ ಮಾಡಿಕೊಳ್ಳುವವರಿಗೆ ಸರ್ಟಿಫಿಕೇಟ್ ಕೊಟ್ಟು ಪರಿಸರ ಪ್ರೇಮಿಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಈವರೆಗೆ ಸುಮಾರು 500 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು, ಬೇರೆಯವರಿಂದಲೂ ನೆಡಿಸಿ ಹಲವರಿಗೆ ಸ್ಪೂರ್ತಿಯಾಗಿದ್ದಾರೆ.
ಶಶಿಸ್ಕಾರ ನೇರಲಗುಡ್ಡ
ಪತ್ರಿಕೋದ್ಯಮ ವಿದ್ಯಾರ್ಥಿ.
ಎಸ್. ಡಿ. ಎಮ್. ಕಾಲೇಜು, ಉಜಿರೆ.