ತಪ್ಪುಗಳಿಂದ ತಪ್ಪಿಸಿಕೊಳ್ಳಲು, ಹೊಸ ತಪ್ಪುಗಳನ್ನೆಸಗುತ್ತಾ ಸಾಗುವ ‘ವಾಳ್ವಿ’ | ಅನುರಾಗ್ ಗೌಡ
ಅನಿಕೇತ್ (ಸ್ವಪ್ನಿಲ್ ಜೋಶಿ) ಮತ್ತು ಅವನಿ (ಅನಿತಾ ಕೇಳ್ಕರ್) ದಂಪತಿಗಳು. ಅನಿಕೇತ್ ಉದ್ಯಮಿಯಾಗಿದ್ದರೆ, ಅವನಿ ಪ್ಲಾಸ್ಟಿಕ್ ತಿನ್ನುವ ಗೆದ್ದಲು ಹುಳುಗಳ ಕುರಿತು ಸಂಶೋಧನೆ ನಡೆಸುತ್ತಿರುತ್ತಾಳೆ. ಜೊತೆಗೆ ಮಾನಸಿಕ ಖಾಯಿಲೆಯಿಂದಲೂ ಬಳಲುತ್ತಿದ್ದ ಕಾರಣ ನಿರಂತರ ಕೌನ್ಸಲಿಂಗ್‌ಗೆ ಒಳಗಾಗುತ್ತಿರುತ್ತಾಳೆ.
ಅನಿಕೇತ್‌ಗೆ ಅವನಿಯೊಂದಿಗೆ ಬಾಳಲು ಇಷ್ಟವಿರೋದಿಲ್ಲ. ಏಕೆಂದರೆ ಅವನು ದಂತ ವೈದ್ಯೆಯಾಗಿದ್ದ ದೇವಿಕಾ (ಶಿವಾನಿ ಸುರ್ವೆ)ಯನ್ನು ಪ್ರೀತಿಸುತ್ತಿರುತ್ತಾನೆ. ಅನಿಕೇತ್‌ನಿಗೂ ಇಲ್ಲಿ ಸಂದಿಗ್ಧ ಪರಿಸ್ಥಿತಿ, ಹಾಗಾಗಿ ತನ್ನ ಪತ್ನಿಯಿಂದ ದೂರವಾಗಲು ದೇವಿಕಾಳೊಂದಿಗೆ ಸೇರಿ ತನ್ನ ಪತ್ನಿಯು ಸ್ವತಃ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯೋಜನೆ ರೂಪಿಸುತ್ತಾರೆ.
ನಂತರ ಆತ್ಮಹತ್ಯೆಯೋ, ಕೊಲೆಯೋ ಅವನಿಯ ಹೆಣ ಬೀಳುತ್ತದೆ. ಆದರೆ ಅವನಿಯ ಬಾಡಿ ಕಾಣೆಯಾಗುತ್ತದೆ ಮತ್ತು ಅವನಿಯ ಕೌನ್ಸೆಲಿಂಗ್ ನಡೆಸುತ್ತಿದ್ದ ಡಾ. ಅಂಶುಮಾನ್ (ಸುಭೋದ್ ಭಾವೆ) ಎಂಟ್ರಿಯಾಗುತ್ತದೆ. ಹಾಗಾದರೆ ಅವನಿಯ ಹೆಣ ಎಲ್ಲಿ ಕಾಣೆಯಾಯಿತು? ಡಾ. ಅಂಶುಮಾನ್ ಇದ್ದಕ್ಕಿದ್ದ ಹಾಗೆ ಕಾಣಿಸಿಕೊಳ್ಳೋದು ಏಕೆ? ಅಂಶುಮಾನ್ ಈ ಕೊಲೆ/ಆತ್ಮಹತ್ಯೆಯ ಪ್ರತ್ಯಕ್ಷ ಸಾಕ್ಷಿಯಾ? ಅಥವಾ ಅವನೂ ಕೊಲೆಗಾರರಲ್ಲಿ ಒಬ್ಬನಾ? ಕೊನೆಯದಾಗಿ ನಿಜವಾಗಿಯೂ ಅವನಿ ಸತ್ತಿರುತ್ತಾಳಾ?. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ 2023ರಲ್ಲಿ ತೆರೆಕಂಡ ಮರಾಠಿ ಚಲನಚಿತ್ರ ‘ವಾಳ್ವಿ’ ಯು ನೀಡುತ್ತದೆ.
ಪ್ರಸಿದ್ಧ ಮರಾಠಿ ಚಿತ್ರವಾದ ‘ಹರೀಶ್ಚಂದ್ರಾಚಿ ಫ್ಯಾಕ್ಟರಿ’ಯ ನಿರ್ದೇಶಿಸಿದ್ದ ಪರೇಶ್ ಮೊಕಾಶಿ ಈ ಚಿತ್ರದಲ್ಲೂ ಕಮಾಲ್ ಮಾಡಿದ್ದಾರೆ. ಕ್ರೈಂ ಥ್ರಿಲ್ಲರ್ ಆಗಿದ್ದರೂ, ಈ ಚಿತ್ರ ತನ್ನ ಕಾಮಿಡಿ ಟೈಮಿಂಗ್‌ನಿಂದ ಗಮನ ಸೆಳೆಯುತ್ತದೆ. ಇದಕ್ಕಾಗಿ ಚಿತ್ರದಲ್ಲಿ ಅಭಿನಯಿಸಿದ ಪ್ರತಿಯೊಂದು ಪಾತ್ರಗಳೂ ತಮ್ಮ ಕಾಣಿಕೆ ನೀಡಿದ್ದಾರೆ.
ಚಿತ್ರದ ಕೊನೆಯಲ್ಲಿ ವಾಳ್ವಿ (ಗೆದ್ದಲು ಹುಳ) ಎಂದೇ ಈ ಸಿನಿಮಾಗೆ ಹೆಸರು ನೀಡಲು ಕಾರಣವೇನೆಂದು ತಿಳಿಯುತ್ತದೆ, ಅದೂ ದೊಡ್ಡ ಸದ್ದಿನೊಂದಿಗೆ..!
ಅನುರಾಗ್ ಗೌಡ
ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿ
ಎಸ್.ಡಿ.ಎಂ ಕಾಲೇಜು, ಉಜಿರೆ