Back To Top

 ವಿವೇಕದಿಂದ ಆನಂದ ಕಂಡ ಸನ್ಯಾಸಿ ವಿವೇಕಾನಂದ | ಕಾರ್ತಿಕ್ ಕೆ ಪೈ

ವಿವೇಕದಿಂದ ಆನಂದ ಕಂಡ ಸನ್ಯಾಸಿ ವಿವೇಕಾನಂದ | ಕಾರ್ತಿಕ್ ಕೆ ಪೈ

ಸ್ವಾಮಿ ವಿವೇಕಾನಂದರು ಭಾರತೀಯರಿಗೆ ಮಾತ್ರವಲ್ಲದೇ ಇಡೀ ವಿಶ್ವಕ್ಕೇ ಗುರು ಹಾಗೂ ಮಾದರಿ. ಅವರು ಜೀವಿಸಿದ್ದು ಕೇವಲ 39 ವರ್ಷವಾದರೂ, ಬಿಟ್ಟು ಹೋದದ್ದು ಶತಮಾನಗಳೇ ಕಳೆದರೂ ಮರೆಯಲಾಗದ ಪರಮಜ್ಞಾನವನ್ನು‌. ಯುವ ಸಮುದಾಯ ಭಾರತದಲ್ಲಿ ತಣ್ಣಗಿದ್ದ ಕಾಲದಲ್ಲಿ ಸ್ಫೂರ್ತಿಯ ಕಿಚ್ಚನ್ನು ಹಚ್ಚಿ ತಾಯಿ ಭಾರತಿಯ ಸೇವೆಗೆ ಕರಸೇವಕರನ್ನು ಕೊಡುಗೆ ನೀಡಿದ ತರುಣ ಸಂತ. ಕ್ಷಾತ್ರ ತೇಜಸ್ಸಿನ ವೀರಸನ್ಯಾಸಿಯ 160ನೇ ಜನ್ಮಜಯಂತಿಯಂದು ನಾವು ನೆನೆಯಲೇ ಬೇಕು ಅವರು ನಡೆದ ಹಾದಿ.

ನರ ಶ್ರೇಷ್ಠರಲ್ಲಿ ಓರ್ವರಾದ ನರೇಂದ್ರನಾಥ ದತ್ತ ಸದಾ ವಿವೇಕದಿಂದ ಆನಂದ ಕಂಡ ಸನ್ಯಾಸಿ. ದೇವರನ್ನು ಹುಡುಕಿ ಹೊರಟ ಯುವಕ ತನ್ನ ಆಸುಪಾಸಿನಲ್ಲೇ ದೇವರ ಅಸ್ಥಿತ್ವ ಕಂಡು ಪಾವನರಾದವರು. ಬಾಲ್ಯದಲ್ಲಿ ತಾಯಿ ಭುವನೇಶ್ವರಿದೇವಿ ನೀಡಿದ ಧಾರ್ಮಿಕ ಶಿಕ್ಷಣ, ಮಹಾ ಪುರುಷರ ಗಾಥೆಯು ಅವರಿಗೆ ಭದ್ರ ಬುನಾದಿಯನ್ನು ನೀಡಿತು. ಅವರ ಬಾಲ್ಯವೇ ನಮ್ಮಂತಹ ಸಾಮಾನ್ಯರಿಗೆ ಆದರ್ಶ, ಏಕೆಂದರೆ ಓದಿನಲ್ಲಿ ಹೇಗೂ ಅತ್ಯಂತ ಚುರುಕು ಆದರೆ ಅವರಿಗೆ
ದೀನ ದಲಿತರ ಬಗೆಗಿದ್ದ ಕಾಳಜಿ, ಅಲೌಕಿಕ ವಿಚಾರಗಳ ಬಗೆಗಿದ್ದ ಆಸಕ್ತಿ ಅವರನ್ನು ವೈರಾಗ್ಯದ ಸಮೀಪ ಕರೆದೊಯ್ಯಿತು. ನಂತರ ನರೇಂದ್ರನಾಥ ಪರಮಜ್ಞಾನದ ಅಪೇಕ್ಷೆಯಿಂದ ಮುಂದುವರಿದು ಜಗತ್ತನ್ನೇ ಬೆಳಗುವ ಜಗಜ್ಯೋತಿ ವಿವೇಕಾನಂದರಾದರು.

ಸಿಸ್ಟರ್ಸ್ ಆಂಡ್ ಬ್ರದರ್ಸ್ ಆಫ್ ಅಮೇರಿಕಾ ಎಂದು ಘಂಟಾಘೋಷವಾಗಿ ಭಾರತದ ಹಾಗೂ ಸನಾತನ ಧರ್ಮದ ಭ್ರಾತೃತ್ವದ ಸಂದೇಶವನ್ನು ಜಗದಗಲಕ್ಕೂ ಹಬ್ಬಿಸಿದ ಪ್ರೇಮಮೂರ್ತಿ ಎಂದರೆ ತಪ್ಪಾಗಲಾರದು. ಜಾತಿ, ಮತ, ಧರ್ಮ ಅಥವಾ ಲಿಂಗ ಅವರು ಒಬ್ಬ ವ್ಯಕ್ತಿಯನ್ನು ನೋಡುವ ದೃಷ್ಟಿಯ ಮೇಲೆ ಪ್ರಭಾವ ಬೀರುತ್ತಿರಲಿಲ್ಲ. ಎಲ್ಲರನ್ನೂ ಸಮಾನರಾಗಿ ಕಾಣುವ ಗುಣ ಅವರದ್ದಾಗಿತ್ತು. ವಿಶೇಷವಾಗಿ ದೀನ ದುರ್ಬಲರ ಏಳಿಗೆಗಾಗಿ ಅವರು ತುಂಬಾ ಆಲೋಚನೆಗಳನ್ನು ಮಾಡುತ್ತಿದ್ದರು. ಹಲವಾರು ಬಾಹ್ಯ ಆಕ್ರಮಣಗಳಿಂದ ಭಾರತ ತತ್ತರಿಸಿ ಹೋಗಿತ್ತು. ಸಂಸ್ಕೃತಿ ನಾಶದತ್ತ ಸಾಗುತ್ತಿತ್ತು. ಅಂತಹ ವಿಷಮ ಕಾಲದಲ್ಲಿಯೂ ಭಾರತೀಯತೆ ಹಾಗೂ ಸನಾತನ ಧರ್ಮವನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿದಿದ್ದರು.

ಸ್ವಾಮಿ ವಿವೇಕಾನಂದ ಹಾಗೂ ಆಧ್ಯಾತ್ಮಕ್ಕೆ ಇದ್ದ ನಂಟು ಬಹಳ ಗಟ್ಟಿಯಾಗಿತ್ತು. ರಾಮಕೃಷ್ಣರಂತಹ ಗುರುವಿನಿಂದ ಸಿಕ್ಕ ಅಮೂಲ್ಯ ಜ್ಞಾನ ಲೋಕಕ್ಕೆ ಪಸರಿಸಿ ಅಂಧಕಾರ ದೂರಪಡಿಸುವ ಪ್ರಯತ್ನ ಅವರು ಲೋಕ ಸಂಚಾರಕ್ಕೆ ತೆರಳುವ ಮೂಲಕ ಹಾಗೂ ಬೋಧನೆಗಳನ್ನು ನೀಡುವ ಮೂಲಕ ಶ್ರೇಷ್ಠರೆನಿಸಿಕೊಂಡಿದ್ದಾರೆ. ಆಧ್ಯಾತ್ಮ, ಸಮಾಜಸುಧಾರಣೆ, ಗುರಿ ಹೊತ್ತು ತನ್ನ ಅಲ್ಪ ಆಯಸ್ಸಿಗೇ ನಾಚಿಕೆ ಬರಿಸುವಂತೆ ಶ್ರಮಿಸಿದವರು ಅವರು.

ಅವರ ಜೀವನದಿಂದ ಹಲವಾರು ವಿಷಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿದರೆ ನಮ್ಮ ಬದುಕು ಕೂಡ ಉತ್ತಮವಾಗುತ್ತದೆ. ವಿವೇಕಾನಂದರು ಸದಾ ಸರಳತೆಯನ್ನು ಆಯ್ಕೆ ಮಾಡುತ್ತಿದ್ದರು. ಅದಕ್ಕೆ ನಿದರ್ಶನ ಅವರು ಚಿಕಾಗೋ ಸರ್ವಧರ್ಮ ಸಮ್ಮೇಳನಕ್ಕೆ ತೆರಳಿದ್ದಾಗ ಅಲ್ಲಿನ ಆಯೋಜಕರೋರ್ವರು ಸೂಟು-ಬೂಟು ಧರಿಸಿ ಬಂದಿಲ್ಲವೇಕೆ ಎಂದು ಪ್ರಶ್ನಿಸುತ್ತಾರೆ. ಏಕೆಂದರೆ ವಿವೇಕಾನಂದರು ಭಗವಾ ವಸ್ತ್ರ ಧರಿಸಿ ತೆರಳಿದ್ದರು. ಆದರೂ ಅಲ್ಲಿ ನೆರೆದಿದ್ದ ಜನಸಾಗರವು ಎದ್ದು ನಿಂತು ಚಪ್ಪಾಳೆ ಹೊಡೆಯುವಷ್ಟರ ಮಟ್ಟಿಗೆ ಮರೆಯಲಾಗದ ಭಾಷಣ ಮಾಡಿ ಅವರು ಏನನ್ನು ಸಾಬೀತು ಪಡಿಸಿದರೆಂದರೆ ನಮ್ಮ ಬಳಿ ಏನಿದೆ ಏನಿಲ್ಲಾ ಎಂಬುವುದು ಮುಖ್ಯವಲ್ಲ ನಾವೇನು ಕೆಲಸ ಮಾಡುತ್ತೇವೆ ಅದು ಅತೀ ಮುಖ್ಯವಾಗುತ್ತದೆ.

ಯುವ ಜನತೆಯ ಪಾತ್ರ ದೇಶದ ಪ್ರಗತಿಯಲ್ಲಿ ಮಹತ್ತರ ಎಂದು ವಿವೇಕಾನಂದರು ಚೆನ್ನಾಗಿ ಅರಿತಿದ್ದರು. ಯುವ ಸಮುದಾಯದ ಒಗ್ಗಟ್ಟಿಗಾಗಿ ತುಂಬಾ ಶ್ರಮಿಸಿದ್ದರು. “ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂದು ಯುವಕರಿಗೆ ತಮ್ಮ ಗುರಿಯ ಬಗ್ಗೆ ಗಮನವಿಡಲು ಬಡಿದೆಬ್ಬಿಸಿದಂತಿತ್ತು. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತರುಣರ ಭಾಗವಹಿಸುವಿಕೆ ಹೆಚ್ಚಿಸುವತ್ತ ತನ್ನ ಜೀವನದ ಅಧಿಕ ಸಮಯವನ್ನು ಮೀಸಲಿಟ್ಟಿದ್ದರು. ಅವರ ಪರಿಕಲ್ಪನೆಯಂತೆ ಯುವಕರು ದೇಶ ಕಟ್ಟುವ ಕಾರ್ಯದಲ್ಲಿ ಕಾರ್ಯಪ್ರವೃತ್ತರಾದರೆ ಭಾರತ ವಿಶ್ವಗುರುವಾಗುವುದು ನಿಶ್ಚಿತವೆಂದು ಆಗಿನ ಕಾಲದಲ್ಲೇ ಆಲೋಚಿಸಿದ ಭಾರತದ ಹಿತೋದ್ದೇಶಕ್ಕಾಗಿ ದುಡಿದ ಸಂತ ಶಿರೋಮಣಿಯ ಜನ್ಮದಿನವಾದ ಈ ದಿನ ಸ್ಮರಿಸೋಣ.

ಕಾರ್ತಿಕ್ ಕೆ ಪೈ
ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ
ಎಸ್.ಡಿ.ಎಂ ಕಾಲೇಜು, ಉಜಿರೆ.

Prev Post

ಅವಳಿಗೊಂದು ದೂರು..! | ತೇಜಸ್.ಹೆಚ್. ವೈ

Next Post

ಅಹಂಭಾವವನ್ನು ಸೋಲಿಸಿದ ಮಾನವೀಯತೆಯ ಕಥೆ ‘ಪಾರ್ಕಿಂಗ್’ | ಅನುರಾಗ್ ಗೌಡ

post-bars

Leave a Comment

Related post