
Bhishmasthamana ; ಎಸ್.ಡಿ.ಎಂ. ಕಾಲೇಜಿನ ‘ಭೀಷ್ಮಾಸ್ತಮಾನ’ ನಾಟಕಕ್ಕೆ ಪ್ರಥಮ ಸ್ಥಾನ
Ujire : ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ನಾಟಕ ಸ್ಪರ್ಧೆ ‘ಅಭಿನಯ’ದಲ್ಲಿ ಎಸ್.ಡಿ.ಎಂ. ಕಾಲೇಜಿನ ‘ಭೀಷ್ಮಾಸ್ತಮಾನ’ ನಾಟಕವು ಪ್ರಥಮ ಸ್ಥಾನ ಗಳಿಸಿದೆ.
ಸ್ಪರ್ಧೆಯು ಎರಡು ಹಂತದಲ್ಲಿ ನಡೆದಿದ್ದು, ಮೊದಲ ಸುತ್ತಿನಲ್ಲಿ 25 ಕ್ಕೂ ಅಧಿಕ ತಂಡಗಳು ಭಾಗವಹಿಸಿ, 6 ತಂಡಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು.
‘ಭೀಷ್ಮಾಸ್ತಮಾನ’ವು (Bhishmasthamana) ಅತ್ಯುತ್ತಮ ನಾಟಕ ಪ್ರಶಸ್ತಿಯ ಜೊತೆಗೆ 9 ವೈಯಕ್ತಿಕ ಪ್ರಶಸ್ತಿಗಳ ಪೈಕಿ 6 ನ್ನು ಗೆದ್ದುಕೊಂಡಿದೆ. ರಂಗ ನಿರ್ದೇಶಕ ಯಶವಂತ್ ಬೆಳ್ತಂಗಡಿ (ಅತ್ಯುತ್ತಮ ನಿರ್ದೇಶನ), ಶ್ರೀಕೃಷ್ಣ ಪಾತ್ರಧಾರಿ ಅಮಿತ್ ಕುಮಾರ್ (ಅತ್ಯುತ್ತಮ ನಟ), ಅರ್ಜುನ ಪಾತ್ರಧಾರಿ ಅಮೃತವರ್ಷಿಣಿ (ಅತ್ಯುತ್ತಮ ನಟಿ), ಮದನ್ ಮತ್ತು ಸುಬ್ರಹ್ಮಣ್ಯ ತಂಡ (ಅತ್ಯುತ್ತಮ ಸಂಗೀತ), ಅಶ್ವಿತ್ ಮತ್ತು ಆಯುಷ್ಮಾನ್ (ಅತ್ಯುತ್ತಮ ಬೆಳಕಿನ ವಿನ್ಯಾಸ) ಪ್ರಶಸ್ತಿ ಪಡೆದಿದ್ದು, ಅತ್ಯುತ್ತಮ ಸೆಟ್ (ರಂಗಸಜ್ಜಿಕೆ) ಪ್ರಶಸ್ತಿಯನ್ನೂ ತಂಡ ಗೆದ್ದುಕೊಂಡಿದೆ.
‘ಭೀಷ್ಮಾಸ್ತಮಾನ’ ನಾಟಕವು ಏಳು ಪ್ರದರ್ಶನಗಳನ್ನು ಕಂಡಿದ್ದು, ಏಳೂ ಪ್ರದರ್ಶನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾಟಕಕ್ಕೆ ಸಂದ ಪ್ರಶಸ್ತಿಯ ಕುರಿತು ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕ ವೃಂದದವರು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿ ಸನ್ಮಾನಿಸಿದರು. ಸಾಧನೆಯ ಕುರಿತು ಮೆಚ್ಚುಗೆಯ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ನಾಟಕ ತಂಡವನ್ನು ಅಭಿನಂದಿಸಿದರು.