ಒಂಟಿತನವೆಂಬುದು ಶಾಪವಾದರೆ ದಿವ್ಯ ಏಕಾಂತವೇ ವರ | ಶಶಿಸ್ಕಾರ ನೇರಲಗುಡ್ಡ
ಸ್ಪ್ಲಿಟ್ಸ್ ಆಫ್ ಸೆಕೆಂಡ್ಸ್ ನಲ್ಲಿ ಕೋಟ್ಯಂತರ ಕಣಗಳ ವಿರುದ್ಧ ಬಡಿದಾಡಿ, ತಾಯಿಯ ಗರ್ಭದಲ್ಲಿ ಸಿಂಹದ ಗುಹೆ ಥರ ಒಂಬತ್ತು ತಿಂಗಳು ಜೀವಿಸಿ, ಅವಿಚ್ಛಿನ್ನ ಗಳಿಗೆಯಲ್ಲಿ ಈ ಭೂಮಿಗೆ ಪಾದ ಸ್ಪರ್ಶಿಸುತ್ತೇವೆ. ಹೀಗೆ ಹುಟ್ಟಿದ ನಾವೆಲ್ಲರು ಬಾಲ್ಯದಲ್ಲಿ ಹೊರ ಲೋಕದ ಪರಿವಿಲ್ಲದೆ, ನಮ್ಮದೇ ಸುತ್ತಲಿನ ಪುಟ್ಟ ಪ್ರಪಂಚ ನಿರ್ಮಿಸಿಕೊಂಡು, ರೆಕ್ಕೆ ಕಟ್ಟಿ ನಭಕ್ಕೆ ಹಾರುತ್ತಾ ತುಂಬು ಯೌವನದತ್ತ ಹೆಜ್ಜೆ ಇಡುತ್ತೇವೆ. ಅಲ್ಲಿ ಹೆದ್ದಾರಿಯನ್ನೋ, ಕಾಲ್ದಾರಿಯನ್ನೋ ಸೃಷ್ಟಿಸಿಕೊಂಡು ಬದುಕಿನ ಮೊದಲ ಬೇಟೆ ಆರಂಭಿಸುತ್ತಿರುವಾಗ, ಅದೆಲ್ಲಿಂದಲೋ ದುತ್ತನೆ ಎದುರಾಗುವ ಮಾಯಾವಿ ಪ್ರಾಯದ ಸಮಸ್ಯೆಯಿಂದಲೋ?, ಹದಿಹರೆಯ ವಯಸ್ಸಿನ ಹುಚ್ಚುತನದಿಂದಲೋ?, ಹಾರ್ಮೋನ್ಗಳ ಯಡವಟ್ಟಿನಿಂದಲೋ?, ಪ್ರೀತಿ ಎನ್ನುವ ಮಾಯೆಯೊಳಕ್ಕೆ ಯಾವುದೇ ಪವಾಡವಿಲ್ಲದೆ ಬೀಳುತ್ತೇವೆ.
ಪ್ರೀತಿಯಲ್ಲಿ ಬಿದ್ದ ಜೋಡಿಗಳು ಹೀಗೆ ಸಾಗುತ್ತಿರುವಾಗ ಯಾರೋ ಒಬ್ಬರ ನೆಗ್ಲೇಟ್’ನಿಂದಲೋ, ಆಲಸ್ಯದಿಂದಲೋ ಒಂಟಿತನದ ದಾಸ್ಯಕ್ಕೆ ಒಳಗಾಗುತ್ತೇವೆ. ಒಂತರ ಹತಾಷೆ, ನೋವು ಕಾಡಲಾರಂಭಿಸುತ್ತದೆ. ನಾನು ಮೋಸ ಹೋಗಿಬಿಟ್ಟೆ, ನನಗ್ಯಾರು ಇಲ್ವಲ್ಲ ಅನ್ನೊ ಬೇಜಾರು ತುಂಬಿಕೊಳ್ಳುತ್ತೆ. ಬದುಕು ಬರಡಾಯಿತು ಅನ್ನೋ ಫೀಲಿಂಗ್ ಆವರಿಸುತ್ತದೆ. ಕಾಲೇಜಿನಲ್ಲಿದ್ದಾಗ ನಕ್ಕು ನಕ್ಕು ನಲಿದಾಡುತ್ತಿದ್ದ ನಾವೇ, ನಮ್ಮ ಕೋಣೆಗೆ ಹೊಕ್ಕಿದೊಡನೆ ಕಣ್ಣೀರು ತುಂಬಿಕೊಂಡು ಬಿಕ್ಕುತ್ತೀವಿ. ನಾನು ಒಂಟಿ ಅನ್ನೋ ಭಾವ ನಮ್ಮ ನೆರಳಿನಂತೆ ಗಿರಾಕಿ ಹೊಡೆಯಲು ಶುರು ಹಚ್ಚಿಕೊಳ್ಳುತ್ತೆ.
ಈ ಒಂಟಿತನದ ನೋವು, ಹತಾಷೆ, ಬೇಜಾರೆಂಬ ಕೂಪದಲ್ಲಿ ಒದ್ದಾಡುವಾಗ ತಂದೆ ತಾಯಿ ಮೇಲೆ ಅನಾಯಾಸವಾಗಿ ಸಿಟ್ಟು ಮಾಡಿಕೊಳ್ಳುತ್ತೆವೇ, ಇನ್ನಿಲ್ಲದಂತೆ ನಮಗೆ ನಾವೇ ಬೇಸರ ತಂದುಕೊಂಡು ಕಾದ ಎಣ್ಣೆಯಲ್ಲಿ ಮುಳುಗುತ್ತೇವೆ, ಸ್ನೇಹಿತರನ್ನು, ಸಂಬಂಧಿಕರನ್ನು ದೂರ ಸರಿಸುತ್ತೇವೆ. ಹಾಗೆ ಶುರುವಾಗುತ್ತೆ ಸಣ್ಣಗೆ ನಿಜವಾದ ನೋವು. ಸ್ವಲ್ಪ ದಿನಗಳು ಮಗುಚಿ ಬಿದ್ದ ಮೇಲೆ ಕೈ ತುತ್ತು ತಿನ್ನಿಸೋಕೆ, ಮಡಿಲ ಮೇಲೆ ಗೋಣು ಚೆಲ್ಲುವುದಕ್ಕೆ ಅಮ್ಮನಿರಬೇಕೆತ್ತು, ಬರಿಗೈ ದಾಸಪ್ಪರಾಗಿದ್ದಾಗ ಕೈಗೆ ದುಡ್ಡಿಟ್ಟು ನಾನಿದ್ದಿನಿ ಮಗ ಅನ್ನೋಕೆ ಅಪ್ಪನಿರಬೇಕಿತ್ತು, ಏನಾಗಲ್ಲ ಬಿಡೋ ದೋಸ್ತ ನಾವಿಲ್ವ ಅನ್ನೋಕೆ ಸ್ನೇಹಿತರಿರಬೇಕಿತ್ತು, ಸೋತು ಸುಣ್ಣ ಆದಾಗ ಕಣ್ಣೀರು ಒರೆಸಿ, ಪಕ್ಕದಲ್ಲಿ ಕೂತ್ಕೊಂಡು ಸಮಾಧಾನ ಪಡಿಸೋಕೆ ಮುಖ್ಯವಾಗಿ ಅವಳಿರಬೇಕಿತ್ತು..! ಅನಿಸುತ್ತದೆ.
ಅಷ್ಟಕ್ಕೂ ಅವಳು ನನ್ನ ಏಕೆ ಬಿಟ್ಟೋದಳು ಅನ್ನೋ ಮಾನಸಿಕ ರೋಗದೋಡನೆ ಖಿನ್ನರಾಗುತ್ತೇವೆ, ಬೇಸರಿಸಿಕೊಳ್ತೇವೆ. ಸೂರ್ಯನಿಗೆ ಹೇಗೆ ಗ್ರಹಣ ಹಿಡಿಯುತ್ತದೆಯೋ ಹಾಗೆ ಬದುಕಿನ ಹತಾಷ ಕಾಲಕ್ಕೂ ಈ ಸಮಯದಲ್ಲಿ ಗ್ರಹಣ ಹಿಡಿಯುತ್ತದೆ, ಕಪ್ಪು ಛಾಯೆ ಆವರಸಿಕೊಳ್ಳುತ್ತದೆ.
ಚಿಂತಕ, ದಾರ್ಶನಿಕ, “ಆಚಾರ್ಯ ರಜನೀಶ್” ಒಂದು ಸೊಗಸಾದ ಮಾತು ಹೇಳುತ್ತಾರೆ, ಇದ್ದಕ್ಕಿದ್ದಂತೆ ನಮ್ಮನ್ನ ಆಕ್ರಮಿಸಿಕೊಂಡು ಬಿಡುವ ಒಬಂಟಿತನವನ್ನ, ನಾವು ದಿವ್ಯ ಏಕಾಂತವಾಗಿ ಪರಿವರ್ತಿಸಿಕೊಳ್ಳಬೇಕು. ಆದ್ರೆ ಆ ಏಕಾಂತವನ್ನಾಗಿ ಪರಿವರ್ತಿಸಿಕೊಳ್ಳುವ ಕ್ರಿಯೆ ಅಷ್ಟು ಸುಲಭನಾ..!? ಮಾತಾಡಿದಷ್ಟು, ಹೇಳಿದಷ್ಟು ಸಲಿಸಾ..? ಖಂಡಿತವಾಗಿಯು ಇಲ್ಲ.
ರವಿ ಬೆಳಗೆರೆ ಹೇಳಿದಂತೆ defeat the defeat, frustrate the frustration, and kill the disappear ಅನ್ನೋ ಮಂತ್ರವನ್ನ ಮನಸ್ಸಿಗೆ ಅರೆದು ಹೋಯ್ದುಕೋಳ್ಳಬೇಕು, ಆಗ ಮಾತ್ರ ಏನನ್ನಾದರೂ ಸಾದಿಸೋಕೆ ಸಾಧ್ಯ. ಬದುಕಿನ ನಾನಾ ಸನ್ನಿವೇಶಗಳಲ್ಲಿ ಬರುವ ಈ ಒಂಟಿತನಕ್ಕೆ ಗುಡ್ ಬೈ ಹೇಳಿ, ಏಕಾಂತಕ್ಕೆ ವೆಲ್ ಕಮ್ ಮಾಡಿಕೊಳ್ಳಲೇಬೇಕು; ಅದು ಬದುಕಿನ ಅನಿವಾರ್ಯ, ಅಗತ್ಯ ಕೂಡ ಹೌದು.
ನಾವೇಷ್ಟೆ ದುಃಖದಲ್ಲಿದ್ದರು, ಬೇಜಾರಲ್ಲಿದ್ದರು, ಸುಮ್ಮನೆ ಯಾವುದೋ ಒಂದು ಚಂದದ ಪುಸ್ತಕ ಹಿಡಿದು ಮಗ್ನರಾಗಿಬಿಡಬೇಕು, ಒಂದು ಪ್ರಕಾಶಮಾನವಾದ ಬೆಳಗಿನ ಸೂರ್ಯೋದಯದ ಮೊದಲ ಕಿರಣಗಳು ಮನೆಯ ಕಿಟಕಿಗಳಿಂದ ಮನಸ್ಸಿಗೆ ಪ್ರಜ್ವಲಿಸಿ ನೆಮ್ಮದಿ ತರೋದಕ್ಕೆ ಶುರು ಮಾಡುತ್ತವೆ. ಬಾಡಿದ ಕಾಲ ತನ್ನಷ್ಟಕ್ಕೆ ತಾನೆ ಅರಳಿ ಕೊಳ್ಳುತ್ತದೆ. ಅದೆಲ್ಲಿಂದಲೋ ಒಂದು ಶಕ್ತಿ ನಮ್ಮ ದಿಕ್ಕಿಗೆ ನೆಡೆದು ಬರುತ್ತದೆ.
ಒಂದು ಹುಂಬು ಧೈರ್ಯವನ್ನು, ಬಂಡಾಟದ ಬದುಕನ್ನು ನಮಗೆ ನಾವೇ ಸೃಷ್ಟಿಸಿಕೊಳ್ಳಬೇಕು. ತಾಯಿಯ ಒಡಲಿನಿಂದ ಈ ಜಗತ್ತಿಗೆ ಕಾಲಿಟ್ಟಿದ್ದು ಒಬ್ಬನೇ, ಇಲ್ಲಿಂದ ಎದ್ದು ಹೋಗೋದು ಕೂಡ ನಾನೊಬ್ಬನೇ ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. I WILL BE ALRIGHT. ಈಗ ಹಾಗಿರುವುದೆಲ್ಲ ಒಳ್ಳೆಯದಕ್ಕೆ, ಮುಂದೆ ಹಾಗುವುದು ನೆಮ್ಮದಿ, ಸಂತೋಷ ತರಲಿಕ್ಕೆ ಅಂದುಕೊಳ್ಳಬೇಕು. ನನಗೆ ಯಾರ ಹಂಗೂ ಬೇಡ ನಾನೊಬ್ಬನೇ ಬೆಳಗಿನ ಜಾಗಿಂಗ್‌ಗೆ ಹೆಡ್ ಸೆಟ್ ಹಾಕಿಕೊಂಡು ಕಿವಿ, ಮನಸ್ಸು ತಂಪಾಗುವಂತೆ ಹಾಡು ಕೇಳಿಕೊಳ್ಳುತ್ತಾ ಹೋಗಬಲ್ಲೆ, ಥಿಯೇಟರಿಗೆ ನುಗ್ಗಿ ಸಿನಿಮಾ ನೋಡಬಲ್ಲೆ, ಯಾವ ಜೊತೆಗಾರರು ಬೇಕಿಲ್ಲದೆ ಹೋಟೆಲ್‌ನಲ್ಲಿ ಕಾಫಿ ಕುಡಿಯಬಲ್ಲೆ, ನನ್ನ ಕರಿ ಚಿರತೆಯಂಥ ರಾಯಲ್ ಎನ್‌ಫೀಲ್ಡ್ ಬೈಕಿನಲ್ಲಿ ಪ್ರಪಂಚವನ್ನು ಸುತ್ತಬಲ್ಲೆ ಅನ್ನುವ ಏಕಾಂತ ಸೃಷ್ಟಿಸಿಕೊಳ್ಳಬೇಕು.
ಏಕಾಂತದಲೊಂದು ಆಧ್ಯಾತ್ಮವಿದೆ,
ಒಂಟಿತನದಲೊಂದು ಆಗಾಧ ನೋವಿದೆ,
ಕಟ್ಟಕಡೆಯದಾಗಿ ಆಯ್ಕೆ ನಮ್ಮದೆ ಅಲ್ವಾ…?
ಪ್ರೀತಿಯೆಂಬ ಮಾಹೆ ಬದುಕ ಕಸಿದು, ಬದುಕು ಕಲಿಸಿದೆ,
ಬದುಕೋಣ ನೋವ ಮರೆತು ಚಂದ ಬದುಕೋಣ.
ಶಶಿಸ್ಕಾರ ನೇರಲಗುಡ್ಡ
ಪತ್ರಿಕೋದ್ಯಮ ವಿದ್ಯಾರ್ಥಿ
ಎಸ್. ಡಿ. ಎಮ್. ಕಾಲೇಜು, ಉಜಿರೆ