Back To Top

 ನೀ ಹಿಂಗ ನೋಡಬ್ಯಾಡ ನನ್ನ | ದಿವ್ಯಶ್ರೀ ಹೆಗಡೆ

ನೀ ಹಿಂಗ ನೋಡಬ್ಯಾಡ ನನ್ನ | ದಿವ್ಯಶ್ರೀ ಹೆಗಡೆ

ರವಿ ಬೆಳಗೆರೆಯವರ ನೀ ಹಿಂಗ ನೋಡಬ್ಯಾಡ ನನ್ನ ಪುಸ್ತಕದ ಶ್ರಾವಣಿ ಶಿಶಿರ ಚಂದ್ರನಿಗೆ ಪ್ರೇಮ ಪತ್ರ ಬರೆದಿದ್ದರೆ ಹಿಂಗೇ ಇರ್ತಿತಲ್ವಾ…!

ನನ್ನವನೇ ಶಿಶಿರ ….

ಇಂತಹದೊಂದು ಪತ್ರ ನಿನ್ನವಳಿಂದ ಬರಬಹುದು ಎಂದು ನೀನು ಊಹಿಸಿರಲಿಕ್ಕಿಲ್ಲ. ಜಂಗಮವಾಣಿ ಸೌಲಭ್ಯವಿದ್ದರೂ ಅದೇಕೋ ಇಂದು ರುಚಿಸುತ್ತಿಲ್ಲ. ಎಲ್ಲವನು ಪತ್ರದ ಪಾತ್ರವಾಗಿ ಹೇಳುವ ಹೆಬ್ಬಯಕೆ ಕಣೋ!. ನನ್ನ ಮೊಮ್ಮಕ್ಕಳಿಗೂ ಈ ಪತ್ರದ ಕಥೆಯನ್ನು ಉಳಿಸುವಾಸೆ. ಈ ಪತ್ರವನ್ನು ನೇನಪಿಸಿಕೊಂಡು ಅದೇ ಬೊಚ್ಚು ಬಿದ್ದ ಬಾಯಲ್ಲಿ ಮುಗುಳ್ನಗುತ್ತಾ ನಾಚುವ ಕನಸನ್ನು ಇಂದು ನಾನು ಕಾಣುತ್ತಿರುವೆ.

ನಾನೋ ಸೀದಾ ಸಾದಾ ಹುಡುಗಿ. ಆದ್ರೂ ನನಗೇ ಹೇಗೆ ಬಿದ್ದೆ ನಾ ಕಾಣೆ. ಅಂದು ರಾಜಾಜಿನಗರದ ಎರಡನೇ ತಿರುವಿನ ಬಳಿ ಬಂದು ಅದೇನೋ ಬಡಬಡಿಸಿ ಬಿಟ್ಟಿದ್ದೆ. ಮೊದಲೇ ಸಣ್ಣ ಸುಳಿವನ್ನೂ ನೀ ನಿಡಿದವನಲ್ಲಾ. ಬಡಬಡಿಸಿ ಎಲ್ಲವನ್ನೂ ಸೀದಾ ಹೇಳಿಯೇ ಬಿಟ್ಟೆಯಲ್ಲಾ. ನಿನ್ನ ಕಣ್ಣ ದೃಡತೆ, ತುಂಟ ನೋಟ, ಚುರುಕು ಕಂಗಳು, ಕುಡಿ ಮೀಸೆಗೆ ಅಂದೇ ಸೋತು ಹೋಗಿದ್ದೆನೋ? ತಿಳಿದಿಲ್ಲ, ಆದರೆ ಏಕಾಏಕಿ ದಾಳಿಗೆ ಒಮ್ಮೆ ಬೆಚ್ಚಿದ್ದು ಹೌದು.

ಅಂದೆನೊ ತಿರಸ್ಕರಿಸಿ ಹೋದದ್ದು ಸತ್ಯ. ಅಂದು ತಿಳಿಯಲಿಲ್ಲ ನನ್ನ ರಸ್ತೆಯಷ್ಟೇ ತಿರುವಾದದ್ದಲ್ಲ ನನ್ನ ಬದುಕಿನ ತಿರುವು ಅದೇ ಎಂದು . ರಾತ್ರೆ ಅದೆಷ್ಟೋ ಹೊತ್ತು ಅದೇ ಯೋಚನೆ ಮಂಪರಿನಲ್ಲೂ ನಿನ್ನದೇ ಕನವರಿಕೆ ಹೆಚ್ಚಾಯಿತು. ಅಂದಿನಿಂದ ಆದರೆ ಇದೆಲ್ಲವನ್ನೂ ನಿನ್ನ ಹಾಗೆ ನಿನ್ನ ಮುಂದೆ ಹೇಳಲು ಧೈರ್ಯ ಸಾಲದೇ ಅದೆಷ್ಟು ದಿನ ಹಾಗೆ ಇದ್ದೆ ಅಲ್ಲವಾ!.

ನಿನಗೆ ನಿನಪಿದೆಯಲ್ಲ! ಅದೆಲ್ಲಕಿಂತ ಮುಂಚೆ ನಿನ್ನ ಕಣ್ಣು ನನ್ನನ್ನೇ ಅರಸುವುದೆಂದು ಗೊತ್ತು. ನನ್ನ ಕಣ್ಣು ನಿನ್ನ ಹಿಂದೆ ಅಲೆಮಾರಿಯಾಗಿ ಅಲೆಯುವಂತಹ ಹೊತ್ತು ಆಗೆಲ್ಲ ನಿನ್ನ ಕಣ್ಣ ನಿವೇದನೆ ನನ್ನ ಮನವನ್ನು ತಟ್ಟುತ್ತಲೆ ಇತ್ತು. ಮತ್ತೆ ಮತ್ತೆ ಅಲ್ಲೇ ಸೊತಿದ್ದೆನಾ?. ನಿನ್ನ ಪ್ರೀತಿಯ ಬಿನ್ನಹಕ್ಕೆ ಅಂದೇ ಸೊತಿದ್ದೆನಾ ಸಾವಿರ ಸಾವಿರ ಬಾರಿ ಕೇಳಿದ್ದು ಉಂಟು ಆದರೆ ಅದಕ್ಕೆ ಉತ್ತರ ನನ್ನಲ್ಲಿ ಇರಲೇ ಇಲ್ಲ.

ಬಿಕ್ಷಾಂದೇಹಿ ಎಂದು ಪ್ರೇಮ ಭಿಕ್ಷೆಯನ್ನು ಯಾಚಿಸುವಾಗ ನಿನ್ನ ಜೋಳಿಗೆಯಲ್ಲಿ ನನ್ನನ್ನೆ ಕರೆದುಕೊ ಎಂದು ಕೂಗಿ ಬಿಡಬೇಕೆಂದು ಹೇಳುತ್ತಿತ್ತು ಮನಸ್ಸು. ಆದರೆ ಅಂದು ಆಗಲೇ ಇಲ್ಲ. ನಿನ್ನ ನೋಡದೆ ಅದೆಷ್ಟುವದ್ದಾಡಿದ್ದೆ ನಾನು. ಕ್ಯಾಂಟೀನಿನಲ್ಲಿ ಅಂದು ಅಡುಗೆಯೂ ರುಚಿಸಿರಲಿಲ್ಲ. ಅದಾದ ಮೇಲೆ ಮತ್ತೆ ನೀನ್ನನ್ನು ಒಮ್ಮೆ ಬಂದು ನನ್ನ ನೋಡಿದ್ದು ನೆನಪಾಗಿ ಹೇಳತೀರದ ನಾಚಿಕೆ.

ಅಂದೇ ಅಲ್ಲವೇ ನಾನು ನಿನ್ನ ಮುಂದೆ ಬಂದು ಎಲ್ಲವನೂ ಹೇಳಿದ್ದು. ಅದಕ್ಕಿಂತ ಮುಂಚೆ ನನ್ನ ಕಣ್ಣೋಟ ಹುಡುಕುವ ಬರ ಅದೆಲ್ಲವ ಗಮನಿಸಿದ್ದೆಯಾ ನೀನು ? ನಾನು ಅಷ್ಟು ಕಡಾಖಂಡಿತವಾಗಿ ತಿರಸ್ಕರಿಸಿದ್ದರೂ ನಿನ್ನಲ್ಲಿ ನನ್ನ ಬಗೆಗೆ ಕಂಡದ್ದು ಪ್ರೀತಿ ಅಷ್ಟೇ. ಗೊತ್ತಿಲ್ಲ ಹುಡುಗ ಎಂದು ಸೆರೆಯಾದೆ ನಿನ್ನ ಚುರುಕು ಕಣ್ಣಲ್ಲಿ . ಅಂದೇ ನನ್ನ ಹೃದಯದೂರಿನಲ್ಲಿ ನೀನು ಸೆರೆಯಾಗಿದ್ದೆ ಅಷ್ಟೇ! ಇದೆಲ್ಲವನ್ನೂ ನಿನಗೆ ಹೇಳಿದ್ದೆ ಅಂದೇ ಆದರೆ ಪತ್ರ ಬರೆಯುವ ಪುಟ್ಟ ಬಯಕೆ ಹೆಚ್ಚಾಗಿ ಮುತ್ತಿನಂತಹ ಅಕ್ಷರದಲ್ಲಿ ಜೋಡಿಸಿಡುವ ಆಸೆ.

ಇದು ಪ್ರೀತಿಯಾಗಿ ಒಪ್ಪಿ ಆದಮೆಲೂ ಹೀಗೆ ಪತ್ರ ಬರೆಯುವ ಪುಟ್ಟ ಪೋರಿ ನಿನ್ನ ಹುಡುಗಿ ನಾನು. ಈ ಪತ್ರದ ಲಕೊಟೇ ನಿನ್ನ ತಲುಪಿ ಈ ಕಾಗದ ಓದಿದಾಗ ನೀ ಹುಚ್ಚೆದ್ದು ಕುಣಿಯುವೆಯಾ? ಇದು ನನ್ನ ಸರ್ಪ್ರೈಸ್ ಪತ್ರ ಅಲ್ಲವೇ! ಅದಕ್ಕೆ ಈ ಪತ್ರ ತಲುಪಿದಾಗ ಮತ್ತೆ ನೀ ಪತ್ರ ಬರೆದು ನನಗೂ ಸರ್ಪ್ರೈಸ್ ಕೊಡು ಅಂತಹ ಪತ್ರಗಳೇ ಖುಷಿ ಕೊಡಬಹುದೇನೊ.

ತದನಂತರದಲ್ಲಿ ಮತ್ತೆ ಅದೇ ರಾಜಾಜಿನಗರದ ಹಸಿರ ಮೈದಾನದಲ್ಲಿ ಕೂತು ಸಾಕೆನ್ನುವಷ್ಟು ವಟಗುಟ್ಟುವ. ಈ ಕತ್ತಲ ರಾತ್ರಿಯಲಿ ಕೊರೆವ ಚಳಿಯಲಿ ನಿನ್ನದೇ ಗುಂಗು, ನಿಶೆಯೆರಿದಂತೆ ನಶೆಯೇರಿದೆ ನಿನ್ನದೇ ನೆನಪು. ಕಾಯುತಿರುವೆ ನಿನ್ನ ಪ್ರೀತಿ ತುಂಬಿದ ಪ್ರೇಮ ಪತ್ರಕ್ಕೆ ಕಳುಹಿಸುವೆಯಲ್ಲಾ?
ಕಾಯುತಿರುವೆ…

ಇಂತಿ.
ನಿನ್ನವಳು
ಶ್ರಾವಣಿ

ದಿವ್ಯಶ್ರೀ ಹೆಗಡೆ
ಎಸ್.ಡಿ.ಎಂ ಉಜಿರೆ

Prev Post

ಹಾಯ್‌ ಸುಚಿ ಇಂತಿ ನಿನ್ನವ ರುಜು | ರುಜುವಾನ್ ಕೆ

Next Post

ಬೆನ್ನ ಹಿಂದನ ಮಾತುಗಳು | ಹುಸೇನಸಾಬ ವಣಗೇರಿ

post-bars

One thought on “ನೀ ಹಿಂಗ ನೋಡಬ್ಯಾಡ ನನ್ನ | ದಿವ್ಯಶ್ರೀ ಹೆಗಡೆ

ಮಸ್ತ್ ಬರವಣಿಗೆ👌👍

Reply

Leave a Comment

Related post