ನಾನು ಮತ್ತೆ ಮಗುವಾಗಬೇಕು | ಶ್ರವಣ್ ನೀರಬಿದಿರೆ
ನಾನು ಮತ್ತೆ ಮಗುವಾಗಲು
ಟೈಮ್ ಟ್ರಾವೆಲ್ ಮಾಡಬೇಕೆಂಡಿದ್ದೇನೆ
ಅಲ್ಲಿ ಚಿಂತೆಯಿಲ್ಲದೆ
ಅಮ್ಮನ ಮಡಿಲಲಿ ಮಲಗಿ ನಿದ್ದೆ ಹೋಗಬೇಕು
ನಿದ್ದೆಯಿಂದ ಎದ್ದು ಪಿಳಿಪಿಳಿ
ಕಣ್ಣು ಬಿಡುವಾಗ
ಎದುರಲಿ ಅಪ್ಪನಿರಬೇಕು
ತೋಳಲ್ಲಿ ಎತ್ತಿ ಮುದ್ದಾಡಬೇಕು
ಅಜ್ಜಿಯ ನಗು ನನ್ನ ಸೆಳೆದಾಗ
ನಾನು ನಕ್ಕು
ಆ ಹಳೆಯ ಕನ್ನಡಕ ಎಳೆಯಲು
ನನ್ನ ಎತ್ತಿಕೊ ಎನಬೇಕು
ಅತ್ತೆಯ ಚೂಡಿಯ ಶಾಲಿನ
ತುದಿ ಹಿಡಿದು ನಾ ಕಾಡಬೇಕು
ಅವಳೂ ತುಸು ಕಾಡಿ
ಎದೆಗಪ್ಪಿ ಹಣೆಗೊಂದು ಪಪ್ಪಿ ಕೊಡಬೇಕು
ಜ್ವರ ಬಂದು ಮುದುಡಿರುವಾಗ
ಅಮ್ಮ ಕುಡಿಸುವ ಕಹಿ ಮದ್ದ
ಉಫ್ ಎಂದು ನಾ ಉಗಿಯಬೇಕು
ಈ ನಾಲ್ವರೂ ನನ್ನ ಹಿಡಿದಿಟ್ಟು ಮತ್ತೆ ಕುಡಿಸಬೇಕು
ಹಿತ್ತಿಲಲ್ಲಿ ಅಮ್ಮ ಪಾತ್ರೆ ತೊಳೆಯುವಾಗ
ನೀರು ನಾನೇ ಹಾಕಬೇಕು
ಬಟ್ಟೆ ಒಗೆಯುವ ಕಲ್ಲು
ನನ್ನ ಎಳೆ ಕೈ ಪೆಟ್ಟು ತಿನ್ನಬೇಕು
ನಾ ಹೊರಗೆ ಹೋಗದಂತೆ ಬಾಗಿಲಿಗೆ ಹಾಕಿರುವ
ಗೇಟಿನ ಮೇಲೇರಿ
ದಾರಿಯಲಿ ಹೋಗುವವರಿಗೆ ಟಾಟಾ ಮಾಡಬೇಕು
ಮರಳಿ ಅವರು ನಕ್ಕು ಕೈ ಬೀಸಬೇಕು
ಹೊಸದಾಗಿ ಬಂದ ತಮ್ಮನ
ಜೊತೆ ನಾ ಆಡುವಾಗ
ಮಲಗಿರುವ ಅವನ ಕೆನ್ನೆ ಹಿಂಡಿ
ಕೆಂಪೇರಿಸಿ ಸ್ವಲ್ಪ ಅಳಿಸಬೇಕು
ಅಪ್ಪ ತಂದ ಸಿಹಿ ತಿಂಡಿ
ತಿಂದು ಇನ್ನೂ ಬೇಕೆನಬೇಕು
ಅಮ್ಮ ಅಡಗಿಸಿಟ್ಟ ಆ ಸಣ್ಣ ಬೆತ್ತ ಕಂಡು
ನಾ ಓಡಬೇಕು
ಓಡಿ ಬಿದ್ದು ಪೆಟ್ಟು ಮಾಡಿಕೊಂಡು
ಕಣ್ತುಂಬಿ ಅಳುವಾಗ
ಅತ್ತೆ ಕಣ್ಣೋರೆಸಿ ಮುದ್ದಿಸಬೇಕು
ಅಜ್ಜಿ ಮೈದಡವಿ ಸಮಾಧಾನಿಸಬೇಕು
ಹೊಸತಾಗಿ ಕಲಿತ ಪದಗಳ
ತೊದಲಿ ನಾನಿವರ ನಗಿಸಬೇಕು
ನಾನೂ ನಕ್ಕು ನಕ್ಕು ಸುಸ್ತಾಗಬೇಕು
ಹೀಗಾಗಲು ನಾನು ಮತ್ತೆ ಮಗುವಾಗಬೇಕು
ಮತ್ತೆ ಮಗುವಾಗಬೇಕು
ಶ್ರವಣ್ ನೀರಬಿದಿರೆ
ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ
ಎಸ್.ಡಿ.ಎಂ. ಕಾಲೇಜು, ಉಜಿರೆ