Back To Top

 ಮುಂಜಾನೆಯ ಮಂಜು ಕಲಿಸಿದ ಪಾಠ | ಕೌಶಿಕ್ ಹೆಗಡೆ

ಮುಂಜಾನೆಯ ಮಂಜು ಕಲಿಸಿದ ಪಾಠ | ಕೌಶಿಕ್ ಹೆಗಡೆ

ಸುಮಾರು ಬೆಳಿಗ್ಗೆ 5 ಗಂಟೆಯ ಹೊತ್ತಿಗೆ ನನಗೆ ಎಚ್ಚರವಾಯಿತು, ಒಂದು ಬಾರಿ ಕಿಟಕಿಯ ಬಾಗಿಲನ್ನು ತೆಗೆದು ನೋಡಿದೆ ತುಂಬಾ ಚಳಿಯ ವಾತಾವರಣ ಆವರಿಸಿತ್ತು. ಆ ಚಳಿಯನ್ನು ಅನುಭವಿಸುವ ಆಸೆಯಾಯಿತು, ಆಗ ನಾನು ನನ್ನ ಪಕ್ಕದಲ್ಲೇ ದಪ್ಪ ಬಟ್ಟೆ ಹಾಕಿಕೊಂಡು ಮಲಗಿಕೊಂಡಿದ್ದವನನ್ನು ಬಡಿದು ಎಬ್ಬಿಸಿ ಹೊರಗಡೆ ಹೊಗೋಣವೆಂದು ಅವನನ್ನು ಎಳೆದುಕೊಂಡು ಬಂದೆ. ಮೊದಲು ನನ್ನ ಮೇಲೆ ಸಿಟ್ಟಾಗಿದ್ದ, ನಂತರ ಮಂಜಿನ ವಾತಾವರಣ ನೋಡಿ ಅವನ ಮನಸ್ಸು ತೆಳ್ಳಗಾಗಿ ಕೋಪ ಇಳಿದು ತಂಪಾದ ವಾತಾವರಣದಲ್ಲಿ ಕಳೆದು ಹೋದ.

ಆತ ಇದ್ದಕ್ಕಿದ್ದ ಹಾಗೆ ಸಪ್ಪೆ ಮುಖ ಹಾಕಿಕೊಂಡು ತುಂಬಾ ಭಾವುಕನಾಗಿ ಅಳಲು ಆರಂಭಿಸಿದ. ನಾನು ಗಾಬರಿಗೊಂಡು ಏನಾಯಿತು ಎಂದು ಕೇಳಿದೆ, ಕೇಳಿದ್ದೆ ತಡ ಅವನು ನನ್ನನ್ನು ತಬ್ಬಿಕೊಂಡು ಮತ್ತಷ್ಟು ಜೋರಾಗಿ ಅಳಲು ಶುರು ಮಾಡಿದ. ಯಾಕೆ ಏನು
ಎನ್ನುವ ಪ್ರಶ್ನೆಗಳು ನನ್ನಲ್ಲಿ ಕಾಡಲು ಶುರು ಮಾಡಿದವು. ಆಗಿದ್ದಾಗಲಿ ಏನು ಎಂದು ಕೇಳೆ ಬಿಡೋಣವೆಂದು ಕೇಳಿಯೆ ಬಿಟ್ಟೆ, ಅವನು ನನ್ನ ಅಪ್ಪ ನೆನಪಿಗೆ ಬಂದ್ರು ಎಂದ.

ಅವರ ಅಪ್ಪ ಇವನನ್ನು ದಿನ ಬೆಳಿಗ್ಗೆ ಹೀಗೆ ಹೆಗಲಮೇಲೆ ಕೂರಿಸಿಕೊಂಡು ಚಳಿಯ ಜೊತೆಗೆ ಹೆಜ್ಜೆ ಹಾಕುತ್ತಿದ್ದರಂತೆ ,ಆದರೆ ಅವರು ಈಗ ನನ್ನ  ನೆನೆಪಿನಲ್ಲಿ ಮಾತ್ರ ಜೀವಂತ ಎಂದ. ಹೇಗೋ ಪರಿಸ್ಥಿತಿಯನ್ನು ತಿಳಿಯಾಗಿಸಿ ಸಮಾಧಾನ ಮಾಡಿ ಮನೆಗೆ ಕರೆದುಕೊಂಡು ಬಂದೆ. ಆ ದಿನವಿಡೀ ನನಗೆ ಅವನು ಕಣ್ಣೀರು ಬಹಳವಾಗಿ ಕಾಡಿತು. ಹಾಕಿದ ಒಂದೊಂದು ಹನಿಯು, ತುಂಬಾ ಭಾರವಾದ ನೋವನ್ನು ಅನುಭವಿಸಿದ್ದಾನೆ ಎಂದು ಹೇಳುತಿತ್ತು. ಅವನ ಸ್ಥಳದಲ್ಲಿ ನಾನು ನಿಂತು ನೋಡಿದಾಗ ಈಡೀಯ ಜೀವನವೇ  ಕತ್ತಲಾದಂತೆ ಭಾಸವಾಯಿತು.

ಅಪ್ಪ ಎಂದರೆ, ಅದರಲ್ಲೂ ಕೆಲವು ಗಂಡು ಮಕ್ಕಳಿಗೆ ಅಚ್ಚುಮೆಚ್ಚು. ಏಕೆಂದರೆ , ಬಾಲ್ಯದಲ್ಲಿ ಗದರುತ್ತಾ ಹೆದರಿಸುತ್ತ ಬಳೆಸುವ ಅಪ್ಪ ದೊಡ್ಡವರಾದ ಮೇಲೆ ಹೆಗಲಿಗೆ ಕೈ ಹಾಕಿಕೊಂಡು ನಡೆದಾಡುವ ಸ್ನೇಹಿತನಾಗುತ್ತಾನೆ.
ನನಗೂ ಕೂಡ ನನ್ನಪ್ಪ ಅಂದ್ರೆ  ಆಕಾಶದಷ್ಟು ಎತ್ತರದ ಪ್ರೀತಿ.ಹಾ.. ನನ್ನಪ್ಪ ಅಂದ್ರೆ ಎಲ್ಲರಿಗೂ ಇಷ್ಟ. ಯಾಕಂದ್ರೆ ಅಪ್ಪನಿಗೆ ಇನ್ನೊಬ್ಬರನ್ನು ಕಂಡಾಗ ಕರುಣೆ, ಅನುಕಂಪ, ಮಾನವೀಯತೆ ಎಲ್ಲವೂ ಸ್ವಲ್ಪ ಹೆಚ್ಚೇ. ತನಗೆ ಇಲ್ಲವಾದರೂ ಜೊತೆಯಲ್ಲಿ ಇರುವವರಿಗೆ ಯಾವತ್ತೂ ಕಮ್ಮಿ ಮಾಡಿಲ್ಲ ನನ್ನಪ್ಪ..

ನನ್ನಪ್ಪ ತನ್ನ ಮಕ್ಕಳ ಮೇಲೆ ಇರುವ ಪ್ರೀತಿಯನ್ನು ಯಾವತ್ತೂ ವ್ಯಕ್ತ ಪಡಿಸಿಲ್ಲ.ಆದರೆ ಮಕ್ಕಳು ಏನೇ ಕೇಳಿದರು ಇಲ್ಲ ಅನ್ನದೆ ಕೊಡಿಸಿದ್ದಾರೆ.. ಪ್ರತಿ ಬಾರಿಯೂ ನಾನು ಮನೆಯಿಂದಹಾಸ್ಟೆಲಿಗೆ ಹೋಗುವಾಗ ನಂಗೆ ಕರ್ಚಿಗೆ ಹಣ ಕೊಟ್ಟು ಕಳಿಸುವ ನನ್ನಪ್ಪನ ಪ್ರೀತಿ ಅಪಾರವಾದದ್ದು. ಏನೇ ತಪ್ಪು ಮಾಡಿದರೂ ಕೂಡ ಅಮ್ಮ ಗದರಿ ಬಯ್ಯುವಷ್ಟು ಅಪ್ಪ ಯಾವತ್ತೂ ನನಗೆ ಬಯ್ಯಲಿಲ್ಲ. ತಪ್ಪು ಮಾಡಿದರೂ ತಾಳ್ಮೆಯಿಂದ ಆ ತಪ್ಪನ್ನು ತಿದ್ದಿಕೊಳ್ಳುವಂತೆ ಬುದ್ದಿ ಮಾತು ಹೇಳುವ ಗುಣ ಅಪ್ಪನದು.

ಹೆಚ್ಚಿನವರ ಮನೆಯಲ್ಲಿ ಅಪ್ಪಂದಿರೇ ಗದರುವ ವ್ಯಕ್ತಿಯಾದರೆ ನನಗೆ ನನ್ನ ಅಮ್ಮನೆ ಗದರುವ ವ್ಯಕ್ತಿ. ಅಪ್ಪನಿಗೆ ಬೈದು ಮಾತನಾಡಿ ಗೊತ್ತಿಲ್ಲ. ಏನೇ ಇದ್ದರೂ ಸಮಾಧಾನದಿಂದ ಶಾಂತ ರೀತಿಯಲ್ಲಿ ಮಾತನಾಡುವರು ಅವರು. ಪ್ರತಿಯೊಬ್ಬ ತಂದೆಯು ಕೂಡ ತನ್ನ ಮಗುವಿನ ಬಗ್ಗೆ ಹಲವಾರು ಕನಸುಗಳನ್ನು ಹೊಂದಿರುತ್ತಾರೆ , ಕನಸುಗಳನ್ನು ಕಟ್ಟಿರುತ್ತಾರೆ. ಒಂದು ಜಗತ್ತು ನಿಂತರೂ ತಂದೆಯ ಪ್ರೀತಿ ಎಂದಿಗೂ ನಿಲ್ಲದು. ಆಗಸದಲ್ಲಿ ಓಡೋ ಮೋಡಗಳಂತೆ ಅವನ ದಿನಚರಿಯೂ ತನ್ನ ಮಕ್ಕಳಿಗಾಗಿ ನಡೆಯುತ್ತಿರುತ್ತದೆ.

ಒಂದು ಮುಂಜಾನೆ, ತಂಪಾದ ಗಾಳಿಯ ನಡುವೆ ನನ್ನ ಗೆಳೆಯನ ಕಣ್ಣೀರು ನನ್ನ ತಂದೆಯ ಪ್ರೀತಿಯ ಆಳವನ್ನೇ ನನಗೆ ಪರಿಚಯಿಸಿತು.. ಇದಕ್ಕೆ ನನ್ನ ಗೆಳೆಯನಿಗೆ ಧನ್ಯವಾದ ಹೇಳಲೇ, ಅಥವಾ  ಸಮಾಧಾನಿಸಲೇ….

ಕೌಶಿಕ್ ಹೆಗಡೆ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ. ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ

Prev Post

ದಾಟು ಬಳ್ಳಿಯ ಹುಡುಕಾಟದಲ್ಲಿ ಕಂಡ ಮಲೆನಾಡಿನ ಕಥೆ ‘ಪ್ಯಾರಸೈಟ್’ | ಮಯೂರ್ ಕಾಮತ್

Next Post

ಸ್ನೇಹ ಅತಿಮಧುರ | ಸೋಮಶೇಖರ್ ತಾಳಿಕೋಟೆ

post-bars

Leave a Comment

Related post