ಮರಳಬೇಕು ಅಲ್ಲಿಯೇ ಮಾಗಬೇಕು ಎನ್ನುವ ಮರಳಿ ಮಣ್ಣಿಗೆ | ದಿವ್ಯಶ್ರೀ ಹೆಗಡೆ
ಮರಳಲೇ ಬೇಕು ಎಷ್ಟೇ ಎತ್ತರಕ್ಕೆ ಹಾರಿದರೂ ಮತ್ತೆ ಗೂಡಿಗೆ. ಮನುಷ್ಯ ಎಷ್ಟೇ ಸಾಧಿಸಿರಲಿ ಯಾವುದೇ ಊರಿಗೆ ಹೋಗಲಿ ಅಥವಾ ವಿದೇಶದಲ್ಲಿಯೇ ಕೆಲಸವಾಗಿ ಕೈ ತುಂಬಾ ಸಂಬಳ ಸಿಕ್ಕರೂ ತನ್ನೂರಿನ ಮಣ್ಣಿನ ಘಮದ ವಾಸನೆ ಅದರ ಆನಂದ ಬೇರೆ ಎಲ್ಲಿಯೂ ಇಲ್ಲ. ಆ ನೆಮ್ಮದಿ ಪರ ಊರಿನಲ್ಲಿಲ್ಲಾ ಕೊನೆಗೂ ನಾವು ಮರಳಿ ನಮ್ಮ ಊರಿನ ಮಣ್ಣನ್ನೇ ಪ್ರೀತಿ ಮಾಡೊದು. ಅದರ ಸೊಗಡಲ್ಲೆ ನೆಮ್ಮದಿಯನ್ನು ಕಾಣೋದು. ಅಂತಹದೇ ಪ್ರೀತಿ ನೆಮ್ಮದಿ ನಂಬಿಕೆಯನ್ನು ಕೊಡುವಂತಹ ಕಥನವೇ ಈ ಕಾದಂಬರಿ ಇದು ಮರಳಿ ಮಣ್ಣಿಗೆ.
ಸುಮಾರು 1850 ರಿಂದ 1940ರ ಆಸುಪಾಸಿನಲ್ಲಿ ನಡೆಯುವ ಕಥೆ. ಮೂರು ತಲೆಮಾರುಗಳ ಪಯಣದಲ್ಲಿ ಒಂದಷ್ಟು ಜನ ಬಂದು ಪಯಣದಲ್ಲಿ ಜೊತೆಯಾಗಿ ನೆಡೆದು ಪಯಣವನ್ನು ನಿಲ್ಲಿಸುತ್ತಾರೆ. ತಮ್ಮ ನಿಲ್ದಾಣದಲ್ಲಿ ಇಳಿದು ಹೋಗುತ್ತಾರೆ ಮತ್ತೆ ಹೊಸಬರು ಈ ಪಯಣಕ್ಕೆ ಜೊತೆಯಾಗಿ ಸಾಗುತ್ತಾರೆ. ಭೋರ್ಗರೆಯುವ ಸಂಸಾರ ಸಾಗರದಲ್ಲಿ ಏಳು ಬೀಳಿನ ಒಂದು ಸಾಂಸಾರಿಕ ಕಥನ. ಈ ಕಾದಂಬರಿಯಲ್ಲಿ ಎಲ್ಲವೂ ಇದೆ. ಪ್ರೀತಿ, ನಂಬಿಕೆ, ಸ್ವಾರ್ಥ, ನೋವು, ನಲಿವು, ಕಷ್ಟ, ಸುಖ, ಆಸೆ ಜೀವನದ ಪ್ರತೀ ಹೆಜ್ಜೆ ಎಲ್ಲವೂ ಇದೆ.
ಇಲ್ಲಿಯ ಹಲವಾರು ಪಾತ್ರಗಳು ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ. ರಾಮ ಐತಾಳರ ಸಂಸಾರದಲ್ಲಿ ಎಲ್ಲವೂ ಇದ್ದರೂ ಕೊರತೆಯಾಗಿದ್ದು ಮಾತ್ರ ಮಗನಿಲ್ಲದ್ದು. ಅವರ ಮೊದಲ ಹೆಂಡತಿ ಪಾರೋತಿಯ ಬದುಕು ಕಾಡುತ್ತೇ. ಎಲ್ಲವೂ ಮನೆಗಾಗಿ ಎಂದು ದುಡಿಯುವ ಹೆಣ್ಣು ಜೀವನವನ್ನು ಬರೀ ಕೆಲಸದಲ್ಲೇ ಸವೆಸಿ ಬಿಡುತ್ತಾಳೆ. ಅವಳದ್ದೊಂತರ ಕಥೆಯಾದರೆ ಅವರ ಮನೆಗೆ ಬರುವ ಸೊಸೆಯಾದ ನಾಗವೇಣಿಯ ಬದುಕು ಎಲ್ಲಕ್ಕಿಂತ ಹೆಚ್ಚಿನದಾಗಿ ಎಡಬಿಡದೇ ಕಾಡುತ್ತದೆ. ಕಾಡುತ್ತಲೇ ಇರುತ್ತದೆ. ಆ ಪಾತ್ರದ ಗುಂಗಿನಿಂದ ಹೊರಬರುವುದು ಕಷ್ಟವಿದೆ. ಹಾಗೆ ಅದು ಓದುಗರನ್ನು ಅಳಿಸಿ ಬಿಡುತ್ತದೆ.
ಹೆಣ್ಣಿನ ಜೀವನವನ್ನು ಅತ್ಯಂತ ಸುಂದರವಾಗಿ ಚಿತ್ರಿಣ ಇಲ್ಲಿ ದೊರೆಯುತ್ತದೆ. ಅವಳ ಭಾವನೆ, ಅಸಹಾಯಕತೆ, ಗೊಂದಲ, ಕಷ್ಟ, ಹತಾಶೆ, ನೋವು ಎಂತಹವರನ್ನೂ ಕಾಡಿಬಿಡುತ್ತದೆ. ಪ್ರತೀ ಸಾರಿಯೂ ಹೆಣ್ಣು ತನ್ನವರಿಗಾಗಿ ಯಾವಾಗಲೂ ಸೋಲುತ್ತಾಳಲ್ವಾ ಆ ಭಾವವನ್ನು ಬಹಳ ಜೋಪಾನವಾಗಿ ಕಥೆಯಲ್ಲಿ ಹಿಡಿದಿಡ್ಡಿದ್ದಾರೆ ನಮ್ಮ ಕಾರಂತಜ್ಜ. ಅವಳು ಎನ್ನುವವಳು ಎಷ್ಟೇ ಗಟ್ಟಿ ಇದ್ರೂ ಭಾವದಲ್ಲಿ ಸೋತುಬಿಡ್ತಾಳೆ. ಆದರೆ ಒಮ್ಮೆ ಭಾವದ ಪರಿಧಿಯಿಂದ ಹೊರ ಬಂದು ಎದ್ದು ನಿಂತು ಒಮ್ಮೆ ಮುಂದಡಿಯಿಟ್ಟಳು ಎಂದಾದರೆ ಮತ್ತೆ ಹಿಂದೆ ತಿರುಗಿಯೂ ನೋಡದೆ ಜೀವನವನ್ನು ದೃಢವಾಗಿ ನಡೆಸುತ್ತಾಳೆ. ಅದೆಲ್ಲವನ್ನೂ ಅದ್ಭುತವಾಗಿ ಈ ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ.
ಈ ಕಾದಂಬರಿಯಲ್ಲಿ ಲಚ್ಚನಿಗೆ ಬೈದಷ್ಟು ಮತ್ತಾವುದೇ ಪಾತ್ರಕ್ಕೂ ನಾವು ಅಷ್ಟು ಸಿಟ್ಟಾಗುವುದಿಲ್ಲವೇನೋ. ಮತ್ತೆ ಮೂರನೇ ತಲೆಮಾರಿನಲ್ಲಿ ಬರುವ ರಾಮರಾಯ ಅವನ ಪಾತ್ರವೂ ಸುಂದರವಾಗಿದೆ. ಅದೇ ಸಮುದ್ರದ ಬಯಕೆ. ಊರ ಮಣ್ಣಿನ ಪ್ರೀತಿ ಎಷ್ಟೇ ದೂರ ಹೋದರು ಬಿಡದೆ ಬಂಧಿಸಿ ಅದೇ ಐರೋಡಿ [ಕೋಡಿ]ಗೆ ತಂದು ನಿಲ್ಲಿಸುತ್ತದೆ. ಜೀವನದಲ್ಲಾಗುವ ಯೋಜನಾ ರಹಿತ ತಿರುವುಗಳು ಮತ್ತೂ ಹಲವು ಮಜಲುಗಳ ಪೂರ್ತಿ ಮಿಶ್ರಣ ಈ ಕಾದಂಬರಿಯಲ್ಲಿದೆ.
ಇಲ್ಲಿ ಎಲ್ಲವನ್ನೂ ನಿಮ್ಮ ಮುಂದೆ ಬಿಚ್ಚಿ ಹರವಿಟ್ಟಿಲ್ಲ. ಓದಲು ಭಾವಕ್ಕೆ ಮತ್ತು ಮನಸ್ಸಿಗೆ ಬರಲು ಹಲವಾರು ವಿಷಯಗಳು ಹಾಗೆಯೆ ಉಳಿದಿದೆ. ಓದಿದಾಗ ಇದರ ಪೂರ್ಣ ಮಾಹಿತಿ ಚಿತ್ರಣ ಸಿಗಲಿದೆ ಹಾಗಾಗಿ ಈ ಪುಸ್ತಕವನ್ನು ಓದಿ.
ಒಟ್ಟಾರೆಯಾಗಿ ಈ ಕಾದಂಬರಿ ಒಂದು ಅದ್ಭುತ ಓದು. ನನ್ನ ನೆಚ್ಚಿನ ಕಾದಂಬರಿಗಳ ಪಟ್ಟಿಯಲ್ಲಿ ಈ ಕಾಬಂಬರಿಯೂ ಸೇರಿಕೊಂಡಿದೆ. ಕಾರಂತಜ್ಜರ ಬರಹವೇ ಹಾಗೆ ಸಹಜ, ಸುಲಭ ಮತ್ತು ಮನಸ್ಸಿಗೆ ಹತ್ತಿರವಾಗಿ ಹಾಗೆ ಉಳಿದುಬಿಡುತ್ತದೆ. ನೀವೂ ಓದಿ ಹಾಗೆ ಕಥೆಯ ಒಳಗೆ ಮುಳುಗಿ ಬಿಟ್ಟರೆ ಮತ್ತೆ ಎದ್ದು ಬರುವ ಲಕ್ಷಣವೇ ಇಲ್ಲ.
ದಿವ್ಯಶ್ರೀ ಹೆಗಡೆ
ಪ್ರಥಮ ಎಂ.ಎ
ಎಸ್.ಡಿ.ಎಂ ಉಜಿರೆ