ಕಠಿಣ ಹಾದಿಯ ಕೊಡಚಾದ್ರಿ ಪಯಣದ ಅನುಭವದ ಸಿಹಿ | ವಿಜಯ್ ಕುಮಾರ್ ನಾಯಕ್
ನಾನು ಮತ್ತು ನನ್ನ ಗೆಳೆಯರು ನಮ್ಮ ಊರಿನಿಂದ ಕೊಡಚಾದ್ರಿಗೆ ಬಂದೆವು. ಕೊಡಚಾದ್ರಿಯು ದಟ್ಟವಾದ ಕಾಡುಗಳನ್ನು ಹೊಂದಿರುವ ಪರ್ವತ ಶಿಖರವಾಗಿದೆ. ಇದರ ಎತ್ತರ ಸಮುದ್ರ ಮಟ್ಟದಿಂದ 1,343 ಮೀಟರ್. ಕೊಡಚಾದ್ರಿಯು ಶಿವಮೊಗ್ಗ ಜಿಲ್ಲೆಯ ಅತಿ ಎತ್ತರದ ಶಿಖರವಾಗಿದೆ ಮತ್ತು ಕರ್ನಾಟಕದ 13ನೇ ಅತಿ ಎತ್ತರದ ಶಿಖರವಾಗಿದೆ. ಕರ್ನಾಟಕ ಸರ್ಕಾರವು ಇದನ್ನು ನೈಸರ್ಗಿಕ ಪರಂಪರೆ ತಾಣವೆಂದು ಘೋಷಿಸಿದೆ.
ಸ್ಥಳದ ಇತಿಹಾಸ ನೋಡುವುದಾದರೆ ಕೊಡಚಾದ್ರಿಗೆ ಪುರಾತನ ಕಾಲದಿಂದಲೂ ಜನರು ಯಾತ್ರೆಗೆ ಹೋಗುತ್ತಿದ್ದರು ಮತ್ತು ಕ್ರಿಸ್ತಶಕ 7ನೇ ಶತಮಾನದಲ್ಲಿ ಶಂಕರಾಚಾರ್ಯರು ಕೊಡಚಾದ್ರಿಗೆ ಭೇಟಿ ಕೊಟ್ಟಿದ್ದರು ಎನ್ನಲಾಗಿದ್ದು, ಇಲ್ಲಿ ಶಂಕರಾಚಾರ್ಯರ ಪೀಠ ಇದೆ.
ಇಲ್ಲಿದ್ದ ಮೂಲ ಮೂಕಾಂಬಿಕೆಯನ್ನು ಪರ್ವತದ ತಳದಲ್ಲಿರುವ ಕೊಲ್ಲೂರಿನಲ್ಲಿ ಪ್ರತಿಷ್ಠೆ ಮಾಡಿದರು ಎಂದು ಕೊಲ್ಲೂರಿನ ಸ್ಥಳ ಪುರಾಣ ಹೇಳುತ್ತದೆ. ಶಿಖರದ ಹತ್ತಿರದಲ್ಲಿರುವ ಮೂಲ ಮೂಕಾಂಬಿಕೆ ದೇವಾಲಯವು ಸಹ ಸಾಕಷ್ಟು ಪುರಾತನವಾಗಿದ್ದು ಈ ದೇವಾಲಯದ ಬಳಿ ಇರುವ ಸುಮಾರು 40 ಅಡಿ ಎತ್ತರದ ಕಬ್ಬಿಣದ ಕಂಬವು ಮೂಕಾಸುರನನ್ನು ವಧಿಸಲು ದೇವಿ ಉಪಯೋಗಿಸಿದ ತ್ರಿಶೂಲ ಎಂದು ಸ್ಥಳೀಯರು ಹೇಳುತ್ತಾರೆ.
ಪ್ರಕೃತಿಯ ಸೊಬಗನ್ನು ನೋಡಿ ನಾವೇ ನಮ್ಮನ್ನ ಮರೆತೆವು. ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತು ನಂತರ 14 ಕಿಲೋ ಮೀಟರ್ ಬೆಟ್ಟ ಹತ್ತಿದೆವು. ಮಳೆಯಲ್ಲಿ ಪ್ರಕೃತಿಯನ್ನು ನೋಡುವ ಅನುಭವವನ್ನು ಅಕ್ಷರಗಳಲ್ಲಿ ಕಟ್ಟಿಕೊಡುವುದು ತುಸು ಕಷ್ಟವೇ. ನನ್ನ ಸ್ನೇಹಿತರ ಉತ್ಸಾಹ ಆಸಕ್ತಿ ಎಲ್ಲವೂ ನನ್ನಲ್ಲಿ ಹೊಸ ಚೈತನ್ಯ ಮೂಡಿಸುತ್ತಿತ್ತು. ನಾವು ಸ್ಥಳೀಯವಾಗಿ ಸಿಗುವ ಗೈಡ್‌ಗಳ ಮಾರ್ಗದರ್ಶನ ಪಡೆದು ಹೋದೆವು.
ದಾರಿಯ ಮಧ್ಯದಲ್ಲಿ ಹಿಡ್ಲುಮನೆ ಜಲಪಾತದ ಸೊಗಸನ್ನು ವರ್ಣಿಸಲು ಲೇಖನವೇ ಬೇಕಾಗುತ್ತದೆ, ಅಷ್ಟು ರಮಣೀಯವಗಿದೆ ಅಲ್ಲಿನ ದೃಶ್ಯ ಕಾವ್ಯ. ಅಂತಹ ಜಲಪಾತವದು. ನೀರು ಚಿಮ್ಮುವ ರಭಸಕ್ಕೆ ಹತ್ತಿರದಿಂದ ಅದರ ಕಡೆಗೆ ಮುಖ ಮಾಡಿ ನಿಲ್ಲುವಂತ ಧೈರ್ಯ ಕೂಡ ಮಾಡಲಿಲ್ಲ, ಅಲ್ಲಿಂದ ಮುಂದೆ ಹೋಗುವಾಗ ಮೂಲ ಮೂಕಾಂಬಿಕಾ ದೇವಸ್ಥಾನ ದರ್ಶನವಾಯಿತು.
ನಂತರ ಕೊಡಚಾದ್ರಿ ಪಾಯಿಂಟ್‌ನಲ್ಲಿ ಶಂಕರಾಚಾರ್ಯರ ದಿವ್ಯ ಸನ್ನಿಧಿ ಸಿಗುತ್ತದೆ. ಅಲ್ಲಿ ತಲುಪುವ ಹೊತ್ತಿಗೆ ಸಂಜೆ 4:00 ಆಗಿತ್ತು. ಅದೇ ದಾರಿಯಲ್ಲಿ ವಾಪಸ್ ಬಂದೆವು. ತುಂಬಾ ಹೊತ್ತು ಹಾಗೂ ಕತ್ತಲಾಗುತ್ತಿದ್ದರಿಂದ ದಾರಿ ನಡುವೆ ಸಿಕ್ಕ ಜೀಪಿನಲ್ಲಿ ಬಂದೆವು. ಆದರೆ ಜೀಪ್ ಸಾಗುವ ದಾರಿ ಮಾತ್ರ ಬಹಳ ಕಡಿದಾಗಿರುತ್ತದೆ. ಹಾಗೇ ಸಾಗಿ ಬರುವ ದಾರಿ ಅಷ್ಟೇ ರಮಣೀಯ ದೃಶ್ಯ ವೈಭೋಗವನ್ನು ನೀಡುತ್ತದೆ. ಅದರ ಜೊತೆಗೆ ಭಯವನ್ನು ಉಂಟುಮಾಡುತ್ತದೆ. ಆ ರಸ್ತೆಗಳು ಜೀಪ್ ಚಾಲಕರಿಗೆ ಮೆಚ್ಚು. ಕಠಿಣ ಹಾದಿಯಲ್ಲು ಬಲು ಸಲೀಸಾಗಿ ಡ್ರೈವಿಂಗ್ ಮಾಡುವುದನ್ನು ಕಂಡಾಗ ಅಚ್ಚಿರಿಯೂ ಆಗುತ್ತದೆ. ಸರ್ಕಾರ ಇಂತಹ ಪ್ರದೇಶಗಳನ್ನು
ಅಭಿವೃದ್ಧಿ ಮಾಡುವುದರ ಜೊತೆಗೆ ರಕ್ಷಿಸುವ ಕಾರ್ಯವನ್ನು ಮಾಡಬೇಕಿದೆ.
ವಿಜಯ್ ಕುಮಾರ್ ನಾಯಕ್
ಎಸ್.ಡಿ.ಎಂ. ಕಾಲೇಜು, ಉಜಿರೆ