ಜೀವಕೇಂದ್ರಿತವಾಗಿ ಯೋಚಿಸಲು ಕುವೆಂಪು ಅವರ ಸಾಹಿತ್ಯ ಪ್ರೇರಣೆ : ಡಾ. ಭಾರತೀದೇವಿ ಪಿ.
ಉಜಿರೆ: ಮನುಷ್ಯ ಕೇಂದ್ರಿತ ಸೀಮಿತ ಯೋಚನಾ ಲಹರಿಯಿಂದ ಹೊರಬಂದು ಜೀವಕೇಂದ್ರಿತವಾಗಿ ಯೋಚಿಸಲು ಕುವೆಂಪು ಅವರ ಸಾಹಿತ್ಯ ಪ್ರೇರಣೆ ನೀಡುತ್ತದೆ ಎಂದು ಲೇಖಕಿ, ಹೊಳೆಹೊನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾದ್ಯಾಪಕಿ ಡಾ. ಭಾರತೀದೇವಿ ಪಿ. ಹೇಳಿದರು.
ಉಜಿರೆ ಶ್ರೀ. ಧ. ಮಂ. ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ಸಹಯೋಗದಲ್ಲಿ ‘ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ’ ಕುರಿತು ಆಯೋಜಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.
ಕುವೆಂಪು ಅವರ ವ್ಯಾಪ್ತಿ ಸಾಹಿತ್ಯ ವಲಯವನ್ನೂ ಮೀರಿ ಬದುಕಿನ ಎಲ್ಲಾ ಸ್ಥರಗಳಿಗೆ ಆವರಿಸಿದೆ. ರಾಜಕೀಯ, ಸಾಮಾಜಿಕ, ಆಧ್ಯಾತ್ಮಿಕ ಹೀಗೆ ಹತ್ತು ಹಲವು ವಿಷಯಗಳಲ್ಲಿ ಕುವೆಂಪು ಅವರನ್ನು ಕಾಣಬಹುದು. ಅವರು ಕೇವಲ ಸಾಹಿತಿಯಷ್ಟೇ ಅಲ್ಲದೇ ಸಾಂಸ್ಕೃತಿಕ ರಾಯಭಾರಿಯೂ ಹೌದು. ಪ್ರಪಂಚದಲ್ಲಿನ ದೌರ್ಜನ್ಯ, ಕೆಡುಕುಗಳನ್ನು ವಿರೋಧಿಸಿ ಪ್ರತಿಭಟಿಸುವಲ್ಲಿ ಕುವೆಂಪು ಸಾಹಿತ್ಯ ನಮಗೆ ನೆರವಾಗುತ್ತದೆ. ವೈಜ್ಞಾನಿಕತೆ, ವೈಚಾರಿಕತೆ, ವಿಚಾರಕ್ರಾಂತಿ, ವಿಜ್ಞಾನ ಬುದ್ಧಿಯಿಂದ ನಿರಂಕುಶಮತಿಗಳಾಗಿ ಎದೆಯ ಧ್ವನಿಗೆ ಕಿವಿಕೊಟ್ಟು ನೊಂದವರ ಕಣ್ಣೊರೆಸಲು ಕುವೆಂಪುರವರ ಸಾಹಿತ್ಯ ನಮಗೆ ಮಾರ್ಗದರ್ಶನವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕುವೆಂಪುರವರ ಸರ್ವೋದಯ, ಸಮನ್ವಯ ಮೌಲ್ಯಗಳು ಭಾರತದ ಸಂವಿಧಾನದ ಸಮಾಜವಾದಿ, ಜಾತ್ಯತೀತ ತತ್ವಗಳನ್ನು ಒಳಗೊಂಡಿದೆ. ಎಲ್ಲವನ್ನೂ ಓದಿಕೊಂಡು ಬುದ್ಧಿಯನ್ನು ಒರೆಗೆ ಹಚ್ಚಿ ಸತ್ಯವನ್ನು ತಿಳಿದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲ ಬಿ.ಎ. ಕುಮಾರ ಹೆಗ್ಡೆ ಮಾತನಾಡಿ ವಿದ್ಯಾರ್ಥಿಗಳು ಕುವೆಂಪು ಅವರ ಮಾತಿನಂತೆ ಯಾವುದೇ ಪೂರ್ವಾಗ್ರಹಗಳಿಲ್ಲದೆ ಸಂಪರ್ಕಕ್ಕೆ ಸಿಗುವ ಎಲ್ಲಾ ಗ್ರಂಥಗಳನ್ನು ಅಧ್ಯಯನ ಮಾಡಿ, ಅವರ ದರ್ಶನವನ್ನು ಅವರೇ ಕಂಡುಕೊಳ್ಳಬೇಕು. ಕುವೆಂಪುರವರ ಬರಹಗಳು ವೈಜ್ಞಾನಿಕ ಚಿಂತನೆಯನ್ನು ಮೂಡಿಸಿ ವಿಶ್ವಪ್ರಜೆಯಾಗಲು ಸ್ಫೂರ್ತಿ ನೀಡುತ್ತವೆ ಎಂದು ಹೇಳಿದರು.
ವಿಚಾರ ಸಂಕಿರಣವನ್ನು ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಮೂಡಬಿದ್ರೆಯ ಆಡಳಿತ ನಿರ್ದೇಶಕ ಡಾ. ಬಿ. ಪಿ. ಸಂಪತ್ ಕುಮಾರ ಉದ್ಘಾಟಿಸಿದರು. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮನ್ವಯ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಪ್ರತಿಷ್ಠಾನದ ಸದಸ್ಯ ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕ ದಯಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀವಿದ್ಯಾ ಐತಾಳ್ ರಾಮಾಯಣ ದರ್ಶನಂ ಗಮಕ ವಾಚನ, ಮದನ್ ಎಂ, ವೈದೇಹಿ, ನವನೀತ್ ದಾಮ್ಲೆ ಕುವೆಂಪು ಗೀತಾ ಗಾಯನ ಮಾಡಿದರು. ಮಾಧವಿ ಎನ್. ಎಸ್. ಅವರಿಂದ ಜಲಗಾರ ನಾಟಕದ ಏಕವ್ಯಕ್ತಿ ದೃಶ್ಯ ಪ್ರದರ್ಶನ ಹಾಗೂ ಕುವೆಂಪು ಗೀತೆಗಳ ನೃತ್ಯ ರೂಪಕವು ಐಚ್ಛಿಕ ಕನ್ನಡ ವಿದ್ಯಾರ್ಥಿಗಳಿಂದ ನಡೆಯಿತು. ಕುವೆಂಪು ವಿಚಾರಗಳ ಕುರಿತಾಗಿ ಸುಚೇತಾ ಹೆಗಡೆ ಮತ್ತು ಜಿ. ಎಂ ಸಂಜಯ್ ಪ್ರಬಂಧ ಮಂಡಿಸಿದರು. ಪ್ರಾಧ್ಯಾಪಕ ಡಾ. ದಿವಾಕರ ಕೊಕ್ಕಡ ನಿರೂಪಿಸಿದರು. ವಿದ್ಯಾರ್ಥಿಗಳಾದ ವೈದೇಹಿ ಹಾಗೂ ಪೂರ್ವಿ ದಾಮ್ಲೆ ಪ್ರಾರ್ಥಿಸಿದರು. ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಭೋಜಮ್ಮ ಸ್ಟಾಗತಿಸಿ, ಡಾ. ರಾಜಶೇಖರ್ ಹಳೆಮನೆ ವಂದಿಸಿದರು.