Jawfish ಎಂಬ ಬೆಸ್ಟ್ ಅಪ್ಪ | ನೈದಿಲೆ ಶೇಷೇಗೌಡ
ಜೀವಸೃಷ್ಟಿ ವಿಸ್ಮಯಕಾರಿ ಸಂಕುಲಗಳ ಆಗರ. ಒಂದೊಂದು ಜೀವಿಯಲ್ಲೂ ಒಂದೊಂದು ವೈಶಿಷ್ಟ್ಯತೆ, ಒಂದೊಂದು ಜೀವಿಯ ಜೀವನ ಕ್ರಮವೂ ವೈವಿಧ್ಯಮಯ.ಹುಟ್ಟು, ಬದುಕು,ಸಾವು ಎಲ್ಲವೂ ಜೀವಿಯಿಂದ ಜೀವಿಗೆ ಭಿನ್ನ. ಸಾಮಾನ್ಯವಾಗಿ ಸಂತಾನೋತ್ಪತ್ತಿ ಹಾಗೂ ತಮ್ಮ ಸಂತತಿಯ ಪಾಲನೆ ಪೋಷಣೆಯಲ್ಲಿ ಮಾತೃತ್ವಕ್ಕೆ ಒಂದು ಕೈ ಮೇಲಿನ ಪ್ರಶಂಸೆ. ಒಂಬತ್ತು ತಿಂಗಳು ಹೊತ್ತು ಹೆರುವ ಮನುಷ್ಯ ಸಂಕುಲದಿಂದ ಹೆತ್ತ ನಂತರವೂ ಹೊರುವ ಕಾಂಗರೂವರೆಗೂ ತಾಯಂದಿರ ಪಾತ್ರ ಪ್ರಧಾನವಾಗಿರುತ್ತದೆ.ಆದರೆ ಜಾ ಫಿಶ್ ಎಂಬ ಈ ಜಲಚರದ ವಿಷಯದಲ್ಲಿ ಸಂಪೂರ್ಣ ಭಿನ್ನ.ಹೆಣ್ಣು ಮೀನುಗಳು ತನ್ನ ಮೊಟ್ಟೆಗಳನ್ನು ಬಿಡುಗಡೆಗೊಳಿಸಿದ ನಂತರ ತಂದೆಯೆನಿಸಿಕೊಳ್ಳುವ ಗಂಡು ಜಾ ಫಿಶ್ ತನ್ನ ಜೀವವನ್ನು ಪಣಕ್ಕಿಟ್ಟು ಅವುಗಳನ್ನು ರಕ್ಷಿಸುತ್ತದೆ.
ಎಲ್ಲಿರುತ್ತದೆ?
2 ಮೀಟರ್ನಿಂದ – 30 ಮೀಟರ್ ವರೆಗಿನ ನೀರಿನ ಆಳದ ಮಟ್ಟದಲ್ಲಿ ವಾಸಿಸುವ ಈ ಜಾಫಿಶ್ ಶೀತೋಷ್ಣ ಹಾಗೂ ಸಮಶೀತೋಷ್ಣ ನೀರಿನ ಆಕರಗಳು ಅದರಲ್ಲಿಯೂ ಅಟ್ಲಾಂಟಿಕ್ ಸಾಗರ ಕ್ಯಾರಿಬಿಯನ್ ಸಾಗರ ಹಾಗೂ ಇಂಡೋ ಪೆಸಿಫಿಕ್ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
ಪ್ರಭೇದ
ಒಪಿಸ್ಟೋಜ್ಞಾತಿಡೆ ಎಂಬ ಪ್ರಭೇದಕ್ಕೆ ಸೇರುವ ಈ ಮೀನು ಹೆಚ್ಚಾಗಿ ಕಂದು ಮಿಶ್ರಿತ ಬಣ್ಣಗಳಲ್ಲಿ ಕಾಣಸಿಗುತ್ತವೆ ಹಳದಿ ನೀಲಿ ಮುಂತಾದ ವರ್ಣಮಯ ಜಾಫಿಶ್ಗಳೂ ಕೂಡ ಅಲ್ಲಲ್ಲಿ ಕಂಡುಬರುತ್ತವೆ.
ದೇಹದ ರಚನೆ
ಗಡ್ಡೆಯಂತಿರುವ ತಲೆ, ದೊಡ್ಡದಾದ ಕಣ್ಣುಗಳು, ಹರಿತವಾದ ಕೋರೆಹಲ್ಲು, ಸಣ್ಣ ಮತ್ತು ಮೊನಚಾದ ದೇಹದ ಈ ಮೀನು ಅಂದಾಜು 7.6 ಸೆಂಟಿಮೀಟರ್ – 25.4 ಸೆಂಟಿಮೀಟರ್ ವರೆಗೆ ಉದ್ದ ಬೆಳೆಯುತ್ತವೆ ಅಗಲವಾದ ಬಾಯಿಯ ರಚನೆ ತನ್ನ ಮೊಟ್ಟೆಗಳನ್ನು ಶೇಖರಿಸಿ ಕಾಳಜಿ ಮಾಡುವಲ್ಲಿ ಸಹಾಯಕವಾಗಿವೆ.
ಆವಾಸ
ಮರಳು ಹಾಗೂ ಕಲ್ಲು ಮಣ್ಣಿನ ಕೊರಕುಗಳಲ್ಲಿ ವಾಸಿಸುವ ಈ ಸಂತತಿಯ ಮತ್ತೊಂದು ವಿಶೇಷತೆ ಸ್ವಯಂ ನಿರ್ಮಿತ ಬಿಲಗಳಲ್ಲಿ ವಾಸಿಸುವುದು ಸುರಕ್ಷತೆಯ ಸಲುವಾಗಿ ಬಿಲಗಳನ್ನು ನಿರ್ಮಿಸುವ ಈ ಮೀನು ತನ್ನ ತಲೆಯನ್ನು ಮಾತ್ರ ಬಿಲದ ಹೊರಗಿರಿಸಿ ಎದುರಾಗಬಹುದಾದ ಅಪಾಯದ ಕಾವಲು ಕಾಯುತ್ತದೆ. ಅಲ್ಲದೆ ತನ್ನ ಬಿಲದ ಸಮೀಪ ಬಿಲ ನಿರ್ಮಿಸಲು ಹವಣಿಸುವ ಇತರೆ ಮೀನುಗಳನ್ನು ತನ್ನ ವಲಯದಿಂದ ಹೊರಗಟ್ಟಲು ಪ್ರಯತ್ನಿಸುತ್ತದೆ ಹೆಚ್ಚಾಗಿ ಗುಂಪುಗಳಲ್ಲಿ ಜೀವಿಸುವ ಈ ಜಾತಿಯ ಮೀನುಗಳು ಕೆಲವೊಮ್ಮೆ ಒಂಟಿಯಾಗಿಯೂ ಕಾಣಸಿಗುತ್ತವೆ.
ಬೆಸ್ಟ್ ಅಪ್ಪ ಹೇಗೆ?
ಸಾಮಾನ್ಯವಾಗಿ ಮೀನುಗಳು ತಮ್ಮ ಸಂತಾನೋತ್ಪತ್ತಿಯನ್ನು ನಡೆಸುವಾಗ ತಮ್ಮ ಮೊಟ್ಟೆಗಳನ್ನು ನೀರಿಗೆ ಬಿಡುಗಡೆಗೊಳಿಸುತ್ತವೆ. ಬಿಡುಗಡೆಗೊಂಡ ಮೊಟ್ಟೆಗಳು ನೀರಿನಲ್ಲಿ ಇರುವ ಪೋಷಕಾಂಶಗಳನ್ನು ಬಳಸಿಕೊಂಡು ಬೆಳವಣಿಗೆ ಹೊಂದಿ ಮರಿಗಳಾಗುವುದು ರೂಢಿ, ಇಂತಹ ಸನ್ನಿವೇಶಗಳಲ್ಲಿ ಮೀನುಗಳ ಮೊಟ್ಟೆಗಳು ಇತರ ಪರಭಕ್ಷಕಗಳಿಗೆ ಆಹಾರ ವಾಗುವ ಹಾಗೂ ಇನ್ನಿತರ ನೈಸರ್ಗಿಕ ಏರುಪೇರುಗಳಿಗೆ ಸಿಲುಕಿ ನಶಿಸುವ ಸಾಧ್ಯತೆಗಳು ಹೆಚ್ಚು. ಈ ಸಮಸ್ಯೆಯಿಂದ ಪಾರಾಗಿ ತಮ್ಮ ಸಂತತಿಯನ್ನು ಸಂರಕ್ಷಿಸಲು ಜಾ ಫಿಶ್ ಗಳು ಹೊಂದಾಣಿಕೆಯೊಂದನ್ನು ಅಳವಡಿಸಿಕೊಂಡಿವೆ ಅದುವೇ ‘ಬಾಯಿ ಪೋಷಣೆ’. ಇಂತಹ ಹಂತದಲ್ಲಿ ಗಂಡು ಜಾ ಫಿಶ್ಗಳು ಹೆಣ್ಣು ಜಾ ಫಿಶ್ ಗಳು ಬಿಡುಗಡೆಗೊಳಿಸಿದ ಮೊಟ್ಟೆಗಳನ್ನು ತನ್ನ ಬಾಯಿಯಲ್ಲಿ ಹಿಡಿದಿರಿಸಿ ಹತ್ತರಿಂದ ಹನ್ನೆರಡು ದಿನಗಳ ಕಾಲ ರಕ್ಷಣೆ ಮತ್ತು ಪೋಷಣೆ ಮಾಡುತ್ತವೆ. ಮೊಟ್ಟೆಗಳು ಬಾಯಿಯಲ್ಲಿ ಸಂಗ್ರಹವಾಗಿರುವುದರಿಂದ ಗಂಡು ಮೀನುಗಳು ಈ ಕಾಲಾವಧಿಯಲ್ಲಿ ಆಹಾರ ಸೇವಿಸಲು ಸಾಧ್ಯವಾಗದೆ ತನ್ನ ಯಕೃತ್ತಿನಲ್ಲಿನ ಶೇಖರಿತ ಪೋಷಕಾಂಶಗಳನ್ನು ಬಳಸಿಕೊಂಡು ಜೀವಿಸುತ್ತವೆ. ಅಲ್ಲದೆ ತನ್ನ ದೇಹದ ಚಯಾಪಚಯ ಕ್ರಿಯೆಯನ್ನು ಮಂದಗೊಳಿಸಿ ಪೋಷಣೆ ಕಾಲಾವಧಿಯಲ್ಲಿ ಬದುಕುಳಿಯುತ್ತವೆ. ಕೆಲವೊಮ್ಮೆ ಬದುಕುಳಿಯುವ ಪೋಷಕಾಂಶಗಳ ಕೊರತೆಯಿಂದಾಗಿ ತನ್ನ ಮೊಟ್ಟೆಗಳನ್ನೇ ಅಲ್ಪ ಪ್ರಮಾಣದಲ್ಲಿ ಬಕ್ಷಿಸಿ ಉಳಿದ ಮೊಟ್ಟೆಗಳ ಪೋಷಣೆ ಮಾಡುತ್ತವೆ. 400 ಕ್ಕಿಂತ ಹೆಚ್ಚು ಮೊಟ್ಟೆಗಳನ್ನು ಪೋಷಿಸುವ ಈ ಮೀನು ಅವುಗಳಿಗೆ ಪೋಷಕಾಂಶ ಒದಗಿಸಲು ಹಾಗೂ ಅವುಗಳು ಕೆಡದಿರುವಂತೆ ಕಾಪಾಡಲು ಅವುಗಳನ್ನು ನೀರಿಗೆ ಉಗುಳಿ ಮತ್ತೆ ಹಿಡಿದು ಸಂಗ್ರಹಿಸುವ ಕೆಲಸ ಹೇಳುವಷ್ಟು ಸುಲಭದ್ದಲ್ಲ. ಮೊಟ್ಟೆಗಳು ಸಂಪೂರ್ಣ ಬೆಳವಣಿಗೆ ಹೊಂದಿದ ನಂತರ ಅವುಗಳನ್ನು ಒಮ್ಮೆಗೆ ಬಿಡುಗಡೆಗೊಳಿಸದೆ ಹಂತ ಹಂತವಾಗಿ ಒಂದೊಂದೇ ಭ್ರೂಣಗಳನ್ನು ಹೊರ ಉಗುಳುತ್ತದೆ. ಈ ಬಾಯಿ ಪೋಷಣೆಯ ಕಾಲಾವಧಿಯಲ್ಲಿ ಆಹಾರ ವಿರದೆ ಸೊರಗುವ ಎಷ್ಟೋ ಗಂಡು ಜಾ ಮೀನುಗಳು ಮೊಟ್ಟೆಗಳನ್ನು ಬಿಡುಗಡೆಗೊಳಿಸಿದ ನಂತರ ಸಾವನ್ನಪ್ಪುತ್ತವೆ.
ವಾಣಿಜ್ಯವಾಗಿ ಅಷ್ಟೇನೂ ಪ್ರಾಮುಖ್ಯತೆ ಪಡೆಯದ ಈ ಸಂತತಿ ಅಕ್ವೇರಿಯಂ ವ್ಯಾಪಾರದಲ್ಲಿ ಹೆಸರುಗಳಿಸಿವೆ. ಬಾಯಿ ಪೋಷಣೆ ಮಾಡುವ ಇತರ ಜಲಚರಗಳಿಗಿಂತ ಜಾ ಫಿಶ್ ನ ತಂತ್ರ ಮತ್ತು ಕಾಳಜಿ ಅದನೊಂದು ಬೆಸ್ಟ್ ಅಪ್ಪನನ್ನಾಗಿಸುತ್ತದೆ.
– ನೈದಿಲೆ ಶೇಷೇಗೌಡ
ಎಸ್ ಡಿ ಎಂ ಕಾಲೇಜು, ಉಜಿರೆ