ಹೊರಗಿನವರಿಗೆ ಚಂದ ನಮ್ಮೂರು ಆದರೆ ಅಲ್ಲಿದ್ದವನಿಗೇ ಗೊತ್ತು ಅಲ್ಲಿಯ ಪಾಡು | ಪವನ್ ಕುಮಾರ್ ಕೆ
ಕಾಲೇಜಿಗೆ ಸೇರಿದ ಮೊದಲ ದಿನ. ತರಗತಿ ಕೋಣೆಯಲ್ಲಿ ಕುಳಿತಿದ್ದೆ. 10 ಗಂಟೆ ಸುಮಾರಿಗೆ ಉಪನ್ಯಾಸಕರೊಬ್ಬರು ತರಗತಿಗೆ ಬಂದರು. ಅವರು ಕನ್ನಡ ಉಪನ್ಯಾಸಕರು. ಕಾಲೇಜು ಶುರುವಾದ ಮೊದಲ ದಿನವಾದುದರಿಂದ ನಮ್ಮ ತರಗತಿಯಲ್ಲಿದ್ದ ಎಲ್ಲರೂ ಹೆಸರು, ವಿಳಾಸ ಇತ್ಯಾದಿಗಳನ್ನೊಳಗೊಂಡಂತೆ ನಮ್ಮನಮ್ಮ ವೈಯಕ್ತಿಕ ಪರಿಚಯ ಮಾಡುವಂತೆ ಕೇಳಿದರು. ನಾನು ಹಿಂದಿನ ಬೆಂಚಿನಲ್ಲಿ ಒಬ್ಬನೇ ಕೂತಿದ್ದೆ. ಎಲ್ಲರೂ ತಂತಮ್ಮ ಸ್ವಪರಿಚಯ ಮಾಡದ ಬಳಿಕ ಕೊನೆಯದಾಗಿ ನಾನು ಎದ್ದು ನಿಂತೆ.
“ಹಾ, ಹೇಳಿ. ನೀವು ಯಾವ ಊರಿನಿಂದ ಬಂದಿದ್ದೀರಿ”? ಎಂದು ನೇರವಾಗಿ ಕೇಳುತ್ತಾರೆ. ಆಗ ನಾನು “ನಮ್ಮದು ಚಿಕ್ಕಮಗಳೂರು” ಎಂದೆ. ಆಗ ಸರ್ “ಹೋ! ನೀವು ಚಿಕ್ಕಮಗಳೂರಿನವರಾ. ಅಲ್ಲಿ ಯಾವ ಊರು?” ಎಂದು ಕೇಳಿದರು. “ಸರ್ ಅಲ್ಲಿಂದ ಸುಮಾರು 35 ಕಿಮೀ ದೂರದಲ್ಲಿರುವ ಮಹಲ್ ಎಂಬ ಗ್ರಾಮ. ಇದು ಚಿಕ್ಕಮಗಳೂರಿನಿಂದ ಮುಳ್ಳಯ್ಯನಗಿರಿ ಪರ್ವತ ಶ್ರೇಣಿ ಕಡೆಗೆ ಹಾದು ಹೋಗುವ ಮಾರ್ಗದಲ್ಲಿ ಬರುತ್ತದೆ” ಎಂದು ವಿವರಿಸಿದೆ. “ಹೋ ಹೌದಾ, ಅಲ್ಲಿಯ ವಾತಾವರಣ ನನಗೆ ತುಂಬಾ ಇಷ್ಟ. ಒಳ್ಳೆಯ ಗಾಳಿ, ಸುತ್ತ ಮುತ್ತಲಿನ ಮರಗಿಡಗಳು, ಬೆಟ್ಟ ಗುಡ್ಡಗಳು, ಇದನ್ನು ನೋಡಲು ತುಂಬಾ ಖುಷಿ ಹಾಗೂ ಚೆಂದ ಅನ್ಸುತ್ತೆ” ಎಂದರು. ಅವರು ಮುಂದುವರೆಸುತ್ತಾ, “ಅಲ್ಲಿ ಮಳೆಗಾಲ ಇನ್ನೂ ತುಂಬಾ ಚಂದ. ಅಲ್ಲಿರುವುದಕ್ಕೆ ನೀವು ಪುಣ್ಯ ಮಾಡಿದ್ದೀರಿ” ಎಂದು ಹೇಳಿ ಮುಂದೆ ಹೆಜ್ಜೆ ಹಾಕಿದರು. ನಾನು ಮನಸ್ಸಿನಲ್ಲಿಯೇ, “ಅಲ್ಲಿ ಇರುವವರಿಗೆ ಗೊತ್ತು ಸರ್ ಅಲ್ಲಿಯ ಮಳೆಗಾಲದ ಕಷ್ಟಗಳು” ಎಂದು ಮಳೆಗಾಲದ ಕಹಿ ಘಟನೆಗಳನ್ನು ಮೆಲುಕು ಹಾಕಿದೆ.
ಮೇ – ಜೂನ್ ತಿಂಗಳಲ್ಲಿ ಶುರುವಾಗುವ ಮಳೆ ಮುಂದಿನ 5-6 ತಿಂಗಳುಗಳ ಕಾಲ ಎಡಬಿಡದೇ ಸುರಿಯುತ್ತದೆ ಮತ್ತು ಅಲ್ಲಿನ ಊರುಗಳೆಲ್ಲ ಬಹುತೇಕ ಸಮಯ ಮಂಜು ಆವರಿಸಿರುತ್ತದೆ. ಇದರಿಂದಾಗಿ ನಾವು ಕ್ರಮಿಸುವ ದಾರಿಯಲ್ಲಿ ಮುಂದಿನ 50-100 ಮೀಟರ್ ದೂರ ಮನೆಗಳಾಗಲಿ, ಓಡಾಡುವಂತಹ ವಾಹನಗಳಾಗಲಿ, ಏನೂ ಕಾಣಿಸುವುದೇ ಇಲ್ಲ. ಇದರಿಂದಾಗಿ ಬಹಳಷ್ಟು ಅಪಘಾತಗಳು ಸಹ ಸಂಭವಿಸಿವೆ. ಆದರೂ ಊರಿನ ಗ್ರಾಮಸ್ಥರು ಇವೆಲ್ಲವನ್ನೂ ಲೆಕ್ಕಿಸದೆ ಜೀವನೋಪಾಯಕ್ಕಾಗಿ, ಬೆಳಗಿನ ಮುಂಜಾವಿನಲ್ಲೇ ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗುತ್ತಾರೆ. ರಭಸವಾಗಿ ಮಳೆ ಬರುವಾಗ ಅಲ್ಲಿನ ಹಳ್ಳ-ಕೊಳ್ಳಗಳೆಲ್ಲ ಬೇಗನೇ ತುಂಬುತ್ತವೆ. ಅಲ್ಲಿ ಯಾರಾದರೂ ಸಿಕ್ಕಿಹಾಕಿಕೊಂಡರೆ, ಬದುಕಿ ಬರಲು ಹರಸಾಹಸ ಪಡಲೇ ಬೇಕಾಗುತ್ತದೆ. ಅಷ್ಟೊಂದು ರಭಸವಾಗಿ ನೀರು ಹರಿದು ಹೋಗುತ್ತಿರುತ್ತದೆ.
ಇನ್ನೂ ಕೆಲವೊಮ್ಮೆ ರಸ್ತೆ ಬದಿಯಲ್ಲೇ ಇರುವ ಗುಡ್ಡಗಳಿಂದ ಕಲ್ಲು-ಮಣ್ಣುಗಳೆಲ್ಲ ಜಾರಿ, ರಸ್ತೆಗೆ ಬಿದ್ದು, ರೋಡ್ ಬ್ಲಾಕ್ ಆಗುವುದೂ ಇದೆ. ಯಾವ ಪರಿವೇ ಇಲ್ಲದೇ ರಸ್ತೆಯಲ್ಲಿ ವೇಗವಾಗಿ ಗಾಡಿ ಚಾಲನೆ ಮಾಡಿದರಂತೂ, ರಸ್ತೆಗೆ ಬಿದ್ದ ಕಲ್ಲುಗಳೇ ನಮ್ಮ ಪಾಲಿನ ಯಮ ಆಗುತ್ತದೆ!
ನೀರು ತುಂಬುವುದು ಒಳ್ಳೆಯದಲ್ಲವೇ ಅಂತ ನೀವು ವಾದಿಸಬಹುದು. ಆದರೆ ಅದಕ್ಕೂ ಮಿತಿ ಇರುತ್ತದೆ ಅಲ್ವಾ? ಕೆರೆ, ಹಳ್ಳಗಳೆಲ್ಲ ತುಂಬಿ ಹರಿದಾಗ ಅದರ ಹತ್ತಿರದ ಮನೆಗಳ ವಠಾರಕ್ಕೆ, ತೋಟಗಳಿಗೆ ನೀರು ನುಗ್ಗಿ ಹಲವು ಹಾನಿಗಳಾಗುವುದೂ ಉಂಟು. ಇದರಿಂದಾಗಿ ಹಲವಾರು ಕಾಫಿ ತೋಟಗಳು ನಾಶವಾಗಿವೆ. ಭಾರೀ ಮಳೆಯೊಂದಿಗೆ ಬರುವ ಜೋರಾದ ಗಾಳಿಯಿಂದಾಗಿ ದೊಡ್ಡ ದೊಡ್ಡ ಮರಗಳು ಮುರಿದು ವಿದ್ಯುತ್ ಕಂಬ, ವಿದ್ಯುತ್ ತಂತಿಗಳ ಮೇಲೆ ಬೀಳುತ್ತವೆ. ಇದರಿಂದ ವಾರಗಟ್ಟಲೇ ಆ ಪ್ರದೇಶಗಳಲ್ಲಿ ವಿದ್ಯುತ್ ಸಹ ಇರುವುದಿಲ್ಲ. ಅಂತಹ ಸಮಯದಲ್ಲಿ ಊರೇ ಮೌನವಾಗಿರುತ್ತದೆ! ಆಗ ಸೋಲಾರ್ ಬೆಳಕನ್ನ ಬಳಸಿಕೊಳ್ಳೋಣವೆಂದರೆ ಅಂತಹ ಸಮಯದಲ್ಲಿ ನಮಗೆಲ್ಲ ಸೂರ್ಯನ ದರ್ಶನವೇ ವಿರಳ. ವಿದ್ಯುತ್ ಇಲ್ಲದೇ ಹಲವಾರು ಮನೆಗಳಿಗೆ ಚಿಮಣಿ ದೀಪ, ಮೊಂಬತ್ತಿಯೇ ಆಸರೆ! ಇಂತಹ ಸಂದರ್ಭಗಳಲ್ಲಿ ಕರೆಂಟ್ ಬಂತೆಂದರೆ ಸಾಕು, ಸ್ವತಃ ದೇವರೇ ಪ್ರತ್ಯಕ್ಷವಾದಂತಾ ಅನುಭವ!
ಕರೆಂಟೇ ಇಲ್ಲ, ಎಲ್ಲ ಉಪಕರಣಗಳ ಬ್ಯಾಟರಿ ಡೌನ್ ಆಗುತ್ತಿದೆ ಎಂದಾಗ ಅಲ್ಲೇ ಸುತ್ತಮುತ್ತ ಹೋಮ್ ಸ್ಟೇ, ಗೆಸ್ಟ್ ಹೌಸ್‌ಗಳು ಅಧಿಕವಾಗಿ ಇರುವುದರಿಂದ ಊರಿನ ಜನರೆಲ್ಲಾ ತಮ್ಮ ತಮ್ಮ ಮೊಬೈಲ್, ಪವರ್ ಬ್ಯಾಂಕ್ ಗಳನ್ನ ಅಲ್ಲಿಗೆ ತೆಗೆದುಕೊಂಡು ಹೋಗಿ ಚಾರ್ಜ್ ಮಾಡಿಕೊಳ್ಳುತ್ತಾರೆ. ಅಲ್ಲಿ ಯಾವುದಾದರೂ ರೀತಿಯಲ್ಲಿ ವಿದ್ಯುತ್ ಇದ್ದೇ ಇರುತ್ತದೆ ಅನ್ನುವ ಧೈರ್ಯ ಜನರಿಗೆ.
ಅಲ್ಲಿನ ಜನರಿಗೆ ಕುಡಿಯುವುದಕ್ಕಾಗಲಿ, ಸ್ನಾನ ಮಾಡುವುದಕ್ಕಾಗಲಿ, ಬಟ್ಟೆ, ಪಾತ್ರೆ ತೊಳೆಯುವುದಕ್ಕಾಗಲಿ, ಗುಡ್ಡದಿಂದ ಜಲದ ರೂಪದಲ್ಲಿ ಬರುವ ಹಳ್ಳದ ನೀರನ್ನೇ ಉಪಯೋಗಿಸುವುದರಿಂದ ಎಲ್ಲರ ಮನೆಗಳಿಗೂ ಹಳ್ಳದಿಂದಲೇ “ಪೈಪ್” ಕನೆಕ್ಷನ್ ಇದೆ. ಮಳೆಯ ರಭಸಕ್ಕೆ ಪೈಪ್ ಒಡೆದು ಹೋಗುವುದು, ಪೈಪಿನ ಒಳಗೆ ಕಸ ತುಂಬುವುದು, ಈ ತರಹದ ಸಮಸ್ಯೆ ಗಳಿಂದ 3-4 ದಿನಗಳವರೆಗೆ ನೀರಿನ ಅಭಾವವನ್ನೂ ಎದುರಿಸಬೇಕಾಗುತ್ತದೆ. ಸಮುದ್ರದಲ್ಲಿ ನೀರಿನ ಮಧ್ಯೆ ದೋಣಿಯಲ್ಲಿ ಸಂಚರಿಸುವಾಗ, ನಮ್ಮ ಸುತ್ತಲೂ ನೀರು ಇದ್ದರೂ, ಬಾಟಲಿಯಲ್ಲಿ ನೀರು ಇಲ್ಲದಿದ್ದರೆ ಹೇಗೆ ಅಲ್ವಾ? ಸುತ್ತಲೂ ನೀರು ಇದ್ದರೂ ಉಪಯೋಗಕ್ಕೆ ಬರಲ್ಲ!
ಇವೆಲ್ಲದರ ನಡುವೆಯೂ ನರಭಕ್ಷಕರಂತೆ ಕಣ್ಣುಗಳು ಇಲ್ಲದಿದ್ದರೂ, ವಾಸನೆಯ ಗ್ರಹಿಕೆಯ ಮೂಲಕ ಮತ್ತು ಮಳೆಗಾಲದ ಸಮಯದಲ್ಲಿ ಮಾತ್ರ ಜೀವವನ್ನು ಹೊಂದಿರುವಂತಹ ಜಿಗಣೆ (leach) ಗಳ ಕಾಟ ಅಧಿಕವಾಗಿರುತ್ತದೆ. ಇವುಗಳು ಗೊತ್ತಾಗದ ಹಾಗೆ ಮನುಷ್ಯನ ಮೈಮೇಲೆ ಏರಿ ರಕ್ತವನ್ನು ಹೀರುತ್ತವೆ. ಇವು ಕಚ್ಚಿದ ಜಾಗದಲ್ಲಿ ಉರಿ ಹೆಚ್ಚಾಗಿ ಇದರಿಂದ ಸೆಪ್ಟಿಕ್ ಆಗುವ ಸಾಧ್ಯತೆಯೂ ಇರುತ್ತದೆ. ಇದಕ್ಕಾಗಿ ಮುಂಜಾಗೃತಾ ಕ್ರಮವಾಗಿ ಅಲ್ಲಿನ ಜನರು ತಂತಮ್ಮ ಕೆಲಸಗಳಿಗೆ ಹೊರಡುವ ಮುನ್ನ “ಸಂಪಿಗೆ ಕಾಯಿ, ಹರಳೆಣ್ಣೆಗಳಂತಹ ವಸ್ತುಗಳಿಂದ ತಯಾರಿಸಿದ ಔಷಧಗಳನ್ನು ಅಥವಾ ಅಂಗಡಿಗಳಲ್ಲಿ ಸಿಗುವ ಶ್ಯಾಂಪೂಗಳನ್ನು ತಮ್ಮ ಕಾಲುಗಳಿಗೆ ಧರಿಸಿದ್ದ ಶೂಗಳ ಮೇಲೆ ಲೇಪಿಸಿಕೊಂಡು ಹೋಗುತ್ತಾರೆ. ಇದರಿಂದ ಮನುಷ್ಯನ ಮೈಮೇಲೆ ಜಿಗಣೆಗಳು ಏರದಂತೆ ತಡೆಯಬಹುದು.
ಎಲ್ಲರ ಮನೆಯ ಅಡುಗೆ ಒಲೆ ಹಗಲಿನಿಂದ ರಾತ್ರಿಯವರೆಗೂ ಉರಿಯುತ್ತಲೇ ಇರುತ್ತದೆ. ಏಕೆಂದರೆ ಇಡೀ ದಿನ ಮಳೆ ಸುರಿಯುವುದರಿಂದ ಮೈ ಬೆಚ್ಚಗೆ ಇಡು ಬೆಂಕಿ ಅನಿವಾರ್ಯವಾಗಿರುತ್ತದೆ. ಇದಕ್ಕಾಗಿ ಮಳೆಗಾಲ ಆರಂಭಕ್ಕೆ 2-3 ತಿಂಗಳು ಇರುವಾಗಲೇ ತಂತಮ್ಮ ಮನೆಗೆ ಟ್ರ್ಯಾಕ್ಟರ್ಗಟ್ಟಲೇ ಸೌದೆಯನ್ನು ತರಿಸಿ ಶೇಖರಣೆ ಮಾಡಿಟ್ಟು ಇದನ್ನು ಮಳೆಗಾಲ ಮುಗಿಯುವವರೆಗೂ ಬಳಸಿಕೊಳ್ಳುತ್ತಾರೆ.
ಹಾಗೆ ಮೇ ಮತ್ತು ಜೂನ್ ತಿಂಗಳಲ್ಲಿ “ಕಾಫಿಯ ಹೂವು” ಅರಳುವ ಸಮಯವಾಗಿರುತ್ತದೆ. ಈ ಸಮಯದಲ್ಲಿ ಬರುವಂತಹ ಮಳೆಗೆ ಹೂವೆಲ್ಲಾ ಉದುರಿ ಹೋಗಿ ಆ ವರ್ಷದ ಬೆಳೆ ನಾಶವಾಗುವುದು ಹೆಚ್ಚಾಗಿರುತ್ತದೆ. ಹೆಂಚಿನ ಮತ್ತು ಶೀಟುಗಳ ಮನೆ ಈ ಪ್ರದೇಶದಲ್ಲಿ ಹೆಚ್ಚಾಗಿರುವುದರಿಂದ ಮಳೆಯ ರಭಸಕ್ಕೆ ಇವು ರಂಧ್ರಗಳಾಗಿ ಮನೆಯೊಳಗೆಲ್ಲಾ ನೀರು ಸೋರಿಕೆಯಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಮನೆಯ ಮೇಲೆ ಟಾರ್ಪಲ್‌ಗಳ ಮೊರೆ ಹೋಗಬೇಕಾಗುತ್ತದೆ.
ಮಳೆಯಿಂದ ಯಾವುದೇ ಹಬ್ಬ ಹರಿದಿನಗಳಲ್ಲೂ ಜನರು ಒಟ್ಟಾಗಿ ಇರುವುದು ತುಂಬಾ ಕಷ್ಟವಾಗಿರುತ್ತದೆ. ಈ ಸಮಯದಲ್ಲಿ ನೆಂಟರುಗಳಾಗಲಿ, ಸಂಬಂಧಿಕರಾಗಲಿ, ಯಾರ ಮನೆಗೂ ಬರುವುದೇ ಇಲ್ಲ. ಬಂದರೂ ಅಷ್ಟೊಂದು ಅನಿವಾರ್ಯತೆ ಇದೆ ಎಂದರ್ಥ. ಇಲ್ಲದಿದ್ದರೆ ಬೇಗನೇ ಹೊರಟು ಬಿಡುತ್ತಾರೆ. ಅಲ್ಲಿನ ಕೆಲವು ಶಾಲೆಗಳಲ್ಲಿ ತರಗತಿಯೊಳಗೂ ನೀರು ಸೋರುವುದುಂಟು. ಇದರಿಂದ ಅಲ್ಲಿನ ಮಕ್ಕಳಿಗೆ ಕಲಿಯುವುದಕ್ಕೆ ತುಂಬಾ ಸಮಸ್ಯೆಯಾಗುತ್ತದೆ. ಈ ಸಮಸ್ಯೆಯಿಂದ ಮಕ್ಕಳು ಶೀತ, ಜ್ವರ, ಕೆಮ್ಮುಗಳಿಂದ ಬಳಲುತ್ತಲೇ ಇರುತ್ತಾರೆ.
ಹಾಗೆಯೇ ಈಗಿನ ಯುವಕರಿಗೆ ಮನೆ ಬಿಟ್ಟು ಇರಲು ಸಾಧ್ಯವೇ ಹೊರತು ಮೊಬೈಲ್ ಗಳನ್ನೂ ಬಿಟ್ಟು ಇರಲು ಸಾಧ್ಯವೇ ಇಲ್ಲ. ಕರೆಂಟ್ ಇಲ್ಲದೆ ಮೊಬೈಲ್ ನಲ್ಲಿ ಚಾರ್ಜ್ ಇರುವುದಿಲ್ಲ, ಈತರ ಯೋಚನೆ ಮಾಡಿ ಬೆಂಗಳೂರಿನಂತಹ ಪಟ್ಟಣಗಳಿಗೆ ಕೆಲಸಕ್ಕಾಗಿ ಹೋಗುತ್ತಾರೆ. ಇನ್ನೂ ಕೆಲವು ಓದುತ್ತಿರುವಂತಹ ಯುವಕ -ಯುವತಿಯರು ಹಾಸ್ಟೆಲ್‌ಗಳಲ್ಲಿ ಉಳಿದು ಬಿಡುತ್ತಾರೆ. ಮನೆಯಿಂದ ಹೊರಗಡೆ ಆಟ ಆಡುವುದಕ್ಕಾಗಲಿ, ತಿರುಗಾಡುವುದಕ್ಕಾಗಲಿ, ಯಾರೂ ಸಹ ಬರುವುದೇ ಇಲ್ಲ. ಹಗಲು- ರಾತ್ರಿ ಮನೆಯೊಳಗೇ ಕಾಲವನ್ನು ಕಳೆಯಬೇಕಾಗುತ್ತದೆ.
ಹೀಗೆಲ್ಲ ಯೋಚಿಸುತ್ತಿದ್ದಂತೆಯೇ ಕಾಲೇಜಿನ ಬೆಲ್(ಘಂಟೆ) ಶಬ್ದವಾಯಿತು. ಇದರಿಂದ ತಕ್ಷಣ ಎಚ್ಚರಗೊಂಡ ನಾನು ಮುಂದೆ ನೋಡಿದರೆ ಉಪನ್ಯಾಸಕರು ಅದಾಗಲೇ ತರಗತಿ ಕೋಣೆಯಿಂದ ಹೊರಗೆ ತೆರಳಿದ್ದರು. ಆ ಒಂದು ಕ್ಷಣ ಮುಗುಳ್ನಕ್ಕು ಅಲ್ಲಿಗೆ ಸುಮ್ಮನಾದೆ.
ಪವನ್ ಕುಮಾರ್ ಕೆ.
ಬಿ. ವೋಕ್ ವಿದ್ಯಾರ್ಥಿ
ಎಸ್. ಡಿ. ಎಮ್. ಕಾಲೇಜು, ಉಜಿರೆ
One thought on “ಹೊರಗಿನವರಿಗೆ ಚಂದ ನಮ್ಮೂರು ಆದರೆ ಅಲ್ಲಿದ್ದವನಿಗೇ ಗೊತ್ತು ಅಲ್ಲಿಯ ಪಾಡು | ಪವನ್ ಕುಮಾರ್ ಕೆ”
ಮಲೆನಾಡಿನ ಜನರ ಕಷ್ಟಗಳನ್ನು ಮತ್ತು ಎದುರಿಸುವ ಸವಾಲುಗಳನ್ನು ಅದ್ಬುತವಾಗಿ ವಿವರಿಸಿದ್ದೀರಿ👌👌