ಹೆಚ್ಚು ಓದಿದವರಿಗೆ ಮಾತ್ರ ಈ ಹವಾನಿಯಂತ್ರಿತ ಗೋಲ್ಡನ್ ಸೌಲಭ್ಯ | ವಿಜಯಕುಮಾರ ಹಿರೇಮಠ
ಉಜಿರೆ: ಈಗೀಗ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಲು ಕೇವಲ ಪುಸ್ತಕಗಳನ್ನು ಒದಗಿಸಿದರೆ ಸಾಲದು. ಓದಲು ತಕ್ಕ ವಾತಾವರಣ ಮತ್ತು ಪ್ರೋತ್ಸಾಹ ಇವೆರಡನ್ನೂ ನೀಡಬೇಕು ಅನ್ನೋದು ಚಾಲ್ತಿಯಲ್ಲಿರೋ ಮಾತು. ಓದುಗರನ್ನು ಪ್ರೋತ್ಸಾಹಿಸುವ ವಿಶಿಷ್ಟ ಲೈಬ್ರರಿಯೊಂದು ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿದೆ. ಇಲ್ಲಿ ಓದುಗರಿಗೆ ಲಕ್ಷಕ್ಕೂ ಮಿಕ್ಕಿದ ಪುಸ್ತಕಗಳನ್ನು ನೀಡುವುದರ ಜೊತೆಗೆ, ಓದನ್ನು ಪ್ರೋತ್ಸಾಹಿಸಲು ಗೋಲ್ಡನ್ ಕಾರ್ಡ್ ಅನ್ನುವ ವಿಶಿಷ್ಟ ಸೌಲಭ್ಯವೊಂದನ್ನ ನೀಡಲಾಗಿದೆ.
ಈ ಕಾಲೇಜಿನ ಗ್ರಂಥಾಲಯವು ಓದುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ‘ಗೋಲ್ಡನ್ ಕಾರ್ಡ್’ ನೀಡುವ ವಿಶಿಷ್ಟ ಯೋಜನೆ ಹಾಕಿಕೊಂಡಿದೆ. ಪ್ರತೀ ಶೈಕ್ಷಣಿಕ ವರ್ಷದಲ್ಲಿ ಲೈಬ್ರರಿಯಲ್ಲಿ ಕೂತು ಅತೀ ಹೆಚ್ಚು ಅವಧಿಗೆ ಓದುವ ವಿದ್ಯಾರ್ಥಿಗಳಿಗೆ ಈ ಗೋಲ್ಡನ್ ಕಾರ್ಡ್ ನೀಡಲಾಗುತ್ತದೆ.
ಈ ಕಾರ್ಡ್ ಪಡೆದ ವಿದ್ಯಾರ್ಥಿಗಳು ಉಳಿದ ವಿದ್ಯಾರ್ಥಿಗಳಿಗೆ ದೊರಕದ ಒಂದು ವಿಶಿಷ್ಟ ಸೌಲಭ್ಯ ಪಡೆಯುತ್ತಾರೆ. ಅದೇ ಈ ಸುಸಜ್ಜಿತ ಹವಾನಿಯಂತ್ರಿತ ಕೊಠಡಿಯಲ್ಲಿ ಮನೆಯಲ್ಲಿರುವಂತೆಯೇ ಆರಾಮವಾಗಿ ಕೂತು ಓದುವ ಸೌಲಭ್ಯ. ಓದುವ ವಿದ್ಯಾರ್ಥಿಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಲು ಈ ವಿಶಿಷ್ಟ ಯೋಜನೆ ಪ್ರಾರಂಭಿಸಿದ್ದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಮಾಜಿ ಕಾರ್ಯದರ್ಶಿಗಳಾಗಿದ್ದ ಡಾ. ಬಿ. ಯಶೋವರ್ಮ ಅವರು. ಈ ಲೈಬ್ರರಿಯಲ್ಲಿ ಇನ್ನೂ ಹೆಚ್ಚಿನ ಓದುಗ ವಿದ್ಯಾರ್ಥಿಗಳನ್ನು ಆಕರ್ಷಿಸಲು ಸುಮಾರು 1000 ಲಕ್ಷಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹ, ಹತ್ತಾರು ಕನ್ನಡ ಮತ್ತು ಇಂಗ್ಲೀಷ್ ದಿನ ಪತ್ರಿಕೆಗಳು, 450ಕ್ಕೂ ಅಧಿಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ನಿಯತಕಾಲಿಕೆಗಳು ಲಭ್ಯವಿದೆ.
ಈ ಗ್ರಂಥಾಲಯದಲ್ಲಿ ಆಧುನಿಕ ಕಾಲದ ಓದನ್ನು ಪ್ರೋತ್ಸಾಹಿಸಲು ಟ್ಯಾಬ್ ಮತ್ತು ವೈ.ಫೈ ಸೌಲಭ್ಯವೂ ಲಭ್ಯವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳು ಮತ್ತು ಸಂಶೋಧನಾ ವಿಧ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟು ಅನೇಕ ರೀತಿಯ ರೆಫ್ರೆನ್ಸ್ ಪುಸ್ತಕಗಳನ್ನು ಇಲ್ಲಿ ಕಾಣಬಹುದು. ಈ ವಿಶೇಷ ಸೌಲಭ್ಯ ಒದಗಿಸುವ ನಿಶ್ಯಬ್ದದ ವಾತಾವರಣದಿಂದ ಓದಿನ ಕಡೆಗೆ ಗಮನವನ್ನು ಕೇಂದ್ರಿಕರಿಸಲು ಸಹಾಯಕವಾಗುತ್ತದೆ. ಒಟ್ಟಿನಲ್ಲಿ ಪೂರಕ ವಾತಾವರಣ ಸೃಷ್ಟಿಸಿದರೆ ಓದುಗರನ್ನು ಸೆಳೆಯಲು ಸಾಧ್ಯ ಎಂದು ನಿರೂಪಿಸಿರುವ ಉಜಿರೆ ಎಸ್.ಡಿ.ಎಂ ಕಾಲೇಜಿನ ಗ್ರಂಥಾಲಯ ಎಲ್ಲರಿಗೂ ಮಾದರಿ.
ವಿಜಯಕುಮಾರ ಹಿರೇಮಠ
ಎಸ್‌ಡಿಎಂ ಕಾಲೇಜು ಉಜಿರೆ