ಭತ್ತ ಕೃಷಿ ಮಾಡಿ ಖುಷಿ ಕಂಡ ಹೈಸ್ಕೂಲ್ ಮಕ್ಕಳು | ಶಾಮ ಪ್ರಸಾದ್ ಹನಗೋಡು
ಹೈ ಸ್ಕೂಲ್ ದಿನಗಳು ಅಂದಾಗ ಓದೋದು ಆಟ ಪಾಠ, ಹೋಂವರ್ಕ್ ಪ್ರಾಜೆಕ್ಟ್ ಗಳು ಅಂತ ತುಂಬಾ ಬ್ಯುಸಿ ಆಗ್ತಾರೆ ಈಗಿನ ಕಾಲದ ಮಕ್ಕಳು ಎಲ್ಲದಕ್ಕೂ ಅಪ್ಪ ಅಮ್ಮನೇ ತಂದುಕೊಡಬೇಕು, ಮಾಡಿಕೊಡಬೇಕು ಹೀಗೆ ಬರೆಯುತ್ತಾ ಹೋದರೆ ಸಾವಿರ ನಿದರ್ಶನಗಳು ದೊರೆಯುತ್ತವೆ. ಆದರೆ ಇಲ್ಲಿನ ಮಕ್ಕಳು ಹಾಗೆ ಇಲ್ಲ ಬೆಳಿಗ್ಗೆ ಎದ್ದು ಹಾಲು ಕರಿತಾರೆ ತೋಟಕ್ಕೆ ಹೋಗಿ ಕಳೆ ಕೇಳುತ್ತಾರೆ ಬಿದ್ದ ತೆಂಗಿನಕಾಯಿ ಎತ್ಕೊಂಡು ಬಂದು ಮಂಡಿಗೆ ಜಮಾ ಮಾಡುತ್ತಾರೆ ಅಡಿಗೆಗೆ ತಾವೇ ತರಕಾರಿ ತುಂಡು ಮಾಡಿ ಅಡುಗೆಭಟ್ಟರಿಗೆ ಸಹಾಯ ಮಾಡುತ್ತಾರೆ ಎಲ್ಲಪ್ಪ ಇತರ ಹುಡುಗರು ಸಿಕ್ತಾರೆ ಅಂತೀರಾ ಹಾಗಿದ್ರೆ ಉಜಿರೆಯಲ್ಲಿರುವ ರತ್ನ ಮಾನಸ ವಿದ್ಯಾರ್ಥಿ ನಿಲಯಕ್ಕೆ ನೀವು ಒಮ್ಮೆ ಭೇಟಿ ಕೊಡಬೇಕು. ಸಾಂಪ್ರದಾಯಿಕ ಶಿಕ್ಷಣದೊಂದಿಗೆ ಇಲ್ಲಿನ ಮಕ್ಕಳು ಕೃಷಿ ಹೈನುಗಾರಿಕೆಯನ್ನ ಕೂಡ ಮಾಡುತ್ತಿದ್ದು. ಇದೀಗ ಭತ್ತ ಬೆಳೆದು ಸೈನಿಸ್ಕೊಂಡಿದ್ದಾರೆ.
ನೀರು ನಿಲ್ಲಿಸಿ ಗದ್ದೆ ಮಾಡಿದ್ರು:
ಮಕ್ಕಳೇ ಗದ್ದೆ ತಯಾರು ಮಾಡಿ ಕೆಸರು ನಿಲ್ಲಿಸಿ ಹದಕ್ಕೆ ಬಂದ ನಂತರ ತಾವೇ ಬಿತ್ತನೆ ಮಾಡಿ ಬೆಳೆದ ಪೈರುಗಳನ್ನು ಗದ್ದೆಗೆ ನಾಟಿ ಮಾಡಿ ಬತ್ತದ ಕೃಷಿ ಮಾಡಿದ್ದಾರೆ. ಸುಮಾರು ಅರ್ಧ ಎಕರೆ ಜಾಗದಲ್ಲಿ ಮೂರು ಗದ್ದೆ ಮಾಡಿ ಭತ್ತ ಬೆಳೆದಿದ್ದು. ಭತ್ತಕ್ಕೆ ಯಾವ ರೀತಿ ನೀರು ಬಿಡಬೇಕು, ಯಾವಾಗ ಕಳೆ ಕೀಳಬೇಕು, ನೀರು ಯಾವಾಗ ನಿಲ್ಲಿಸಬೇಕು, ಎಂಬುದನ್ನೆಲ್ಲ ಚೆನ್ನಾಗಿ ಗೊತ್ತಾಗಿದೆ ಎನ್ನುತ್ತಾರೆ ಮಕ್ಕಳು.
ಹಿರಿಯರ ಮಾರ್ಗದರ್ಶನ:
ಮಕ್ಕಳಿಗೆ ನಿಲಯದ ಪಾಲಕರು ಹಾಗೂ ಕೃಷಿ ಕೆಲಸಗಾರರು ಮಾರ್ಗದರ್ಶನ ನೀಡಿದ್ದು ವಿದ್ಯಾರ್ಥಿಗಳೇ ಕಟಾವು ಮಾಡಿ ನೀರು ಬಿದ್ದು ಹಾಳಾಗದಂತೆ ಶೇಖರಣೆ ಮಾಡಿ. ಭತ್ತದ ತೆನೆಗಳನ್ನು ತಾವೇ ಬಡಿದು ಸುಮಾರು ಎರಡು ಕ್ವಿಂಟಲ್ ಅಷ್ಟು ಭತ್ತ ಬಿಡಿಸಿದ್ದಾರೆ. ಉಳಿದ ಹುಲ್ಲನ್ನ ತಮ್ಮದೇ ಹೈನುಗಾರಿಕೆ ಘಟಕಕ್ಕೆ ಒಣ ಮೇವಾಗಿ ಸಂಗ್ರಹಿಸಿದ್ದಾರೆ.
ವರ್ಷಕ್ಕೊಂದು ಬೆಳೆ:
ಪ್ರತಿವರ್ಷ ಇಲ್ಲಿನ ವಿದ್ಯಾರ್ಥಿಗಳಿಗೆ ಭತ್ತದ ಕೃಷಿ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಾಗುತ್ತದೆ. ಭತ್ತ ಬೆಳೆಯುವುದು ಹೇಗೆ ಎಂಬುದನ್ನು ವಿಡಿಯೋದ ಮುಖಾಂತರ ಅಥವಾ ಪಠ್ಯದ ಮುಖಾಂತರ ಕಲಿತರೆ ಆಗುವುದಿಲ್ಲ ಗದ್ದೆಗೆ ಇಳಿದು ಮೈ ಕೈ ಕೆಸರು ಮಾಡಿಕೊಂಡಾಗ ಅದರ ಕಷ್ಟ ಮತ್ತು ಬೆಳೆಯುವ ವಿಧಾನ ಗೊತ್ತಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿ ನಿಲಯದ ಪಾಲಕರಾದ ಯತೀಶ್. ಕಳೆದ ವರ್ಷ ವಿದ್ಯಾರ್ಥಿಗಳಿಗೆ ಯಂತ್ರದ ಮುಖಾಂತರ ಹೇಗೆ ಬತ್ತದ ನಾಟಿ ಮಾಡಬೇಕು ಎಂದು ಹೇಳಿಕೊಡಲಾಗಿತ್ತು ಆ ಮೂಲಕ ಯಂತ್ರ ಕೃಷಿಯನ್ನು ಸಹ ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗಿತ್ತು ಈ ಬಾರಿ ತಾವೇ ಗದ್ದೆಗೆ ಇಳಿದು ಕೆಸರು ನಿಲ್ಲಿಸಿ ಬಿತ್ತನೆ ಮಾಡಿ ಪೈರನ್ನ ನಾಟಿ ಮಾಡಿ ಅದರ ಪಾಲನೆ ಪೋಷಣೆ ಕೈಗೊಂಡು ಬೆಳೆದ ಮೇಲೆ ಕತ್ತಿ ಹಿಡಿದು ಕಟಾವು ಮಾಡಿ ಸಂಗ್ರಹಿಸಿಟ್ಟು. ಬಡಿದು ಹುಲ್ಲು ಹಾಗೂ ಬತ್ತವನ್ನು ಬೇರ್ಪಡಿಸಿ ಯಶಸ್ವಿಯಾಗಿ ಭತ್ತ ಕೃಷಿ ಮಾಡಿದ್ದಾರೆ ಇಲ್ಲಿನ ಪೋರರು. ವಿದ್ಯಾರ್ಥಿಗಳ ಕೃಷಿ ಮೇಲಿನ ಆಸಕ್ತಿ ಎಲ್ಲಾ ಮಕ್ಕಳಿಗೂ ಮಾದರಿಯಾಗಬಲ್ಲದು ದೈನಂದಿನ ಶಾಲೆಯ ಪಾಠ ಪ್ರವಚನವನ್ನು ಮುಗಿಸಿ ಕೃಷಿಯನ್ನು ಆಸಕ್ತಿ ತೋರಿಸಿ ಸೈ ಎನಿಸಿಕೊಂಡಿರುವ ಮಕ್ಕಳಿಗೆ ನಿಜಕ್ಕೂ ಶಭಾಷ್ ಎನ್ನಲೇಬೇಕು.
– ಶಾಮ ಪ್ರಸಾದ್ ಹನಗೋಡು
ದ್ವಿತೀಯ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ,
ದ್ವಿತೀಯ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ,
ಎಸ್ ಡಿ ಎಂ ಕಾಲೇಜು, ಉಜಿರೆ