ಅಹಂಭಾವವನ್ನು ಸೋಲಿಸಿದ ಮಾನವೀಯತೆಯ ಕಥೆ ‘ಪಾರ್ಕಿಂಗ್’ | ಅನುರಾಗ್ ಗೌಡ
ಅದೊಂದು ಎರಡು ಪೋರ್ಶನ್ ಇರೋ ಬಾಡಿಗೆ ಮನೆ. ಗ್ರೌಂಡ್ ಫ್ಲೋರ್‌ನಲ್ಲಿ ಇಳಂಪರೀದಿ (ಎಮ್.ಎಸ್. ಭಾಸ್ಕರ್) ಎಂಬ ಸುಮಾರು 57 – 58 ವರ್ಷದ ನಿಷ್ಟಾವಂತ ಸರ್ಕಾರಿ ಅಧಿಕಾರಿ, ಆದರೂ ಕಿರಿಕಿರಿ ಮನಸ್ಥಿತಿಯುಳ್ಳ ವ್ಯಕ್ತಿ, ತನ್ನ ಕುಟುಂಬದೊಂದಿಗೆ ಸುಮಾರು ಹತ್ತು ವರ್ಷದಿಂದ ನೆಲೆಸಿರುತ್ತಾರೆ.
ಆತನ ಹೆಸರು ಈಶ್ವರ್, ಐಟಿ ಕಂಪನಿಯ ನೌಕರ. ಆತನ ಪತ್ನಿ ಆರು ತಿಂಗಳ ಗರ್ಭಿಣಿ. ಅವಳಿಗೆ ಮತ್ತು ತನಗೂ ಅನುಕೂಲವಾಗುವಂತೆ ಈ ಬಾಡಿಗೆ ಮನೆಯ ಫಸ್ಟ್ ಫ್ಲೋರಲ್ಲಿ ನೆಲೆಸುತ್ತಾನೆ. ಮೊದ ಮೊದಲು ಎಲ್ಲಾ ಚೆನ್ನಾಗಿಯೇ ಇರುತ್ತೆ. ಈಶ್ವರ್ ಕಂಪನಿ ಕ್ಯಾಬ್ ಅಲ್ಲಿ ಓಡಾಡುತ್ತಿದ್ದರೆ, ಇಳಂಪರೀದಿ ಸ್ಪ್ಲೆಂಡರ್ ಬೈಕ್‌ನಲ್ಲಿ ಓಡಾಡುತ್ತಿರುತ್ತಾರೆ.
ಆದರೆ ಸಮಸ್ಯೆಗಳು ಈಶ್ವರ್ ಮಡದಿಯ ಅನುಕೂಲಕ್ಕಾಗಿ ಕಾರು ಕೊಂಡ ನಂತರ ಶುರುವಾಗುತ್ತದೆ. ಮನೆಯಲ್ಲಿ ಗಾಡಿ ಪಾರ್ಕಿಂಗ್ ವಿಷಯದಲ್ಲಿ ಶುರುವಾಗೋ ಇವರ ಸಣ್ಣ ಜಗಳ, ಊಹಿಸಲು ಆಗದಷ್ಟು ದೊಡ್ಡ ಮಟ್ಟಿಗೆ ಹೋಗುತ್ತದೆ ಎನ್ನುವುದು “ಪಾರ್ಕಿಂಗ್” ಚಿತ್ರದ ಕಥಾ ಹಂದರ.
ಈ ಕಡೆ ಈಶ್ವರನ್‌ಗೂ ಈಗೋ ಪ್ರಾಬ್ಲಮ್, ಇಳಂಪರೀದಿಗೂ ತಾನು ಹಿರಿಯನೆಂಬ ಈಗೋ…! ಆದರೆ ಇವರಿಬ್ಬರ ಈಗೋವನ್ನು ಸೋಲಿಸೋದು ಮಾತ್ರ ಕೊನೆಗೆ ಮಾನವೀಯತೆಯೇ. ಬಾಡಿಗೆ ಮನೆಗಳಲ್ಲಿ ಸಾಮಾನ್ಯವಾಗಿ ಇರುವ, ಪಾರ್ಕಿಂಗ್ ಸಮಸ್ಯೆಯ ಸಣ್ಣ ಪ್ಲಾಟ್ ಇಟ್ಟುಕೊಂಡೂ, ಕೂತು ನೋಡಿಸಿಕೊಂಡು ಹೋಗುವ ಈ ಚಿತ್ರದ ನಿರ್ದೇಶಕ ರಾಮ ಕುಮಾರ್ ಬಾಲಕೃಷ್ಣನ್ ನಿಜಕ್ಕೂ ಅಭಿನಂದನಾರ್ಹರು. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ ಎನ್ನುವುದೂ ವಿಶೇಷ.
ಅನುರಾಗ್ ಗೌಡ
ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿ
ಎಸ್.ಡಿ.ಎಂ. ಕಾಲೇಜು, ಉಜಿರೆ.