ಅಭಿವೃದ್ಧಿ ಎಂಬ ಕಿರೀಟ ಧರಿಸಿದ ಹೈವೇ ಹಿಂದಿನ ಕಥನ | ನೈದಿಲೆ ಶೇಷೇಗೌಡ
ಈಗೆಲ್ಲಾ ಹುಬ್ಬೇರಿಸಿ ನಿಬ್ಬೆರಗಾಗಿಸುವ ರಹದಾರಿಗಳಿಗೆ ಕೊಂಚವೇನಿಲ್ಲ. ಅನಂತವನ್ನು ಮೀರುವಂತ ಹೆದ್ದಾರಿಗಳು, ಬಳ್ಳಿಯನ್ನು ನಾಚಿಸುವ ತಿರುವುಗಳು, ನಮ್ಮೆಲ್ಲರನ್ನು ಸುತ್ತುವರಿದಿವೆ. ಕೆಲವೊಮ್ಮೆ ರಸ್ತೆ ಅಗಲೀಕರಣ ಹೆದ್ದಾರಿ ಯೋಜನೆಗಳಿಗೆ ಜೀವ ತೆರುವ ಮರಗಳನ್ನು ನೋಡಿದ್ರೆ ದಾರಿ ಚಿಕ್ಕದಿದ್ರು ಏನಾಗುತ್ತಿತ್ತು?? ಅನ್ನೋ ನಾವು ಕಾರಲ್ಲಿ ಜಮ್ ಅಂತ ಹೊರಟಾಗ ಟೂ ವೇ ಮಾಡಿದ್ರೆ ಒಳ್ಳೆದಿತ್ತು ಅಂತ ಸಿಡುಕೋದು ಉಂಟು.
ಹಾಗಿದ್ರೆ ಉರುಳಿರುವ ಮರಗಳಿಗೆ ಹೊಣೆ ಯಾರು? ಮರ ಹೆದ್ದಾರಿ ಎಂದಾಗಲೆಲ್ಲಾ ಪದವಿ ದಿನಗಳು ನೆನಪಾಗ್ತವೆ. ನನ್ನ ಪದವಿ ದಿನಗಳು ಹಾಗೂ ಆ ಹೆದ್ದಾರಿ ನಿರ್ಮಾಣ ಸಮಕಾಲೀನವಾದವು. ಅವೆರಡೂ ಹುಟ್ಟಿದ್ದು ಒಟ್ಟಿಗೆ, ಬೆಳೆದದ್ದು ಒಟ್ಟಿಗೆ. ಈಗ ನಾನು ಅದೇ ಹೆದ್ದಾರಿ ಹಿಡಿದು ಹೊರಟಿದ್ದೇನೆ. ಅದನ್ನು ಅಲ್ಲೇ ಇದೆ! ಇಲ್ಲ, ಇಲ್ಲಿಗೂ ಬಂದಿದೆ ನನ್ನೊಡನೆ ಸಹ ಪ್ರಯಾಣ ಮಾಡುತ್ತಾ.
ನನ್ನ ಪದವಿ ಮುಗಿಯುವ ಹೊತ್ತಿಗೆ ಹೆದ್ದಾರಿಯೂ ಎದ್ದು ನಿಂತಿತ್ತು? ಅಲ್ಲ ಹಾಸಿ ಮಲಗಿತ್ತು. ಕರೋನ ಕಿತಾಪತಿಯಿಂದಾಗಿ ಬರೋಬ್ಬರಿ ನಾಲ್ಕು ವರ್ಷವೇ ಹಿಡಿಯಿತು. ಹೆದ್ದಾರಿಯ ಆ ತುದಿಯಿಂದ ಈ ದಡ ಸೇರುವಾಗಲೆಲ್ಲ, ಅಲ್ಲೆಲ್ಲ ನಡೆದಾಡುವಾಗಲೆಲ್ಲಾ, ಅಲ್ಲಿದ್ದ ಅತ್ತಿಮರಗಳು, ಮರದ ಕೆಳಗೆ ಕ್ರಾಪು ತೆಗೆದು ಗುಟ್ಕಾ ಹಾಕಿ ಹಲ್ಲುಕಟ್ಟೆ ಹಿಡಿದ ಗೋಲ್ಗಪ್ಪ ಹುಡುಗನ ಮುಖ ನೆನಪಾಗ್ತವೆ. “ಇನ್ನೊಂದು ಪ್ಲೇಟ್” ಅನ್ನೋ ಆ ಏಕ ಮಾತ್ರ ಪದ ಜ್ಞಾನಿ ಕನ್ನಡಿಗನ ಆ ವಾಕ್ಯ ಬರಿಯ ಶಬ್ದ ಗ್ರಹಿಕೆಯಿಂದ ಆತ ಪ್ರಶ್ನಿಸುತ್ತಿದ್ದಾನೆ ಎಂಬುದನ್ನು ಮನಗಣಲು ಸಾಧ್ಯವಿರಲಿಲ್ಲ.
ಈಗೆಲ್ಲ ಬದಲಾಗಿದೆ. ಹತ್ತಿ ಮರವಿಲ್ಲ, ಮರದ ನೆರಳಿಲ್ಲ, ನೆರಳಿನಲ್ಲಿ ಹೀರುವ ಪಾನಿಯಸ್ವಾದವು ಮೊದಲಿನಂತಿಲ್ಲ. ಆದರೆ ಆ ಹುಡುಗ ಇನ್ನೂ ಅಲ್ಲೇ ಇದ್ದಾನೆ. ಅದೇ ಕ್ರಾಪು ತೆಗೆದು ಬಾಚಿದ ತಲೆ. ಒಂಚೂರು ಅಭಿವೃದ್ಧಿ ಕಿವಿಗೊಂದು ಬ್ಲೂಟೂತ್, ಅವನ ಕೆಂಪು ತೂತ್ ಏನು ಮಾಸಿಲ್ಲ. ದೊಡ್ಡ ಛತ್ರಿ ಇದೆ ಈಗ. ಎಲ್ಲಿಯ ಹೋಲಿಕೆ ಅತ್ತಿಮರದ ನೆರಳೆಲ್ಲಿ? ಇಷ್ಟಗಲ ಛತ್ರಿಯ ನೆರಳೆಲ್ಲಿ? ಬದಲಾವಣೆಯ ಪಟ್ಟಿಯಲ್ಲಿ ಮತ್ತೊಂದು ಸೇರ್ಪಡೆ ಆ ಹುಡುಗ ಈಗ ತ್ರಿವಾಕ್ಯ ಕನ್ನಡಿಗ ಆತನು ಬದಲಾಗಿದ್ದಾನೆ ರಸ್ತೆ ನಿರ್ಮಾಣದ ಧೂಳು ಕುಡಿದು ಇರಬೇಕು. ನಾನು ಆಗಾಗ ಅರೆಬರೆ ಹಿಂದಿಯಲ್ಲಿ ಆದ ಕನ್ನಡ ಕಲಿಯಬೇಕೆಂದು ಅರ್ಥ ಮಾಡಿಸಿದ ಒಂದೆರಡು ದಿನಗಳ ನಂತರ “ಇನ್ನೊಂದು ಪ್ಲೇಟ್ ಬೇಕಾ” ಎಂದಿದ್ದ ಹೀಗೆ ಬೀಸ್ ಇಂದ ಇಪ್ಪತ್ತು, ಟೀಕಾ ಇಂದ ಕಾರಬೇಕಾ? ಇದಿಷ್ಟು ಅವನ ವಲಯದ ಕನ್ನಡ ಅಭಿವೃದ್ಧಿ.
ದಾರಿ ಹಿಡಿದು ಸಾಗಿದಂತೆಲ್ಲ ಆ ದಾರಿ ಮತ್ತೊಂದು ದಾರಿ ತೋರುತ್ತದೆ ಅನ್ನೋ ಹಾಗೆ ಮತ್ತೋರ್ವ ದಾರಿ ಬದಿ ವ್ಯಾಪಾರಿಯ ಕಥಾಪ್ರವೇಶ ಹೆಸರೆಲ್ಲ ಗೊತ್ತಿಲ್ಲ, ಕೊಂಕಣಿಯವರು, ಕಿಲೋಮೀಟರ್ ಗಟ್ಟಲೇ ದೂರದಲ್ಲಿ ಕೊಂಕಣಿಗಂಧ ಅರಿತಿದ್ದ ನಾನು ವ್ಯಾಪಾರಿ ದಂಪತಿಗಳು ಮಾತನಾಡುವಾಗ, ನೀವು ಮಾತಾಡಿದ್ದು ಕೊಂಕಣಿ ಅಲ್ವಾ? ಎಂದು ಕುತೂಹಲಕ್ಕೆ ಕೇಳಿಯೇ ಬಿಟ್ಟಿದ್ದೆ. “ಪರವಾಗಿಲ್ಲ ಕಂಡುಹಿಡಿದಿರಿ ಇಲ್ಲಿಯವರಿಗೆ ಅಷ್ಟು ಗೊತ್ತಿಲ್ಲ ನಮ್ಮ ಭಾಷೆ” ಅಂದಿದ್ದರು. ಹೆದ್ದಾರಿ ಅವರನ್ನು ಮರದ ನೆರಳಿಂದ ಹಳದಿ ಟಾರ್ಪಲ್‌ಗೆ ಹಿಂಬಡ್ತಿ ಜೊತೆಗೆ ದಿಕ್ಕು ತಿರುಗಿ ಎಡಬಲವಾಗಿದ್ದರು. “ನಮ್ ಜೀವನಾನ ಹೀಗೆ ಮಾಡ್ಬಿಟ್ರು, ನೆರಳಿಲ್ಲ ಅಂತ ಜನ ಬರಲ್ಲ” ಅನ್ನೋದು ವ್ಯಾಪಾರಿ ದಂಪತಿಗಳ ಕೊರಗಾಗಿತ್ತು.
ಹೀಗೊಂದು ದಿನ ಲೋಕಾರೂಢಿ ಮಾತಾಡ್ತಾ ಇರುವಾಗಲೇ ನೋಡು ನೋಡುತ್ತಾ ಕಣ್ಣು ಮುಂದೆ ಒಂದು ಹೈವೇ ಆಕ್ಸಿಡೆಂಟ್ ಆಗಿಹೋಯಿತು. ಹೆಚ್ಚೇನು ಸಾವಿನೋವುಗಳಿಲ್ಲ, ಆದರೆ ಲಾರಿಯಿಂದ ಗುದ್ದಿಸಿಕೊಂಡ ಆಪೇ ಗಾಡಿ ಪಲ್ಟಿಯಾಗಿ ವಿಭಜಕದ ಮಧ್ಯೆ ತೂಕ ತೂಗುತ್ತಿತ್ತು. “ಅಯ್ಯೋ ಇದೇನ್ ಬಿಡಿ ಮೊನ್ನೆ ಒಬ್ಬ ಸ್ಪಾಟ್ ಡೆತ್, ಇಂತವು ಸುಮಾರು ಈ ಹೈವೇ ಆದ್ಮೇಲೆ, ಅದೇ ಆ ಗೋಲ್ಗಪ್ಪ ಹುಡುಗ, ಅದೋ ರಕ್ತದ ಕಲೆ ಇನ್ನೂ ಮಾಸಿಲ್ಲ” ಎಂದು ಹೆದ್ದಾರಿಯತ್ತ ಬೆರಳು ಮಾಡಿ ತೋರುವಾಗ ಸಿಡಿಲೆರಗಿದಂತಾಯ್ತು! ಪೇಟೆ ಪಟ್ಟಣಗಳಿಗೆ ದಾರಿ ತೋರೋ ಹೆದ್ದಾರಿ ಜೀವನವನ್ನು ದಿಕ್ಕೆಡಿಸಿ, ಏನ್ನನ್ನೂ ಅರಿಯದಂತೆ ಅಂಗಾತ ಮಲಗಿತ್ತು, ಅಭಿವೃದ್ಧಿ ಎಂಬ ಕಿರೀಟ ಧರಿಸಿ.
ನೈದಿಲೆ ಶೇಷೇಗೌಡ
ಎಸ್.ಡಿ.ಎಂ. ಕಾಲೇಜು, ಉಜಿರೆ