Back To Top

 ನೆಲದ ಶ್ರೇಷ್ಠತೆಯನ್ನು ಹೃದಯದಲ್ಲಿ ಅಚ್ಚಾಗಿಸುವ ಕಥಾಗತ | ವಂದನಾ ಹೆಗಡೆ

ನೆಲದ ಶ್ರೇಷ್ಠತೆಯನ್ನು ಹೃದಯದಲ್ಲಿ ಅಚ್ಚಾಗಿಸುವ ಕಥಾಗತ | ವಂದನಾ ಹೆಗಡೆ

ರೀಕ್ಷೆ ಮುಗಿದ ತಕ್ಷಣವೇ ಓದಬೇಕು ಎಂದು ಪಟ್ಟಿ ಮಾಡಿಟ್ಟುಕೊಂಡಿದ್ದ ಪುಸ್ತಕಗಳಲ್ಲಿ ಮೊದಲ ಹೆಸರು ಕಥಾಗತದ್ದೇ ಇತ್ತು. ಈ ಹೊತ್ತಿಗೆಯನ್ನು ಓದಿ ಮುಗಿಸುವ ಹೊತ್ತಿಗೆ ಮೈಮನವನ್ನೆಲ್ಲಾ ಅದ್ಯಾವುದೋ ಅವ್ಯಕ್ತ ಭಾವ ಆವರಿಸಿಕೊಂಡು ಬಿಟ್ಟಿತ್ತು. ಮೆಲುವಾದ ಕೇಸರಿ ರಂಗನ್ನು ಚೆಲ್ಲುತ್ತಾ ಸಂಧ್ಯೆ ತಾಂ ಬಿತ್ತರದಾಗಸವನ್ನು ಆವರಿಸಿಕೊಳ್ಳುತ್ತದಲ್ಲಾ ಹಾಗೆಯೇ…

‘ಕಥೆಗೆ ಅರಳದ ಭಾರತೀಯ ಮನಸ್ಸುಂಟೆ?’ ಎಂದು ನವೀನರು ಒಂದು ಕಡೆ ಹೇಳುತ್ತಾರಲ್ಲ, ಅವರದೇ ಶೈಲಿಯಲ್ಲಿ, ‘ನನ್ನಬ್ಬೆಯ ವೈಭವದ ಕಥೆಯನ್ನು ಇಷ್ಟು ಚಂದದಲ್ಲಿ ಹೇಳಿದರೆ ಅರಳದ ಮನಸ್ಸುಂಟೆ’ ಎಂದು ಕೇಳಬೇಕಷ್ಟೇ. ಕಮಲವು ಒಂದೊಂದೆ ಪಕಳೆಗಳನ್ನು ತೆರೆಯುತ್ತಾ ತನ್ನ ಹೃದಯ ಸ್ಥಾನವನ್ನು ಸೂರ್ಯನಿಗೆ ಸಮರ್ಪಿಸುತ್ತದಲ್ಲ, ಹಾಗೆಯೇ ಒಂದೊಂದೆ ಪುಟವನ್ನು ಒಂದೊಂದೆ ಕಥೆಯನ್ನು ಓದುತ್ತಾ ಹೋದಂತೆ ಹೃದಯವು ಅರಳಿ ಭಾರತವೆಂಬ ಮಹಾಪುರುಷನ ಅಮಿತ ತೇಜಸ್ಸಿನಲ್ಲಿ ಒಂದಾಗುತ್ತದೆಯಷ್ಟೇ.

ನಿಜ, ಕಥೆಯೆಂಬ ವಸ್ತುವನ್ನು ತೆಗೆದು ಬಿಟ್ಟರೆ ಭಾರತವೆಂಬ ಸಶಕ್ತ ಹರಿವಿಗೆ ಜೀವವೇ ಇಲ್ಲದಂತಾಗುತ್ತದೆ. ಗತವನ್ನು ಪ್ರಸ್ತುತಕ್ಕೆ ಬೆಸೆದು ಭವಿತವ್ಯದ ಒಳನೋಟಗಳನ್ನು ನಮ್ಮಿದಿರು ತೆರೆದಿಡುವ ವಸ್ತುವೆಂದರೆ ಕಥೆಯೇ. ಕೇವಲ ಅಂಕಿ-ಅಂಶಗಳಲ್ಲಿಯೇ ಇತಿಹಾಸವನ್ನು ಕಟ್ಟಿ ಹಾಕಿ ಮಕ್ಕಳ ತಲೆಗೆ ಹೊರೆಯಾಗುವ ಪಠ್ಯಪುಸ್ತಕಗಳ ಪಾಠಗಳಂತಲ್ಲ ಕಥೆಗಳೆಂದರೆ, ಕಥೆಗಳು ಬಹಳಷ್ಟನ್ನು ಕಲಿಸುತ್ತವೆ!

ಒಮ್ಮೆ ಯೋಚಿಸಿ, ಕಥೆಗಳ ಮೂಲಕವಲ್ಲದಿದ್ದರೆ ರಾಮ, ಕೃಷ್ಣರಂತಹ ಮಹಾನ್ ಆದರ್ಶಗಳು ಇಂದಿಗೂ ನಮ್ಮ ಜೀವನಾಡಿಯಲ್ಲಿ ಹರಿಯುತ್ತಿದ್ದವೇ, ಮನೆ ಮನೆಯ ಹಾಡಲ್ಲಿ ಹಾಸುಹೊಕ್ಕಾಗಿರುತ್ತಿದ್ದವೆ? ವಾಲ್ಮೀಕಿ, ವ್ಯಾಸರು ರಾಮಾಯಣ, ಮಹಾಭಾರತ ಭಾಗವತಾದಿಗಳಿಂದ ಸಾರಿದ ಮೌಲ್ಯಗಳು ಜನಮಾನಸದಲ್ಲಿ ನೆಲೆಯೂರಿ ಹಸಿರಾಗಿರಲು ಕಾರಣವೇ ಅಲ್ಲಿ ಕಂಡು ಬರುವಂತಹ ಕಥೆಗಳ ಸಾರ್ವಕಾಲಿಕ ಸೌಂದರ್ಯ ಮತ್ತು ಕಾಲಪ್ರವಾಹದಲ್ಲಿ ಒಂದಿನಿತೂ ಅಲುಗಾಡದೆ ನಿಂತು ನೀತಿ ಹಂಚುವ ಸಾಮರ್ಥ್ಯವಿರುವ ಕಥಾಹಂದರಗಳ ವೈಶಿಷ್ಟ್ಯ. ಸಾಹಿತ್ಯದಲ್ಲಿ ರಸಾಸ್ವಾದನೆ ಅವಿಭಾಜ್ಯ ಅಂಗ ಅದನ್ನು ಅಮಿತವಾಗಿ ಪೂರೈಸುವ ಸಾಹಿತ್ಯ ಪ್ರಕಾರಗಳಲ್ಲಿ ಕಥೆಗಳದ್ದು ಬಹುಮುಖ್ಯ ಪಾತ್ರವೇ ಹೌದು.

ಎಲ್ಲಕ್ಕಿಂತ ಮುಖ್ಯವಾಗಿ ಆದರ್ಶಗಳಿಗೆ ವಾಸ್ತವತೆಯ ಬೆಳಕನ್ನು ಬೀರುವುದು ಕಥೆಗಳು ಮಾತ್ರ. ಇಲ್ಲವೆಂದರೆ ‘ಅವಾಸ್ತವವಾದದ್ದು ಆದರ್ಶ ಹೇಗಾದೀತು’ ಹೇಳಿ! ಕಲ್ಪನೆಯ ವಿಹಾರದಲ್ಲಿ ವಾಸ್ತವದ ಅರಿವು ಮರೆಯಾದರೆ ಜೀವನ ಅನರ್ಥಕ್ಕೀಡಾಗುತ್ತಾದಷ್ಟೆ, ಅವುಗಳನ್ನು ಸಮನಾದ ಹದದಲ್ಲಿ ಬೆರೆಸಿ ಓದುಗನಿಗೆ ಉಣಬಡಿಸಿ ನಿತ್ಯವೂ ಮುದವೀವ ಮಹತ್ತಾದ ಮಹತಿ ಕಥೆಗಳದ್ದು!

ಗತವನ್ನು ಕಥೆಯ ಮೂಲಕ ಹಂಚುವ ಈ ಪ್ರಯತ್ನ ನನ್ನ ಭಾವಕೋಶದ ಪ್ರತೀ ಪುಟದಲ್ಲೂ ಅಚ್ಚೊತ್ತಿದ್ದು ಸುಳ್ಳಲ್ಲ. ಕಥಾವಸ್ತುವಿನಲ್ಲಿ, ಅಲ್ಲಿ ಬರುವ ಪಾತ್ರಗಳಲ್ಲಿ, ಅವು ಸಾರುವ ಜೀವನದರ್ಶನದಲ್ಲಿ ನಮ್ಮ ಚಿಂತನೆಯ ಅಥವಾ ಭಾವಗಳ ಪ್ರತಿಬಿಂಬವನ್ನು ಕಾಣುತ್ತೇವಲ್ಲ ಆ ಕಥೆಗಳು ಹೃದಯಕ್ಕೆ ಹತ್ತಿರವಾಗುತ್ತದೆ. ಕಥಾಗತ ನನಗೆ ಆಪ್ತವೆನಿಸಿದ್ದು ಹಾಗೆಯೇ!

ಅವಂತಿರಲಿ.. “ಪರ್ವತವನ್ನೇರಿ ನೋಡುತ್ತಿದ್ದರೆ ರಕ್ತವೂ ಹಸಿರಾಗಿಬಿಡಬಹುದಾದಷ್ಟು ಗಾಢವಾದ ಕಾಡು” ಎಂಬಲ್ಲಿಗೆ ನಾನು ಸಂಪೂರ್ಣ ಬೆರಗಾದೆ, ಅದೆಷ್ಟು ಚಂದದ ಸಾಲು! ಮಲೆನಾಡಲ್ಲಿ ಹುಟ್ಟಿ ಬೆಳೆದು ನಲಿದು ಬಾಳಿದ ನನ್ನಂತವರಿಗೆಲ್ಲ ಹಸಿರೆಂದರೆ ಕಸುವು, ಒಲವು, ಬಾಲ್ಯ, ಬದುಕು ಎಲ್ಲವೂ ಕೂಡ. ಹಾಗಾಗಿ ಹುಟ್ಟಿನಿಂದ ರಕ್ತದಲ್ಲಿಯೇ ಮಲೆನಾಡ ಹಸಿರ ರಂಗಿನ ಬೆಸುಗೆಯಿರುವ ನಮಗೆ ಈ ಸಾಲು ಮನವ ಗೆದ್ದಿದ್ದರಲ್ಲಿ ಅಚ್ಚರಿಯೇನಿಲ್ಲ.. ಅಂತೆಯೇ ‘ನೆನೆವುದೆನ್ನ ಮನಂ’ ಕಥೆ!

ಇಂದಿಗೂ ಕದಂಬರು, ಬನವಾಸಿ ಎಂದ ತಕ್ಷಣ ಹೃದಯ ಜೋರಾಗಿ ಬಡಿದುಕೊಳ್ಳುತ್ತದೆ, ಹೆಮ್ಮೆಯಿಂದ! ಕಥಾಗತವನ್ನು ಓದಿ ಮುಗಿಸಿದ ಒಂದು ತಿಂಗಳಿಗೆ ಬನವಾಸಿಗೆ ತೆರಳುವ ಸದವಕಾಶವೂ ಒದಗಿತು. ಕನ್ನಡದ ನೆಲದಲ್ಲಿ ಕನ್ನಡದವರೇ ಕನ್ನಡದಲ್ಲಿ ಆಳಿದ ಕನ್ನಡ ಮಣ್ಣಿನ ಮೊದಲ ರಾಜಧಾನಿ, ಬ್ರಹ್ಮ ತೇಜಸ್ಸು ಮತ್ತು ಕ್ಷಾತ್ರ ಶಕ್ತಿಯ ಸಮನ್ವಯಕ್ಕೆ ಸಾಕ್ಷಿಯಾಗಿ ನಿಂತ ನೆಲದಲ್ಲಿ ಓಡಾಡುವಾಗ ಆಗಿನ ವೈಭವ ಹಾಗೂ ಇಂದಿನ ಸ್ಥಿತಿಯನ್ನು ನೆನೆದು ಮೂಕಳಾಗಿದ್ದೂ ಸುಳ್ಳಲ್ಲ.

ಬನವಾಸಿಯ ಮಧುಕೇಶ್ವರ ದೇವಾಲಯ

ಮಧುಕೇಶ್ವರನ ನಂದಿಯ ಪಕ್ಕದಲ್ಲಿ ಕುಳಿತಾಗ ‘ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂಬ ಪಂಪನ ಉಕ್ತಿಯೇ ತಲೆಯಲ್ಲಿ ಅನುರಣಿಸುತ್ತಿದ್ದದ್ದು ಮಾತ್ರ ದಿಟವಷ್ಟೆ.. ಅಹುದು, ಅಂತಹ ನೆಲವನ್ನು ನೆನೆಯದಿರುವು ಪರಿಯೆಂತು!?

ನಂತರದ ಕಥೆಯಲ್ಲಿ ಬರುವ, “ಒಬ್ಬ ಸಂಶೋಧಕನಿಗೆ ಅಭಿಪ್ರಾಯಕ್ಕಿಂತ ಫ್ಯಾಕ್ಟ್‌ಗಳು ಮುಖ್ಯವಾಗಬೇಕು, ಅಭಿಮಾನಕ್ಕಿಂತ ವಾಸ್ತವ ಮುಖ್ಯವಾಗಬೇಕು” ಎನ್ನುವ ಮಾತಿದೆಯಲ್ಲ, ಅದು ನನ್ನ ಅದೆಷ್ಟೋ ಅಧ್ಯಯನಗಳಲ್ಲಿ ಇನ್ಸ್ಪಿರೇಷನ್ ಆಗಿ ನಿಂತಿದೆ. ರಿಸರ್ಚ್ ಅನ್ನೋದು ಅಷ್ಟು ಸುಲಭವಲ್ಲ, ಆ ದಾರಿಯಲ್ಲಿ ನಡೆಯುವಾಗ ನಮ್ಮ ಅಭಿಮಾನಕ್ಕೆ, ಅಹಂಗೆ, ಸ್ವಂತವೇ ಆಗಿದ್ದ ಅಭಿಪ್ರಾಯಗಳಿಗೆ ಕೆಲವೊಮ್ಮೆ ಪೆಟ್ಟು ಬೀಳುವುದುಂಟು. ಅದನ್ನೆಲ್ಲ ಸ್ವೀಕರಿಸಿ ಅಪ್ಪಿ ಒಪ್ಪಿ ಮುನ್ನೆಡೆವವನು ವಸ್ತುವಿಗೆ, ಸತ್ಯಕ್ಕೆ ಹತ್ತಿರವಾಗುತ್ತಾನೆ.

we are entitled to have our own views, but not the facts ಎನ್ನುವುದು ಈ ಕಥೆಯಲ್ಲಿ ಸ್ಫುಟವಾಗಿ ವ್ಯಕ್ತವಾಗಿದೆ. ಇಪ್ಪತ್ತು ಮೂವತ್ತು ರಿಸೌರ್ಸ್ ಗಳನ್ನು ಪರಿಶೀಲಿಸಿ ಅದರಿಂದ ಒಂದೆರಡು ಸಾಲನ್ನು ನಮ್ಮ ಬುದ್ಧಿ, ಚಿಂತನೆ ಹಾಗೂ ಕೌಶಲ್ಯಗಳನ್ನು ಉಪಯೋಗಿಸಿ ಬರೆಯುವುದು ರಿಸರ್ಚ್ ಎಂದು ನಮ್ಮ ಅಧ್ಯಾಪಕರು ಆಗಾಗ ಹೇಳುತ್ತಿದ್ದದ್ದು ನೆನಪಿಗೆ ಬಂತು. ಈ ಪುಸ್ತಕದಲ್ಲಿ ವ್ಯಕ್ತವಾದ ವಿಷಯಗಳ ಆಳ, ನೈಜತೆ ಮತ್ತು ಭಾವಗಳನ್ನು ಓದಿ.. ಎಲ್ಲಾ ಕಥೆಗಳಲ್ಲೂ ಲೇಖಕರ ಸಂಶೋಧನೆಯ ಪ್ರಖರತೆ ಸಹಜವಾಗಿಯೇ ವ್ಯಕ್ತವಾಗುತ್ತದೆ.

ಆಪ್ತವಾದ ಕಥೆ ಮಾತೆ ಮಾಗಧಿ, ಆಕೆಯ ಮಡಿಲ ನಲಂದ: ಭೈರಪ್ಪನವರ ಸಾರ್ಥದಲ್ಲಿ ನಲಂದಾ ವಿಶ್ವವಿದ್ಯಾಲಯದ ವಿವರಣೆ ಬರುತ್ತದಲ್ಲ, ಅಷ್ಟೇ ಚಂದದ ವರ್ಣನೆ ಇಲ್ಲಿಯೂ ಕಂಡು ಬರುತ್ತದೆ. ಆರ್ಯಭಟ ಶೀಲಭದ್ರಾಚಾರ್ಯರಂತಹ ಮಹಾನ್ ಮೇಧಾವಿಗಳನ್ನು, ಅಸಂಖ್ಯ ಜಿಜ್ಞಾಸುಗಳನ್ನು ಸಲಹಿದ ಮಾತೃಹೃದಯ ಅವಳದ್ದು.

ನಲಂದ ವಿಶ್ವವಿದ್ಯಾಲಯದ ಒಂದು ನೋಟ

ಮತಾಂಧ ಪಿಶಾಚಿಗಳು ತೊಂಬತ್ತು ಲಕ್ಷ ಹೊತ್ತಿಗೆಗಳನ್ನು ದಹಿಸಿದ್ದನ್ನು ನೆನೆದಾಗ ಮಾಗಧಿ ಒಮ್ಮೆ ಬಿಕ್ಕುತ್ತಾಳಲ್ಲ, ಆಗ ಅವಳೊಂದಿಗೆ ನಾನೂ ಅತ್ತಿದ್ದೇನೆ. ಸಾಧ್ಯವಾದರೆ ಅವಳನ್ನೊಮ್ಮೆ ಅಪ್ಪಿ ಅಮ್ಮಾ ನಾವಿದ್ದೇವೆ ಎಂದು ಹೇಳುವ ಮನಸ್ಸಾದರೂ, ಆಕೆಯ ದುಃಖಕ್ಕೆ ಅದ್ಯಾವ ಉತ್ತರವೂ ನಮ್ಮಲ್ಲಿಲ್ಲ. ನಾವು ಕೇವಲ ಮೂಕರು ಎಂದೆನಿಸಿ ಹೃದಯ ಕಂಬನಿ ಸುರಿಸುತ್ತದೆ. ಗ್ರಂಥಾಲಯಗಳನ್ನು ನಾಶ ಮಾಡಿದ್ದೇನೋ ಹೌದು, ಅದರ ಜೊತೆಗೆ ಅದೆಷ್ಟು ಪ್ರಯೋಗಾಲಯಗಳು, ವಿಜ್ಞಾನದ ವರದಿಗಳು ನಾಶವಾಗಿರಬಹುದು ಎಂದು ಒಮ್ಮೆ ಚಿಂತಿಸಿಯೇ ನಾನು ಕುಸಿಯುತ್ತೇನೆ, ವಿಜ್ಞಾನದ ವಿದ್ಯಾರ್ಥಿಯಾಗಿ ನನಗದು ಅರಗಿಸಿಕೊಳ್ಳಲಾಗದ್ದು.

ಕಾರಣ, ಖಗೋಳ ಶಾಸ್ತ್ರವಾಗಲಿ, ಆಯುರ್ವೇದವಾಗಲಿ ವಿಜ್ಞಾನದ ಯಾವುದೇ ಶಾಖೆಯಾಗಿರಲಿ, ಫಲಿತಾಂಶ ಸಿಗಬೇಕೆಂದರೆ ಅದರ ಹಿಂದೆ ಬಹಳ ವರ್ಷಗಳ ಕ್ರಮಬದ್ಧ ಹಾಗೂ ಅವಿರತಯತ್ನ ಬೇಕು. ಉದಾಹರಣೆಗೆ ಖಗೋಳವನ್ನೇ ತೆಗೆದುಕೊಳ್ಳಿ, ಆಗಸದಲ್ಲಿ ಜರುಗುವ ಯಾವುದೋ ಒಂದು ವಿದ್ಯಮಾನಕ್ಕೆ ಗಣಿತೀಯ ಪ್ರಮೇಯಗಳನ್ನು ಡಿರೈವ್ ಮಾಡುವ ಮೊದಲು ಆ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಎಷ್ಟೋ ವರ್ಷಗಳ celestial observation ಗಳ ನಿಖರವಾದ ವರದಿ ಅತಿಮುಖ್ಯವಾಗಿ ಬೇಕಾಗುತ್ತದೆ ಮತ್ತದಕ್ಕೆ ತಕ್ಕುದಾದ ಉಪಕರಣಗಳೂ ಸಹ. ಅವೆಲ್ಲ ಒಂದೆರಡು ವರ್ಷಗಳಲ್ಲಿ ತಯಾರಾಗುವ ಸರಕಲ್ಲ. ಒಮ್ಮೆ ಯೋಚಿಸಿ, ಆರ್ಯಭಟರಂತಹ ವಿಜ್ಞಾನಿಗಳು ನಲಂದೆಯಲ್ಲಿ ಇದ್ದರೆಂದರೆ ಅಲ್ಲಿನ ಪ್ರಯೋಗಾಲಯಗಳ ಹಾಗೂ ವೈಜ್ಞಾನಿಕ ಸಾಧನಗಳ ಗುಣಮಟ್ಟ ಹಾಗೂ ಔನ್ನತ್ಯ ಎಷ್ಟರ ಮಟ್ಟಿಗೆ ಇತ್ತೆಂದು!

“ಆನೋ ಭದ್ರಾ: ಕ್ರತವೋ ಯಂತು ವಿಶ್ವತಃ” ಎಂದು ಸಾರಿದ ವೈಶ್ವಿಕ ಧರ್ಮವೆಲ್ಲಿ, ತಮ್ಮದ್ದಲ್ಲವೆಂದು ಜ್ಞಾನರಾಶಿಗೆ ಬೆಂಕಿಯಿಡುವ ಪೈಶಾಚಿಕ ಮತವೆಲ್ಲಿ? It’s impossible to compare, ಹೋಲಿಕೆಗೆ ಒಂದಾದರೂ ಸಾಮ್ಯತೆ ಬೇಕಲ್ಲವೇ!?

ಅದೇನೇ ಇರಲಿ, ಪಿತಾಮಹ ಭೀಷ್ಮ ಶರಮಂಚದಲ್ಲಿ ಮಲಗಿದ್ದಾಗ ಅವರಲ್ಲಿದ್ದ ಜ್ಞಾನ, ರಾಜಧರ್ಮ ಪ್ರಾವೀಣ್ಯತೆ, ಅನುಭವಗಳು ನಷ್ಟವಾಗಬಾರದೆಂದು ಪಾಂಡವರನ್ನು ಅವರಲ್ಲಿಗೆ ಕರೆದೊಯ್ದ ಕೃಷ್ಣ ನಲಂದೆಯ ಗರ್ಭದ ಜ್ಞಾನಶಿಶುಗಳ ಹತ್ಯೆಗೆ ಅದೆಂದು ನ್ಯಾಯ ಕೊಡಿಸುತ್ತಾನೋ ಎಂದು ಕೇಳಿಕೊಳ್ಳುವಾಗ ಅನಿಸಿದ್ದಿಷ್ಟೆ, ಆಕೆಗೆ ನ್ಯಾಯ ಕೊಡಿಸುವ ಅವಕಾಶವನ್ನು ಹಾಗೂ ಶಕ್ತಿಯನ್ನು ಆತನಮಲ್ಲಿಯೇ ಇಟ್ಟಿದ್ದಾನೆ! ದೇಶಕ್ಕಾಗಿ ದುಡಿಯಬೇಕಷ್ಟೆ, ಅದರಿಂದಲೇ ಕರಾಳ ನಿನ್ನೆಗಳ ಕಹಿ ಸ್ವಲ್ಪವಾದರೂ ತಗ್ಗೀತು, ಕತ್ತಲೆ ಹರಿದು ಬೆಳಕು ಮೂಡೀತು!

ಹೀಗೆಯೇ ಒಂದೊಂದು ಕಥೆಯೂ ಭಾರತವನ್ನು ತುಂಬಿಕೊಂಡು ನಮ್ಮೆಡೆಗೂ ಅದನ್ನು ಹರಿಸುತ್ತಾ ಸಾಗುತ್ತವೆ. ಪ್ರತೀ ಕಥೆಯಲ್ಲಿಯೂ, ಪಾತ್ರಗಳಲ್ಲಿಯೂ ಈ ಮಣ್ಣಿನ ಸೊಗಡು ಎದ್ದು ತೋರುತ್ತದೆ. ಇದನ್ನು ಓದಿದ ನಂತರ ನಿಮಗೆ ಈ ನೆಲದ ಪ್ರತೀ ಕಲ್ಲಿನಲ್ಲೂ ಒಂದೊಂದು ಕಥೆ ಕೇಳಿಸುತ್ತದೆ. ಭಾಷಾಪ್ರಯೋಗದ ಸೊಬಗು, ವಸ್ತುವಿನ ಗಾಂಭೀರ್ಯ ಮತ್ತು ದಿಟ್ಟತನ ಈ ಹೊತ್ತಿಗೆಯನ್ನು ಗೆಲ್ಲಿಸಿವೆ ಎಂಬುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

ಸರಿಯಾಗಿ ಹೇಳಲ್ಪಟ್ಟರೆ, ಇತಿಹಾಸವೂ ವಿಜ್ಞಾನ, ಸಾಹಿತ್ಯ ಮತ್ತು ಕಲೆಗಳಂತೆಯೆ ರಸಮಯವಾಗಿ, ರೋಚಕವಾಗಿ, ರಂಜನೀಯವಾಗಿ ನಮ್ಮ ಮನದಲ್ಲಿ ಬೇರೂರಬಹುದು ಎಂಬುದಕ್ಕೆ ಈ ಪುಸ್ತಕವೇ ಸಾಕ್ಷಿ! ನವೀನರ ಅನೇಕ ಬರಹಗಳನ್ನು ಓದಿಕೊಂಡ ನಾನು ಅವರ ಲೇಖನಿಯ ಅನುಪಮ ಶೈಲಿಗೆ ಬೆರಗಾಗಬಾರದಿತ್ತು, ಆದರೆ ಬೆರಗಾಗದೆ ಬೇರೆ ವಿಧಿಯೇ ಇರಲಿಲ್ಲ.

I loved and lived every word! ಈ ಪುಸ್ತಕವನ್ನು ಹಾಗೂ ಅದು ಕಟ್ಟಿಕೊಟ್ಟ ನನ್ನ ನೆಲದ ಶ್ರೇಷ್ಠತೆಯನ್ನು ಹೃದಯದಲ್ಲಿ ಕೊನೆಯವರೆಗೂ ಕಾಪಿಡುವ ಪುಟ್ಟ ಭರವಸೆಯನ್ನಷ್ಟೇ ನಾನು ಕೊಡಬಲ್ಲೆ. ಇಂತಹ ಪುಸ್ತಕಗಳು ಮತ್ತೆ ಮತ್ತೆ ಮೂಡಿಬರಲಿ, ನವೀನರ ಮೇಲೆ ತಾಯಿ ಭಾರತಿಯ ಅಕ್ಕರೆ ಅನವರತವಿರಲಿ!

ವಂದನಾ ಹೆಗಡೆ
ಪ್ರಥಮ ಬಿ.ಎಸ್‌.ಸಿ.
ಪೂರ್ಣಪ್ರಜ್ಞ ಕಾಲೇಜು, ಉಡುಪಿ

 

Prev Post

ನಾನು ಮತ್ತೆ ಮಗುವಾಗಬೇಕು | ಶ್ರವಣ್ ನೀರಬಿದಿರೆ

Next Post

ಕೊಡೆಯ ಮರೆವಿಗೆ ಅಜ್ಜನೇ ಕಾರಣ | ಶ್ವೇತಾ ಶೆಟ್ಟಿ

post-bars

Leave a Comment

Related post