ಹಣೆಬರಹ ತಿಳಿದವರ್ಯಾರು! | ಸುಶ್ಮಿತಾ ಹೆಗ್ಡೆ
ಸೋಮನಹಳ್ಳಿ ಎಂಬ ಒಂದು ಚಿಕ್ಕ ಊರು. ಆ ಊರಿನ ಜನರು ಪರಸ್ಪರ ಹೊಂದಿಕೊಂಡು ಜೀವನ ನಡೆಸುತ್ತಿದ್ದರು. ಊರಿನ ಜನರ ನಡುವೆ ಎಷ್ಟು ಪ್ರೀತಿ, ವಿಶ್ವಾಸ ಎಂದರೆ ಏನೇ ಕಷ್ಟಗಳು ಎದುರಾದರೂ ಜೊತೆಗೆ ನಿಂತು ಪರಿಹರಿಸುತ್ತಿದ್ದರು. ದಿನಪೂರ್ತಿ ಎಷ್ಟೇ ಕೆಲಸದಲ್ಲಿ ತೊಡಗಿದ್ದರೂ ಸಹ ಸಂಜೆಯಾಗುತ್ತಿದ್ದಂತೆ ಒಂದು ಛತ್ರದಡಿ ಸೇರುತ್ತಿದ್ದರು.
ದೇವರಿಗೆ ಭಜನೆಯ ರೂಪದಲ್ಲಿ ವಂದನೆಯನ್ನು ಸಲ್ಲಿಸಿ ಎಲ್ಲರೂ ಸಹ ಒಂದೊಂದು ಸೃಜನಶೀಲ ಕೆಲಸದಲ್ಲಿ ತಮ್ಮನ್ನು ತಾವು ತೊಡಗಸಿಕೊಳ್ಳುತ್ತಿದ್ದರು. ಅವರ ನಡುವೆಯೇ ಒಬ್ಬಳು ಮುದುಕಿ ಇದ್ದಳು. ಅವಳ ಹೆಸರು ಲೀಲಾವತಿ. ಪೂರ್ಣವಾಗಿ ಬಿಳಿಯ ಬಣ್ಣಕ್ಕೆ ಬದಲಾದ ಕೂದಲು, ಮರುಗಟ್ಟಿದ ಚರ್ಮ, ಕಾಮನಬಿಲ್ಲಿನಂತೆ ಬಾಗಿದ ಸೊಂಟ, ನಡುಗುತ ತೊದಲುವ ಮಾತುಗಳು. ಎಷ್ಟೇ ವಯಸ್ಸಾದರೂ ಕಾಂತಿಯಿಂದ ಕೂಡಿರುವ ಕಣ್ಣುಗಳು, ತನ್ನ ಅದ್ಭುತ ಕಥೆಗಳಿಂದ ಎಲ್ಲರ ಗಮನ ಸೆಳೆಯುತ್ತಿದ್ದಳು.
ಅದೊಂದು ದಿನ ಊರಿನ ಜನರೆಲ್ಲರೂ ದೇವರ ಭಜನೆ ಮಾಡಿ, ತಮ್ಮ ಸೃಜನಶೀಲ ಕೆಲಸಗಳನ್ನು ಮುಗಿಸಿ ಮುದುಕಿಯ ಬಳಿ ಬಂದು ಒಂದು ಕಥೆ ಹೇಳುವಂತೆ ಕೇಳಿಕೊಂಡರು. ಮುದುಕಿ ಒಂದು ಲೋಟ ನೀರು ಕುಡಿದು ತನ್ನ ಗಂಟಲನ್ನು ಸರಿ ಮಾಡಿಕೊಳ್ಳುತ್ತಾ ಕಥೆಯನ್ನು ಪ್ರಾರಂಭಿಸಿದಳು.
ಒಂದೂರಲ್ಲಿ ಒಂದು ಚಿಕ್ಕ ಕುಟುಂಬವಿತ್ತು. ತಂದೆ-ತಾಯಿ ಹಾಗೂ ಅವರ ಪ್ರೀತಿಯ ಮಗಳು. ತಂದೆ ಸೋಮನಾಥ, ತಾಯಿ ಶಾರದಾ. ಅವರ ಮುದ್ದಿನ ಮಗಳೇ ಕಿಶೋರಿ; ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ತುಂಬಾ ಅನ್ಯೋನ್ಯತೆಯಿಂದ ಕೂಡಿದ್ದ ಸಂಸಾರ. ಕೃಷಿಯನ್ನು ಕಸುಬಾಗಿ ಸ್ವೀಕರಿಸಿದ್ದ ಕುಟುಂಬ. ಆರ್ಥಿಕ ಸ್ಥಿತಿ ಅಷ್ಟೇನು ಹಿತವಾಗಿ ಇಲ್ಲದಿದ್ದರೂ ಇರುವುದರಲ್ಲೇ ಖುಷಿಯಾಗಿ ಜೀವನ ಸಾಗಿಸುತ್ತಿದ್ದರು.
ಒಂದು ರವಿವಾರ ಮುಂಜಾನೆ ಪತ್ನಿ ಶಾರದಾ ಮಗಳ ಜೊತೆ ಸೋಮನಾಥನ ಎದುರಿಗೆ ಬಂದಳು. ಸೋಮನಾಥ ಯಾರದೋ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದುದ್ದರಿಂದ ಸುಮ್ಮನೆ ಹಾಗೆ ನಿಂತು ಬಿಟ್ಟರು. ಸ್ವಲ್ಪ ಹೊತ್ತಿನ ನಂತರ ಇವರನ್ನು ಗಮನಿಸಿದ ಸೋಮನಾಥ ಏನಾಯಿತೆಂದು ವಿಚಾರಿಸಲು ಶಾರದಾ ಇಂದು ಎಲ್ಲಾದರೂ ಊಟಕ್ಕೆ ಹೊರಗೆ ಹೋಗಲು ಕಿಶು ಕೇಳುತ್ತಿದ್ದಾಳೆ ಹೋಗೋಣವೇ ಎಂದು ಕೇಳಿದಳು. ಅಪರೂಪಕ್ಕೆ ಹೆಂಡತಿ ಹಾಗೂ ಮಗಳು ಏನೋ ಕೇಳುತ್ತಿದ್ದಾರಲ್ಲಾ ಎಂದು ಸೋಮನಾಥ ಮರು ಯೋಚಿಸದೇ ಹು ಎಂದು ಬಿಟ್ಟನು.
ಮಧ್ಯಾಹ್ನ ಸುಮಾರು ಹನ್ನೆರಡು ಗಂಟೆಗೆ ಮೂವರು ತಯಾರಾಗಿ ಹೊರಟರು. ಮಧ್ಯವರ್ಗದ ಕುಟುಂಬ. ಸಾಲ-ಶೂಲ ಮಾಡಿ ವ್ಯವಹಾರದ ಸಲುವಾಗಿ ಸೋಮನಾಥ ಒಂದು ಪುಟ್ಟ ದ್ವಿಚಕ್ರ ವಾಹನವನ್ನು ಖರೀದಿಸಿದ್ದನು. ಆ ಗಾಡಿಯ ಮೇಲೆ ಮೂವರೂ ಹೊರಟರು. ಹೋಗುವಾಗ ಮಧ್ಯ ದಾರಿಯಲ್ಲಿ ಒಂದು ಫೋನ್ ಬಂದ ಕಾರಣ ಸೋಮನಾಥ ಗಾಡಿಯನ್ನು ಒಂದು ಬದಿಯಲ್ಲಿ ಹಾಕಿದನು. ಮಗಳ ವಿದ್ಯಾಭ್ಯಾಸಕ್ಕೆ ಹಾಗೂ ಮನೆಯ ಖರ್ಚಿಗೆಂದು ಸಾಲ ಮಾಡಿದ್ದನು.
ಅದೇ ಕಾರಣದಿಂದ ಅವತ್ತು ಸಾಲ ಕೊಟ್ಟವರು ಹಣ ಕೇಳಲು ಪದೇ ಪದೇ ಫೋನು ಮಾಡುತ್ತಿದ್ದರು. ಇವನು ಫೋನಿನಲ್ಲಿ ಮಾತನಾಡುತ್ತಿರಲು ಮಗಳು ಕಿಶೋರಿ ಅದೇ ಸಮಯಕ್ಕೆ ಸರಿಯಾಗಿ ಹಸಿವು ಎಂದು ಅಳತೊಡಗಿದಳು. ಏನು ಮಾಡಬೇಕೆಂದು ತೋಚದೆ ಶಾರದಾ ಸುತ್ತಲೂ ನೋಡಿದಾಗ ಅಲ್ಲೇ ಸ್ವಲ್ಪ ದೂರದಲ್ಲಿ ರಸ್ತೆಯ ಮತ್ತೊಂದು ಬದಿಯಲ್ಲಿ ಒಬ್ಬ ಎಳೆನೀರು ಇಟ್ಟುಕೊಂಡು ಕೂತಿರುವುದು ಹಾಗೂ ಅದರ ಪಕ್ಕದಲ್ಲಿ ಒಂದು ಅಂಗಡಿ ಇರುವುದು ಕಾಣಿಸಿತು. ತಕ್ಷಣ ಅವಳು ಸೋಮನಾಥನನ್ನು ಕರೆದು ಕೈ ಸನ್ನೆಯಲ್ಲೇ ತಾವು ಅಲ್ಲಿಗೆ ಹೋಗಿತಿರುವುದಾಗಿ ತಿಳಿಸಿದಳು.
ಇಬ್ಬರು ರಸ್ತೆಯ ಒಂದು ಬದಿಯನ್ನು ದಾಟಿ ಮತ್ತೊಂದು ಬದಿಗೆ ಹೋದರು. ಮಟ ಮಟ ಮಧ್ಯಾಹ್ನ. ಆದ ಕಾರಣ ಶಾರದಾ ಹಾಗೂ ಕಿಶೋರಿ ಇಬ್ಬರೂ ಎಳೆನೀರು ಕುಡಿಯಲು ಮೊದಲು ಹೋದರು. ಕಿಶೋರಿ ಸ್ವಲ್ಪ ಕುಡಿದು ಸೇರದೇ ಬೇಡವೆಂದು ಅದನ್ನೂ ತಾಯಿಗೆ ಕೊಟ್ಟು ತಾನು ಪಕ್ಕದಲ್ಲಿದ್ದ ಅಂಗಡಿಗೆ ಹೋಗುತ್ತಾಳೆ. ಅದೇ ಸಮಯಕ್ಕೆ ಸರಿಯಾಗಿ ದೊಡ್ಡ ಲಾರಿಯೊಂದು ಬಂದು ಎಳೆನೀರಿನ ಗಾಡಿಗೆ ಗುದ್ದಿ ಎದುರಿಗೇ ಇದ್ದ ಶಾರದಾಳಿಗೆ ಗುದ್ದಿ ಹೋಯಿತು. ತಾಯಿಯನ್ನು ನೋಡಿದ ಮಗಳು ಅಲ್ಲಿಗೆ ಬರುವುದರಲ್ಲಿ ಕಲ್ಲು ತಾಕಿ ಎಡವಿ ಬಿದ್ದಳು.
ಅಷ್ಟರಲ್ಲಿ ಅದೇ ಲಾರಿ ಅವಳ ಕಾಲಿನ ಮೇಲೆ ಹಾದು ಹೋಯಿತು. ಇವುಗಳ ಯಾವುದರ ಅರಿವೇ ಇಲ್ಲದೆ ಫೋನಿನಲ್ಲಿ ಮಾತನಾಡುತ್ತಿರುವ ಸೋಮನಾಥ ನಿಧಾನವಾಗಿ ಮಾತು ಮುಗಿಸಿ ಈ ಕಡೆ ತಿರುಗಲು ಎಳೆನೀರಿನ ಗಾಡಿ ಇದ್ದ ಜಾಗದಲ್ಲಿ ಜನರು ಗುಂಪು ಸೇರಿರುವುದ ನೋಡಿ ಗಾಬರಿಯಿಂದ ಓಡಿ ಬರುತ್ತಾನೆ. ದಿಕ್ಕಾ ಪಾಲಾಗಿ ಬಿದ್ದ ಕಾಯಿಗಳನ್ನು ನೋಡುತ್ತಾ ಮುಂದೆ ಬರಲು ಧಾರಾಕಾರವಾಗಿ ತಲೆಯಿಂದ ರಕ್ತ ಸುರಿಯುತ್ತಿರುವ ಒಬ್ಬ ಮನುಷ್ಯ ಪಕ್ಕದಲ್ಲಿ ಇದ್ದ ಅಂಗಡಿಯ ಛಾವಣಿಯ ಮೇಲೆ ಬಿದ್ದಿರುವುದನ್ನ ಗಮನಿಸಿದ.
ಹಾಗೇ ಜನರನ್ನು ಸರಿಸಿ ಮುಂದೆ ಬರಲು ಒಂದು ಕ್ಷಣಕ್ಕೆ ಅವನ ಉಸಿರೇ ನಿಂತಂತಾಯಿತು. ಕಾಲುಗಳು ತಣ್ಣಗಾದವು. ಕೈಗಳು ನಡುಗ ತೊಡಗಿದವು. ಅರಿವಿಗೇ ಬಾರದೇ ಕಣ್ಣುಗಳಲ್ಲಿ ನೀರು ತುಂಬಿದವು. ಕಿವಿಗಳು ಮಂದವಾಯಿತು. ಜಗತ್ತು ನಿಶ್ಯಬ್ಧವಾದಂತೆ ಭಾಸವಾಯಿತು. ನೋಡಿದರೆ ಅವನ ಮುದ್ದಿನ ಮಡದಿ ಪೂರ್ತಿ ರಕ್ತಮಯವಾಗಿ ಗುರುತೇ ಸಿಗದಂತೆ ನರಳುತ್ತಾ ಮಲಗಿದ್ದಳು. ಅವನ ಮಗಳು ಸ್ವಲ್ಪ ದೂರದಲ್ಲಿ ಜ್ಞಾನ ತಪ್ಪಿ ಬಿದ್ದಿರುವುದನ್ನ ಗಮನಿಸಿದನು.
ಕಾಲುಗಳಿಂದ ರಕ್ತ ಸುರಿಯುತ್ತಿರುವುದನು ನೋಡಿ ಅವನಿಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಕೂಡಲೇ ಆಂಬುಲೆನ್ಸ್ ಗೆ ಕರೆ ಮಾಡಿ ಇಬ್ಬರನ್ನೂ ಉಳಿಸಿಕೊಳ್ಳಲು ಬಹಳ ಪ್ರಯತ್ನಿಸಿದನು. ಅದರೆ ವಿಧಿಯಾಟ ಬೇರೆಯೇ ಇತ್ತು. ಮಡದಿ ಚಿಕಿತ್ಸೆ ಫಲಕಾರಿಯಾಗದೆ ಇವನ ಕಣ್ಣೆದುರಿಗೇ ಕೊನೆಯುಸಿರೆಳೆದಳು. ಹೇಗೋ ಇನ್ನಷ್ಟು ಸಾಲ ಮಾಡಿ ಎಲ್ಲೆಲ್ಲಿಂದಲೋ ಸಹಾಯವನ್ನು ಪಡೆದು ಮಗಳು ಕಿಶೋರಿಯ ಪ್ರಾಣ ಉಳಿಸಿದನು. ಕಾಲುಗಳು ತನ್ನ ಶಕ್ತಿಯನ್ನು ಕಳೆದುಕೊಂಡರೂ ಕಿಶೋರಿ ಮಾತ್ರ ಎಂದಿಗೂ ತನ್ನ ಜೀವನದ ಮೇಲಿನ ಉತ್ಸಾಹ ಕಳೆದುಕೊಳ್ಳಲ್ಲಿಲ್ಲ.
ತಾಯಿಯಿಲ್ಲದ ಭಾವನೆ ಅವಳಿಗೆ ಆಗಾಗ ಕಾಡಿದರೂ ತಂದೆ ಸೋಮನಾಥ ತೋರುವ ಪ್ರೀತಿಯ ಎದುರಿಗೆ ಅವಳ ನೋವೆಲ್ಲಾ ಕಾಲ ಕಳೆದಂತೆ ಕ್ಷೀಣಿಸಿತು. ಸೋಮನಾಥ ಪಶ್ಚಾತ್ತಾಪ ಮಾಡಿಕೊಳ್ಳದೇ ಇರುವ ದಿನವೇ ಇಲ್ಲ. ಆದರೆ ಕಿಶೋರಿಗಾಗಿ ತನ್ನ ನೋವೆಲ್ಲಾ ಸಹಿಸಿಕೊಂಡು ಅವಳಿಗಾಗಿ ಜೀವನ ನಡೆಸುತ್ತಿದ್ದನು. ನೋವು ಸಂಪೂರ್ಣವಾಗಿ ನೀಗದಿದ್ದರೂ ಸಹ ಇಬ್ಬರೂ ಕೂಡ ಇರುವುದರಲ್ಲೆ ಖುಷಿಯಾಗಿರುವುದನ್ನು ಕಲಿತರು. ಒಬ್ಬರಿಗೊಬ್ಬರು ಜೀವನವಾದರು; ಎಂದು ಅಜ್ಜಿ ತನ್ನ ಚಿಕ್ಕ ಕಥೆಯನ್ನು ಮುಗಿಸುತ್ತಾಳೆ.
ಕಥೆಯನ್ನು ಕೇಳಿ ಬೇಸರದಿಂದ ಎಲ್ಲರೂ ಕೂತಿರುವುದನ್ನು ಗಮನಿಸಿದ ಅಜ್ಜಿ ಹಣೆಬರಹ ತಿಳಿದವರ್ಯಾರು! ಎಲ್ಲಾ ವಿಧಿಯಾಟ; ಇದ್ದುದ್ದರಲ್ಲೇ ನಾವು ಖುಷಿಯಾಗಿ ಇರುವುದನ್ನು ಸೋಮನಾಥ ಹಾಗೂ ಕಿಶೋರಿಯ ಕಥೆಯನ್ನು ನೋಡಿ ಕಲಿಯಬೇಕು ಎಂದು ಹುರಿದುಂಬಿಸಲು ಪ್ರಯತ್ನಿಸಿದಳು. ವಾಸ್ತವವನ್ನು ಒಪ್ಪಿಕೊಂಡು ಎಲ್ಲರೂ ತಮ್ಮ ತಮ್ಮ ಮನೆಗೆ ಹೊರಡಲು ಸಜ್ಜಾದರು. ಲೀಲಾವತಿ ಕೂಡ ನಿಧಾನವಾಗಿ ಎದ್ದು ನಿಂತು ತನ್ನ ಸೊಂಟವನ್ನು ಹಿಡಿದುಕೊಂಡು ಮನೆಯತ್ತ ಹೆಜ್ಜೆ ಹಾಕಿದಳು.