Back To Top

 ನವೆಂಬರ್‌ ಒಂದು ಒಂದೇ ನನ್ನ ದಿನ | ಸಂತೋಷ್‌ ಎನ್‌. ಜೋಶಿ

ನವೆಂಬರ್‌ ಒಂದು ಒಂದೇ ನನ್ನ ದಿನ | ಸಂತೋಷ್‌ ಎನ್‌. ಜೋಶಿ

ಕನ್ನಡ ರಾಜ್ಯೋತ್ಸವದಂದು ಬಂತು ಗೆಳೆಯನ ಕರೆ. ಅರ್ಥಪೂರ್ಣವಾಗಿ ನಾಡಹಬ್ಬವ ಆಚರಿಸೋಣ ಮಕ್ಕಳ ಅನಾಥಾಶ್ರಮಕ್ಕೆ ಬಾ ಎಂದು. ಕೆಲಸವಿಲ್ಲದ ಕಾರಣ ನಾನೂ ಇಪ್ಪಿಕೊಂಡೆ. ಬಣ್ಣ ಬಣ್ಣದ ಪೇಪರ್‌, ಹೂಗುಚ್ಚ, ಹಸಿರು ತೋರಣಗಳಿಂದ ರಂಗೇರಿತ್ತು ಆಶ್ರಮ. ಧ್ವಜಾರೋಹಣಕ್ಕೆ ಸಿದ್ಧವಾಗಿಯೇ ನಿಂತಿತ್ತು ಧ್ವಜಸ್ಥಂಬ! “ಏ ಅಲ್ಲೇನೋ ನೋಡ್ತಿದ್ದೀ ಬೇಗ ಹೋಗು ಮಕ್ಕಳನೆಲ್ಲಾ ಹೊರಗೆ ಕರೆದು ಬಾ” ಎಂದ ಗೆಳೆಯ.

ಹುಂ ಎಂದೆ, ಒಳಗೆ ಹೋಗಿ, ಮಕ್ಕಳೆಲ್ಲಾ ಹೊರಗೆ ನಡೆಯಿರಿ ಎನ್ನುವುದರೊಳಗೆ ಪಂಜರದಿಂದ ಬಿಡುಗಡೆಯಾದ ಹಕ್ಕಿಗಳಂತೆ ಮಕ್ಕಳೆಲ್ಲಾ ಪುರ್‌! ಎಂದು ಓಡಿದರು. ಎಲ್ಲರೂ ಹೋದರು, ಇನ್ನೇನು ಹೊರಗೆ ಹೋಗಬೇಕು ಎಂದು ಬಾಗಿಲು ಹಾಕುವಾಗ, ಯಾರೋ ಆಳುತ್ತಿರುವ ಧ್ವನಿ, ಅಲಕ್ಷಿಸುವುದರೊಳಗೆ ಇನ್ನೂ ಗಟ್ಟಿಯಾಯಿತು. ಕಿವಿಗೊಟ್ಟೆ, ಯಾರೋ ಹೆಂಗಸು ಅತ್ತಂತೆನಿಸಿತು. ಒಂದು ಕ್ಷಣ ನನ್ನ ತಾಯಿಯೇ ಅತ್ತಂತೆನಿಸಿತು.

ಅರ್ಧ ಮಿಚ್ಚಿದ ಬಾಗಿಲನ್ನು ತೆಗೆದು ಒಳಗೆ ಹೋದೆ, ಅಳುವ ಸದ್ದು ಇಮ್ಮಡಿಯಾಯಿತು. ಸುತ್ತಲೂ ನೋಡಿದೆ ಯಾರೂ ಕಾಣಲಿಲ್ಲ ಹಾಗೇ ಮುಂದೆ ಹೋದೆ, ಕಂಡಿತು! ಬಿಗಿಯಾಗಿ ಕದ ಮುಚ್ಚಿದ ಕೋಣೆ. ಅಲ್ಲಿಂದ ಅಳುವ ಸದ್ದು, ಯಾರದು ಎಂದೆ. ಅಳು ನಿಲ್ಲಿಸಿ ಕಣ್ಣು ಒರೆಸಿಕೊಳ್ಳುವಂತೆ ಒಳಗಡೆ ಸಪ್ಪಳವಾಯಿತು. ನಾನು ಬಂದಿದ್ದು ಒಳಗಿದ್ದವರಿಗೆ ತಿಳಿಯಿತೆಂದು ನಯವಾಗಿ ಯಾಕಮ್ಮಾ ಅಳುತ್ತಿರುವಿರಿ ಏನಾಯಿತು ಎಂದೆ, ಉತ್ತರ ಬರಲಿಲ್ಲ.

“ಈ ಮಕ್ಕಳ ಆಶ್ರಮದಲ್ಲಿ ನೀವೇಕೆ ಇರುವಿರಿ”. ಮೂಗು ಒರೆಸಿಕೊಂಡು, “ನನ್ನವರಿಗೆ ನಾನು ಬೇಡವಾದವಳು” ಎಂಬ ಪ್ರತ್ಯುತ್ತರ ಬಂತು. ಕುತೂಹಲದಿಂದ ನಾನು ನಿಮಗೆ ಮಕ್ಕಳಿಲ್ಲವೇ ಎಂದೆ. “ಇದ್ದಾರೆ, ಮಕ್ಕಳು ಪುಕ್ಕಲಗಳು ತಮ್ಮ ಜೀವನದ ಹುಡುಕಾಟದಲ್ಲಿ ಎನ್ನ ತೊರೆದರು. ಮೊಮ್ಮಕ್ಕಳಿಗೆ ಇಂಗ್ಲಿಷ್‌ ಆಂಟಿಯರ ಒಡನಾಟವೇ ಆಗಿಹೋಗಿದೆ” ಎಂದರು.

ನನಗೆ ಅವರ ಮಾತಿನ ಮರ್ಮ ಅರಿವಾಗುವುದರೊಳಗೆ ನನ್ನ ಗೆಳೆಯ “ಒಳಗೆ ಏನ್ಮಾಡಿ ಸಾಯ್ತಿದ್ದೀಯೋ? ಬೇಗ ಬಾರೋ ಟೈ ಆಯ್ತು” ಎಂದು ಕೂಗಿದ. ನಿಗೂಢ ವಿಸ್ಮಿತನಾಗಿದ್ದ ನಾನು ಅವನ ಕರೆಗೆ ಕಿವಿಗೊಡಲಿಲ್ಲ.

ಮತ್ತೆ ಅಲ್ಲಮ್ಮ ನಿನ್ನವರೆಂದು ಯಾರೂ ಇಲ್ಲವೇ? ಎಂದು ಕೇಳಿದೆ. “ನನ್ನವರಿದ್ದಾರೆ ಆದರೆ ನನಗಾಗಿ ಯಾರೂ ಇಲ್ಲ” ಎಂಬ ಉತ್ತರ ಸ್ವೀಕರಿಸುವ ಹೊತ್ತಿನಲ್ಲಿ. ತುಸು ರೇಗಿನಿಂದ ನೀನ್ ಬರ್ತಿಯೋ ಇಲ್ವೋ, ನಾವ್‌ ಧ್ವಜಾರೋಹಣ ಮಾಡ್ತಿವಿ, ಎಂದು ಗಟ್ಟಿಯಾಗಿ ಕೂಗಿದ.

ಅಮ್ಮ ಆಮೇಲೆ ಮಾತಾಡೋಣ ಬಾಗಿಲು ತೆರೆಯಿರಿ ಬೇಗ ಬನ್ನಿ ಎಲ್ಲರೂ ಕಾಯ್ತಿದಾರೆ ಎಂದದಕ್ಕೆ, ನಾನಿಲ್ಲದೇ ಅವರೆಲ್ಲಾ ಧ್ವಜಾರೋಹಣ ಮಾಡಲ್ಲ ಬಿಡು ಎಂದಳು.

ಆ ಗಡಿಬಿಡಿಯಲ್ಲೂ ನನಗೆ ನಗು ಬಂತು, ಅಲ್ಲಮ್ಮ ನಿಮ್ಮನ್ನ ಯಾರು ಕರೆಯೋಕೆ ಬಂದಿಲ್ಲ ನೀವ್‌ ನೋಡಿದರೆ ಹೀಗೆ ಹೇಳ್ತಿರಲ್ಲ ಎಂದೆ. ಒಂದು ಕಡೆ ನಿಜವು ಎನಿಸಿತು, ಹಿರಿಯರನ್ನು ಬಿಟ್ಟು ಹೇಗೆ ಆಚರಿಸುತ್ತಾರೆಂದು.

ಮೆಲ್ಲಗೆ ಬಾಗಿಲಿನೆಡೆಗೆ ಹೆಜ್ಜೆ ಇಡುವ ಸದ್ದು ಬಂತು. ಊರುಗೋಲೇನಾದ್ರು ಇದ್ರೆ ತೆಗೊಳ್ಳಿ ಅಂದೆ, “ಅಯ್ಯೋ ಹುಚ್ಚ! ಇಡೀ ಊರೇ ನನ್ನ ಊರುಗೋಲು ಎಂದಳು ಮುದುಕಿ. ನನಗೆ ಅರ್ಥವಾಗಲಿಲ್ಲವಾದರೂ ಪರವಾಗಿಲ್ಲ ಅಜ್ಜಿ ಚೆನ್ನಾಗಿ ಮಾತಾಡ್ತಿಯ ಎಂದು ನಕ್ಕೆ.

ನನ್ನ ಗೆಳೆಯ ವಾರ್ನಿಂಗ್‌ ರೀತಿ ಸಿಟ್ಟಿನಿಂದ ಕಡೆಯ ಬಾರಿ ಜೋರಾಗಿ ಕೂಗಿದ. ಅಜ್ಜಿ ಬನ್ನಿ ಎಂದು ಜೋರಾಗಿ ಬಾಗಿಲು ಬಡಿದೆ. ತಡಿಯಪ್ಪಾ ವಯಸ್ಸಾಗಿದೆ ಅವರಸ ಮಾಡಬೇಡ ಎಂದಳು. ಅಷ್ಟರಲ್ಲಿ ನಿಮ್ಮ ಬರ್ತ್‌‌ಡೇ ಯಾವಾಗ ಇನ್ಮೇಲೆ ಆಚರಿಸೋಣ ಎಂದೆ.

ಜೋರಾಗಿ ನಗುತ್ತಾ ಬಿಗಿಯಾಗಿ ಅಂಟಿಕೊಂಡಿದ್ದ ಎರಡೂ ಬಾಗಿಲು ನಡುವಿನಲ್ಲಿ ಸೀಳಿ ತೆರೆದಾಗ ಹಳಿದಿ ರವಿಕೆ, ಕೆಂಪು ಸೀರೆಯುಟ್ಟು ಪ್ರಕಾಶಮಾನವಾದ ದೇವತೆ ಕಂಡಳು. ಹೊರಗೆ ಜೋರಾದ ಚಪ್ಪಾಳೆ ಹರ್ಷೋದ್ಗಾರ ನಾಡಗೀತೆ ಮೊಳಗಿತು. ತಾಯಿ ನಗುತ್ತಾ “ಕಂದಾ, ನನಗುಳಿದಿರೋದು ಒಂದೇ ನವೆಂಬರ್‌ ಒಂದು” ಎಂದಳು.

ಧ್ವಜಾರೋಹಣ ಆಗಿಯೇ ಹೋಯಿತು ಎಂದೆನಿಸಿತು. ತಿರುಗಿ ನೋಡುವುದರೊಳಗೆ ತಾಯಿ ಮಾಯವಾದಳು. ದಿಗ್ಭಮ್ರೆಯಾಗಿ ಹೊರಗೆ ಓಡಿ ಬಂದೆ, ಕನ್ನಡ ತಾಯಿ ಎಲ್ಲ ಕಡೆಗೆ ಮೂಡತೊಡಗಿದಳು.

ಸಂತೋಷ್‌ ಎನ್‌. ಜೋಶಿ
ಎಂಬಿಎ ವಿದ್ಯಾರ್ಥಿ
ಪಿಇಎಸ್‌ ವಿಶ್ವವಿದ್ಯಾಲಯ, ಬೆಂಗಳೂರು

Prev Post

ಕಾಣದ ದೇವರ ಪ್ರತಿರೂಪ ನನ್ನಪ್ಪ | ಹಣಮಂತ ಎಂ ಕೆ

Next Post

ಯುವ ಚಿತ್ತ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಸಂಶೋಧಿಸುವತ್ತ ಹರಿಯಬೇಕು : ಪರಮಶಿವಮೂರ್ತಿ

post-bars

Leave a Comment

Related post