ತಂಪೆರೆಯುವ ನೆನಪುಗಳಿಗೆ ಜೀವ ತುಂಬಿದ ಗೆಳತಿಗೊಂದು ಪತ್ರ | ಗಿರೀಶ್ ಪಿಎಂ
ಗೆಳತಿಗೆ ಪತ್ರ.
ಪ್ರೀತಿಯ ಗೆಳತಿ ಪ್ರಿಯಾ,
ನಾನು ಕ್ಷೇಮ ನೀನು ಕ್ಷೇಮ ಎಂದು ಭಾವಿಸುತ್ತೇನೆ. ಕಳೆದಿರುವ ದಿನಗಳಲ್ಲಿ ತಂಪೆರೆಯುವ ನೆನಪುಗಳಿಗೆ ನೀನು ಜೀವ ತುಂಬಿದೆ . ನೀ ಬಂದ ಆ ದಿನದಿಂದ ಮನದೊಳಗೆ ಏನೋ ಒಂಥರ ತಲ್ಲಣ ಸಂಚಲನ.
ಪ್ರಿಯೆ ನೀ ಭಾವನೆಯ ಭಾವಾಂತರಂಗಕ್ಕೆ ಒಲವಿನ ರಂಗನ್ನು ನೀಡಿ ಬದುಕಿನ ಪುಟಗಳಲ್ಲಿ ರಂಗೇರಿಸಿದೆ. ಇರುಳಿನ ಕಳೆ ಹಾಸು ಹೊಕ್ಕಾಗಿದ್ದ ಮನಸ್ಸಿಗೆ ಬೆಳಕಾಗಿ ಬಂದು ನನ್ನ ನೆನಪಿನ ಹೊತ್ತಿಗೆಯಲ್ಲಿ ನೆನಪಾಗಿ ನೆರಳಾಗಿ ನಿಂತೆ. ಪ್ರಿಯೆ ನಿನ್ನ ನೋಡುವ ಹಂಬಲ ಆಸೆ ನನ್ನನ್ನು ಕಾಡುತ್ತಿದೆ, ಮನದೊಳಗೆ ಓಡುತ್ತಿದೆ.
ಅನುದಿನ ಅನು ಕ್ಷಣ ನಿನ್ನ ಜೊತೆ ಕಳೆದಿರುವ ದಿನಗಳನ್ನು ಪ್ರತಿಬಾರಿಯೂ ನೆನೆದಾಗ ಹೃದಯ ಬಡಿತದ ತುಡಿತ ಹೆಚ್ಚಾಗುತ್ತದೆ. ಧಮನಿಯ ಕಣಕಣದಲ್ಲೂ ನೀನೇ ಬೆರೆತಿರುವೆ, ನನ್ನೀ ಜಗವೇ ಕಾಡಿರುವೆ, ನನ್ನಯ ಈ ಚಿಕ್ಕ ಮನವು ಖುಷಿಯಿಂದ ತೇಲಾಡುವುದು ನಿನ್ನ ನಗುವಿನ ಕಾರಣವೇ. ನಿನ್ನವನಾದೆ ನಾ ನನಗೆ ತಿಳಿಯದೆ ಅರಿಯದೆ.
ಮೋಡಿ ಮಾಡಿರುವೆ ಮತ್ಯಾರು ತರುಣೆಯಲ್ಲಿ ಕಾಣದ ಕಾಡದ ಆ ನಿನ್ನ ಸಲುಗೆ, ಅಕ್ಕರೆಯ ಸಕ್ಕರೆ ಆಸರೆಯ ಆರೈಕೆಯಿಂದ ಪ್ರೀತಿಯ ಸುಲಿಗೆ ಮಾಡಿದೆ. ಜೊತೆಯಲ್ಲಿರುವೆ ಎನ್ನುವ ಆಶ್ವಾಸನೆಯ ಭರವಸೆಯನ್ನು ನೀ ನೀಡಿದೆ. ನಿನ್ನ ಸ್ನೇಹದ ಕಾಣಿಕೆಯನ್ನು ಪದಗಳಲ್ಲಿ ಬರೆಯಲು ಹೊರಟರೆ ಪದಗಳು ಕುಂಚದಿಂದಲೇ ಹೊರಬರದು. ಚೆಲುವೆ ನಿನ್ನ ಚೆಲುವಿನ ಚಂದಿರನ ಹೋಲುವ ನಗುವೇ ನನ್ನ ಜೀವಾಳ.
ನಿನ್ನ ಮಾತಿನ ಪ್ರತಿ ಸ್ವರ ಮಾಧುರ್ಯವೇ ಶಾಶ್ವತವಾಗಿ ನಿಂತಿದೆ ನನ್ನಿ ಅಂತರಾಳ. ನನ್ನ ನೆನಪಿನೊಳಗೆ ಅರಿಯದ ಮೊಗವನ್ನು ಪರಿಚಯಿಸಿದ ಮೊದಲ ನಗು ನಾನಾದರೂ ಮರೆಯದೆ ಇರೆನು. ಸ್ನೇಹದ ಮಾಯಾಜಾಲದ ಕೀಲಿ ಕೈ ನಗುವೆ ಆಗಿತ್ತು. ಬಹು ದೂರದಲ್ಲಿ ನೀನಿದ್ದರೂ ಸಹ ನಿನ್ನ ಮೇಲಿನ ಒಲವು, ಭಾವನೆಯ ಒಳಹರಿವು ಮಾತ್ರ ಹೆಚ್ಚುತಲೇ ಇದೆ.
ಕಾಡುವ ನಿನ್ನ ನೆನಪಿನ ತುಡಿತಕ್ಕೆ ಪಾಪೀ ಹೃದಯ ನಿನ್ನ ಬರುವಿಕೆಗಾಗಿಯೇ ಕಾಯುತ್ತಿದೆ. ಚಂದ್ರಮನ ಬೆಳಕ ಕಾಯುವ ಚಕೋರ ಪಕ್ಷಿಯಂತೆ. ನಿನ್ನ ಜೊತೆ ಕಳೆದ ಕ್ಷಣಗಳು ದಿನಗಳು ಅದರಲ್ಲೂ ನನ್ನ ಪ್ರೀತಿಯ ಹೇಳಲು ಮೊದ ಮೊದಲು ಇದ್ದ ಅಂಜಿಕೆ, ನಂತರ ಹೇಳಿದ ಮನದ ಕೋರಿಕೆ, ಆರಂಭದಲ್ಲಿ ಒಪ್ಪದ ನನ್ನ ಮನದ ಬಯಕೆ ಕೊನೆಗೂ ಒಪ್ಪಿದೆ ನನ್ನ ಪ್ರೀತಿಯ ಪ್ರೇಮದ ಕಾಣಿಕೆ.
ಆ ನಿಮಿಷ ನನಗಾದ ಖುಷಿ ಸಂತಸಕ್ಕೆ ಮುಸ್ಸಂಜೆಯ ಭಾನು ಮಧುರವಾಗಿ ತಂಪೆರೆಯುವ ತಂಗಾಳಿಯ ಹಾಜರೆಯೇ ಸಾಕ್ಷಿಯಾಗಿತ್ತು. ಹಲವಾರು ದಿನಗಳಿಂದ ಬಚ್ಚಿಟ್ಟ ಆಸೆಯನ್ನು ನಿರಾಸೆ ಮಾಡದೆ ನನಗೆ ಆಸರೆಯಾದೆ. ನನ್ನೀ ಪ್ರೇಮ ಪತ್ರ ಸೇರುವುದು ನಿನ್ನ ಹತ್ರ. ನಿನ್ನ ಪತ್ರಕಾಗಿಯೇ ಕಾಯುವೆ ನಾ ಪ್ರಿಯೇ.
ಇತೀ ನಿನ್ನ ಪ್ರೀತಿಯ
ಗಿರೀಶ್ ಪಿಎಂ
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು