Back To Top

 ಮುಂಗೋಪ ಕಲಿಸಿದ ಪಾಠ | ಅಂಕಿತ

ಮುಂಗೋಪ ಕಲಿಸಿದ ಪಾಠ | ಅಂಕಿತ

“ಇವತ್ಯಾಕೋ ದಿನವೇ ಸರಿ ಇಲ್ಲ ಮಾರ್ರೆ” ಎನ್ನುತ್ತಾ ರಾಜ್ ಮೊಬೈಲ್ ಸೈಡಿಗಿಟ್ಟ. “ಎಂಥ ಸಾವು ಮಾರ್ರೆ. ಒಂದೆರಡು ಗೇಮ್ ಸೋಲುವುದು ಪರ್ವಾಗಿಲ್ಲ. ಇದು ಆಡಿದ ಎಲ್ಲಾ ಗೇಮ್ ಗೋವಿಂದ ಆಯ್ತು ಕರ್ಮ” ವಟಗುಟ್ಟಿದ. ರಾಜ್‌ನಿಗೆ ಪಬ್ಜಿ ಆಡುವುದು ಒಂದು ಚಟ. ದಿನದ ಇಪ್ಪತನಾಲ್ಕು ಗಂಟೆ ಬೇಕಾದರೂ ಆಡಬಲ್ಲ. ಆದರೆ ಮನೆಯಲ್ಲಿರುವವರದ್ದು ಕಿರಿಕಿರಿ. ಅಪ್ಪ ರಾಜನ ಕೈಯಲ್ಲಿ ಮೊಬೈಲ್ ಇರುವುದನ್ನು ಕಂಡರೆ ಸಾಕು ಮನೆಯನ್ನು ರಣಾಂಗಣವೇ ಮಾಡಿಬಿಡುತ್ತಾನೆ.

ಅಮ್ಮನೂ ಬೈಯುತ್ತಾಳೆ. ಆದರೆ ತಂದೆಯಷ್ಟಲ್ಲ. ಬುದ್ದಿ ಬಂದಾಗ ಮಗ ಸರಿಯಾಗಬಹುದು ಎನ್ನುವುದು ಅವಳ ನಂಬಿಕೆ. ಇವನು ಮಾನಸಿಕ ಖಿನ್ನತೆಗೆ ಒಳಗಾದವನಂತೆ ಇವನದ್ದೆ ಪ್ರಪಂಚದಲ್ಲಿದ್ದ. ಹೇಗಾದ್ರೂ ಗೇಮ್ ಆಡಬೇಕಲ್ಲವೆ? ಮನೆಯಲ್ಲಂತೂ ಆಡುವುದಕ್ಕೆ ಆಗುವುದಿಲ್ಲ. ಹಾಗಾಗಿ ಮನೆಯಿಂದ ಹೊರಗೆ ಹೋದಾಗ ಆಡುತ್ತಿದ್ದ. ಈಗೀಗ ಪ್ರತಿದಿನವೂ ಮನೆಯಿಂದ ಬೆಳಿಗ್ಗೆ ಬೇಗ ಹೊರಟು ಸಂಜೆ ತಡವಾಗಿ ಮನೆಗೆ ಬರುತ್ತಿದ್ದ. ಮನೆಯವರು ವಿಚಾರಿಸಿದರೆ ಇವನದ್ದು ಮೌನವ್ರತ.

ತಾಯಿಗೆ ಇವನ ದಿನಚರಿ ನೋಡಿ ನೋಡಿ ಸಾಕಾಯ್ತು. ಒಂದು ದಿನ ಅಮ್ಮ ಮಗನನ್ನು ಹತ್ತಿರಕ್ಕೆ ಕರೆದು ಕೂರಿಸಿ ವಿಚಾರಿಸುವ ಪ್ರಯತ್ನ ಮಾಡಿದಳು. ಆದರೂ ಇವ ಏನೂ ನಡೆದಿಲ್ಲ ಎನ್ನುವಂತೆ ದಿವ್ಯ ನಿರ್ಲಕ್ಷ್ಯ ಮುಂದುವರಿಸಿದ. ಆ ದಿನ ಮಾವನೂ ಮನೆಯಲ್ಲೇ ಇದ್ದ. ತನ್ನ ತಂಗಿಯನ್ನು ಸತಾಯಿಸುತ್ತಿರುವ ರಾಜ್ ನನ್ನು ನೋಡಿ ಮಾವನಿಗೆ ಸಿಟ್ಟು ತದೆದುಕೊಳ್ಳಲಾಗದೆ, ಎರಡೇಟು ಬಿಗಿದೇ ಬಿಟ್ಟ. ತನ್ನ ಮೇಲೆ ಕೈ ಮಾಡಿದ ಮಾವನಿಗೆ ತಿರುಗಿ ಕೊಡುವಷ್ಟು ಸಿಟ್ಟು ಬಂತು. ಆದರೂ ಅದನ್ನು ತೋರ್ಪಡಿಲಾಗದೆ ಅಸಹಾಯಕನಾಗಿ ಬುಸುಗುಡುತ್ತಾ ತನ್ನ ರೂಮಿಗೆ ನಡೆದ.

ರಾಜ್ ಬಿಕಾಂ ಪದವೀದರ. ಕಾಲೇಜಿನಲ್ಲಿ ಕಲಿಕೆಯಲ್ಲೂ ಮುಂದಿದ್ದ. ಉನ್ನತ ಶ್ರೇಣಿಯಲ್ಲಿ ಇರದಿದ್ದರೂ, 70-80 ಶೇಕಡಾ ಅಂಕಗಳಿಗೇನೂ ಬರ ಇರಲಿಲ್ಲ. ಎಲ್ಲರ ಜೊತೆಯೂ ಬೆರೆಯುತ್ತಿದ್ದ. ಆದರೆ ಈಗ ಪಬ್ಜಿ ಭೂತ ಅಂಟಿಕೊಂಡಿದೆ. ಒಂದಿಬ್ಬರು ಗೆಳೆಯರು ಬಿಟ್ಟರೆ ಉಳಿದವರು ಅಷ್ಟಕ್ಕಷ್ಟೇ. ರಾಜ್‌ನ ಈ ರೀತಿಯ ಅವಾಂತರಕ್ಕೂ ಕಾರಣವಿದೆ.

ಚಿಕ್ಕ ವಯಸ್ಸಿನಿಂದಲೂ ಹೊಸ ಹೊಸ ಕಾರ್, ಬೈಕ್ ಗಳ ವ್ಯಾಮೋಹ ಜಾಸ್ತಿ. ರೋಲ್ಸ್ ರಾಯ್ಸ್, ಬಿಎಮ್ ಡಬ್ಲ್ಯೂ, ಜಾಗ್ವಾರ್ ಮೊದಲಾದ ಐಶಾರಾಮಿ ಕಾರುಗಳನ್ನು ತಾನು ಕೊಂಡುಕೊಳ್ಳಬೇಕು ಎಂದು ಹವಣಿಸುತ್ತಿದ್ದ. ಹೈಸ್ಕೂಲ್‌ನಲ್ಲಿ ಇರುವಾಗ ಇಂತಹ ಐಶಾರಾಮಿ ಕಾರ್ ಖರೀದಿಸಬೇಕೆಂದು ಹಣ ಒಟ್ಟು ಗೂಡಿಸುವ ಕಾರ್ಯಕ್ಕೂ ಕೈ ಹಾಕಿದ್ದ. ಆದರೆ ಬೇಷರತ್ತಾಗಿ ಒಟ್ಟು ಗೂಡಿಸಿದ ಹಣದಿಂದ ಹೊಸ ಮೊಬೈಲ್ ಖರೀದಿಸಿದ್ದ. ಕಾರ್ ಕೊಳ್ಳುವ ಆಸೆಯನ್ನಂತೂ ಕೈ ಬಿಟ್ಟಿರಲಿಲ್ಲ. ಮುಂದಕ್ಕೆ ಹಾಕಿದ್ದ ಅಷ್ಟೆ.

ಡಿಗ್ರಿಗೆ ಬರುವಾಗ ಕಾರು ಕೊಳ್ಳುವ ಆಸೆ ಇನ್ನಷ್ಟು ಬಲವಾಯಿತು. ಅದಕ್ಕೆ ಮತ್ತೊಂದು ಕಾರಣವೂ ಜೊತೆಯಾಗಿತ್ತು. ರಾಜ್‌ನ ಗೆಳೆಯರಿಬ್ಬರ ಬಳಿ ಕಾರ್ ಇತ್ತು. ತನಗೆ ಇನ್ನೂ ಖರೀದಿಸಲು ಆಗಿಲ್ಲ ಎನ್ನುವ ಕೊರಗು ಇತ್ತಾದರೂ, ಗೆಳೆಯರ ಕಾರ್‌ನಲ್ಲಿಯೇ ತನ್ನ ಆಸೆ ಪೂರೈಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ವಿಶೇಷವೆಂದರೆ ಗೆಳೆಯರ ಕಾರಿನಲ್ಲಿಯೇ ಡ್ರೈವಿಂಗ್ ಕಲಿತ. ಚಾಲನಾ ಪರವಾನಗಿಯನ್ನೂ ಪಡೆದುಕೊಂಡ. ಆದರೆ ಅನ್ಯರದ್ದು ಎಷ್ಟಾದರೂ ಅನ್ಯರದ್ದೇ ಅಲ್ಲವೇ? ತನಗೂ ಒಂದು ಸ್ವಂತದ್ದು ಕಾರುಬೇಕೆ ಬೇಕು ಎನ್ನುವ ಚಿಂತೆ ಜೋರಾಗಿಯೇ ಕಾಡುತ್ತಿತ್ತು. ನಿದ್ದೆಯೂ ಸರಿಯಾಗಿ ಬೀಳುತ್ತಿರಲಿಲ್ಲ. ಊಟವೂ ಸೇರುತ್ತಿರಲಿಲ್ಲ.

ಮನೆಯಲ್ಲಿ ಹೆಚ್ಚು ಒತ್ತಾಯ ಮಾಡುವಂತೆಯೂ ಇರಲಿಲ್ಲ. ಮಧ್ಯಮ ವರ್ಗದ ಕುಟುಂಬ. ತಂದೆ ಕೂಲಿ ಕೆಲಸ ಮಾಡುತ್ತಿದ್ದದ್ದು ಬಿಟ್ಟರೆ ಬೇರೆ ಯಾವುದೇ ಆದಾಯದ ಮೂಲ ಇರಲಿಲ್ಲ. ತಾಯಿ ಹೆಚ್ಚು ಓದಿದವರಲ್ಲ. ಮನೆಯಲ್ಲೇ ಬೀಡಿ ಕಟ್ಟುತ್ತಿದ್ದರು. ಅದು ಮನೆಯ ಚಾಹುಡಿ- ಸೆಕ್ಕರೆ, ತರಕಾರಿ ಖರ್ಚಿಗಷ್ಟೇ ಸಾಕಾಗುತ್ತಿತ್ತು. ಒಬ್ಬನೇ ಒಬ್ಬ ಮಗ ಹಾಗಾಗಿ ಹೆಚ್ಚಿನ ಖರ್ಚು ಬೀಳಲಿಲ್ಲ. ಪುಣ್ಯಕ್ಕೆ ಇವ ಇಂಜಿನಿಯರ್ ಅಥವಾ ಬೇರೆ ಯಾವುದೋ ದೊಡ್ಡ ವೃತ್ತಿಪರ ಕೋರ್ಸು ಓದುವುದಕ್ಕೆ ಆಸಕ್ತಿ ತೋರಿಸಲಿಲ್ಲ. ಮಾವ ಎಲ್ಲೋ ಒಂದು ಕಡೆ ವಾಚ್ ಮೆನ್ ಆಗಿದ್ದ. ತಂಗಿಯ ಕುಟುಂಬಕ್ಕೆ ಅಷ್ಟೋ – ಇಷ್ಟೋ ಸಹಾಯ ಮಾಡುತ್ತಿದ್ದ.

ರಾಜ್‌ನ ಮಾವ ತನಗೆ ಎಷ್ಟು ಕಷ್ಟ ಆದರೂ ತಂಗಿಯನ್ನು ಯಾವತ್ತೂ ಬಿಟ್ಟುಕೊಟ್ಟವವನಲ್ಲ. ಒಂದು ಸಲ ತಂಗಿಯ ಹೃದಯ ಶಸ್ತ್ರ ಚಿಕಿತ್ಸೆಗೆ ಹಣ ಸಾಲದೆ ಇದ್ದಾಗ ಎಲ್ಲೆಲ್ಲಿಂದಲೋ ಹತ್ತು ಲಕ್ಷ ಸಾಲ ಮಾಡಿ ತಂದಿದ್ದ. ಆದರೆ ರಾಜ್‌ನನ್ನು ಕಂಡರೆ ಮಾತ್ರ ಮಾವನಿಗೆ ಆಗಿಬರುವುದಿಲ್ಲ. ತನ್ನ ತಂಗಿಗೆ ಕಷ್ಟ ಕೊಡಲೆಂದೇ ಹುಟ್ಟಿದ ಮಗ ಎಂದು ಯಾವಾಗಲೂ ಬೈಯುತ್ತಿದ್ದ. ಸಂದರ್ಭ ಸಿಕ್ಕಿದಾಗಲೆಲ್ಲಾ ಎರಡೇಟು ಕೊಡದೆ ಇರುತ್ತಿರಲಿಲ್ಲ. ರಾಜ್ ಅಂತ ದೊಡ್ಡ ತಪ್ಪು ಏನೂ ಮಾಡುತ್ತಿರಲಿಲ್ಲ. ಮಾವ ಹಾಗೆ ಹೊಡೆಯುವುದಕ್ಕೂ, ಬೈಯುವುದಕ್ಕೆ ತಂಗಿಯ ಮೇಲಿನ ಮಮತೆಯೇ ಕಾರಣ ಆಗಿದ್ದಿರಬೇಕು. ಈ ರೀತಿಯ ಪರಿಸ್ಥಿತಿ ಮನೆಯಲ್ಲಿ ಇರುವಾಗ ಹೇಗೆ ಕಾರು ಖರೀದಿಸಿಕೊಡಿ ಎಂದು ಕೇಳುವುದು?

ಚಿಕ್ಕಂದನಿಂದಲೂ ತನ್ನ ಆಸೆ ಹೇಳಿ ಹೇಳಿ ಸಾಕಾಗಿ ಹೋಗಿದೆ. ಮನೆಯವರೆಲ್ಲ ಅದು ಕೇವಲ ಬಾಲ ಆಸೆ ಎಂದು ನಿರ್ಲಕ್ಷಿಸುತ್ತಲೇ ಬಂದಿದ್ದರು. ಆದರೆ ರಾಜ್ ಮಾತ್ರ ತನ್ನ ಆಸೆಯನ್ನು ತೀರಿಸಿಯೇ ಸಿದ್ದ ಎಂದು ಪ್ರತಿಜ್ಞೆ ಮಾಡಿದಂತೆ ಇತ್ತು. ಇನ್ನೂ ಎಷ್ಟು ಅಂತ ಕಾಯುವುದು? ಕಾದದ್ದು ಒಂದೆರಡು ದಿವಸವೇ? ಇಲ್ಲ ಇನ್ನು ಸಹಿಸುವುದಕ್ಕೆ ಆಗುವುದಿಲ್ಲ. ಇವತ್ತೇ ನಿರ್ಧಾರವಾಗಬೇಕು. ಒಂದು ವೇಳೆ ಇವರು ನನ್ನ ಆಸೆಗೆ ಸಹಕರಿಸುವುದಿಲ್ಲ ಎಂದಾದರೆ ನಾನೇ ಏನಾದರೂ ಮಾಡಿಕೊಳ್ಳಬೇಕು. ಎಲ್ಲರೂ ಒಟ್ಟಿಗೆ ಇರುವಾಗ ಕಡೆಯ ಬಾರಿ ಕೇಳಿಯೇ ಬಿಡುತ್ತೇನೆ ಎಂದು ನಿರ್ಧರಿಸಿದ.

ಅಮ್ಮ ಬೀಡಿ ಕಟ್ಟುತ್ತಾ ಕುಳಿತಿದ್ದಳು. ಅಪ್ಪ ಅದೇ ಹಳತ್ತು ಒನಿಡ ಟಿವಿಯಲ್ಲಿ ಹೊಸ ಚಲನಚಿತ್ರ ನೋಡುತ್ತಿದ್ದ. ಅದೇ ಸಮಯಕ್ಕೆ ಮಾವನೂ ಬಂದ. ಅಯ್ಯೋ ಕೆಲಸ ಕೆಟ್ಟು ಹೋಯಿತಲ್ಲ ಎಂದು ರಾಜ್ ಮತ್ತೆ ಚಿಂತೆಗೆ ಬಿದ್ದ. ಆದದ್ದಾಗಲಿ ಹೇಳಿಯೇ ಬಿಡುತ್ತೇನೆ ಎಂದು ಕೊಂಡು ತಾಯಿಯ ಮುಂದೆ ನಿಂತ. ವಿಷಯ ಎಲ್ಲಿಂದ ಶುರು ಮಾಡುವುದು? ನೇರವಾಗಿ ಹೇಳಿ ಬಿಡಲೇ? ಕಣ್ಣು ಮುಚ್ಚಿ ಹೇಳಿದರಾಯಿತು ಅದರಲ್ಲೇನು ಮಹಾ ಎಂದುಕೊಂಡ.

“ಅಮ್ಮ” ತಾಯಿಗೆ ಆಶ್ಚರ್ಯ ಎನಿಸಿತು.

ರಾಜ್ ಕಳೆದ ಕೆಲವು ಸಮಯಗಳಿಂದ ಎದುರು ಬಂದು ಮಾತನಾಡಿಯೇ ಇರಲಿಲ್ಲ. ಟಿವಿಯಲ್ಲಿ ಬರುತ್ತಿದ್ದ ಚಲನ ಚಿತ್ರದ ಒಳಗೆ ಹೋಗಿದ್ದ ಅಪ್ಪ ತಟ್ಟನೆ ಹಿಂದೆ ತಿರುಗಿದರು. ಆಗಷ್ಟೇ ಮೆಟ್ಟಿಲು ಏರುತ್ತಿದ್ದ ಮಾವನೂ ಒಂದು ಕ್ಷಣ ಸ್ಥಬ್ದನಾದ.

“ಏನಪ್ಪಾ, ಪುಣ್ಯವಂತ? ನೀನು ಈ ರೀತಿ ಬಂದು ಮಾತನಾಡದೆ ತುಂಬಾ ದಿನ ಆಯ್ತು. ಏನು ವಿಷಯ?”

“ಅಮ್ಮ.. ಆ.. ಅದು. ಹಿಂದಿನಿಂದಲೂ ಹೇಳಿಕೊಂಡೇ ಬರ್ತಾ ಇದ್ದೀನಿ ಅಲ್ವಾ. ಅದೇ ಕಾರು” ಮುಂದೆ ಮಾತು ಹೊರಡಲಿಲ್ಲ.

“ನಿನಗೆ ಎಷ್ಟು ಸಲ ಹೇಳುವುದು? ನಾನು ಇಷ್ಟು ವರ್ಷ ದುಡಿದ ಹಣ ಒಟ್ಟು ಗೂಡಿಸಿದ್ದರೂ ಕೂಡ ಕಾರ್ ಖರೀದಿಸುವಷ್ಟು ಆಗಿರಲಿಕ್ಕಿಲ್ಲ. ಸುಮ್ನಿರು ನೀನು.”

“ಅಮ್ಮ ಹಾಗಲ್ಲಮ್ಮ. ನನಗೆ ಈಗ ಕಾರ್ ಅರ್ಜೆಂಟಿದೆ. ತೆಗೆಸಿ ಕೊಡ್ತಿಯೋ ಇಲ್ಲವೋ ಅಷ್ಟು ಹೇಳು”

“ಆಗುವುದಿಲ್ಲ. ಏನ್ಮಾಡ್ತಿ?”

ಕಣ್ಣಲ್ಲಿ ನೀರು ತುಂಬಿಕೊಂಡು “ನನ್ನ ಹಣೆ ಬರಹವೇ ಇಷ್ಟು. ಯಾವ ಮಕ್ಕಳಿಗೂ ಕೂಡ ನಿಮ್ಮಂತ ತಂದೆ ತಾಯಿ ಇರಬಾರದು” ಹೇಳಿಯೇ ಬಿಟ್ಟ.

“ಏನು ಹೇಳಿದಿಯೋ ಓ ರಾಕ್ಷಸ. ನಿನ್ನನ್ನು ಇಷ್ಟು ದೊಡ್ಡದಾಗಿ ಬೆಳೆಸಿದ್ದು ಯಾರೋ? ನಿನ್ನನ್ನು ಓದಿಸಿದ್ದು ಯಾರೋ? ಹಣ ಇಲ್ಲ ಅಂದ್ರು, ಏನೇನೋ ಮಾಡಿ ನಿನ್ನ ಕಾಲೇಜು ಫೀಸ್ ಕಟ್ಟಿ ಓದಿಸಿದೆ. ಈ ರೀತಿ ಮಾತನಾಡುವುಡಕ್ಕೆ ಮೊದಲು ಅದನ್ನಾದರೂ ನೆನಪಿಡು ಮಾರಾಯ” ಎಂದು ಕೋಪದಿಂದ ಅಪ್ಪ ಎದ್ದುನಿಂತ.

“ಅಪ್ಪ.. ನಾನು ಎಷ್ಟು ವರ್ಷದಿಂದ ಹೇಳ್ತಾ ಇದ್ದೇನೆ? ನೀವು ಒಂದು ದಿನ ಆದ್ರೂ ನನ್ನ ಆಸೆಯ ಕಡೆ ಆಸಕ್ತಿ ತೋರಿಸಿದ್ದಿರಾ?”

“ಏನು ಆಸಕ್ತಿ ತೋರಿಸುವುದು? ನೀನು ಆಕಾಶ ಬೇಕು ಭೂಮಿ ಬೇಕು ಅಂತ ಕೇಳಿದ್ರೆ ಯಾರಿಂದಾದರೂ ತಂದು ಕೊಡುವುದಕ್ಕೆ ಆಗುತ್ತಾ?” ಎಂದು ಅಪ್ಪ ಮತ್ತೆ ಘರ್ಜಿಸಿದ.

“ಆಯ್ತು ಬಿಟ್ಟು ಬಿಡಿ. ಇನ್ನು ನಾನು ಏನೂ ಕೇಳಲ್ಲ. ಅಪ್ಪನೋ ಅಮ್ಮನೋ, ಭಾವನೆಗೆ ಬೆಲೆಯೇ ಇಲ್ಲ ಅಂದ ಮೇಲೆ…” ಗೊಣಗುತ್ತಾ ತನ್ನ ರೂಮಿನ ಕಡೆ ಹೆಜ್ಜೆ ಹಾಕತೊಡಗಿದ.

“ಓ.. ಮಾರಿ ಸಂತಾನ. ನೀನು ಯಾಕೋ ಹೀಗೆ ಮಾಡ್ತೀಯಾ? ಒಂದು ದಿನ ಆದ್ರೂ ಹೆತ್ತವರಿಗೆ ನೆಮ್ಮದಿ ಕೊಟ್ಟಿದ್ದಿಯಾ? ಇನ್ನೊಂದು ಸಲ ಇನ್ನೊಂದು ಸಲ ಆಸೆ, ಭಾವನೆ, ಕಾರು – ಗೀರು ಅಂದ್ರೆ ಅಷ್ಟೇ ನೋಡು.. ಹೂತು ಹಾಕಿ ಬಿಡ್ತೀನಿ..” ಮೆಟ್ಟಿಲಲ್ಲಿ ನಿಂತಲ್ಲಿಂದಲೇ ಮಾವ ಬೈಯುವುದಕ್ಕೆ ಪ್ರಾರಂಭಿಸಿದ.

ಈಗ ರಾಜ್‌ನಿಗೆ ಸಿಟ್ಟು ನೆತ್ತಿಗೇರಿತು. ಸಣ್ಣ ತಪ್ಪು ಮಾಡಿದ್ದಕ್ಕೂ ಮಾವ ಮಹಾ ರಂಪಾಟ ಮಾಡುತ್ತಿದ್ದ. ಒಂದು ದಿನವೂ ಕೂಡ ರಾಜ್‌ನ ಜೊತೆ ಪ್ರೀತಿಯಿಂದ ಮಾತೇ ಆಡಿದವ ಅಲ್ಲ. ಮುಂಗಿಸಿಯಂತೆ ಮಾರ್ಮಲೆತು ನಿಂತದ್ದೇ ಜಾಸ್ತಿ. ಇನ್ನು ಸುಮ್ಮನೆ ಕೂರುವುದಿಲ್ಲ. ಏನಾದ್ರೂ ಆಗ್ಲಿ ಎದುರು ಮಾತಾಡಿಯೇ ಬಿಡುತ್ತೇನೆ ಎಂದುಕೊಂಡು ರೂಮಿನ ಕಡೆ ಹೆಜ್ಜೆ ಹಾಕುತ್ತಿದ್ದವ, ಹಿಂದೆ ಬಂದು “ಸುಮ್ಮನೆ ಇದ್ರೆ ಎಷ್ಟು ಬೇಕಾದರೂ ದಬ್ಬಾಳಿಕೆ ಮಾಡ್ತಿ ಅಲ್ವಾ. ಹೊಡಿಯುವುದಕ್ಕೆ ಕೈ ನಿನಗೆ ಮಾತ್ರ ಇರೋದಾ. ನನ್ನ ಕೈ ಬಾಡಿಗೆ ಕೊಟ್ಟಿದ್ದಿನಾ?”

ಇಷ್ಟು ಹೇಳಿದ್ದೇ ತಡ, ಮಾವ ಪಕ್ಕದಲ್ಲೇ ಇದ್ದ ಕೋಲು ತೆಗೆದು ರಾಜ್‌ಗೆ ಎರಡು ಬಿಗಿದ. “ಬಾಷೆ ಕೆಟ್ಟವ, ಮರ್ಯಾದೆ ಕೆಟ್ಟವ, ನಂಗೆ ಎದುರು ಮಾತಾಡ್ತಿಯಾ??” ಎನ್ನುತ್ತಾ ರಾಜ್‌ನ ಬಟ್ಟೆ ಹಿಡಿದು ಎಳೆದಾಡಿದ. ಬಟ್ಟೆ ಹರಿದು ಹೋಯಿತು. ರಾಜ್‌ಗೂ ಸಿಟ್ಟು ಮತ್ತಷ್ಟು ಏರಿತು. ಪಕ್ಕದಲ್ಲೇ ಇದ್ದ ಟಿವಿ ರಿಮೋಟ್ ನಿಂದ ಮಾವನ ತಲೆಗೆ ಬಡಿದ. ಇದು ತಾರಕಕ್ಕೆ ಏರುವುದನ್ನು ಗಮನಿಸಿದ ಅಪ್ಪ ಘೋರವಾದ ಕಾದಾಟಕ್ಕೆ ಸಿದ್ದರಾಗಿದ್ದ ಇಬ್ಬರ ಮಧ್ಯೆ ಬಂದು ಸಮಾಧಾನಿಸಲು ಪ್ರಯತ್ನಿಸಿದ.

ಮಾವ ಮಾತ್ರ ಸುಮ್ಮನಾಗದೆ ಕೈಗೆ ಸಿಕ್ಕಿದ ಮಣ್ಣಿನ ಮಡಿಕೆಯನ್ನು ರಾಜ್‌ನ ಮೇಲೆ ಎಸೆದ. ಅದು ಗುರಿ ತಪ್ಪಿ ಗೋಡೆಯ ಮೇಲೆ ನೇತು ಹಾಕಿದ್ದ ಕನ್ನಡಿಯ ಮೇಲೆ ಬಿತ್ತು. ಗಾಜು ಪುಡಿ ಪುಡಿಯಾಯಿತು. ಅಪ್ಪ ಮಾವನನ್ನು ಸಮಧಾನಿಸುತ್ತ ಮನೆಯ ಹೊರಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ. ಅಮ್ಮ ರಾಜ್‌ನನ್ನು ರೂಮಿನ ಒಳಗೆ ಎಳೆದುಕೊಂಡು ಹೋದಳು.

ರೂಮಿನ ಬಾಗಿಲು ಮುಚ್ಚಿದಳು. ಮಗನ ಮುಖವನ್ನೇ ದಿಟ್ಟಿಸುತ್ತಾ ನಿಂತಳು. ಕಣ್ಣೀರ ಧಾರೆ ಹರಿಯುತ್ತಿತ್ತು. “ಇರುವವ ನೀನು ಒಬ್ಬನೇ ಮಗ. ಈ ಭೂಮಿಗೆ ಬಂದು ನಾವೇನೂ ಸಾಧಿಸೋಕೆ ಆಗಿಲ್ಲ. ಜೀವನದಲ್ಲಿ ಸೋತೆ ಹೋದದ್ದು. ಆದ್ರೆ ನೀನು ನಮ್ಮ ತರ ಆಗಬೇಡ. ನಿನ್ನ ಮೇಲೆ ಏನೋ ನಂಬಿಕೆ ಇಟ್ಟುಕೊಂಡಿದ್ದೇನೆ. ನಿರಾಶೆ ಮಾಡ್ಬೇಡ” ಎಂದು ಹೇಳಿ ಬಾಗಿಲು ತೆಗೆದು ಹೊರಗೆ ಹೋದಳು. ಅವಳ ಮುಖದಲ್ಲಿ ಏನೋ ಆಸೆ ಕಾಣುತ್ತಿತ್ತು. ಕಣ್ಣಿನಲ್ಲಿ ನಂಬಿಕೆಯ ಭಾವನೆ ಕಾಣುತ್ತಿತ್ತು. ರಾಜ್ ಮಲಗಿದ. ರಾತ್ರಿಯ ಊಟನೂ ಮಾಡಿಲ್ಲ.

ಮರುದಿನ ಬೆಳಿಗ್ಗೆ ಬೇಗ ಎದ್ದವನೇ, ತನ್ನ ಬಟ್ಟೆಯನ್ನೆಲ್ಲಾ ಒಂದು ಬ್ಯಾಗ್ ಗೆ ತುಂಬಿಸಿದ. ತನ್ನ ಆಸೆಯನ್ನು ನುಚ್ಚು ನೂರು ಮಾಡಿದ ಇವರುಗಳ ಎದುರು ನಾನು ಏನಾದರೂ ಸಾಧಿಸಬೇಕು ಎನ್ನುವ ಛಲ ಉಕ್ಕುತ್ತಿತ್ತು. ಮನೆ ಬಿಟ್ಟು ಹೋಗುತ್ತೇನೆ ಎಂದು ನಿರ್ಧರಿಸಿ ಬಿಟ್ಟಿದ್ದ. ಹೋಗುವುದು ಯಾವ ಕಡೆ? ಏನು ಮಾಡುವುದು? ಯಾವುದೂ ಗೊತ್ತಿರಲಿಲ್ಲ. ಸ್ನೇಹಿತನಿಗೆ ಕರೆ ಮಾಡಿ ಮಾತನಾಡುತ್ತೇನೆ ಎನ್ನುವುದು ಬಿಟ್ಟರೆ ಬೇರೆ ಏನೂ ಗೊತ್ತಿರಲಿಲ್ಲ. ಮನೆಯಿಂದ ಹೊರಟೇಬಿಟ್ಟ.

ಮನೆಯಿಂದ ಹೊರಟವನು, ನೇರವಾಗಿ ಸಿಟಿ ಬಸ್ ಸ್ಟ್ಯಾಂಡ್‌ಗೆ ಬಂದ. ಗೆಳೆಯ ಸೂರಜ್‌ಗೆ ಕರೆ ಮಾಡಿದ. ನಡೆದ ವಿಷಯ ಎಲ್ಲಾ ತಿಳಿಸಿದ. ಸೂರಜ್ ಗಾಬರಿಗೊಂಡು ನೇರವಾಗಿ ತನ್ನ ಕಾರ್‌ನಲ್ಲಿ ಸಿಟಿ ಬಸ್ ಸ್ಟ್ಯಾಂಡ್‌ಗೆ ಆಗಮಿಸಿದ.

“ಯಾಕೋ ಈತರ ಆಯ್ತು. ಪರವಾಗಿಲ್ಲ ಬಿಡು. ಆದದ್ದು ಆಗಿ ಹೋಯಿತು. ಆದ್ರೂ ನೀನು ಮನೆ ಬಿಟ್ಟು ಬರುವಷ್ಟು ದೊಡ್ಡ ರಿಸ್ಕ್ ತೋಗೊಬಾರ್ದು ಇತ್ತು. ಬಾ ನಮ್ಮ ಮನೆಗೆ..”

“ಬೇಡ ಮಚ್ಚಾ”

“ಮತ್ತೇನೋ ಮಾಡ್ತಿ?”

“ಗೊತ್ತಿಲ್ಲ”

“ಅಯ್ಯೋ ಕರ್ಮ. ನೋಡು ನಾನು ಇವತ್ತು ಸಂಜೆ ಮುಂಬೈಗೆ ಹೋಗ್ತಾ ಇದ್ದೇನೆ. ಬರುವುದು ಒಂದು ವರ್ಷದ ನಂತರ. ಅಲ್ಲಿ ತನಕ ನಾನು ಫ್ಯಾಮಿಲಿ ಮನೆಯಲ್ಲಿ ಸ್ಟೇ ಆಗ್ತೆನೆ. ನನ್ನ ಜೊತೆ ಬರ್ತೀಯಾ”

“ಅದು ಸರಿ ಆಗಲ್ಲ ಮಚ್ಚಾ. ನೀನು ಯಾವುದೋ ಒಂದು ಕೆಲಸಕ್ಕೆ ಹೋಗ್ತಾ ಇದ್ದೀಯ. ಅದೂ ಅಲ್ದೆ ಫ್ಯಾಮಿಲಿ ಮನೇಲಿ ಇರೋದು ನೀನು.”

“ಆಯ್ತು. ಒಂದು ಉಪಾಯ ಹೇಳ್ತೇನೆ. ನಾನು ನನ್ನ ಕಾರ್ ನಿನಗೆ ಕೊಡ್ತೇನೆ. ಅದನ್ನು ಒಂದು ವರ್ಷದವರೆಗೆ ಟಾಕ್ಸಿ ತರ ಬಳಸಿ ಸ್ವಲ್ಪ ದುಡ್ಡು ಮಾಡು. ಮತ್ತೆ ಬೇರೆ ಏನೋ ಕೆಲಸ ನೋಡಿಕೊಂಡರೆ ಆಯ್ತು. ತೊಗೋ ಸ್ವಲ್ಪ ಹಣ ಇದೆ ಇದ್ರಲ್ಲಿ. ಇಲ್ಲೇ ಎಲ್ಲಾದ್ರೂ ಬಾಡಿಗೆ ಮನೆನೋ ಇಲ್ಲ ಪಿಜಿನಲೋ ಇರು. ಮತ್ತೆ ಟಾಕ್ಸಿನಲ್ಲಿ ಬಂದ ಹಣದಿಂದ ಸ್ವಲ್ಪ ಸೇವಿಂಗ್ಸ್ ಮಾಡು. ತಗೋ ಕೀ..”

ರಾಜ್ ನ ಕಣ್ಣಲ್ಲಿ ನೀರು ಬಂತು. ಸ್ನೇಹಿತನನ್ನು ಅಪ್ಪಿ ಹಿಡಿದ. ಸ್ನೇಹಿತನನ್ನು ಅಲ್ಲಿಂದ ಬೀಳ್ಕೊಂಡು ರಾಜ್ ಕಾರ್ ಚಲಾಯಿಸಿಕೊಂಡು ಸ್ವಲ್ಪ ದೂರ ಬಂದ. ಕಾರ್ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿದ.

ಬಾಡಿಗೆ ಮನೆ ಎಲ್ಲಿ ಮಾಡುವುದು. ಇವತ್ತು ತಕ್ಷಣ ಬಾಡಿಗೆ ಮನೆ ನನಗೆ ಎಲ್ಲಿ ಸಿಗುತ್ತದೆ? ಅಲ್ಲಾ ನಾನೀಗ ಬಾಡಿಗೆ ಮನೆ ಮಾಡಿದರೂ ಖರ್ಚು ಜಾಸ್ತಿ ದ್ವಿಗುಣವಾಗಿಯೇ ಇರುತ್ತದೆ. ಪಿಜಿಗೆ ಹೋಗಲಾ? ಬೇಡ ಅಂತ ಅನ್ಸುತ್ತೆ. ಅಲ್ಲಿ ಅವರದ್ದು ಬೇರೆ ರೂಲ್ಸ್. ಅದೆಲ್ಲ ನಂಗೆ ಆಗಿಬರೋದಿಲ್ಲ. ಮತ್ತೇನು ಮಾಡ್ಲಿ? ರಾಜ್ ಗೊಂದಲದಲ್ಲಿ ಬಿದ್ದ. ಏನು ಮಾಡುವುದು ಅಂತ ಗೊತ್ತಾಗುತ್ತಿಲ್ಲ. ಮೈಂಡ್ ರಿಫ್ರೆಶ್ ಮಾಡೋಣ ಅಂತ ಒಂದು ಪಬ್ಜಿ ಆಡಿದ. ಒಂದು ಸಾರಿ ಆಕಳಿಸಿ ಕಾರಿನ ಸೀಟಿಗೆ ಒರಗಿಕೊಂಡ.

ಎಡಬದಿಗೆ ಹಾಯದೇವ ಆಸ್ಪತ್ರೆ. ಆಸ್ಪತ್ರೆಯ ಹಿಂದಿನ ಭಾಗದಲ್ಲಿ ಶವಾಗಾರ. ಇಲ್ಲೇ ತನ್ನ ಮಾವ ಕೆಲವು ವರ್ಷಗಳ ಹಿಂದೆ ವಾಚ್ ಮೆನ್ ಆಗಿದ್ದ ಅಂತೆ. ಆ ಮೇಲೆ ಇಲ್ಲಿ ಏನೋ ಕಾರಣಕ್ಕೆ ಜಗಳ ಆಗಿ ಈಗ ಎಲ್ಲೋ ಬೇರೆ ಕಡೆ ವಾಚ್ಮೆನ್ ಆಗಿ ಇದ್ದಾನಂತೆ. ಅವ ಎಲ್ಲೇ ಸಾಯ್ಲಿ ನನಗೆ ಯಾಕೆ ಅಂದುಕೊಂಡ. ಶವಾಗಾರದ ಪಕ್ಕದಲ್ಲೇ ವಾಹನಗಳ ಪಾರ್ಕಿಂಗ್. ಅದು ಆಸ್ಪತ್ರೆಯ ವತಿಯಿಂದ ಇರುವ ಪಾರ್ಕಿಂಗ್ ಅಲ್ಲ. ನಗರಪಾಲಿಕೆಯವರು ಸಾರ್ವಜನಿಕರಿಗಾಗಿ ಕಲ್ಪಿಸಿರುವ ವ್ಯವಸ್ಥೆ. ತಕ್ಷಣ ಒಂದು ಉಪಾಯ ರಾಜ್‌ನ ತಲೆಗೆ ಬಂತು.

ನಾನೀಗ ಬಾಡಿಗೆ ಮನೆ ಮಾಡುವುದಕ್ಕಿಂತ ಪಾರ್ಕಿಂಗ್ ನಲ್ಲೇ ವಾಸ ಮಾಡಿದರೆ ಹೇಗೆ? ಬಹಳ ಸುಲಭ. ಕಾರಿನಲ್ಲಿ ಟಾಕ್ಸಿ ಕೆಲಸ ಮಾಡುವುದು ರಾತ್ರಿ ಪಾರ್ಕಿಂಗ್ ನಲ್ಲಿ ಕಳೆಯುವುದು. ಊಟ ತಿಂಡಿಗೆ ಹೇಗೋ ಹತ್ತಿರದಲ್ಲಿ ಹೋಟೆಲ್ ಇದೆ. ಸಾರ್ವಜನಿಕ ಶೌಚಾಲಯ ಕೂಡ ಇಲ್ಲೇ ಹತ್ತಿರದಲ್ಲಿ ಇದೆ. ಒಂದು ವರ್ಷ ಇಲ್ಲೇ ಕಳೆದರೆ ಆಯ್ತು. ಉಳಿದದ್ದು ನಂತರ ನೋಡೋಣ.

ಟಾಕ್ಸಿಗೆ ಬೇಕಾದ ಪರವಾನಗಿಯನ್ನೂ ಪಡೆದು ತನ್ನ ಕಾರ್ಯ ಆರಂಭಿಸಿದ. ರಾತ್ರಿ ಹಯದೇವ ಆಸ್ಪತ್ರೆಯ ಶವಗಾರದ ಪಕ್ಕದ ಕಾರ್ ಪಾರ್ಕಿಂಗ್‌ನಲ್ಲಿ ವಾಸ. ಹೋಟೆಲ್‌ನಲ್ಲಿ ಊಟ ತಿಂಡಿ ಹೀಗೆ ನಡೆಯುತ್ತ ಇತ್ತು. ಶವಾಗಾರದ ಪಕ್ಕದ ಪಾರ್ಕಿಂಗ್‌ನಲ್ಲಿಯೇ ಕಾರಿನ ಒಳಗೆ ಮಲಗಿರುತ್ತಾನೆ. ಆರಂಭದಲ್ಲಿ ಒಂದೆರಡು ಬಾರಿ ಭಯ ಆಗಿತ್ತು. ಆದ್ರೆ ಮತ್ತೆ ಅದನ್ನೆಲ್ಲಾ ರಾಜ್ ತಲೆಗೆ ಹಾಕಿಕೊಳ್ಳಲಿಲ್ಲ.

ಹಲವು ತಿಂಗಳುಗಳೇ ಕಳೆದು ಹೋಯಿತು. ರಾಜ್ ಮನೆ ಬಿಟ್ಟು ಹತ್ತಿರ ಹತ್ತಿರ ಆರು ತಿಂಗಳು ಆಗುತ್ತಾ ಬಂತು. ಮನೆಯವರದ್ದೂ ಪತ್ತೆ ಇಲ್ಲ. ಅಪ್ಪ, ಅಮ್ಮ, ಸಂಬಂಧಿಕರ ಮೊಬೈಲ್ ನಂಬರನ್ನು ರಾಜ್ ಬ್ಲಾಕ್ ಮಾಡಿದ್ದ. ಮನೆಯವರೂ ಮಾವನ ಮಾತಿಗೆ ಸೊಪ್ಪು ಹಾಕಿ ರಾಜ್‌ನನ್ನು ಹುಡುಕುವ ಪ್ರಯತ್ನ ಮಾಡಲಿಲ್ಲ. ಪೊಲೀಸ್ ಕಂಪ್ಲೇಟ್ ಒಂದು ಕೊಟ್ಟಿದ್ದರು. ಆದ್ರೆ ಪೊಲೀಸರು ಕೂಡ ದೊಡ್ಡ ಮಟ್ಟದಲ್ಲಿ ಹುಡುಕುವ ಪ್ರಯತ್ನ ಮಾಡಿಲ್ಲ. ರಾಜ್ ಸಿಟಿಯಲ್ಲೇ ಇದ್ದರೂ ಅವರ್ಯಾರ ಕಣ್ಣಿಗೂ ಬೀಳಲಿಲ್ಲ. ಹೀಗೆ ರಾಜ್‌ನ ಬದುಕು ಮುಂದುವರಿಯುತ್ತಾ ಇತ್ತು.

ಒಂದು ದಿನ ರಾಜ್ ತನ್ನ ಕೆಲಸ ಮುಗಿಸಿ ಕಾರಿನಲ್ಲಿ ವಿರಮಿಸುತ್ತಿದ್ದ. ರಾತ್ರಿ ಒಂದು ಗಂಟೆಯ ಸಮಯ. ಹೊರಗಡೆ ಜಡಿ ಮಳೆ ಸುರಿಯುತ್ತಿತ್ತು. ಇವತ್ತು ಯಾಕೋ ನಿದ್ದೇನೆ ಬರ್ತಾ ಇಲ್ಲ ಅಲ್ವಾ ಅಂತ ಕಾರಿನ ಗಾಜಿನಿಂದ ಹೊರಗಡೆ ನೋಡಿದ. ಎಲ್ಲವೂ ಸ್ಥಬ್ದವಾಗಿತ್ತು. ಪಿರಿ ಪಿರಿ ಮಳೆಯಲ್ಲಿ ಏನೂ ಕಾಣಿಸಲಿಲ್ಲ. ಹತ್ತಿರದಲ್ಲೆ ಇದ್ದ ಹೋಟೆಲ್ ಅಂಗಡಿಗಳು ಎಲ್ಲಾ ಬಂದ್ ಆಗಿದ್ದವು. ದೂರದಲ್ಲಿ ಏನೋ ಅಸ್ಪಷ್ಟ ಆಕೃತಿ ಕಾಣಿಸಿತು.

ದಿಟ್ಟಿಸಿ ನೋಡಲು ಪ್ರಯತ್ನಿಸಿದ ಏನೋ ಮಂಜು ಮೆತ್ತಿರುವಂತೆ ಕಾಣುತ್ತಿತ್ತು. ರಾಜನಿಗೆ ಈಗ ಭಯವಾಗ ತೊಡಗಿತು. ಪಕ್ಕದಲ್ಲೇ ಶವಾಗಾರ ಇದ್ರೂ ಏನೂ ಆಗಲ್ಲ. ಈಗ ಇದೇನು ಹೊಸ ಆಪತ್ತು? ಏನೇ ಆಗಲಿ ನನಗ್ಯಾಕೆ ಅದರ ಉಸಾಬರಿ, ನಾನು ಅದರ ತಂಟೆಗೆ ಹೋಗಲ್ಲ ಎಂದುಕೊಂಡು ತನ್ನ ಕಾರಿನ ಗಾಜಿಗೆ ನಾಲ್ಕು ಸುತ್ತಲೂ ಬಟ್ಟೆಯಿಂದ ಮುಚ್ಚಿ ಹೊದಿಕೆ ಹೊದ್ದು ಮಲಗಿದ.

“ರಾಜ್..” ಎಂದು ಕರೆದ ಹಾಗಾಯಿತು. ರಾಜ್ ಒಮ್ಮೆಲೆ “ಹಾ.. ಯಾರು…? ಯಾರು..?” ಮುಂದೆ ಮಾತಾಡಲು ಭಯವಾಯಿತು. ಆ ಕಡೆಯಿಂದಲೂ ಮತ್ತೆ ಪ್ರತಿಕ್ರಿಯೆ ಬರಲಿಲ್ಲ. ರಾಜ್ ಸಂಪೂರ್ಣ ಬೆವರಿ ಹೋಗಿದ್ದ. ಕೈ ಕಾಲು ನಡುಗುತ್ತಿತ್ತು. ಗಾಜಿಗೆ ಹಾಕಿದ್ದ ಬಟ್ಟೆ ಸರಿಸಿ ನೋಡುವುದಕ್ಕೂ ದೈರ್ಯ ಬರಲಿಲ್ಲ. ಯಾರೋ ತನ್ನ ಕಾರಿನ ಹತ್ತಿರ ನಡೆದುಕೊಂಡು ಬರುತ್ತಿರುವಂತೆ ಭಾಸವಾಗತೊಡಗಿತು. ಆ ಅಸ್ಪಷ್ಟ ಆಕೃತಿಯೇ ಇರಬಹುದೇ? ಮತ್ತಷ್ಟು ಭಯ ಹೆಚ್ಚಾಯಿತು. ಅಯ್ಯೋ ಅದೆಲ್ಲ ಭ್ರಮೆ ಅಂದುಕೊಂಡು ತನ್ನನ್ನೇ ತಾನು ಸಮಾಧಾನಿಸಿಕೊಳ್ಳಲು ಪ್ರಯತ್ನಿಸಿದ.

ಕಾರಿನ ಗಾಜಿನ ಬಾಗಿಲು ಬಡಿದರು. ರಾಜ್‌ಗೆ ದಿಗಿಲಾಯಿತು. ನನ್ನ ಕಥೆ ಮುಗಿಯಿತು ಎನ್ನುವಂತೆ ಮನಸ್ಸಿನಲ್ಲಿ ಅನಿಸಲು ಪ್ರಾರಂಭವಾಯಿತು. ಮತ್ತೊಮ್ಮೆ ಕಾರಿನ ಬಾಗಿಲು ಬಡಿಯಿತು. ಏನೇ ಆಗಲಿ ಒಮ್ಮೆ ನೋಡಿಯೇ ಬಿಡುತ್ತೇನೆ ಎಂದು ಕೊಂಡು ಮೆಲ್ಲನೆ ಕಾರಿನ ಗಾಜಿಗೆ ಅಡ್ಡ ಕಟ್ಟಿದ್ದ ಬಟ್ಟೆಯನ್ನು ಮೆಲ್ಲನೆ ಸರಿಸಿ ಇಣುಕಿದ. “ಅರೆ ಇದು ವಾಚ್ ಮನ್” ಸ್ವಲ್ಪ ಧೈರ್ಯ ತಂದುಕೊಂಡ. ಬಾಗಿಲು ತೆರೆದ. “ಅರೆ.. ಮಾವ.. ನೀನು? ಅದೂ ಈ ಹೊತ್ತಲ್ಲಿ?”

“ಹೌದು ನಾನೇ. ಈಗ ನನಗೆ ರಾತ್ರಿ ಪಾಳಿ ಕೆಲಸ. ಇದೇ ಆಸ್ಪತ್ರೆಯ ವಾಚ್ ಮ್ಯಾನ್ ಆಗಿ ಇದ್ದೀನಿ. ನೀನೇನು ಮಾಡ್ತಾ ಇದ್ದೀಯ ಇಲ್ಲಿ. ಮನೆಯಲ್ಲಿ ನಿನಗೋಸ್ಕರ ಕಣ್ಣೀರು ಹಾಕ್ತಾ ಇದ್ದಾರೆ ಗೊತ್ತಾ?”

ಈ ಮಾವನಿಗೆ ಏನಾಯ್ತು. ಇಷ್ಟು ಪ್ರೀತಿಯಿಂದ ಮಾತಾಡಿಸ್ತಾ ಇದ್ದಾನೆ ಎಂದೆನಿಸಿತು. ನಡೆದ ವಿಷಯವನ್ನೆಲ್ಲಾ ರಾಜ್ ಹೇಳಿದ. ತಾನು ಮತ್ತೆ ಮರಳಿ ಮನೆಗೆ ಹೋಗುವುದಾಗಿಯೂ ಹೇಳಿದ. ಮಾವ ಇವನ ಮೇಲೆ ಮತ್ತಷ್ಟು ಪ್ರೀತಿ ತೋರಿಸಿದ. ರಾಜ್ ಕೂಡ ಪ್ರೀತಿಯಿಂದಲೇ ಮಾತನಾಡಿದ. ತಂದೆ ತಾಯಿಯ ಕುರಿತು ವಿಚಾರಿಸಿದ. ತಾಯಿ ಪ್ರತಿ ದಿನವೂ ಮನನಿಗಾಗಿ ಅಳುತ್ತಿದ್ದಾಳೆ ಎಂದು ಕೇಳಿದಾಗ ದುಃಖವಾಯಿತು.

ಮನೆಯಲ್ಲಿ ಪೊಲೀಸ್ ಕಂಪ್ಲೆಂಟ್ ಎಲ್ಲ ಕೊಟ್ಟಿದ್ದರಂತೆ. ಆದ್ರೆ ಮಾವನೆ ಅವ ಹೋದ್ರೆ ಹಾಳಾಗಿ ಹೋಗಲಿ. ನಿಮ್ಮಿಬ್ಬರಿಗೂ ನಾನು ಇದ್ದೇನೆ. ಅಂತ ಒತ್ತಾಯ ಮಾಡಿ ರಾಜಜ್‌ನನ್ನು ಹುಡುಕುವುದು ಬೇಡ ಅಂತ ಒತ್ತಾಯದಿಂದ ತಡೆದಿದ್ದನಂತೆ. ಈ ಮಾತು ಕೇಳಿ ಮಾವ ಎಂತಾ ಕಟುಕ ಎಂದು ಕೋಪ ಬರುತ್ತಿದ್ದರೂ ತಡೆದುಕೊಂಡು ಬೇರೆ ವಿಷಯ ಮಾತನಾಡಿದರು.

ಬೆಳಿಗ್ಗೆ ಮೂರರ ಜಾವದವರೆಗೂ ಇಬ್ಬರೂ ಹರಟೆ ಹೊಡೆದರು. ಕೊನೆಗೆ ರಾಜ್ ನಾನು ಇಲ್ಲಿ ಇದ್ದೇನೆ ಅಂತ ಯಾರಿಗೂ ಹೇಳಬೇಡ. ನಾನು ಖಂಡಿತವಾಗಿಯೂ ಮನೆಗೆ ಹೋಗುತ್ತೇನೆ. ಸ್ವಲ್ಪ ಹಣ ಆಗುವವರೆಗೂ ಇಲ್ಲಿ ದುಡಿಯುತ್ತೇನೆ ಎಂದು ಹೇಳಿದ. ಮಾವನೂ ಅದಕ್ಕೆ ತಲೆಯಾಡಿಸಿ ನಾಳೆ ಸಿಗುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಟು ಹೋದ. ರಾಜ್ ಕೂಡ ತನ್ನ ಕಾರಿನಲ್ಲಿ ಮಲಗಿಕೊಂಡ.

ಅಂದಿನಿಂದ ರಾಜ್ ಮತ್ತು ಅವನ ಮಾವ ಇಬ್ಬರದ್ದೂ ಮಾತುಕತೆ ಪ್ರತಿದಿನವೂ ಮಾತುಕತೆ ನಡೆಯುತ್ತಿತ್ತು. ರಾಜ್‌ಗೆ ಒಂದು ವಿಷಯ ವಿಚಿತ್ರ ಅನ್ನಿಸಿತ್ತು. ಮಾವ ರಾತ್ರಿ 12 ಅಥವಾ 1 ಗಂಟೆಗೆ ಬರುತ್ತಾನಲ್ಲ. ಅದಕ್ಕಿಂತ ಮೊದಲು ಎಲ್ಲೂ ಕಾಣಿಸುವುದಿಲ್ಲ ಅಲ್ಲ. ಅದೂ 3 ಗಂಟೆಯ ನಂತರ ಎಲ್ಲಿ ಮಾಯವಾಗುತ್ತಾನೋ? ಇಲ್ಲಿ ಜಗಳವಾಡುವುದಕ್ಕೆ ಮತ್ತೇನೋ ಪ್ಲಾನ್ ಮಾಡ್ತಾ ಇರ್ಬೇಕು ಅನ್ನಿಸ್ತು. ಇರಲಿ, ನನ್ನ ಜೊತೆ ಚೆನ್ನಾಗಿ ಇದ್ದಾನಲ್ಲ ಅಷ್ಟೇ ಸಾಕು. ಹೀಗೆ ಎರಡು ತಿಂಗಳು ಕಳೆಯಿತು.

ಆದರೆ ಇವತ್ತೇಕೊ ಮಾವ ಬರಲಿಲ್ಲ. ಬಹುಶಃ ರಜೆ ಹಾಕಿರಬೇಕು ಎನ್ನಿಸಿತು. ಅವ ಬರುವುದೇ ಹನ್ನೆರಡು ಒಂದು ಗಂಟೆ ರಾತ್ರಿಗೆ. ಚೆನ್ನಾಗಿ ನಿದ್ದೆಯೂ ಇಲ್ಲ. ಇವತ್ತದರೂ ಚೆನ್ನಾಗಿ ಮಲಗ ಬೇಕು ಎನ್ನಿಸಿ ಚೆನ್ನಾಗಿ ಮಲಗಿದ. ಮರುದಿವಸವೂ ಮಾವನ ಪತ್ತೆ ಇಲ್ಲ. ಒಂದು ವಾರ ಆಯಿತು. ಮಾವ ಬರಲೇ ಇಲ್ಲ.

ಒಂದು ವಾರ ಕಳೆದರೂ ಮಾವನ ಬರಲೇ ಇಲ್ಲ. ರಾಜ್‌ಗೆ ಚಿಂತೆಯಾಗತೊಡಗಿತು. ಇಲ್ಲೇ ಎಲ್ಲೋ ಹತ್ತಿರದಲ್ಲಿ ಇದ್ದಾನೋ ಏನೋ ಎಂದು ನೋಡಿ ಬರುತ್ತೇನೆ ಎಂದುಕೊಂಡು ರಾತ್ರಿ ಹನ್ನೆರಡು ಗಂಟೆಯ ಸುಮಾರಿಗೆ ಕಾರಿನಿಂದ ಇಳಿದ. ಅಮಾವಾಸ್ಯೆಯ ದಿನ. ಆಗಸದಲ್ಲಿ ಕಗ್ಗತ್ತಲು. ರಸ್ತೆಯ ಅಂಚಿನಲ್ಲಿ ಇದ್ದ ವಿದ್ಯುತ್ ದೀಪಗಳು ಸೊಗಸಾಗಿ ಬೆಳಗುತ್ತಿದ್ದವು.

ಮಾವ ತಾನು ವಾಚ್ ಮ್ಯಾನ್ ಕುಳಿತುಕೊಳ್ಳುವ ಜಾಗ ಎಲ್ಲಿ ತಾನು ಯಾವತ್ತೂ ಹೇಳಿಕೊಂಡಿರಲಿಲ್ಲ. ರಾಜ್ ಕೂಡ ಕೇಳಲಿಲ್ಲ. ಆ ಕಡೆ ಈ ಕಡೆ ಹುಡುಕಾಡಿದ. ರಸ್ತೆಯಲ್ಲಿ ಒಂದೆರಡು ವಾಹನಗಳು ಹೋಗುತ್ತಿದ್ದವು ಬಿಟ್ಟರೆ ಬೇರೆ ಯಾರೂ ಕಾಣ ಸಿಗಲಿಲ್ಲ. ಆಸ್ಪತ್ರೆಯ ಮುಂಭಾಗಕ್ಕೆ ಹೋಗಿ ವಿಚಾರಿಸುವೆ ಎಂದು ಎನಿಸಿತು. ಸುಮ್ಮನೆ ಯಾಕೆ ಈ ಮಧ್ಯರಾತ್ರಿ ಯಲ್ಲಿ ಅವರಿಗೆ ಕಿರಿಕಿರಿ ಕೊಡುವುದು ನಾಳೆ ಬೆಳಿಗ್ಗೆ ಕೇಳಿದರಾಯಿತು ಎಂದುಕೊಂಡು ತನ್ನ ಕಾರು ನಿಲ್ಲಿಸಿದ ಜಾಗಕ್ಕೆ ಬಂದ.

ದೂರದಲ್ಲಿ ಶವಾಗಾರದ ಬಾಗಿಲಿನಲ್ಲಿ ಯಾರೋ ನಿಂತಂತೆ ಕಂಡಿತು. ನೋಡುವುದಕ್ಕೆ ಮಾವನಂತೆ ಇತ್ತು. “ಮಾವಾ..” ಎಂದು ಕೂಗಿದ. ಪ್ರತಿಕ್ರಿಯೆ ಬರಲಿಲ್ಲ. ಮಾವ ಏನೋ ಕೈ ಸನ್ನೆ ಮಾಡುತ್ತಾ ಶವಾಗಾರದ ಒಳಗೆ ಹೋದಂತೆ ಕಂಡಿತು. ಕಾರಿಗೆ ಲಾಕ್ ಹಾಕಿ ತಾನು ಹೋಗುತ್ತೇನೆ ಎಂದು ಕೊಂಡು ರಾಜ್ ಹೊರಟ. ರಾಜ್ ಗೆ ಭಯವಾಯಿತು.

ಅಯ್ಯೋ ನಾನ್ಯಾಕೆ ಭಯ ಪಡಬೇಕು ಮಾವ ಇದ್ದಾನಲ್ಲ. ಜೊತೆಗೆ ಇಷ್ಟು ಸಮಯ ನಾನು ಇಲ್ಲಿ ಇದ್ದೇನೆ ನನಗೆ ಯಾವ ಸಮಸ್ಯೆಯೂ ಆಗಿಲ್ಲ. ಹಾಗಾಗಿ ಭಯ ಪಡುವುದರಲ್ಲಿ ಅರ್ಥ ಇಲ್ಲ ಎಂದುಕೊಂಡು ನೇರವಾಗಿ ಶವಾಗಾರ ಪ್ರವೇಶಿಸಿದ. ಬೆಡ್ ಮೇಲೆ ಎಲ್ಲಾ ಶವಗಳಿಗೂ ಬಟ್ಟೆ ಸುತ್ತಿ ಇಡಲಾಗಿತ್ತು. ಕೆಂಪು ಬಣ್ಣದ ಒಂದು ವಿದ್ಯುತ್ ದೀಪ ಉರಿಯುತ್ತಿತ್ತು. ಮಾವ ಎಲ್ಲಿದ್ದಾನೆ ಎಂದು ಕಣ್ಣಾಡಿಸಿದ. ಮಾವ ಕಾಣಲಿಲ್ಲ.

“ಮಾವ” ಎಂದು ಕರೆದ. ಯಾರು ಕಾಣಿಸಲಿಲ್ಲ. ಸುತ್ತಲೂ ದಿಟ್ಟಿಸಿ ನೋಡಿದ ಶವಗಳು ನಗುತ್ತಿರುವಂತೆ ಕಂಡಿತು. ರಾಜ್‌ನಿಗೆ ನಡುಕ ಉಂಟಾಯಿತು. ಹಿಂದೆ ಹೋಗುತ್ತೇನೆ ಎಂದುಕೊಂಡ. ಬೇಡ ನಾನ್ಯಾಕೆ ಸುಮ್ಮನೆ ಇಲ್ಲ ಸಲ್ಲದ್ದನ್ನು ಕಲ್ಪಿಸಿ ಕೊಂಡು ಭಯಪಡಲಿ? ಅವ ಇಲ್ಲೇ ಎಲ್ಲೋ ಇರಬೇಕು ಹುಡುಕುತ್ತೇನೆ ಎಂದು ಮುಂದುವರಿದ. ಮಾವ ಎಂದು ಕರೆಯುತ್ತಾ ಶವಾಗಾರದ ಎರಡನೇ ಕೋಣೆಗೆ ಹೋದ. ಅಲ್ಲೂ ಮಾವ ಕಾಣಿಸಲಿಲ್ಲ. ಜೋರಾಗಿ ಒಮ್ಮೆ ಹೊರಗಡೆ ಗಾಳಿ ಬೀಸಿತು. “ಟಕ್” ಎಂದು ಏನೋ ಕೆಳಗೆ ಬಿದ್ದಂತಾಯಿತು.

ತಾನು ಒಳಗೆ ಬಂದ ಬಾಗಿಲು ಮುಚ್ಚಿಕೊಂಡ ಸದ್ದು ಅದು. ಒಹ್ ಅದು ಬಾಗಿಲು ಗಾಳಿಗೆ ಮುಚ್ಚಿಕೊಂಡದ್ದು ಇರಬೇಕು. ತಕ್ಷಣ ಬಾಗಿಲ ಮೇಲೆ ಇದ್ದ ಬಲ್ಬ್ ಸದ್ದು ಮಾಡಿ ಕೆಳಗೆ ಬಿತ್ತು. ಪುಣ್ಯ ಎರಡನೇ ಕೋಣೆಯ ಬೆಳಕು ಸರಿಯಾಗೇ ಇತ್ತು. ರಾಜ್‌ಗೆ ಭಯವಾಯಿತು. ಮಾವ ಎಂದು ಕೂಗಿದ. ಮುಂದೆ ಕಣ್ಣರಳಿಸಿ ರಾಜ್ ನೋಡಿದಾಗ ಮಾವ ಶವಾಗಾರದ ಮೂರನೇ ಕೊಠಡಿಯಲ್ಲಿ ಬೆಡ್‌ನಲ್ಲಿದ್ದ ಶವದ ಪಕ್ಕದಲ್ಲಿ ಕುಳಿತು ಕೈ ಸನ್ನೆ ಮಾಡುತ್ತಿದ್ದ.

“ಅಬ್ಬಾ ಬದುಕಿಕೊಂಡೆ” ಎಂದು ರಾಜ್ ಉದ್ಗರಿಸಿದ. ಇವನಿಗೆ ಬಾಯಿ ಬರುವದಿಲ್ವಾ ಆಗ ಕೂಡ ಕೈ ಸನ್ನೆ ಮಾಡಿದ ಈಗ ಕೂಡ ಸನ್ನೆ ಮಾಡ್ತಾ ಇದ್ದಾನಲ್ಲ ಮನಸ್ಸೊಳಗೆ ಮಾವನಿಗೆ ಬೈದ. ತಕ್ಷಣ ಹಿಂದಿನಿಂದ ಬಾಟಲ್ ಬಿದ್ದ ಸದ್ದಾಯಿತು. ಹಿಂದೆ ತಿರುಗಿದ. ಕತ್ತಲಲ್ಲಿ ಏನೂ ಕಾಣಿಸಲಿಲ್ಲ. “ಹಾಳಾಗಿ ಹೋಗಲಿ. ಹಾ… ಮಾವ ಬಂದೆ” ಎಂದು ಎದುರು ನೋಡಿದಾಗ ಮಾವ ಕಾಣಿಸ್ತಾ ಇಲ್ಲ! ಮಾವ ಕುಳಿತಿದ್ದ ಜಾಗದಿಂದ ಹೊಗೆ ಮೇಲೆ ಹೋಗುತ್ತಿರುವಂತೆ ಕಂಡಿತು.

ಕೈ ಕಾಲು ನಡುಗ ತೊಡಗಿತು. ಬಾಯಲ್ಲಿ ಮಾತೇ ಹೊರ ಬರುತ್ತಿಲ್ಲ. ರಾಜ್ ಬೆವತು ಹೋಗಿದ್ದಾನೆ. ತಕ್ಷಣ ಆಂಜನೇಯನ ಮಂತ್ರ ಹೇಳುತ್ತೇನೆ ಎಂದು “ಜೈ ಹನುಮಾನ ಜ್ಞಾನ ಗುಣಸಾಗರ ಜೈ ಕಪೀಶ್‌… ” ಮುಂದೆ ನೆನಪೇ ಆಗುತ್ತಿಲ್ಲ. “ರಾಜ್.. ರಾಜ್” ಯಾರೋ ಹಿಂದಿನಿಂದ ಕರೆದರು. ಹಿಂದಿರುಗಿ ನೋಡುವಷ್ಟು ಧೈರ್ಯ ರಾಜ್‌ಗೆ ಇರಲಿಲ್ಲ. ತಾನೀಗ ಚಕ್ರವ್ಯೂಹದಲ್ಲಿ ಸಿಲುಕಿದ್ದೇನೆ ಎಂಬುದು ಈಗ ಅರಿವಾಯಿತು. ಈಗೇನು ಮಾಡುವುದು ದಿಕ್ಕೇ ತೋಚುತ್ತಿಲ್ಲ.

ಮತ್ತೊಮ್ಮೆ ಹಿಂದಿನಿಂದ “ರಾಜ್.. ರಾಜ್…” ಕರೆದ ಶಬ್ದ. ಓರೆ ಕಣ್ಣಿನಲ್ಲಿ ಹಿಂದೆ ನೋಡಿದ ಏನೋ ಒಂದು ವಿಚಿತ್ರ ಆಕೃತಿ ಬಾಗಿಲು ತೆಗೆದು ಒಳಗೆ ಬರುತ್ತಿತ್ತು. ಮೆಲ್ಲ ಮೆಲ್ಲನೆ ಮುಂದೆ ಮುಂದೆ ನಡೆದು ಕೊಂಡು ಹೋದ. ತನ್ನ ಕಾಲಿಗೆ ಹಗ್ಗ ಕಟ್ಟಿ ಎಳೆದಂತೆ ಆಯಿತು. ಹಿಂದೆ ನೋಡಿದ ಅದೇ ಅಷ್ಪಷ್ಟ ಆಕೃತಿ ನಗುತ್ತಿತ್ತು. ರಾಜ್ ಮತ್ತೆಂದೂ ಹಿಂದೆ ನೋಡಲಿಲ್ಲ. ಓಡುವುದಕ್ಕೆ ಪ್ರಾರಂಭಿಸಿದ. ಕಾಲಿಗೆ ಏನೋ ಸಿಕ್ಕಿಕೊಂಡಂತೆ ಆಯಿತು. ಓಡುತಿದ್ದ ರಭಸದಲ್ಲಿ ನೆಲಕ್ಕೆ ಬಿದ್ದ.

ಕರೆಂಟ್ ಹೋಯಿತು. ದೇವರೇ ನನಗೆ ಇನ್ನು ನೀನೇ ಗತಿ ಎಂದು ಒಮ್ಮೆ ಕಣ್ಣು ಮುಚ್ಚಿದ. ತನ್ನನ್ನು ಯಾರೋ ಹಗ್ಗ ಕಟ್ಟಿ ಎಳೆಯುತ್ತಿದ್ದಾರೆ ಎನಿಸಿತು. ಜಾಡಿಸಿ ಒದ್ದ. ತಾನು ತುಳಿದ ರಭಸಕ್ಕೆ ಗಾಜಿನ ಬಾಟಲಿಗಳೆಲ್ಲ ನೆಲಕ್ಕೆ ಬಿದ್ದಂತೆ ಜೋರಾಗಿ ಸದ್ದಾಯಿತು. ದೂರದಲ್ಲಿ ಏನೋ ಒಂದು ಬೆಳಕು ಕಂಡಿತು. ಅದೇ ಕಡೆ ಆಸ್ಪತ್ರೆ ಇರಬಹುದುದೆಂದು ಕೊಂಡು ಎದ್ದು ಮತ್ತೆ ಓಡಲು ಆರಂಭಿಸಿದ. ಇನ್ನೇನು ಆಸ್ಪತ್ರೆಯನ್ನು ಪ್ರವೇಶಿಸುತ್ತೇನೆ ಎಂದಾಗ ಶವಾಗಾರದ ಬಾಗಿಲು ಮುಚ್ಚಿಕೊಂಡಿತು.

ಆದದ್ದಾಗಲಿ ಎಂದುಕೊಂಡು ಬಾಗಿಲಿಗೆ ಜೋರಾಗಿ ಒದ್ದುಬಿಟ್ಟ. ಬಾಗಿಲು ತೆರೆದುಕೊಂಡಿತು. ಆಸ್ಪತ್ರೆಯ ಒಳಗೆ ಬಂದು ಸೇರಿದ. ಅಲ್ಲೇ ಲಿಫ್ಟ್‌ನ ಪಕ್ಕದಲ್ಲಿದ್ದ ವಾಚ್ ಮ್ಯಾನ್ “ಏನಾಯ್ತು. ಏನಾಯ್ತು? ಯಾರು ನೀನು?” ಗಾಬರಿಯಿಂದ ಕೇಳಿದ. ರಾಜ್‌ಗೆ ಈಗ ಮಾತದುವಷ್ಟು ಶಕ್ತಿ ಉಳಿದಿರಲಿಲ್ಲ. ಕೈ ಸನ್ನೆಯಲ್ಲೆ “ನೀರು ನೀರು” ಎಂದು ಕೇಳಿದ. ವಾಚ್ ಮ್ಯಾನ್ ನೀರು ಕೊಟ್ಟ. ನಿಧಾನವಾಗಿ ಏದುಸಿರು ಬಿಡುತ್ತಾ ರಾಜ್ ನಡೆದ ಘಟನೆ ಎಲ್ಲವನ್ನೂ ತಿಳಿಸಿದ.

ಆಗ ವಾಚ್ ಮ್ಯಾನ್. “ಅಯ್ಯೋ ಪುಣ್ಯಾತ್ಮ ಆ ಕಡೆ ಯಾರೂ ವಾಚ್ ಮ್ಯಾನ್ ಇಲ್ಲ”

“ಇದ್ದಾರೆ ಸರ್. ನನ್ನ ಮಾವ”

“ಇಲ್ಲ ಕಣಯ್ಯ.. ಯಾರು ಇಲ್ಲ. ನಿನ್ನ ಮಾವನ ಹೆಸರೇನು?”

“ರಾಮಣ್ಣ”

“ರಾಮಣ್ಣನಾ..? ನಾನು ಈ ಹೆಸರು ಕೇಳೆ ಇಲ್ಲ ಅಲ್ಲ. ಇಲ್ಲಿನ ಬಗ್ಗೆ ಹೆಚ್ಚು ನನಗೆ ಗೊತ್ತಿಲ್ಲ. ನಾನು ಬಂದು ಒಂದು ವಾರ ಆಯ್ತು ಅಷ್ಟೇ.” ಅಂದ.

“ಓಹ್.. ಹೌದಾ. ನನ್ನ ಮಾವ ಈ ಕಡೆ ಬಾರದೇ ಒಂದು ವಾರ ಆಯ್ತು. ಬಡುಕಿಕೊಂಡೆ ನನ್ನನ್ನು ಆ ದೇವರೇ ಬದುಕಿಸಿದ್ದು ಅಣ್ಣ. ನಂಗೆ ಮೊದಲಿನಿಂಲೂ ಗೊತ್ತಿತ್ತು. ಆ ಶವಾಗಾರದೊಳಗೆ ಏನೋ ಇದೆ ಎಂದು. ಈಗ ಖಾತ್ರಿ ಆಯ್ತು”

ಈ ವಿಷಯ ಕೇಳಿ ವಾಚ್ ಮ್ಯಾನ್‌ಗೂ ಕೈ ಕಾಲು ನಡುಗಲು ಆರಂಭಿಸಿತು. ಆದರೂ ಧೈರ್ಯ ತಂದುಕೊಂಡು “ಅಯ್ಯಯ್ಯೋ ಹಾಗೇನಿಲ್ಲ. ಹೆದರ್ಕೋಬೇಡಿ. ನಾನಿದ್ದಿನಿ ಅಲ್ವಾ. ಹೊರಗಡೆ ಬನ್ನಿ ಮಾತಾಡುವ” ಎಂದು ಹೇಳಿ ಹೊರಗಡೆ ಕರೆದು ಕೊಂಡು ಬಂದ. ಆಗ ಆಸ್ಪತ್ರೆಯ ಮುಂಭಾಗದ ವಾಚ್ ಮ್ಯಾನ್ ಕೂಡ ಜೊತೆಯಾದ. ಅವನು ಕೂಡ ವಾಚ್ ಮ್ಯಾನ್ ಆಗಿ ಕೆಲಸಕ್ಕೆ ಸೇರಿ ಎರಡು ದಿನ ಆದದ್ದು ಅಂತೆ.

ಮೂವರೂ ಕಾರು ಪಾರ್ಕಿಂಗ್ ಮಾಡಿದ್ದ ಜಾಗಕ್ಕೆ ಬಂದರು. ರಾಜ್ ಇನ್ನೂ ನಡುಗುತ್ತಿದ್ದ. ಇಬ್ಬರೂ ರಾಜ್‌ಗೆ ಸಾಕಷ್ಟು ದೈರ್ಯ ತುಂಬಿದರು. ರಾಜ್ ಸ್ವಲ್ಪ ಧೈರ್ಯ ತೋರಿಸಿದ ಬಳಿಕ ಅವರಿಬ್ಬರೂ ಹೊರಟು ಹೋದರು. ಸಮಯ ಸುಮಾರು ಬೆಳಗ್ಗಿನ ಜಾವ 3 ಗಂಟೆಯಾಗಿತ್ತು. ರಾಜ್ ಕಾರಿನಲ್ಲಿ ಅರೆ ಧೈರ್ಯದಿಂದ ಮುಸುಕೆಳೆದುಕೊಂಡು ಮಲಗಿದ. ಮರುದಿನ ಬೆಳಿಗ್ಗೆ ಎದ್ದವನಿಗೆ ರಾತ್ರಿಯ ಎಲ್ಲಾ ದೃಶ್ಯಗಳು ಕಣ್ಣಿನ ಎದುರು ಬರುತ್ತಿತ್ತು. ತಾನು ಬದುಕಿ ಉಳಿದದ್ದು ಸೋಜಿಗ ಎನಿಸಿತ್ತು.

ಮನೆಗೆ ಹೋಗಬೇಕು ಎಂದು ಎನಿಸಿತು. ಹೋಗಿಯೇ ಬಿಡುತ್ತೇನೆ ಎಂದು ನಿರ್ಧರಿಸಿ ಹೊರಟೇ ಬಿಟ್ಟ. ಮನೆಯ ಮುಂದೆ ಕಾರ್ ನಿಲ್ಲಿಸಿದ. ಅಮ್ಮ ಬಟ್ಟೆ ಒಗೆಯುತ್ತಿದ್ದಳು. ಅಪ್ಪ ತೆಂಗಿನಕಾಯಿ ಸುಲಿಯುತ್ತಿದ್ದ. ಮಗ ಬಂದದ್ದನ್ನು ನೋಡಿ ಇಬ್ಬರಿಗೂ ಆಶ್ಚರ್ಯವಾಯಿತು. ಜೊತೆಗೆ ಅಳು ಉಕ್ಕಿ ಬಂತು. ಅಪ್ಪ ಅಮ್ಮ ಇಬ್ಬರೂ ಓಡೋಡಿ ಬಂದು ಮಗನನ್ನು ಅಪ್ಪಿ ಹಿಡಿದರು. ಸ್ವಲ್ಪ ಹೊತ್ತಿನ ಬಳಿಕ ಮಗನನ್ನು ಮನೆಯ ಒಳಗೆ ಕರೆದು ಕೊಂಡು ಹೋಗಿ, ಚಾಹ ಕುಡಿಯಲು ಕೊಟ್ಟರು. ಅಮ್ಮ ಮಗನನ್ನು ಅಪ್ಪಿ ಮತ್ತೊಮ್ಮೆ ಮುದ್ದಾಡಿದಳು. ಮತ್ತೊಮ್ಮೆ ಮನೆ ಬಿಟ್ಟು ಹೋಗುವುದಿಲ್ಲ ಎಂದು ಮಗನಿಂದ ಪ್ರಮಾಣ ಮಾಡಿಸಿದಳು. ಅಪ್ಪ ರಾಜ್‌ನ ತಲೆ ಸವರುತ್ತಿದ್ದ.

ರಾಜ್‌ಗೆ ನಿನ್ನೆ ನಡೆದ ಘಟನೆ ನೆನಪಾಯಿತು. ಮನೆಯಲ್ಲಿ ಮಾವ ಕಾಣಲಿಲ್ಲ. ತಕ್ಷಣ ಕೇಳಿದ “ಅಮ್ಮ.. ಮಾವ ಎಲ್ಲಿ?” ಅಮ್ಮನ ಕಣ್ಣಲ್ಲಿ ನೀರು ಬಂತು. “ಅಮ್ಮ ಏನಾಯ್ತು?” ಆಗ ಅಪ್ಪ ಎಂದ “ಮಗಾ. ನಿನ್ನ ಮಾವ ತೀರಿ ಹೋಗಿ ಎರಡು ತಿಂಗಳಾಯಿತು!”

ಅಂಕಿತ
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

Prev Post

ಎದೆಗೂಡ ತಟ್ಟಿ ಹೋದ ಹುಡುಗಿ ಮನದಾಚೆ ಮಾಯವಾದಳು | ದರ್ಶನ್ ಕುಮಾರ್

Next Post

ತಪ್ಪು ಅನಂತ ಪ್ರೀತಿ ಬೆಸೆದ ಆ ದೇವನದ್ದಾ? | ರಂಜಿತ ಹೆಚ್. ಕೆ

post-bars

Leave a Comment

Related post