Back To Top

 ಕಟ್ಟುಪಾಡುಗಳ ಗೆರೆದಾಟಿ ಸಮಾಜಕ್ಕೆ ಬಲಿಯಾದ ಮಾಲತಿಯ ಕಥನ | ವಿಕಾಸ್ ರಾಜ್ ಪೆರುವಾಯಿ

ಕಟ್ಟುಪಾಡುಗಳ ಗೆರೆದಾಟಿ ಸಮಾಜಕ್ಕೆ ಬಲಿಯಾದ ಮಾಲತಿಯ ಕಥನ | ವಿಕಾಸ್ ರಾಜ್ ಪೆರುವಾಯಿ

ಕನ್ಯಾಬಲಿ… ಇದು ಜೀವನದಲ್ಲಿ ದುರಂತಗಳನ್ನೇ ಕಂಡ ಮಾಲತಿಯ ಕಥೆ. ಕಥೆಯೆಂದರೆ ಸಾಮಾನ್ಯ ಕಥೆಯಲ್ಲ ಇದು ಸಮಾಜದಲ್ಲಿ ಯಾರಿಗೂ ಬೇಡವಾದವಳ ವ್ಯಥೆಯ ಕಥೆ. ಹೆಣ್ಣೊಬ್ಬಳನ್ನು ಒಂದು ಸಮಾಜ ಯಾವ ರೀತಿ ಕಂಡಿತು. ಅದು ಅವಳನ್ನು ಎಲ್ಲಿಗೆ ಕೊಂಡೊಯ್ಯಿತು, ಎಂದು ಎಳೆ ಎಳೆಯಾಗಿ ಕನ್ಯಾಬಲಿ ಎಂಬ ಕಾದಂಬರಿಯ ಮೂಲಕ ಕೋಟ ಶಿವರಾಮ ಕಾರಂತರು ತಿಳಿಸಿಕೊಟ್ಟಿದ್ದಾರೆ.

ಮಾಲತಿ! ಅವಳ ಹೆಗಲ ಮೇಲೆ ಈಗ ಅನಿಷ್ಟವೆಂಬ ಹೊರೆಯಿದೆ. ಅದನ್ನು ಹೇಗಾದರೂ ಮಾಡಿ ಕೆಳಗಿಳಿಸಲೇಬೇಕೆಂಬ ಹುಚ್ಚು ಹಂಬಲ ಅವಳಲ್ಲಿದೆ. ಎಲ್ಲರಂತೆ ನನಗೂ ಸ್ವಚ್ಛಂದವಾಗಿ ಹಕ್ಕಿಯಂತೆ ಹಾರಾಡಬೇಕು ಎಂಬ ಬಯಕೆ ಇದೆ. ಆದರೆ ಸಮಾಜ ಒಪ್ಪುವುದೇ? ಅವಳು ಪುರಾಣ ಓದಿಕೊಂಡು ದಿನ ದೂಡುವ ಮುದುಕಿಯ ಪ್ರಾಯದವಳಲ್ಲ. ಇನ್ನೂ ಪ್ರಪಂಚದ ಬೆಳಕನ್ನು ಸರಿಯಾಗಿ ಕಾಣದ ಹಾಲುಗಲ್ಲದ ಮುಗ್ಧ ಬಾಲೆ.

ಆದರೆ ಸಮಾಜದ ಕಣ್ಣಿನಲ್ಲಿ ಅವಳೊಬ್ಬಳು ವಿಧವೆ! ಎಲ್ಲರಿಂದಲೂ ಅವಳನ್ನು ದೂರವಿಡಲು ಜನರಿಗೆ ಈ ಒಂದು ಶಬ್ಧವೇ ಸಾಕಿತ್ತು. ವಿಧವೆಯಾದರೇನು ಅವಳು ಹೆಣ್ಣಲ್ಲವೇ? ಅವಳಿಗೂ ಭಾವನೆಗಳಿಲ್ಲವೇ? ಅವಳ ಅಂತರಂಗವು ಸುಖದ ಅನ್ವೇಷಣೆಯನ್ನು ಮಾಡಬಾರದೇ? ಇಡೀ ಕುಟುಂಬ ಸಡಗರದಲ್ಲಿರಬೇಕಾದರೆ ಅವಳು ಮಾತ್ರ ಮೂಲೆಯ ಸಂಗಾತಿಯಾಗಬೇಕೇ? ದಾಂಪತ್ಯವೆಂದರೆ ಏನೆಂದೇ ಅರಿಯದ ಸಮಯದಲ್ಲಿ ಗಂಡನನ್ನು ಕಳೆದುಕೊಂಡ ಹದಿಹರೆಯದ ಬಾಲಕಿ ಸಮಾಜದ ಪಾಲಿಗೆ ಅನಿಷ್ಟವಾಗುತ್ತಾಳೆ. ಅವಳು ಎಲ್ಲರಿಗೂ ತಾತ್ಸಾರವಾಗುತ್ತಾಳೆ, ಎಲ್ಲರ ಕಣ್ಣಿಗೆ ಅಪಶಕುನದ ಮೂರ್ತಿಯಾಗುತ್ತಾಳೆ. ಸಮಾಜ ಸಾಯಲಿ, ಜನುಮದಾತನೂ ಅವಳ ಆಸೆಗಳಿಗೆ ಮಣ್ಣೆರಚುವುದೇ?

ಮಾಲತಿ ಕಟ್ಟುಪಾಡುಗಳನ್ನು ಮೆಟ್ಟಿ ಮನೆಯಿಂದ ಹೊರ ಬರುತ್ತಾಳೆ ಕಾಲು ಕರೆದೊಯ್ದಲ್ಲಿಗೆ ನಡೆಯುತ್ತಾಳೆ. ಹಸಿವೆಯಿಂದ ಬಳಲುತ್ತಾಳೆ, ಬಾಯಾರಿಕೆಯಿಂದ ಒದ್ದಾಡುತ್ತಾಳೆ, ಕಾಡಿನ ಮರಗಳ ಬುಡಗಳಲ್ಲಿಯೇ ಆಶ್ರಯವನ್ನು ಪಡೆಯುತ್ತಾಳೆ. ಮಂಗಳೂರಿನ ಮಂಗಳಾದೇವಿಯ ಸನ್ನಿಧಿಯಲ್ಲಿ ಬಿಕ್ಷುಕರಂತೆ ಕೂರುತ್ತಾಳೆ, ಒಂದಗುಳು ಅನ್ನಕ್ಕಾಗಿ ಹಾತೊರೆಯುತ್ತಾಳೆ. ಏನೂ ಸಿಗದಿರುವಾಗ ಎಸೆದ ಬಾಳೆಹಣ್ಣಿನ ಸಿಪ್ಪೆಯನ್ನೇ ತಿಂದು ಉದರಾಗ್ನಿಯನ್ನು ತಣಿಸುತ್ತಾಳೆ.

ಕನ್ಯಾಬಲಿ ಕಾದಂಬರಿ

ಉತ್ತಮ ಕುಲದಲ್ಲಿ ಜನಿಸಿದ ಹೆಣ್ಣು ಮಗಳಾದರೂ ಸಮಾಜದ ಕಟ್ಟಳೆಯನ್ನು ಮುರಿದು ಬಂದು ನಾನು ನನಗಾಗಿ ಬದುಕಬೇಕೆಂದು ಬಯಸಿ ಅನ್ನ ನೀರಿಗೂ ಹಾತೊರೆಯುತ್ತಾಳೆ. ಅವಳು ತುಂಬು ಜೌವನೆ. ಓಡಾಟ ಹಸಿವೆ ತೃಷೆಗಳಿಂದ‌ ಅವಳ ಸೌಂದರ್ಯ ಮರೆಮಾಚಿದ್ದರೂ ದೇಹದ ಕಾಂತಿಯು ಕುಂದಿರಲಿಲ್ಲ‌. ಕೆಲವರಂತು ಅವಳ ಸ್ಥಿತಿಯನ್ನೂ ನೋಡಿ ಮರುಗಿದರು ಕನಿಕರವನ್ನೂ ತೋರಿಸಿದರು. ಆದರೆ ಸಮಾಜ ಬಹಳ ಕೊಳಕು. ಅವರ ಕನಿಕರದ ಉದ್ದೇಶ ಬೇರೆಯದ್ದೇ ಆಗಿತ್ತು.

ಆದರೆ ಈ ಹಸಿವು ಎಂಬುದು ಎಷ್ಟೊಂದು ಕ್ರೂರಿ ಅಲ್ಲವೇ ? ಎಂತಹ ನೀಚ ಕೆಲಸವನ್ನೇ ಆಗಲಿ ಅದು ನಮ್ಮಿಂದ ಮಾಡಿಸುತ್ತದೆ. ಹಸಿವಿನಿಂದ ಇನ್ನೇನು ನನ್ನ ಜೀವವೇ ಹಾರಿಹೋಗುತ್ತದೆ ಎನ್ನುವ ಸಂಧರ್ಭದಲ್ಲಿ ಹೊಟ್ಟೆಯ ಅಗ್ನಿಯನ್ನು ತಣಿಸಿದವರು ಅವನು ಯಾರೇ ಆಗಲಿ ಅವನು ಯಾವ ಹಸಿವೆಯನ್ನು ಇಟ್ಟುಕೊಂಡು ನನ್ನ ಬಳಿಗೆ ಬಂದಿರುವರೋ ಆ ಹಸಿವನ್ನು ತಣಿಸುವುದು ಕೃತಜ್ಞತಾ ಭಾವ ಎಂದು ತಿಳಿದ ಮಾಲತಿ ಅನ್ಯ ಗತಿಯನ್ನು ಕಾಣದೆ ನಾವೇನು ಹೀನ ವೃತ್ತಿ ಎಂದು ಕರೆಯುತ್ತೇವಲ್ಲಾ ಆ ವೃತ್ತಿಯತ್ತ ಅವಳು ಹೆಜ್ಜೆಯನ್ನಿಡುತ್ತಾಳೆ. ಅವಳಾಗೇ ಆ ಹೆಜ್ಜೆಯನ್ನು ಇಟ್ಟದ್ದಲ್ಲ ಈ ಕ್ರೂರ ಸಮಾಜ ಅವಳಿಂದ ಆ ಹೆಜ್ಜೆಯನ್ನಿರಿಸಿತು.

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಎಂದು ದಾಸರು ಹೇಳಿಲ್ಲವೇ. ಮಾಲತಿಯ ಸ್ಥಿತಿಯು ಅದೇ ಆಗಿದೆ. ತಾನು ಮಾಡುತ್ತಿರುವುದು ಸರಿಯೇ ತಪ್ಪೇ ಎನ್ನುವ ವಿವೇಚನೆ ಅವಳಿಗಿಲ್ಲ. ಇಡೀ ಸಮಾಜವು ನನ್ನ ಮೇಲೆ ತೋರಿದ ದಾಷ್ಟ್ಯವು ಸರಿಯಾದರೆ ನಾನಿಂದು ಮಾಡುತ್ತಿರುವುದೂ ಸರಿ ಎಂದು ಅವಳಿಗವಳೇ ಸಮಾಧಾನವನ್ನು ತಂದುಕೊಳ್ಳುವಳು . ಆದರೆ ಇದಾವುದನ್ನು ಅವಳು ಮನಸಾರೆ ಮಾಡುತ್ತಿರಲಿಲ್ಲ ಸಮಯ ಸಂದರ್ಭ ಅವಳಿಂದ ಇವೆಲ್ಲವನ್ನೂ ಮಾಡಿಸಿತು. ಮನಸ್ಸಿನಿಂದ ಅವಳು ಎಂದಿಗೂ ಪರಿಶುದ್ಧಳೇ ಆಗಿದ್ದಳು. ಜೀವನದಲ್ಲಿ ಮತ್ತಷ್ಟು ಕಷ್ಟಗಳು ಅವಳನ್ನಾವರಿಸಿದವು. ಹೆಜ್ಜೆ ಹೆಜ್ಜೆಗೂ ದಾರಿದ್ರ್ಯ ಎಂಬುದು ಅವಳನ್ನು ಹಿಂಬಾಲಿಸಿತು.

ಮಂಗಳೂರಿನಿಂದ ಪುತ್ತೂರಿಗೆ ಅಲ್ಲಿಂದ ಮೈಸೂರಿಗೆ ಮೈಸೂರಿನಿಂದ ಬೆಂಗಳೂರಿಗೆ ಹೀಗೆ ಅವಳ ಪಯಣ ಮುಂದುವರೆಯುತ್ತಲೇ ಇತ್ತು. ಆದರೆ ಸುಖ ನೆಮ್ಮದಿ ಎಂಬುದನ್ನು ಭಗವಂತ ಅವಳ ಹಣೆಯಿಂದ ಶಾಶ್ವತವಾಗಿ ಅಳಿಸಿ ಬಿಟ್ಟಿದ್ದನೋ ಏನೋ? ಮಾಲತಿ ಎಷ್ಟೇ ಕಷ್ಟ ಬಂದರೂ ಜಗ್ಗಲಿಲ್ಲ ಮತ್ತೆ ಪುಟಿದೇಳುತ್ತಲೇ ಇದ್ದಳು. ತನ್ನ ಜೀವನದ ಸಂಪೂರ್ಣ ದಾರಿದ್ರ್ಯವನ್ನು ನೆನೆದು ಕಂಬನಿಯ ಕಡಲಲ್ಲಿ ಮಿಂದೇಳುತ್ತಿದ್ದಳು. ಬೇಸರವೇನೇ ಇದ್ದರೂ ಅದನ್ನು ಬದಿಗೊತ್ತಿ ಬದುಕುತ್ತೇನೆ, ಬದುಕಿಯೇ ತೀರುತ್ತೇನೆ ಎಂದು ಕಟಿಬದ್ಧಳಾಗುತ್ತಿದ್ದಳು.

ತಾನು ಹಿಡಿದ ವೃತ್ತಿಯ ಫಲವಾಗಿ ಅವಳು ಒಮ್ಮೆ ಐಶ್ವರ್ಯವಂತಳಾದಳು, ಹಾಗೆಂದು ಹೆಚ್ಚು ಹಿಗ್ಗಲಿಲ್ಲ. ಎಲ್ಲವೂ ಕ್ಷಣಿಕ ಎಂದು ಅವಳಿಗೂ ತಿಳಿದಿತ್ತು. ಸಂಪತ್ತು ಎಷ್ಟೇ ಇದ್ದರೂ ಅವೆಲ್ಲವನ್ನೂ ತಾನಾಗಿಯೇ ಬದಿಗೊತ್ತಿ ಮತ್ತೆ ಹಂಗಿನ ಬದುಕನ್ನು ತೊರೆದು ಬೀದಿ ಪಾಲಾಗಿದ್ದಾಳು.

ಶಿವರಾಮ ಕಾರಂತ

ಆದರೆ ಈಗ ಅವಳು ಒಬ್ಬಳೇ ಆಗಿರಲಿಲ್ಲ. ಅವಳ ಜೊತೆ ಇನ್ನೊಂದು ಜೀವವಿತ್ತು. ಬದುಕು ಮತ್ತೂ ದುಸ್ತರವಾಗಿತ್ತು, ಮೊದಲಿಗಿಂತಲೂ ಭೀಕರವೂ, ಹೀನವೂ ಆಯಿತು. ಆದರೆ ಆ ತಾಯಿಯಲ್ಲಿ ನನಗೂ ಬದುಕಬೇಕು, ನಾನು ವಿಧವೆಯಲ್ಲ ನಿತ್ಯ ಸುಮಂಗಲೆ ಎಂಬ ಭಾವ ಮತ್ತೆ ಮತ್ತೆ ಜಾಗೃತವಾಗುತ್ತಿತ್ತು. ಜೀವನದ ಕೊನೆಗೂ ಅವಳು ಸುಖವನ್ನು ಕಾಣಲಿಲ್ಲ. ಅವಳ ಕೊನೆಯ ದಿನಗಳು ಕಟು ನರಕ ಸದೃಶ ದಿನಗಳು ಎಂದರೆ ತಪ್ಪಾಗಲಿಕ್ಕಿಲ್ಲ.

ಹೆಣ್ಣುಮಗಳೊಬ್ಬಳ ಕರುಣಾಜನಕ ಕಥೆಯಿದು. ಒಮ್ಮೆ ಓದಿ ನೋಡಿ, ಕಾದಂಬರಿಯ ಅಂತ್ಯದಲ್ಲಿ ನಿಮ್ಮ ಕಣ್ಣಂಚಿನಲ್ಲಿ ನೀರು ಜಿನುಗದೇ ಇದ್ದರೇ ನೀವು ಬಹಳ ದೈರ್ಯವಂತರೆಂದೇ ಅರ್ಥ.

ಈ ಕಾದಂಬರಿಯಲ್ಲಿ ಅಣ್ಣ ತಂಗಿಯರ ಬಾಂಧವ್ಯದ ಸುಂದರ ಹೂರಣವಿದೆ, ಮಾಲತಿಯ ಜೀವನದ ಕಷ್ಟಗಳ ರೌದ್ರ ನರ್ತನವಿದೆ, ಘಟಿಸಲೇಬಾರದ ಘಟನೆಗಳ ಚಿತ್ರಣವಿದೆ. ಯಾವ ಹೆಣ್ಣು ಮಗಳಿಗೂ ಮಾಲತಿಯಂತಹ ಸ್ಥಿತಿ ಬರಕೂಡದು. ಇಂತಹ ಕರುಣಾಜನಕ ಕಾದಂಬರಿಯನ್ನು ಕನ್ನಡ

ಸಾಹಿತ್ಯ ಲೋಕಕ್ಕೆ ನೀಡಿದ ಕಾರಂತರಿಗೆ ಕೋಟಿ ಕೋಟಿ ನಮನಗಳು. ಕನ್ಯಾಬಲಿ ಇದು ಸಮಾಜವು ಬಲಿ ತೆಗೆದುಕೊಂಡ ಮಾಲತಿಯ ಹೃದಯವಿದ್ರಾವಕ ಕಥಾನಕ… ಇದು ಕೆಲವೇ ಗಂಟೆಗಳಲ್ಲಿ ಮುಗಿಸಬಲ್ಲ ಮತ್ತು ಹೆಚ್ಚು ದಿನಗಳವರೆಗೆ ನಿಮ್ಮ ಮನವನ್ನು ಕೊರೆಯಬಲ್ಲ ಸುಂದರ ಕಾದಂಬರಿ.

 

ವಿಕಾಸ್ ರಾಜ್ ಪೆರುವಾಯಿ
ವಿಶ್ವವಿದ್ಯಾಲಯ ಕಾಲೇಜು, ಮಂಗಳೂರು

Prev Post

ಸಮ ಸಮಾಜದ ಕನಸು ಬಿತ್ತಿದ ಜ್ಯೋತಿ | ಹಣಮಂತ ಎಂ ಕೆ

Next Post

ಎದೆಗೂಡ ತಟ್ಟಿ ಹೋದ ಹುಡುಗಿ ಮನದಾಚೆ ಮಾಯವಾದಳು | ದರ್ಶನ್ ಕುಮಾರ್

post-bars

Leave a Comment

Related post