Back To Top

 ಅಂಧಕಾರದಿಂ ಭಯ ಪಡದಿರು ಮನುಜ | ಯಶಸ್ವಿನಿ ಭಟ್. ಕೆ

ಅಂಧಕಾರದಿಂ ಭಯ ಪಡದಿರು ಮನುಜ | ಯಶಸ್ವಿನಿ ಭಟ್. ಕೆ

ಇರುಳು ನೂರೆಂಟು ವೇದನೆಯ ಸ್ಮರಣ ವೇದಿಕೆ
ಕೆಲವು ಹಾಸ್ಯವೋ… ಕೆಲವು ರೋಧನವೋ…
ಬೆಳಕ ಕಿರಣವು ನಿದ್ರೆ ಜಾರಿದ ಸಮಯದಲಿ
ಮೆಲುಕು ಹಾಕುವೆ ಮತ್ತೆ ಸಂಪೂರ್ಣ ಜೀವನವ…

ಬಿಳಿ ಮುಗಿಲು ಮನದುಂಬಿದರು, ವರ್ಷ ಸುರಿಸದು ನೋಡು
ಕರಿಮುಗಿಲ ಹಂಬಲಿಸಿ ನಭದಂಚಿಗೆ ದೃಷ್ಟಿಯ ಹಾಯಿಸಿ
ಶ್ವೇತ ತನ್ನಲ್ಲಿಪ ಅಹಂ ಗರ್ವವ ತ್ಯಜಿಸುತಿರೆ
ಕರಿ ವರ್ಣವನ್ ಏಕೆ ದ್ವೇಷಿಸುವರ್ ಅರಿಯೆ ನಾ.!

ಕಪ್ಪು ಭಯದ ಸಂಕೇತವೆಂಬೆ ನೀ ಆದರೂ
ನಾ ಅದ ಆತ್ಮವಿಶ್ವಾಸವೆಂದು ಪೂಜಿಸುವೆ
ನಿನ್ನ ಈ ವಿರೋಧದ ಕಾರಣವ ತಿಳಿಸುವೆಯಾ?
ಅದಕುತ್ತರವ ನಾ ಹುಡುಕಬಯಸಿಹೆನು.

ವರ್ಣವನೆಲ್ಲ ಸಮತೆಯಲಿ ಪ್ರೀತಿಸು
ಅದು ನಿನ್ನ ಭಾವನೆಗೆ ಎಂದೆಂದೂ ಸ್ಪಂದಿಸದು
ಆತ್ಮಸಂತೋಷದ ಭಾವನೆಯ ಸೃಷ್ಟಿಸುತ
ಪ್ರಕೃತಿಗೆ ನವ ರೂಪ ನೀಡುತಲೇ ಇಹುದು.

ಇರುಳಲ್ಲಿ ಬತ್ತಿಯ ಬೆಳಕಿಗೆ ಅಸ್ತಿತ್ವ ನೀಡಿದ ಕಪ್ಪು
ನಭದಿ ಚಂದ್ರ ಚುಕ್ಕಿಯ ಕಣ್ಣೆದುರು ತೋರಿಹುದು
ದಿನವಿಡೀ ಕಾರ್ಯವೆಸಗಿದ ತನಕೆ ಕೊಂಚ
ಆರಾಮ ಬಯಸಿದೆ ನೀ ತ್ಯಜಿಸಬಯಸಿದ ಕಪ್ಪು..

ದುಷ್ಟ ಶಕ್ತಿಯ ಸಂಚಾರವೆಂದು ಜನ ಭಯಗೊಳ್ವರು
ಇದ ಕೇಳಿ ನಗುತ ಕಪ್ಪು ನುಡಿಯಿತು ಹೀಗೆಂದು
ಸಮಾಜದ ಕಟ್ಟು ಪಾಡಿಗೆ ಹೆಚ್ಚು ಹೆದರುವ ನೀ
ದುಷ್ಟ ಶಕ್ತಿಯು ಸಮಾಜದಿಂದ ಮಿಗಿಲಿಲ್ಲ ತಿಳಿ ಮನುಜ..

ಸಮಾಜದ ಭಯ ಹುಟ್ಟಿನಿಂದ ಸಾವಿನ ನಡು ಪಯಣ
ಇರುಳು ಹಗಲು ಬದುಕಾಯಿತು ಮಸಣ
ಇಲ್ಲಿ ಅಂಧಕಾರದಿಂ ಭಯ ಪಡದಿರು ಮನುಜ
ಭರವಸೆಯ ಶಾಲಿಗ್ರಾಮ ಶಿಲೆಯೂ ಕರಿಯೇ..

ಯಶಸ್ವಿನಿ ಭಟ್.ಕೆ
ವಿಶ್ವವಿದ್ಯಾಲಯ ಕಾಲೇಜು, ಮಂಗಳೂರು

Prev Post

ನನಗೂ ಅವಳಿಗೂ ಪ್ರೀತಿಯೇ ದೇವರು | ಶರಣಪ್ಪ ಆಡಕಾರ

Next Post

ಏಕಾಂತ ಬಯಸುವ ಜೀವಿ ಆಕೆ | ಅಸ್ಲಂ ವಾಲಿಕಾರ

post-bars

Leave a Comment

Related post