
ಅಲೋಶಿಯಸ್ ವಿವಿಯಲ್ಲಿ ರಕ್ತದಾನ ಶಿಬಿರ
Mangaluru : ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಎನ್ ಸಿ ಸಿ ಸೈನ್ಯಪಡೆ, ನೌಕಾಪಡೆ ಮತ್ತು ವಾಯುಪಡೆಗಳು ವಿವಿಯ ಯುವ ರೆಡ್ ಕ್ರಾಸ್ ಸಂಘದ ಜೊತೆಗೂಡಿ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಪ್ರಾದೇಶಿಕ ರಕ್ತ ವರ್ಗಾವಣೆ ಕೇಂದ್ರದ ಸಹಯೋಗದೊಂದಿಗೆ, ಸಹೋದಯ ಸಭಾಂಗಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿತು. ನಗರದಲ್ಲಿ ಹೆಚ್ಚುತ್ತಿರುವ ರಕ್ತದ ಅಗತ್ಯವನ್ನು ಪೂರೈಸುವುದು ಮತ್ತು ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ಶಿಬಿರದ ಉದ್ದೇಶವಾಗಿತ್ತು.
ವಿವಿಯ ಇತಿಹಾಸ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಮತ್ತು ನಿರ್ದೇಶಕರಾದ ಡಾ. ಡೆನಿಸ್ ಫೆರ್ನಾಂಡಿಸ್ ಅವರು ಮುಖ್ಯ ಅತಿಥಿಗಳಾಗಿದ್ದು, ರಕ್ತದಾನದ ಮಹತ್ವದ ಕುರಿತು ಮಾತನಾಡಿದರು. ಅಲೋಶಿಯಸ್ ವಿವಿಯ ಹಣಕಾಸು ಅಧಿಕಾರಿ ರೆ. ಫಾ. ವಿಶ್ವಾಸ್ ಮಿಸ್ಕ್ವಿತ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ದಾನಿಗಳನ್ನು ಪ್ರೋತ್ಸಾಹಿಸಿದರು ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಿದ್ದಕ್ಕಾಗಿ ಎನ್ ಸಿ ಸಿ ವಿಂಗ್ಸ್ ಮತ್ತು ವೈಆರ್ಸಿಯನ್ನು ಅಭಿನಂದಿಸಿದರು. ರಕ್ತದಾನದ ಪ್ರಕ್ರಿಯೆ ಮತ್ತು ರಕ್ತದಾನದ ಪ್ರಯೋಜನಗಳ ಕುರಿತು ರಕ್ತನಿಧಿಯ ಉಸ್ತುವಾರಿ ಆಂಟನಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವೆನ್ಲಾಕ್ ಆಸ್ಪತ್ರೆ ರಕ್ತನಿಧಿ ಸಿಬ್ಬಂದಿ, ವೈಆರ್ಸಿ ಅಧಿಕಾರಿಗಳಾದ ಕವಿತಾ ಮತ್ತು ಡಾ. ಮಹಬೂಬಲಿ ನದಾಫ್ ಮತ್ತು ಎನ್ಸಿಸಿ ವಿಂಗ್ಸ್ನ ಎಎನ್ಒಗಳು ಫ್ಲೈಯಿಂಗ್ ಆಫೀಸರ್ ಡಾ. ಅಲ್ವಿನ್ ಎಸ್. ಮಿಸ್ಕಿತ್, ಕ್ಯಾ| ಶಕಿನ್ ರಾಜ್ ಮತ್ತು ಲೆ| ಕ| ಡಾ. ಹರಿಪ್ರಸಾದ್ ಶೆಟ್ಟಿ, ಎನ್ಸಿಸಿ ಕೆಡೆಟ್ ಗಳು ಮತ್ತು ವೈಆರ್ಸಿ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 82 ದಾನಿಗಳಿಂದ ಒಟ್ಟು 69 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.