Back To Top

 ಮಹಿಳೆಯರು ಮತ್ತು ಕಾನೂನು

“ಒಂದು ದೇಶದಲ್ಲಿ ಮಹಿಳೆಯರು ಪ್ರಗತಿ ಹೊಂದುತ್ತಿದ್ದರೆ, ಸಮಾಜ ಮತ್ತು ರಾಷ್ಟ್ರವು ಪ್ರಗತಿ ಕಾಣುತ್ತಿದೆ” ಎಂದರ್ಥ. ಡಾ.ಬಾಬಾಸಾಹೇಬ್ ಅಂಬೇಡ್ಕರ್

ಮಹಿಳೆಯರ ಮನಸ್ಥಿತಿಯನ್ನು ಅರಿಯದೆ ವ್ಯವಸ್ಥಿತ ಭ್ರೂಣಹತ್ಯೆ, ಅನಕ್ಷರತೆ, ಕಿರುಕುಳ, ತಾರತಮ್ಯ, ಅವಮಾನ, ಅಗೌರವ ಮತ್ತು ಅತ್ಯಾಚಾರ ಮೊದಲಾದ ಅನ್ಯಾಯಗಳು ಮಹಿಳೆಯರನ್ನು ಮಾನಸಿಕತೆಗೆ ತಳ್ಳಿ ಹಿಂಸಿಸುತ್ತವೆ. ಇದೇ ಮಹಿಳಾ ದೌರ್ಜನ್ಯ ಎನ್ನುತ್ತೇವೆ.

“ಯತ್ರನಾರ್ಯಸ್ತು ಪೂಜಂತೇ, ರಮಂತೇ ತತ್ರ ದೇವತಾ”.

ಎಲ್ಲಿ ಹೆಣ್ಣನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ನಂಬಿಕೆ ಇರುವ ದೇಶ ಭಾರತ. ಆದರೆ, ಪ್ರಸ್ತುತ ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಭೀಕರ ಅತ್ಯಾಚಾರಗಳು ಮತ್ತು ದೌರ್ಜನ್ಯಗಳು ಆತಂಕಕಾರಿ ವಿಷಯಗಳಾಗಿವೆ. ಉದಾಹರಣೆಗೆ : ಬಿಲ್ಕಿಸ್ ಬಾಣು ಪ್ರಕರಣ, ನಿರ್ಭಯಾ ಹತ್ಯೆ, ಧರ್ಮಸ್ಥಳದ ಸೌಜನ್ಯ ಪ್ರಕರಣ ಮತ್ತು ವಿಜಯಪುರದ ದಾನಮ್ಮನ ಅತ್ಯಾಚಾರ ಮತ್ತು ಹತ್ಯೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿಯ 2023ರ ವರದಿ ಪ್ರಕಾರ ಭಾರತದಲ್ಲಿ ಒಟ್ಟು 4,45,256 ಮಹಿಳೆಯರ ವಿರುದ್ಧ ಅಪರಾಧಗಳು ನಡೆದಿವೆ. ಅದರಲ್ಲಿ ನಗರಗಳಲ್ಲಿ 48,755 ಅಪರಾಧಗಳು ನಡೆದಿವೆ. ಅತಿ ಹೆಚ್ಚು ಅಪರಾಧಗಳು ಜೈಪುರ, ದೆಹಲಿ ಮತ್ತು ಲಕ್ನೋದಲ್ಲಿ ವರದಿಯಾಗಿವೆ. 2021ಕ್ಕೆ ಹೋಲಿಸಿದರೆ 2023ರಲ್ಲಿ ಶೇ.12.3ರಷ್ಟು ಪ್ರಕರಣಗಳು ಜಾಸ್ತಿಯಾಗಿವೆ ಎಂಬುದು ಕಂಡುಬರುತ್ತದೆ.

ದೌರ್ಜನ್ಯಕ್ಕೆ ಕಾರಣಗಳು – ಪುರುಷ ಮತ್ತು ಮಹಿಳೆಯರ ನಡುವೆ ಅಧಿಕಾರ ಮತ್ತು ಸಂಪನ್ಮೂಲದ ಹಂಚಿಕೆಯ ಅಸಮತೋಲನ, ಹೀಗೆ ನಡೆದುಕೊಳ್ಳಬೇಕು ಎನ್ನುವ ಪುರುಷ ಪ್ರಧಾನದ ಮಾತು, ಹೆಣ್ಣು “ಸಹನಾಮಯಿ” ಎನ್ನುವ ಬಿರುದು, ಸಮಾಜದ ಕಟ್ಟಳೆಗಳು, ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಆಚರಣೆಗಳು, ಸರ್ಕಾರದ ನಿಷ್ಕ್ರಿಯತೆ, ಕುಟುಂಬದ ಲೈಂಗಿಕತೆ ಮತ್ತು ಶುದ್ಧತೆ, ಲೈಂಗಿಕ ಹಿಂಸಾಚಾರ ಕ್ಷಮಿಸುವ ಪುರುಷರ ನಡುವಳಿಕೆಗಳು, ವೈಚಾರಿಕ ಅತೃಪ್ತಿ & ಅಪಶೃತಿ ಮತ್ತು ಕೌಟುಂಬಿಕ ಹಿಂಸಾಚಾರ ಮೊದಲಾದವುಗಳಾಗಿವೆ.

ಮಹಿಳೆಯರ ವಿರುದ್ಧ ಅಪರಾಧದ ಪರಿಣಾಮಗಳು – ಆರೋಗ್ಯದ ಪರಿಣಾಮಗಳು, ಆರ್ಥಿಕ ಪರಿಣಾಮಗಳು, ಅಭಿವೃದ್ಧಿಯ ಸಮಸ್ಯೆಗಳು, ವೈಯಕ್ತಿಕ ಅಭಿವೃದ್ಧಿ ಮತ್ತು ಮೂಲಭೂತ ಹಕ್ಕುಗಳ ಸಮಸ್ಯೆಗಳು ಮುಂತಾದವುಗಳಾಗಿವೆ.

ಭಾರತದ ಸಂವಿಧಾನದಲ್ಲಿರುವ ಕಾನೂನುಗಳು – ಸಂವಿಧಾನದ 14ನೇ ವಿಧಿ ಕಾನೂನಿನ ಮುಂದೆ ಎಲ್ಲರೂ ಸಮಾನರು, 15ನೇ ವಿಧಿ ಲಿಂಗ-ಭೇದದ ಆಧಾರದ ಮೇಲೆ ಆಧಾರದ ಮೇಲೆ ತಾರತಮ್ಯ ಧೋರಣೆಯನ್ನು ತೋರಬಾರದೆಂದು ಎಂದು ಸೂಚಿಸುತ್ತದೆ, 18ನೇ ವಿಧಿ ಸರ್ಕಾರಿ ನೌಕರಿ ಅಥವಾ ಯಾವುದೇ ಹುದ್ದೆಯಲ್ಲಿ ಮಹಿಳೆಯರ ಮೇಲೆ ತಾರತಮ್ಯ ತೋರಬಾರದು, 21ನೇ ವಿಧಿ ಮಹಿಳೆಯರು ಮಾನವ ಘನತೆಯಿಂದ ಬದುಕು ಹಕ್ಕು, 51(ಎ) ಮಹಿಳೆಯರ ಗೌರವಕ್ಕೆ ಚ್ಯುತಿ ತರುವ ಆಚರಣೆ ತ್ಯಜಿಸಲು ನಿರ್ದೇಶನ ಮತ್ತು ಸಂವಿಧಾನದ 243ನೇ ವಿಧಿಯ ಪ್ರಕಾರ ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಮಹಿಳೆಯರಿಗೆ ಕಡ್ಡಾಯ ಮೀಸಲಾತಿ.

ಸರ್ಕಾರದ ಯೋಜನೆಗಳು ಮತ್ತು ಕ್ರಮಗಳು – ರಾಷ್ಟ್ರೀಯ ಮಹಿಳಾ ಆಯೋಗ 1992, ಉಜ್ವಲಾ ಯೋಜನೆ (ಕಳ್ಳಸಾಗಾಣಿಗಕೆ ತಡೆಗಟ್ಟುವಿಕೆ), ಬೇಟಿ ಬಚವೋ-ಬೇಟಿ ಪಡಾವೋ, ಸ್ವಧಾರ್ ಗ್ರಹ ಯೋಜನೆ (ಸಾಂಸ್ಥಿಕ ಬೆಂಬಲ), ಒಂದು ನಿಲುಗಡೆ ಕೇಂದ್ರ ಮತ್ತು ಮಹಿಳಾ ಸಹಾಯವಾಣಿಗಳ ಸಾರ್ವತ್ರಿಕರಣ ಮತ್ತು ದುಡಿಯುವ ಮಹಿಳೆಯರಿಗೆ ವಸತಿ ಸೌಲಭ್ಯ ಇತ್ಯಾದಿಗಳಾಗಿವೆ.

ಪ್ರಮುಖ ಕಾಯ್ದೆಗಳು – ಸತಿ ಸಹಗಮನ ಪದ್ದತಿ ನಿಷೇಧ ಕಾಯ್ದೆ 1929, ವಿಧವಾ ಮರುವಿವಾಹ ಕಾಯ್ದೆ – 1856,  ಕೌಟುಂಬಿಕ ನ್ಯಾಯಾಲಯಗಳ ಕಾಯ್ದೆ – 1954, ವಿಶೇಷ ವಿವಾಹ ಕಾಯ್ದೆ – 1954, ಅನೈತಿಕ ವ್ಯವಹಾರ ನಿಗ್ರಹ ಕಾಯ್ದೆ – 1956, ವರದಕ್ಷಿಣೆ ನಿಷೇಧ ಕಾಯ್ದೆ – 1961, ದೇವದಾಸಿ ಪದ್ಧತಿ ನಿಷೇಧ ಕಾಯ್ದೆ – 1982,  ಸಮಾನ ಸಂಭಾವನೆ ಕಾಯ್ದೆ-1976, ಪ್ರಸವಪೂರ್ವ ಮತ್ತು ಪ್ರಸವಪೂರ್ವ ರೋಗ ನಿರ್ಣಯ ತಂತ್ರಗಳ ಕಾಯ್ದೆ-1994 ಹಾಗೂ POCSO Act – 2012.

ದೌರ್ಜನ್ಯಗಳನ್ನು ತಡೆಗಟ್ಟಲು ಇರುವ ಸವಾಲುಗಳು – ಕಡಿಮೆ ಸಂವೇದನಾಶೀಲ ಪೊಲೀಸ್ ಸಿಬ್ಬಂದಿ, ವರದಿಯಾಗದ ಪ್ರಕರಣಗಳು, ಬಾಕಿ ಉಳಿದಿರುವ ಪ್ರಕರಣಗಳು, ಮಹಿಳಾ ಹಕ್ಕುಗಳ ಬಗ್ಗೆ ಅರಿವು ಮತ್ತು ಶಿಕ್ಷಣ ಹಾಗೂ ಸೈಬರ್ ನಿಬಂಧನೆ ಮತ್ತು ಕಿರುಕುಳ ಮುಂತಾದವು ಪ್ರಮುಖವಾಗಿವೆ.

ಯಾವುದೇ ದೌರ್ಜನ್ಯವನ್ನು ಸರಳವಾಗಿ ಪರಿಗಣಿಸದೆೇ, ಸಂತ್ರಸ್ತರಿಗೆ ದೈಹಿಕ ಆರೈಕೆಯೊಂದಿಗೆ ಮಾನಸಿಕ ಸ್ಥೈರ್ಯ, ಸಾಂತ್ವನ, ಭರವಸೆ ಸಿಗುವ ದಿಸೆಯಲ್ಲಿ ಸರ್ಕಾರಗಳು, ಸಾಮಾಜಿಕ ಸಂಘಟನೆಗಳು ಹೆಚ್ಚು ಕಾರ್ಯಪ್ರವೃತರಾಗಬೇಕು.

ಮಹಿಳೆಯರಿಗೆ ಆತ್ಮಾಭಿಮಾನದಿಂದ ಬದುಕಲು ಹಾಗೂ ತಮ್ಮ ಮೇಲಾದ ದೌರ್ಜನ್ಯವನ್ನು  ಹಂಚಿಕೊಳ್ಳಲು ಆತ್ಮಸ್ಥೈರ್ಯ ತುಂಬಬೇಕು. “ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ, ಇವುಗಳನ್ನು ಮೀರಿ ಸ್ವಂತ ಬದುಕೊಂದು ನಿಮಗಿದೆ ಹಾಗೂ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಗಳಿವೆ”. ಎನ್ನುವುದನ್ನು ಮನವರಿಕೆ ಮಾಡಿಕೊಡುವ ಅಗತ್ಯವಿದೆ.

ಆಧಾರ : ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿ (NCRB) ವರದಿ

-ಮಾದೇವ ಕುಂಚನೂರ

ಪ್ರಧಾನ ಕಾರ್ಯದರ್ಶಿ, ವಿದ್ಯಾರ್ಥಿ ಒಕ್ಕೂಟ, 

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.

Prev Post

ಪ್ರೀತಿ, ಪ್ರೇಮ ಎಂಬ ಮೋಹಕ್ಕೆ ಒಳಗಾಗದೆ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಿ…

Next Post

ಸುರತ್ಕಲ್: GDC ಪುಸ್ತಕ ಪ್ರೀತಿ ಸರಣಿ

post-bars

Leave a Comment

Related post