ನನಗೂ ಅವಳಿಗೂ ಪ್ರೀತಿಯೇ ದೇವರು | ಶರಣಪ್ಪ ಆಡಕಾರ
ನಾನು ಮತ್ತು ಅವಳು
ಒಂದೇ ಊರಿಗೆ ಸೇರಿದವರು
ಅದು ಎಲ್ಲರನ್ನೂ ಒಂದುಗೂಡಿಸುವ
ಪ್ರೀತಿಯೆಂಬ ಊರು ||
ನನ್ನೊಳಗೆ ಅವಳು
ಅವಳ ಪ್ರೀತಿಯಲಿ ನಾನು
ಗೌರವಿಸುತ್ತಾ, ಪ್ರೀತಿಸುತ್ತಾ ಜೀವಿಸುತ್ತಿರುವೆವು
ಬೇರೊಬ್ಬರಿಗೆ ತೊಂದರೆ ನೀಡದೆ ||
ಪ್ರೀತಿಯ ಹೆಸರಿನಲ್ಲಿ ನಡೆಯುವ ಮೋಸ
ಜಾತಿಯಿಂದ ಉದ್ಭವಗೊಳ್ಳುವ ಕಲಹ,
ಹುನ್ನಾರಗಳಿಂದ ಬಹುದೂರ ಬದುಕುತ್ತಿರುವೆವು ||
ನನಗೂ ಅವಳಿಗೂ
ಪ್ರೀತಿಯೇ ದೇವರು
ಬದುಕೆ ಜಾತಿ, ಧರ್ಮ
ನಮ್ಮ ಮನಸೇ ಸ್ವರ್ಗ
ಪ್ರೀತಿ ಸತ್ತ ಸ್ಥಳವೇ ನರಕ ||
ನಮ್ಮ ದೇವರಿಗೆ
ಪ್ರತಿಷ್ಠೆಯ ಅಂಧತ್ವವಿಲ್ಲ
ಪ್ರವೇಶಕ್ಕೆ ಅಸ್ಪೃಶ್ಯದ ಭಯವಿಲ್ಲ
ಇವೆಲ್ಲವನ್ನೂ ಮೆಟ್ಟಿ ನಮ್ಮದೇ
ಪ್ರೀತಿ ಪ್ರಪಂಚ ಕಟ್ಟಿಕೊಂಡಿರುವೆವು
ಅಲ್ಲಿಗೆ ಎಲ್ಲರಿಗೂ ಪ್ರೀತಿಯ ಸ್ವಾಗತ
ಪ್ರೀತಿವುಂಡು, ಪ್ರೀತಿ ಹಂಚ ಬನ್ನಿ
ನಾನು ಮತ್ತು ಅವಳು
ನಿಮ್ಮ ಬರುವಿಕೆಗಾಗಿ ಕಾಯುತ್ತಿರುವೆವು ||
ಶರಣಪ್ಪ ಆಡಕಾರ
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ