ಬಸವತತ್ವ ಅನುಯಾಯಿಗಳೆಲ್ಲ ಒಂದು ರೀತಿ ಕಮ್ಯೂನಿಸ್ಟ್‌ರೇ ! | ಪ್ರಸಾದ್ ಗುಡ್ಡೋಡಗಿ
ನಿಜ ಬಸವತತ್ವ ಅನುಯಾಯಿಗಳೆಲ್ಲ ಒಂದು ರೀತಿಯಲ್ಲಿ ತಮಗೆ ಗೊತ್ತು ಗೊತ್ತಿಲ್ಲದೆ ಕಮ್ಯುನಿಷ್ಟರೇ ಆಗಿರುತ್ತಾರೆ. ಹೆಚ್ಚು ಶ್ರಮ ಮತ್ತು ದಯೆಗಳಿಗೆ ಆದ್ಯತೆ ನೀಡುತ್ತಾರೆ. ದುಡಿಮೆಯನ್ನೆ ಹೆಚ್ಚು ನೆಚ್ಚಿಕೊಳ್ಳುತ್ತಾರೆ. ಕಾರ್ಮಿಕರು/ಶ್ರಮಿಕರೆಲ್ಲ ಸ್ವತಂತ್ರವಾಗಿರಬೇಕೆಂದು ಅವರು ಬಯಸುತ್ತಾರೆ. ಇನ್ನು ಅಣ್ಣನವರ ದಾಸೋಹ ತತ್ವ ಹಂಚಿಕೊಂಡು ತಿನ್ನುವುದನ್ನೆ ಕಲಿಸುತ್ತದೆ. ಇದು ದಾನವನ್ನು ಒಪ್ಪುವುದಿಲ್ಲ ಅಂದರೆ ಬೇರೆಯವರ ಹಂಗನ್ನು ಒಪ್ಪುದಿಲ್ಲ. ಅನಗತ್ಯಕ್ಕಿಂತ ಅಧಿಕ ಸಂಪತ್ತನ್ನು ಅಣ್ಣನವರು ಖಂಡಿಸಿದ್ದಾರೆ.
ಒಮ್ಮೆ ಅವರ ಮನೆಗೆ ಕಳ್ಳನೊಬ್ಬ ಬಂದಾಗ ತಮ್ಮ ಪತ್ನಿ ನೀಲಾಂಬಿಕೆಗೆ ಕಿವಿಯೋಲೆ ಕಿತ್ತಿಕೊಡೆಂದು ನೀಡಿದ ಸಲಹೆಯಲ್ಲಿ ನೀವಿದನ್ನು ಕಾಣಬೋದು. ಈ ತರದ ಹತ್ತು ಹಲವು ದೃಷ್ಟಾಂತಗಳು ನಮಗಿಲ್ಲಿ ಸಿಕ್ಕುತ್ತವೆ. ಇನ್ನೂ ಕಾಯಕ/ದುಡಿಮೆ ಕುರಿತಾದ ಒಂದು ದೃಷ್ಟಾಂತ ಒಮ್ಮೆ ಶರಣ ನೂಲಿಯ ಚೆಂದಯ್ಯ ಲಿಂಗ ಕಳೆದುಕೊಂಡ ಸಂದರ್ಭದಲ್ಲಿ ಇಕ್ಕಟ್ಟಿಗೆ ಸಿಲುಕುತ್ತಾನೆ. ಸ್ವಲ್ಪ ಸಮಯದ ನಂತರ ಅಣ್ಣನವರ ವಚನವನ್ನು ನೆನೆದು ಕಾಯಕದಲ್ಲಿ ನಿರತನಾದಡೆ ಗುರು, ಲಿಂಗ, ಜಂಗಮ ದರ್ಶನವಾದರೂ ಮರೆಯಬೇಕು ಎಂಬ ಮಾತಿಗೆ ಲಿಂಗ ದೇವರನ್ನೆ ಕಡೆಗಣಿಸಿ ಕಾಯಕ ನಿಷ್ಠೆ ಮೆರೆದಿದ್ದು ಕೇಳಿದ್ದೇವೆ.
ಇಂತಹ ದಾಸೋಹ ಮತ್ತು ಕಾಯಕ (ದುಡಿಮೆ) ಸಿದ್ದಾಂತದ ನಿಲುವುಗಳು ಇದನ್ನು ಹೊರತುಪಡಿಸಿ ಜಗತ್ತಿನ ಬೇರಾವ ಧರ್ಮದಲ್ಲೂ ನಾವು ಕಾಣಲಾರೆವು. ಅಣ್ಣನವರ ಬದುಕೇ ದೀನ-ದಲಿತ, ದಮನಿತರು, ಶ್ರಮಿಕರ ಪರವಾಗಿಯೇ ಇತ್ತು. ಇವುಗಳನ್ನೆಲ್ಲ ನೋಡಿದರೆ ಕಾರ್ಲ್ ಮಾರ್ಕ್ಸ್‌ನೇ ಅಣ್ಣನವರ ತತ್ವಗಳನ್ನು ಕಾಫಿ ಮಾಡಿದಂತೆ ಕಾಣುತ್ತದೆ. ಕಮ್ಯೂನಿಸ್ಂ ಎಂಬ ಸಮಾಜವಾದವು ಕೂಡ ಇದನ್ನೇ ಹೇಳುತ್ತದೆ.
ಕಮ್ಯೂನಿಸ್ಂ ಎಂದರೆ ಅದು ಸಮಾಜ ವಿರೋಧವಲ್ಲ ಬದಲಿಗೆ ಸಂಘಜೀವಿಯಾದ ಮನುಷ್ಯನು ಪರಸ್ಪರ ಪ್ರೀತಿ, ಸ್ನೇಹ, ಅನುಕಂಪ, ಸಹಬಾಳ್ವೆಯಿಂದ ಬದುಕು ನಡೆಸಬೇಕೆಂದು ತಿಳಿಸುವ ಪರಮತತ್ವ. ಈಗ ಹೇಳಿ ಬಸವ ಸಂಪ್ರದಾಯಕರು ನಾವೆಲ್ಲ ಕಾಯಕಜೀವಿಗಳು/ಶ್ರಮಜೀವಿಗಳು ಎಂದು ಹೇಳಿಕೊಳ್ಳಲು ಹೆಮ್ಮೆಪಡುವರು. ಆಧುನಿಕ ಪರಿಭಾಷೆಯಲ್ಲಿ ಕಮ್ಯುನಿಸ್ಟರ್ ಅಂದರೆ ಸಿಟ್ಟಿಗೆಳುವೆವು!.
ನನಗನಿಸುತ್ತದೆ ಕಮ್ಯೂನಿಸಂನ ವಿರೋಧ ಮಾಡುವವರು ತೋರಿಕೆಗಷ್ಟೇ ಮೇಲೆ ಬಸವ ತತ್ವದ ಪೋಷಾಕು ತೊಟ್ಟು ಒಳಗೊಳಗೆ ಸ್ವ-ಜನಹಿತ, ಸ್ವ-ಕುಟುಂಬಸ್ಥರ ಏಳ್ಗೆ ಬಯಸುವ ಇವರು ಒಳಗೊಳಗೆ ಬಂಡವಾಳಶಾಹಿಗಳಂತಹ ಮುಖವಾಡ ಹೊತ್ತಿದ್ದಾರೆ ಅಂತಾನೆ ಅರ್ಥ.
ಇನ್ನೂ ಮುಂದಕ್ಕೆ ಹೋಗಿ ನಾವೇನು ಹಾಗಿಲ್ಲ ಕಮ್ಯುನಿಸ್ಟ್ ರು ನಾಸ್ತಿಕರಾಗಿರುತ್ತಾರೆ. ಸಮಾಜಕ್ಕೆ ಘಾಸಿಗೊಳಿಸುವ ಮನಃಸ್ಥಿತಿಯುಳ್ಳವರಾಗಿರುತ್ತಾರೆ. ಅಂತಾರೆ ಈಗ ನೀವೇ ಹೇಳಿ ಗನ್, ಬಾಂಬು, ಬೆದರಿಕೆ, ಹೋರಾಟಗಳು ಮಾತ್ರ ಸಮಾಜಘಾಸಿಗೊಳಿಸುತ್ತವೆಯೇ? ಲೇಖನಿಯಿಂದ ಬಿದ್ದ ಮಸಿ, ಬಾಯಿಂದಾಡುವ ಮಾತು ಸಮಾಜಘಾಸಿಗೊಳಿಸುವುದಿಲ್ಲವೇ?. ಅಣ್ಣನವರು ತಮ್ಮ ವಚನಗಳಲ್ಲಿ ಎಷ್ಟೋ ಬಾರಿ ಉಳ್ಳವರ ದಬ್ಬಾಳಿಕೆಗೆ ದಮನಿತರ ಪರ ಧ್ವನಿ ಎತ್ತಿಲ್ಲವೇ?.
ಅವುಗಳನ್ನು ನಿತ್ಯ ಮೆಲಕುಹಾಕುವ ನಾವು ಬಾಯಿ ಮಾತಿನಲ್ಲಾದರು, ಅಂತರಂಗದಲ್ಲಾದರೂ ಬಂಡವಾಳಶಾಹಿಗಳನ್ನ ದೂಷಿಸುವುದಿಲ್ಲವೇ? ಇನ್ನೂ ಕೆಲವರು ಅಣ್ಣನ ವಚನಗಳನ್ನು ಆಧಾರವಾಗಿಟ್ಟುಕೊಂಡು ಲೇಖನಗಳು ಬರೆಯುವುದಿಲ್ಲವೇ? ಅಲ್ಲಿಯ ನಿಮ್ಮ ಧ್ವನಿ ಯಾರ ಪರವಾಗಿತ್ತು? ಯಾವ ತರದಲ್ಲಿತ್ತು? ಅದೇನೆ ಇರಲಿ. ಈಗ ಕಮ್ಯುನಿಸ್ಟ್‌ರು ನಾಸ್ತಿಕರಾಗಿರುತ್ತಾರೆ ಎಂಬ ವಿಷಯಕ್ಕೆ ಬರುತ್ತೇನೆ.
ಬಸವತತ್ವಾನುಯಾಯಿಗಳು (ನೈಜಲಿಂಗಾಯತರು) ಗುಡಿ-ಮಂದಿರಗಳ ಪರಂಪರೆಯವರಲ್ಲ ಎಂದು ಹೇಳಿಕೊಳ್ಳುತ್ತಾರೆ. ಇದು ಸತ್ಯ ಈ ದೇಶದಲ್ಲಿ ಅವಕ್ಕೆನೂ ಕೊರತೆಯಿಲ್ಲ. ಓಣಿಗೆ ಏನಿಲ್ಲವೆಂದರೂ 1-2 ಗುಡಿಗಳು ಸಾಮಾನ್ಯ. ಇದೇ ತರ ಶಾಲೆ, ಆಸ್ಪತ್ರೆಗಳು ಕಟ್ಟಿದ್ದರೆ ಈ ದೇಶದ ಸ್ಥಿತಿ ಬೇರೆ ದಿಕ್ಕಿನಲ್ಲಿ ಹೋಗುತ್ತಿತ್ತು. ಅದಿರಲಿ ಬಸವಾನುಯಾಯಿಗಳು (ನೈಜಲಿಂಗಾಯತರು) ಇಂತಹ ದೇವರುಗಳಿಗೆ ಕೈ ಮುಗಿವುದಿರಲಿ ಅವುಗಳು ತಮಗೆ ಸಂಬಂಧವಿಲ್ಲದಂತೆ ತಮ್ಮ ಪಾಡಿಗೆ ತಾವು ಹೋಗುತ್ತಾರೆ.
ಅಣ್ಣ ಹೇಳಿದ ಹಾಗೆ ಕಲ್ಲು, ಮಣ್ಣು, ಕಟ್ಟಿಗೆಗಳಲ್ಲಿ ದೇವರನ್ನು ಕಾಣುವ ಸಂಸ್ಕೃತಿಯಾಗಲಿ ಭಾವವಾಗಲಿ ನಮ್ಮಲ್ಲಿಲ್ಲ. ಕೆಲವು ಜನ ಕಂಡ ಕಂಡಲೆಲ್ಲಾ ಗಿಣಿಮಿಣಿ ತಿರುಗಿ ಕೈಮುಗಿದು, ಬಸ್ಕಿ ಹಾಕೋದು, ಸಾಷ್ಟಾಂಗ ಅಡ್ಡ ಬೀಳುವುದು, ಕಡೆಗೆ ಕೈಜೋಡಿಸಿ ಶಿರಬಾಗಿ ನಮಿಸಿಯಾದರು ಭಕ್ತಿ ಮೆರೆಯುತ್ತಾರೆ. ಇವರೆಲ್ಲ ಆಸ್ತಿಕರು. ಈಗ ನೀವು ಹೇಳಿ ನಿಮಗೆಲ್ಲಿದ್ದಾನೆ ದೇವರು ಇಷ್ಟಲಿಂಗದಲ್ಲಿಯೇ? ಅಣ್ಣ ಇದನ್ನು ಆತ್ಮದ ಕುರುಹು ಎಂದಿದ್ದಾನೆ.
ಅದು ಕೇವಲ ನಮ್ಮನ್ನು ನಾವು ಅರಿಯುವ ಹಾಗೂ ದೃಷ್ಟಿಯೋಗ / ಶಿವಯೋಗ ಸಾಧನದ ಮೂಲವಾಗಿದೆ. ಈಗ ನಿಮ್ಮನ್ನು ನೀವೇ ಕೇಳಿಕೊಳ್ಳಿ ಕಷ್ಟದಲ್ಲಿದ್ದ ಮನುಷ್ಯನಿಗೆ ಮಿಡಿಯುವ ನಿಮ್ಮ ಹೃದಯ ಯಾವುದೇ ಒಂದು ಸುಂದರ ದೇವತೆಗಳ ಶಿಲೆಗೆ ಮಿಡಿಯುದಿಲ್ಲ (ನಾನು ತಿಳಿದಮಟ್ಟಿಗೆ) ಅರ್ಥಾತ್ ನಿಮ್ಮಲ್ಲಿ ಆಸ್ತಿಕದ ಭಾವ ಮೂಡಿಸುವುದಿಲ್ಲ ಅಂದರೆ ಒಂದು ರೀತಿಯಲ್ಲಿ ನೀವು ಕೂಡ ನಾಸ್ತಿಕರಲ್ಲವೇ?
ಈ ಕಮ್ಯೂನಿಸ್ಂ ಸಿದ್ದಾಂತವು 20ನೇ ಶತಮಾನದಲ್ಲಿ ಕಾರ್ಲ್ ಮಾರ್ಕ್ಸ್ನ್ ನಿಂದ ಸಮಾಜವಾದದ ರೂಪು ಪಡೆಯಿತು ಎಂದು ಹೇಳುವವರು 12ನೇ ಶತಮಾನದಲ್ಲಿ ಬಸವಾದಿ ಶರಣರು ಟೊಂಕಕಟ್ಟಿಕೊಂಡು ಸಾರಿದ ಕಾಯಕ, ದಾಸೋಹ ತತ್ವದ ತಾತ್ಪರ್ಯವೇನು? ಯಾವ ಸಮತಾವಾದವು ಇತ್ತಿಚಿನ ಪ್ರಗತಿಪರರ ದೂರದೃಷ್ಟಿ ಪರಿಕಲ್ಪನೆ ಎನ್ನುತ್ತಿರೋ ಅದು ಬಸವಾದಿ ಶರಣರಲ್ಲಿ ಈ ತರಹದ ಸಾಮಾಜಿಕ ವ್ಯವಸ್ಥೆ ಮೊದಲೆ ಮೂಡಿತ್ತು. ಅದು ಕೂಡ ಭಾರತದಲ್ಲಿ ವೈದಿಕ ಸಾಂಪ್ರದಾಯದ ಮೌಢ್ಯ, ಕಂದಾಚಾರಗಳೇ ಜನರನ್ನು ಆಳುತ್ತಿದ್ದ ಉಚ್ಛ್ರಾಯ ಕಾಲಘಟ್ಟದಲ್ಲಿ ಇದಕ್ಕೆ ಹೋಲಿಕೆ ಮಾಡಿ ನೋಡುವುದಾದರೇ ಅವರಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯ ಬದುಕಿನ ಹೋರಾಟ ಇಂದಿನ ಆಧುನಿಕತೆ ಜಗತ್ತಿನ ನಮಗೂ ನಾಚಿಕೆ ತರುವ ಸಂಗತಿ.
ಪ್ರಸಾದ್ ಗುಡ್ಡೋಡಗಿ
ಬಿ.ಎ. 4ನೇ ಸೆಮಿಸ್ಟರ್
ಕರ್ನಾಟಕ ಕಾಲೇಜು, ಧಾರವಾಡ
One thought on “ಬಸವತತ್ವ ಅನುಯಾಯಿಗಳೆಲ್ಲ ಒಂದು ರೀತಿ ಕಮ್ಯೂನಿಸ್ಟ್‌ರೇ ! | ಪ್ರಸಾದ್ ಗುಡ್ಡೋಡಗಿ”
ಒಳ್ಳೆಯ ಅಭಿಪ್ರಾಯ 👍… ಸಮಾಜದಲ್ಲಿ communism ಎಂಬ ಪದದ ಮೇಲೆ ಇತರ ಧರ್ಮಿಯರ ದೃಷ್ಟಾಂತಗಳು ದಾರುಣವಾಗಿ ಪರಿಣಾಮ ಬೀರಿರುವುದರಿಂದ ಅದರ ಅರ್ಥ ಅನರ್ಥ ವಾಗಿರುವುದು ದುರಂತ….