Back To Top

 ಸ್ನೇಹ ಅತಿಮಧುರ | ಸೋಮಶೇಖರ್ ತಾಳಿಕೋಟೆ

ಸ್ನೇಹ ಅನ್ನೋದು ಹೇಗೆ ಆರಂಭ ಆಗುತ್ತೆ? ಹೇಗೆ ಮುಕ್ತಾಯ ಆಗುತ್ತೆ ಅನ್ನೋದು ಗೊತ್ತೇ ಆಗಲ್ಲ ಕಣ್ರೀ.. ಅಂತದ್ದೊಂದು ಭಯಾನಕ ಶಕ್ತಿ ಇರೋದು ಕೇವಲ ಫ್ರೆಂಡ್‌ಶಿಫ್‌ಗಷ್ಟೇ. ಅದ್ರಲ್ಲೂ ಲೈ‌ಫ್‌ನಲ್ಲಿ ಹುಡ್ಗಿಗೆ ಹುಡ್ಗ.. ಅಥವಾ ಹುಡ್ಗನಿಗೆ ಹುಡ್ಗಿ ಏನಾದ್ರೂ ಬೆಸ್ಟ್ ಫ್ರೆಂಡ್ ಆಗಿ ಸಿಕ್ಕ ಬಿಟ್ರೆ ಅವ್ರಿಬ್ಬರ ಲೈಫ್ ಜಿಂಗಾಲಾಲ್ ಆಗಿರುತ್ತೆ. ಆಗ ಅವ್ರನ್ನ ನೋಡಿ ಅದೆಷ್ಟು ಜನ ಏನ್ ಅಂದ್ಕೊಳ್ತಾರೋ? ಹೇಳೋಕ್ ಆಗಲ್ಲ. ಬಟ್, ಅವ್ರು ಮಾತ್ರ ಯಾವುದಕ್ಕೂ ತಲೇನೇ ಕೆಡಿಸಿಕೊಳ್ಳದೇ, ಮಾತನಾಡೋರ್ ಮುಂದೆ ಮೆರೀತಾನೆ ಇರ್ತಾರೆ.

ಬೆಸ್ಟ್ ಫ್ರೆಂಡ್ಸ್‌ಗೂ, ಫ್ರೆಂಡ್ಸ್‌ಗೂ ತುಂಬಾನೇ ವ್ಯತ್ಯಾಸ ಇದೆ. ಇವ್ನೇನಪ್ಪಾ ಹೀಗ್ ಹೇಳ್ತಿದ್ದಾನೆ ಅಂತ ಯೋಚಿಸೋದು ಬೇಕಿಲ್ಲ. ಯಾಕಂದ್ರೆ, ಸ್ನೇಹಿತ ಆದವನು ಕೇವಲ ಸಂತಸದಲ್ಲಿ ಭಾಗಿಯಾಗ್ತಾನೆ. ತನಗೆ ಕಷ್ಟ ಬಂದಾಗ ಸಹಾಯ ಕೇಳ್ಕೊಂಡು ಹೋಗ್ತಾನೆ. ಬಟ್ ಅದೇ ಒಳ್ಳೇ ಸ್ನೇಹಿತರಾದವ್ರು ಸುಖದಲ್ಲಿ ಅದೆಷ್ಟು ಭಾಗಿಯಾಗ್ತಾರೋ ಗೊತ್ತಿಲ್ಲ. ಬಟ್ ದುಃಖದಲ್ಲಿ 100% ಜೊತೆಗ್ ನಿಲ್ತಾರೆ. ಮನೇಲ್ ಹೇಳೋಕ್ ಆಗ್ದಿರೋದನ್ನ ಬೆಸ್ಟ್ ಫ್ರೆಂಡ್ ಹತ್ರ ಹೇಳ್ಕೊಂಡ್ ಗೋಳೋ ಅಂತಾ ಕಣ್ಣೀರಿಡ್ತಾರೆ. ಬೇಜಾರ್ ಹೊರಹಾಕ್ತಾರೆ. ಒಂದ್ವೇಳೆ ಬೆಸ್ಟ್ ಫ್ರೆಂಡ್ ಏನಾದ್ರೂ ಬೇಜಾರಲ್ಲಿದ್ದೂ, ಶೇರ್ ಮಾಡ್ಕೊಳ್ಳಲಿಲ್ಲ ಅಂದ್ರೆ ಹೋಯ್ ಏನ್ ಆಗಿದೆ ನಿಂಗೆ..? ಯಾಕ್ ಹೀಗೆ ಮೂತಿ ಹೀಗೆ ಮಾಡ್ಕೊಂಡಿದ್ದೀಯ? ನೀನ್ ಸೈಲೆಂಟ್ ಆಗಿರೋದ್ಯಾಕೆ? ಮೊದ್ಲಿನ ಹಾಗೆ ಯಾಕಿಲ್ಲ? ಹೀಗೆ ಪ್ರಶ್ನೆಗಳ ಸುರಿಮಳೆಗೈದು ಸಮಾಧಾನ ಹೇಳೋಕ್ ಟ್ರೈ ಮಾಡ್ತಾರೆ.

ಆಗ್ಲೂ ಹೇಳಿಕೊಳ್ಳಲಿಲ್ಲ ಅಂದ್ರೆ, ಆ ಸ್ನೇಹಿತ /ಸ್ನೇಹಿತೆಯ ಆಪ್ತ ಒಲಯದ ಸ್ನೇಹಿತರ ಬಳಿ ಅವ್ನಿಗೆ / ಅವ್ಳಿಗೆ ಏನಾಗಿದೆ..? ಹೀಗ್ಯಾಕೆ ವಿಚಿತ್ರವಾಗಿ ಆಡ್ತಿದ್ದಾನೆ /ಆಡ್ತಿದ್ದಾಳೆ..? ನಿಮ್ಮ ಹತ್ರ ಏನ್ ಆದ್ರೂ ಹೇಳ್ಕೊಂಡಿದ್ದಾನಾ/ಹೇಳ್ಕೊಂಡಿದ್ದಾಳಾ..? ಅಂತೆಲ್ಲ ಪ್ರಶ್ನಿಸಿ ಉತ್ತರ ಪಡೆದುಕೊಳ್ಳೋದಕ್ಕೆ ಮುಂದಾಗ್ತಾನೆ/ಮುಂದಾಗ್ತಾಳೆ. ಏನ್ ಆಗಿದೆ ಅಂತ ಕೊನೆಗೂ ತಿಳಿದುಕೊಂಡು ಅವ್ರ ನೋವಿಗೆ ಬೆನ್ನೆಲುಬಾಗಿ ನಿಲ್ತಾರೆ. ಕಣ್ಣೀರಿಡೋಕೆ ಹೆಗಲ್ ಕೊಡ್ತಾರೆ.

ಸ್ನೇಹಿತರ ನಡುವೆ ಏನೇ ಬಿನ್ನಾಭಿಪ್ರಾಯ ಇದ್ರೂ, ಹೊಡೆದಾಡಿ, ಜಗಳವಾಡಿ ಬಗೆಹರಿಸಿಕೊಳ್ತಾರೆ. ಮಾತು ಕೇಳಲಿಲ್ಲ ಅಂದ್ರೆ ಮುಖಕ್ಕೆ ಹೊಡೆದ ಹಾಗೆ ಹೇಳ್ತಾರೆ. ಆಗ್ಲೂ ಕೇರ್ ಮಾಡ್ಲಿಲ್ಲ ಅಂದ್ರೆ ನಾಲ್ಕ್ ಕಪಾಳಕ್ ಹೊಡೆದು ಬುದ್ಧಿ ಹೇಳ್ತಾರೆ.. ಇನ್ನು, ಅದೇನೆ ದುಃಖ ಇರಲಿ.. ಖುಷಿ ಇರಲಿ ಮೊದಲು ತನ್ನ ಬೆಸ್ಟ್ ಫ್ರೆಂಡ್‌ಗೆ ಹೇಳ್ಬೇಕು ಅಂತಾ ಅವನ/ಅವಳ ಮನಸ್ಸು ಹಾತೊರೆಯುತ್ತಿರುತ್ತೆ. ವಿಷಯ ಮುಟ್ಟಿಸೋವರೆಗೂ ಸಮಾಧಾನ ಅನ್ನೋದೇ ಇರಲ್ಲ.

ಒಂದ್ವೇಳೆ ಖುಷಿ ವಿಚಾರ ಏನಾದ್ರೂ, ಆಗಿದ್ರೆ ಉತ್ತಮ ಗೆಳೆಯ/ಗೆಳತಿಯ ಹತ್ತಿರ ಹೇಳ್ಕೊಂಡಾಗ ಸಂತೋಷ ದುಪ್ಪಟ್ಟಾಗುತ್ತೆ. ಆತ/ಆಕೆಯೂ ಹರ್ಷೋದ್ಘಾರ ವ್ಯಕ್ತಪಡಿಸ್ತಾನೆ/ಳೆ. ಅದೇ ದುಃಖದ/ಬೇಜಾರಾಗುವಂತಹ ಸಂಗತಿಯನ್ನ ತನ್ನ ಉತ್ತಮ ಸ್ನೇಹಿತ/ಸ್ನೇಹಿತೆಯ ಬಳಿ ಹಂಚಿಕೊಂಡಾಗ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗುತ್ತೆ. ನೂರಾರು ವಿಚಾರಗಳು ತಲೆಯಲ್ಲಿ ಗಿರಕಿ ಹೊಡೆದು ಜೀವನವೇ ಸಾಕೆಂದೆನಿಸಿದಾಗಲೂ ಮೊದಲು ಹೇಳೋದು ಅದೇ ಬೆಸ್ಟ್ ಫ್ರೆಂಡ್ ಹತ್ತಿರ. ಆಗ ಕೇಳಿಸಿಕೊಂಡ ಆತ/ಆಕೆ ನಿಂಗ್ ಈಗ ಅಂತದ್ದೇನಾಗಿದೆ ದಾಡಿ..? ಯಾಕೆ ಹೀಗೆ ಏನೇನೋ ಮಾತಾಡ್ತೀದ್ದೀಯ..? ಮನಸ್ಸಿಗೆ ಅದೇನ್ ಹಚ್ಕೊಂಡಿದ್ದೀಯ..? ಹುಚ್ಚು ಹುಚ್ಚರಂತೆ ಆಡ್ತಿರೋದ್ಯಾಕೆ..? ಅಂತೆಲ್ಲ ಕೇಳಿ ಸಮಾಧಾನ ಪಡಸ್ತಾರೆ.

ಮನೆ ಸಮಸ್ಯೆ, ನೆಮ್ಮದಿಯಿಲ್ದೆ ಕೆಲಸ‌ ಮಾಡೋದಕ್ಕೆ ಆಗ್ದಿರೋ ಹಾಗೆ ಆದಾಗ ಬೆಸ್ಟ್ ಫ್ರೆಂಡ್ ಹತ್ತಿರ ಹೇಳ್ಕೊಂಡ್ ಸ್ವಲ್ಪ ಸಮಾಧಾನ ಪಟ್ಕೊಳ್ಳಬಹುದು. ಆದ್ರೆ, ಒಂದ್ವೇಳೆ ಏನಾದ್ರೂ, ನಾವು ತುಂಬಾ ಪ್ರೀತಿಸೋ ಬೆಸ್ಟ್ ಫ್ರೆಂಡ್ ಇಂದಾನೇ ಮನಸ್ಸಿಗೆ ದುಃಖ ಆಗ್ಬಿಟ್ರೆ, ಆಗ ಹೇಳ್ಕೊಳ್ಳೋಕೂ ಯಾರು ಇಲ್ದೆ.. ಮನಸಲ್ಲಿ ಇಟ್ಕೊಂಡು ಕೂರೋಕೂ ಆಗದೇ ಅನುಭವಿಸುವ‌ ಆ ನೋವು ಇದೆಯಲ್ಲ ನರಕಯಾತನೆ. ಬೇರೆ ಯಾರಿಂದಲೇ? ಏನೇ ತೊಂದರೆ, ಸಂಕಷ್ಟಗಳು ಬಂದ್ರೂ ಹೇಳಿಕೊಳ್ಳೋಕೆ ಇರೋರಿಂದಲೇ ಏನಾದ್ರೂ ಬೇಜಾರ್ ಆಗ್ಬಿಟ್ರೆ. ಆ ಹುಡ್ಗ/ಹುಡ್ಗಿ ಮನ್ಸಲ್ಲಿ ಏನೇನೋ ವಿಚಾರಗಳು ಗಿರಕಿ ಹೊಡೆಯೋಕ್ ಸ್ಟಾರ್ಟ್ ಆಗ್ತವೆ. ಪ್ರೀತಿಸಿದ ಹುಡ್ಗ/ಹುಡ್ಗಿ ಬಿಟ್ ಹೋದಾಗ್ಲೂ ಆಗದಷ್ಟು ಸಂಕಟ/ನೋವು ಜೀವನವಿಡಿ ಕಾಡುತ್ತೆ. ಬಟ್, ಬೆಸ್ಟ್ ಫ್ರೆಂಡ್ಸ್ ಆಗಿದ್ದ, ಅವ್ನ್/ಅವ್ಳ್ ನಡವಳಿಕೆಯಲ್ಲಿ ಬದಲಾದ್ರೆ.. ಅವ್ನು/ಅವ್ಳ್ಯಾಕೆ ಹೀಗ್ ಬದಲಾದ್ಲು..? ಕಾರಣ ಏನು..? ಯಾಕಿಂಗ್ ನಡೆದುಕೊಳ್ತಿದ್ದಾನೆ/ನಡೆದುಕೊಳ್ತಿದ್ದಾಳೆ..? ನನ್ನಿಂದಲೇ ಏನಾದ್ರೂ ತಪ್ಪಾಯ್ತಾ..? ಕೇಳಬಾರದ್ದನ್ನ ಏನಾದ್ರೂ ಕೇಳಿದ್ನಾ..? ನಾನು ಮಾತಾಡಿಸ್ತಿರೋದೇ ಅವ್ರಿಗೆ ಇಷ್ಟ ಇಲ್ವಾ..? ನನ್ನಿಂದ ಅವ್ನಿಗೆ/ಅವ್ಳಿಗೆ ಏನಾದ್ರೂ ತೊಂದರೆ ಆಗಿದ್ಯಾ..? ಹೀಗೆ ಹತ್ತು ಹಲವು ಪ್ರಶ್ನೆಗಳು ಕಿವಿಯಲ್ಲಿ ಗುಂಯ್… ಗುಡುತ್ತಿರುತ್ತವೆ.

ಹಾಗಂತ ಹುಡ್ಗನ್ನಾ ಹುಡ್ಗಿ ನೆಗ್ಲೆಟ್ ಮಾಡೋದು.. ಹುಡ್ಗೀನಾ ಹುಡ್ಗ ಅವಾಯ್ಡ್ ಮಾಡೋದ್ ಏನಾದ್ರೂ ಮಾಡಿದ್ರೆ ಅವರವರ ಆಲೋಚನೆಯೇ ಬೇರೆಯೇ ಇರಬಹುದು. ಅವ್ನು ನನ್ನ ಬಹಳಷ್ಟು ಹಚ್ಕೊಂಡಿದ್ದಾನೆ. ನಾನ್ ಇರಲಿಲ್ಲ ಅಂದ್ರೆ ಅವ್ನಿಗೆ ಬದುಕೇ ನಶ್ವರ ಅನಿಸಬಹುದೇನೋ..? ನಾನ್ ಇಲ್ದೆ ಕೂಡ ಆತ ಬದುಕೋದನ್ನ ಕಲೀಬೇಕು. ತನ್ನ ಜೊತೆಗೆ ಜೀವನದಲ್ಲಿ ಬೇರೆ ಯಾರೂ ಇಲ್ದಿದ್ರೂ, ಆತ ಬದುಕ್ಬೇಕು. ನೆಮ್ಮದಿಯ ಜೀವನ ನಡೆಸಬೇಕು ಅನ್ನೋದು ಆಕೆಯ ಆಲೋಚನೆ ಇರಬಹುದು. ಹಾಗೆಯೇ ಅವ್ನು, ಆಕೆಯನ್ನ ನೆಗ್ಲೆಟ್ ಮಾಡೋದಕ್ಕೂ ಕೆಲ ಕಾರಣಗಳಿರಬಹುದು. ಆಕೆ ನನ್ನೊಂದಿಗೆ ತುಂಬಾ ಕ್ಲೋಸ್ ಆಗಿದ್ದಾಳೆ. ನನ್ನ ಜೊತೆ ಮೆಸೇಜ್ ಮಾಡ್ದೆ, ಮಾತಾಡ್ದೆ ಅವ್ಳಿಗೆ ಇರೋಕ್ ಆಗಲ್ಲ. ನಮ್ಮಿಬ್ಬರ ಸ್ನೇಹ ಅದೆಷ್ಟ್ ದಿನ ಇರುತ್ತೋ ಗೊತ್ತಿಲ್ಲ. ನಾವು ಇಬ್ರೂ ಹೀಗೆ ಅಟ್ಯಾಚ್ ಆಗಿರೋದ್ರಿಂದ ಅದ್ಯಾರ್ ಏನ್ ಅಂದುಕೊಳ್ತಾರೋ..? ನಂಗ್ ಯಾರಾದ್ರೂ ಏನಾದ್ರೂ, ಹೇಳಿದ್ರೆ ಫೇಸ್ ಮಾಡ್ತೀನಿ. ಬಟ್ ಅವ್ಳು ಹುಡುಗಿ ತುಂಬಾ ಯೋಚಿಸ್ತಾಳೆ. ಅವ್ಳಿಗೆ ನನ್ನಿಂದ ಯಾವುದೇ ಕಷ್ಟ, ತೊಂದರೆಗಳು ಬರಬಾರದು. ಅವ್ಳು ದುಃಖದಲ್ಲಿದ್ದಾಗ ನಾನು ಜೊತೆಗೆ ನಿಂತ್ರಾಯ್ತು. ಅವ್ಳೊಂದಿಗೆ ತುಂಬಾ ಸಮಯ ಕಳೆಯೋದ್ರಿಂದ ಬೇರೆಯವ್ರು ಆತ/ಆಕೆಯ ಸ್ನೇಹವನ್ನ ತಮ್ಮ ಆಲೋಚನೆಗೆ ತಕ್ಕಂತೆ ಗಾಸಿಫ್‌ಗಳನ್ನ ಹಬ್ಬಿಸಬಾರದೆಂಬ ಕಾಳಜಿಯೂ ಇರುತ್ತೆ.

ಹೀಗೆ ಇಬ್ಬರಲ್ಲೂ ಒಂದೊಂದು ರೀತಿಯ ಕಾರಣ, ಆಲೋಚನೆಗಳಿರುತ್ತವೆ. ಅವ್ರಿಬ್ಬರೂ ಕೂತು ಹೀಗೆಲ್ಲಾ ಆಗ್ತಿದೆ/ಆಗಬಹದು. ನಾವ್ ಇದನ್ನ ಫೇಸ್ ಮಾಡೋಣ ಅಂತ ಯೋಚಿಸೋದ್ ಬಿಟ್ಟು ಅವ್ಳೇ ಆಗ್ಲಿ ಅಥವಾ ಅವ್ನೇ ಆಗ್ಲಿ ಒಬ್ಬರಿಗೊಬ್ಬರನ್ನ ಕಂಡ್ರೆ ಆಗದಿರೋ ಹಾಗೆ ನಡೆದುಕೊಳ್ಳೋದು. ಮನಸಲ್ಲಿ ಬೆಟ್ಟದಷ್ಟು ಪ್ರೀತಿ ಇಟ್ಕೊಂಡ್ ಸಮಾಜಕ್ಕೆ ಹೆದರಿ ತಮ್ಮತನವನ್ನ ಬಿಟ್ಟುಕೊಡೋದು ಆಗಬಾರದು. ಬದಲಾಗಿ ಇಬ್ಬರ ಮಧ್ಯೆ‌ ಅದೆಷ್ಟೇ ಭಿನ್ನಾಭಿಪ್ರಾಯಗಳು ಬಂದ್ರೂ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಆರಂಭಿಕ ಸ್ನೇಹವನ್ನ ಜೀವನದ ಕೊನೆಯುಸಿರು ಎಳೆಯೋವರೆಗೂ ಕಾಯ್ದುಕೊಂಡು ಹೊಗೋದೇ ನಿಜವಾದ ಸ್ನೇಹ. ಇಂತದ್ದೊಂದು ನೈಜ ಸ್ನೇಹ ನಡೀತಿದೆ ಅಂದ್ರೆ ಅದ್ಕೆ ನೂರೊಂದ್ ಅರ್ಥ ಕಲ್ಪಿಸಿ ಅವ್ರ್ ಸ್ನೇಹವನ್ನೇ ಸಮಾಜ ಬೇರೆ ರೀತಿ ಕಲ್ಪಿಸಿಕೊಳ್ಳೋದು ದುರ್ದೈವದ ಸಂಗತಿಯೇ ಸರಿ..

ಸೋಮಶೇಖರ್ ತಾಳಿಕೋಟೆ
ಯುವ ಪತ್ರಕರ್ತ
ಪತ್ರಿಕೋದ್ಯಮ ವಿದ್ಯಾರ್ಥಿ
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ , ಬೆಂಗಳೂರು

Prev Post

ಮುಂಜಾನೆಯ ಮಂಜು ಕಲಿಸಿದ ಪಾಠ | ಕೌಶಿಕ್ ಹೆಗಡೆ

Next Post

ನಶೆಯಲ್ಲಿ ನಿಜವನ್ನೇ ನುಡಿವ ಹರಿಶ್ಚಂದ್ರರಾಗುತ್ತೇವೆ | ಚಿತ್ತ ಸಾಗರ್

post-bars

Leave a Comment

Related post