ಕುಪ್ಪಳ್ಳಿ ಪ್ರವಾಸದ ಮರೆಯಲಾಗದ ನೆನಕೆಗಳು| ಮಾನಸ ಜಿ
ಎಲ್ಲಿಯೂ ನಿಲ್ಲದಿರು.. ಮನೆಯನೊಂದು ಕಟ್ಟದಿರು..ಕೊನೆಯನೆಂದೂ ಮುಟ್ಟದಿರು.. ಓ ಅನಂತವಾಗಿರು! ಓ ನನ್ನ ಚೇತನ, ಆಗು ನೀ ಅನಿಕೇತನ! – ಕುವೆಂಪು
ಕುಪ್ಪಳ್ಳಿ ಎಂದಾಕ್ಷಣ ನಮ್ಮ ಮನಸ್ಸಿಗೆ ಮೊದಲು ಬರುವುದು ನಮ್ಮ ರಾಷ್ಟ್ರಕವಿ ಕುವೆಂಪುರವರ ಸವಿನೆನಪು. ಸಾಹಿತ್ಯ ಪ್ರೇಮಿಗಳಿಗೆ ಈ ಸ್ಥಳ ಕೈಲಾಸ ಎಂದರೆ ತಪ್ಪಾಗಲಾರದು. ಅಂತಹ ಸ್ವರ್ಗದಂತಿರುವ ಕುಪ್ಪಳಿಗೆ ನಮ್ಮ ಕಾಲೇಜಿನ ಕನ್ನಡ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ವಿದ್ಯಾಭ್ಯಾಸದ ಅಂಗವಾಗಿ ಸಾಹಿತ್ಯ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು.
ಅಕ್ಟೋಬರ್ 29 ರಂದು ಆಯೋಜಿಸಲಾಗಿದ್ದ ಈ ನಮ್ಮ ಪ್ರವಾಸ ಪಾಲ್ಗೊಂಡಿದ್ದ ಎಲ್ಲರ ಜೀವನದಲ್ಲು ಆ ದಿನ ಅಲ್ಲಿ ಕಳೆದಂತಹ ಕ್ಷಣಗಳು ತಿಳಿದುಕೊಂಡ ಹಲವಾರು ಮಾಹಿತಿಗಕು, ಗೆಳೆಯರೊಂದಿಗೆ ಕಳೆದ ಅಮೂಲ್ಯವಾದ ಕ್ಷಣಗಳು, ಉಪನ್ಯಾಸಕರೊಂದಿಗೆ ಕಳೆದ ಅಧ್ಭುತ ಸಮಯವನ್ನೆಲ್ಲಾ ಎಂದೆಂದಿಗೂ ಮರೆಯಲು ಸಾಧ್ಯವಾಗದ ಸುಂದರ ನೆನಪಾಗಿ ಉಳಿದುಕೊಳ್ಳುತ್ತದೆ.
ನಮ್ಮೆಲ್ಲರಿಗೂ ಕುಪ್ಪಳ್ಳಿ ಪ್ರವಾಸ ಎಂಬ ಮಾತು ಕಿವಿಗೆ ಬಿದ್ದ ಕೂಡಲೆ ನಮಗಾದ ಸಂತೋಷ ಅಷ್ಟಿಷ್ಟಲ್ಲ. ಅಲ್ಲಿಂದ ನಾವು ಪ್ರತೀ ದಿನ ಹೇಗಿರಬಹುದು ಎಂಬ ಕನಸು ಕಾಣಲು ಶುರು ಮಾಡಿದೆವು. ಪ್ರತ್ಯಕ್ಷವಾಗಿ ಕುಪ್ಪಳ್ಳಿಯನ್ನು ಕಂಡ ಮೇಲೆ ನಮ್ಮ ಕನಸುಗಳು ಅದರ ಮುಂದೆ ಏನೇನೂ ಅಲ್ಲ ಎಂಬ ಮನವರಿಕೆ ಆಯಿತು. ನಮ್ಮ ಕಲ್ಪನೆಗೂ ಮೀರಿದ ಅತ್ತ್ಯದ್ಭುತ ತಾಣ ಕುಪ್ಪಳಿಯಾಗಿತ್ತು.
ಸುಮಾರು ಸಂಜೆ ಏಳು ಗಂಟೆಯ ಹೊತ್ತಿಗೆ 28 ರಂದು ನಮ್ಮ ಕಾಲೇಜಿನಿಂದ ಪ್ರಯಾಣ ಆರಂಭವಾಯಿತು. ಪ್ರಯಾಣದ ಪ್ರತಿಕ್ಷಣವು ಸಂಭ್ರಮದಿಂದ ಕೂಡಿತ್ತು. ಹಾಡು ಕುಣಿತ ನಲಿವುಗಳಿಗೆ ಮಿತಿಯೇ ಇರಲಿಲ್ಲ. ನಮ್ಮ ಪ್ರವಾಸಕ್ಕೆ ಜೊತೆಯಾಗಿದ್ದ ನಮ್ಮ ಕನ್ನಡ ಉಪನ್ಯಾಸಕರು ವಿದ್ಯಾರ್ಥಿಗಳ ಸಂಭ್ರಮಕ್ಕೆ ಜೊತೆಯಾಗಿ ಅವರು ಸಹ ಮಕ್ಕಳೊಂದಿಗೆ ಮಕ್ಕಳಾಗಿ ನಮ್ಮೊಂದಿಗೆ ಬೆರೆತು ಜೊತೆಗೂಡಿ ನಲಿದರು.
ಸುಮಾರು ಒಂಬತ್ತರಿಂದ ಹತ್ತುಗಂಟೆಗಳ ಪ್ರಯಾಣದ ನಂತರ ಮುಂಜಾನೆ ಐದುವರೆ ಹೊತ್ತಿಗೆ ಕುಪ್ಪಳಿ ತಲುಪಿದೆವು. ಆಗ ಇನ್ನು ಬೆಳಕು ಮೂಡಿರದ ಕಾರಣ ಎಲ್ಲೆಡೆ ಕತ್ತಲೆಯ ಮೌನ ಆವರಿಸಿತ್ತು. ಆದರೆ ಮನದಲ್ಲಿ ಸಾವಿರ ಭಾವನೆಗಳು ಜಗಜಗಿಸುತ್ತಿತ್ತು. ಬಸ್ಸಿನಿಂದ ಇಳಿದ ತಕ್ಷಣ ನಾನು ಆಕಾಶದ ಕಡೆಗೆ ದೃಷ್ಟಿ ಹರಿಸಿದೆ. ನೋಡಿದಾಕ್ಷಣ ಮೈ ರೋಮಾಂಚನವಾಯಿತು.
ಬಾನಿನ ತುಂಬಾ ನಕ್ಷತ್ರಗಳ ಗುಂಪು ಸೇರಿದ್ದವು. ನಾನೆಂದೂ ಅಷ್ಟು ನಕ್ಷತ್ರಗಳು ಒಟ್ಟಿಗೆ ಇದ್ದುದ್ದನ್ನು ಕಂಡೇ ಇರಲಿಲ್ಲ. ಅವುಗಳು ನಮ್ಮನ್ನು ಸ್ವಾಗತಿಸಲೇ ಬಂದಿರಬೇಕು ಎನ್ನುವಂತೆ ಚುಕ್ಕಿಗಳು ಮಿಣು ಮಿಣುಕುತಿದ್ದವು. ಕುಪ್ಪಳ್ಳಿ ಬಹಳ ಎತ್ತರದ ಪ್ರದೇಶದಲ್ಲಿ ಇರುವುದರಿಂದ ಮುಂಜಾನೆ ಆಕಾಶದಲ್ಲಿ ಮೇಳವಾಡುತ್ತಿದ್ದ ಚುಕ್ಕಿಗಳು ಕೈಗೆಟಕುವಷ್ಟು ಹತ್ತಿರದಲ್ಲಿ ಇವೆ ಎಂಬಂತೆ ಭಾಸವಾಗಿತ್ತು. ನಕ್ಷತ್ರಗಳಲ್ಲಿ ಆ ನಕ್ಷತ್ರ ಕುವೆಂಪು ಇರಬಹುದಾ? ಈ ನಕ್ಷತ್ರ ತೇಜಸ್ವಿ ಆಗಿರಬಹುದ!?. ಎಂದು ನಾನು ಹುಚ್ಚು ಯೋಚನೆಗಳಲ್ಲಿ ಮಗ್ನಳಾದೆ.
ಆ ಮೇಲೆ ನಮ್ಮನ್ನು ಹೇಮಾಂಗಣಕ್ಕೆ ವಿಶ್ರಾಂತಿ ಪಡೆಯಲು ಕರೆದುಕೊಂಡು ಹೋದರು. ಕತ್ತಲೆ ಇದ್ದ ಕಾರಣ ದೀಪದ ಬೆಳಕಿನಲ್ಲಿ ನಮಗೆ ಮೊದಲು ಕಂಡದ್ದು ಕುವೆಂಪುರವರ ಭಾವಚಿತ್ರ. ಆ ಮುಖದಲ್ಲಿದ ತೇಜಸ್ಸು ಧನ್ಯತಾ ಭಾವವನ್ನು ಮೂಡಿಸಿತು. ಮುಂದೆ ಒಳನಡೆದು ಕೊಂಚ ಸಮಯ ನಿದ್ರಿಸಿ ಎಲ್ಲರೂ ಕುಪ್ಪಳ್ಳಿಯನ್ನು ಆನಂದಿಸಲು ಸಜ್ಜಾದೆವು. ಬೆಳಗ್ಗೆ ಹೇಮಾಂಗಣದ ನೈಜ ಸೌಂದರ್ಯವನ್ನು ಕಂಡಾಗ ದೇಗುಲದಂತೆ ಕಾಣಿಸಿತು.
ಸುತ್ತಲು ಕಲ್ಲಿನ ಕಂಬಗಳು, ಮುಂಭಾಗದಲ್ಲಿ ವೇದಿಕೆ, ಮಧ್ಯದಲ್ಲಿ ವೇದಿಕೆ ಮೇಲೆ ನಡೆಯುವ ಕಾರ್ಯಕ್ರಮಗಳನ್ನು ನೋಡಲು ಇದ್ದ ಖಾಲಿ ಜಾಗ. ಪ್ರತಿ ಗೋಡೆಯ ಮೇಲೆ ಕಲ್ಲಿನಲ್ಲಿ ಕುವೆಂಪುರವರ ಕೃತಿಗಳಿಂದ ಆಯ್ದ ಶ್ರೇಷ್ಠ ಸಾಲುಗಳನ್ನು ಕೆತ್ತಲಾಗಿತ್ತು. ಅವುಗಳು ಹೇಮಾಂಗಣಕ್ಕೆ ವಿಶೇಷ ಅರ್ಥವನ್ನು ಕೊಡುವುದಲ್ಲದೆ ಅದರ ಸೊಬಗನ್ನು ಹೆಚ್ಚಿಸಿದವು.
ನಾವು ಉಳಿದುಕೊಂಡಿದ್ದ ಈ ಸ್ಥಳ “ಕುವೆಂಪು ಶತಮಾನೋತ್ಸವ ಭವನ”. ಇದನ್ನು ಕುವೆಂಪುರವರ ಜನ್ಮಶತಾಬ್ದಿಯ ಸ್ಮಾರಕವಾಗಿ 2004 ರಲ್ಲಿ ಕಟ್ಟಲಾಗಿದೆ. ಹೇಮಾಂಗಣ ಇದರ ಒಂದು ಭಾಗ. ಇಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಲು ಎಲ್ಲಾ ಸೌಲಭ್ಯಗಳು ಉಂಟು. ಪ್ರವಾಸಿಗಳಿಗೆ ಸರ್ವ ಸೌಕರ್ಯಗಳನ್ನು ಈ ಭವನ ಒದಗಿಸಿ ಕೊಡುತ್ತದೆ.
ಮೊದಲಿಗೆ ನಾವು ಭೇಟಿ ಮಾಡಿದ ಸ್ಥಳ ಪೂರ್ಣ ಚಂದ್ರ ತೇಜಸ್ವಿಯವರ ಸ್ಮಾರಕ. ತೇಜಸ್ವಿಯವರು 2007ರಲ್ಲಿ ನಿಧನರಾಗುತ್ತಾರೆ. ಅವರ ಅಂತ್ಯಸಂಸ್ಕಾರವನ್ನು ಕುಪ್ಪಳ್ಳಿಯಲ್ಲೇ ಮಾಡಲಾಯಿತು. ಅವರ ಸ್ಮಾರಕದ ಸುತ್ತಲು ಅವರ ಕೃತಿಗಳ ಸಾಲುಗಳನ್ನು ಕಲ್ಲುಗಳಲ್ಲಿ ಕೆತ್ತಲಾಗಿದೆ. ಸಮಾಧಿಯ ಮೇಲೆ ಉದ್ದುದ್ದ ಕಲ್ಲುಗಳನ್ನು ಏನು ವಿಶೇಷವಾದ ಆಕೃತಿಗಳಿಲ್ಲದೆ ಹಾಗೆಯೇ ನಿಲ್ಲಿಸಲಾಗಿದೆ.
ಇದರ ಹಿಂದೆ ಕೆ.ಟಿ.ಶಿವಪ್ರಸಾದ್ ರವರ ಪಾತ್ರ ಮಹತ್ವವಾದದ್ದು. ಈ ಕಲ್ಲುಗಳು ನಮ್ಮ ಚಿಂತನೆಗೆ ದಾರಿ ಮಾಡಿಕೊಟ್ಟವು. ಅದರ ಉದ್ದೇಶವನ್ನು ಹಾಗೂ ಪೂರ್ತಿ ಮಾಹಿತಿಯನ್ನು ನಮ್ಮ ಕನ್ನಡದ ಉಪನ್ಯಾಸಕರಾದ ಚಂದ್ರಶೇಖರ್ ಸರ್ ಸಂಕ್ಷಿಪ್ತವಾಗಿ ವಿವರಿಸಿದರು. ನಾವು ಕೇಳಿದ ಪ್ರತಿ ಪ್ರಶ್ನೆಗೂ ಸರ್ ವಿವರವಾಗಿ ಉತ್ತರಿಸ ತೊಡಗಿದರು. ಸ್ಮಾರಕದಿಂದ ಮಾಹಿತಿ ಸಂಗ್ರಹ ಶುರುವಾಯಿತು ಎಂದರೆ ತಪ್ಪಾಗಲಾರದು. ಹಲವಾರು ವಿಷಯಗಳನ್ನು ತಿಳಿದುಕೊಳ್ಳಲು ಅದೊಂದು ಮಹೋನ್ನತ ಅವಕಾಶವಾಗಿತ್ತು.
ಇದಾದ ನಂತರ ತಿಂಡಿ ಸವಿಯಲು ನಾವು ನಡೆದೆವು. ಅಲ್ಲಿನ ವಿಶೇಷವಾಗಿದ್ದ ಮಲೆನಾಡಿನ ಕಡಬುಗಳನ್ನು ಕಾಯಿ ಚಟ್ನಿ, ಸಾಂಬಾರಿನ ಜೊತೆ ಕೊಟ್ಟರು. ಬಹಳ ರುಚಿಯಾಗಿದ್ದ ಆ ತಿಂಡಿಯನ್ನು ಈಗಲೂ ನೆನೆದರೆ ಬಾಯಲ್ಲಿ ನೀರೂರುತ್ತದೆ. ಅಲ್ಲಿ ಭೇಟಿಯಾಗುವ ಪ್ರತಿ ಒಬ್ಬರು ಅದರ ರುಚಿಯನ್ನು ಸವಿಯಲೆ ಬೇಕು.
ಆ ನಂತರ ನಮ್ಮ ಪಯಣ ಕವಿಶೈಲದ ಕಡೆಗೆ …“ಎಲ್ಲಿಯು ಎಲ್ಲವು ಮಹತ್ತೆ ಇಲ್ಲಿ.. ಈ ಸಹ್ಯ ಮಹಾ ಬೃಹತ್ತಿನಲ್ಲಿ “ ಕವಿಮನೆಯ ಹತ್ತಿರ ಇರುವ ಬೆಟ್ಟವೇ ಕವಿಶೈಲ. ಹತ್ತಾರು ಮೆಟ್ಟಲುಗಳನ್ನು ಹತ್ತಿದರೆ ಐದತ್ತು ನಿಮಿಷಗಳಲ್ಲಿ ಕವಿಶೈಲವನ್ನು ತಲುಪುತ್ತೇವೆ. ಬೆಟ್ಟದ ಭವ್ಯ ಸೌಂದರ್ಯವನ್ನು ವರ್ಣಿಸಲು ಪದಗಳು ಸಾಲದು. ಪ್ರಕೃತಿ ಮಡಿಲಿನಲ್ಲಿ ಕವಿಶೈಲ ಬೆಟ್ಟ ವಿಜೃಂಭಿಸುತ್ತಿತ್ತು. ಎಲ್ಲೆಡೆ ಹಸಿರು, ಎಲ್ಲೆಡೆ ಮರಗಿಡಗಳು.
ಕವಿಶೈಲದಲ್ಲಿ ಬೃಹತ್ ಶಿಲ್ಪ ಕಲಾಕೃತಿಯ ರೂಪದಲ್ಲಿ ಕಲ್ಲುಗಳನ್ನು ಕಾಣಬಹುದು. ಅದಲ್ಲದೆ ಕವಿಯ ಸಮಾಧಿಯನ್ನು ಸಹ ಅಲ್ಲೇ ಸ್ಥಾಪಿಸಲಾಗಿದೆ. ಕವಿಶೈಲವು ಕುವೆಂಪುರವರಿಗೆ ಸ್ಪೂರ್ತಿಯ ತಾಣವಾಗಿತ್ತು. ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಆಕರ್ಷಿತರಾಗಿ ಮತ್ತೆ ಮತ್ತೆ ಭೇಟಿ ನೀಡುತ್ತಿದ್ದ, ಧ್ಯಾನಿಸುತ್ತಿದ್ದ ಸ್ಥಳ ಕವಿಶೈಲವಾಗಿದೆ ಎನ್ನುತ್ತಾರೆ.
ನಾವು ಅಲ್ಲಿ ಕೆಲವು ಕಾಲ ಕುಳಿತಿದ್ದು ಅಲ್ಲಿನ ಸೌಂದರ್ಯಕ್ಕೆ ಮಾರು ಹೋಗಿದ್ದೇವು. ಆ ಚೆಲುವನ್ನು ಆಸ್ವಾದಿಸಲು ಇನ್ನು ಹೆಚ್ಹೆಚ್ಚು ಸಮಯ ಬೇಕು ಎನಿಸುತ್ತಿತ್ತು . ನನಗೆ ಅರೇ!! ಇಲ್ಲಿ ಕುವೆಂಪುರವರು ಕೂತಿರಬಹುದ. ಇಲ್ಲಿ ನಡೆದಿರಬಹುದ ಎಂದು ಊಹಿಸಿದಾಗಲೆಲ್ಲ ರೋಮಾಂಚನವಾಗುತ್ತಿತ್ತು. ಕವಿಗಳನ್ನು ದೇವರಂತೆ ಆರಾಧಿಸುವ ಸಾಹಿತ್ಯ ಪ್ರೇಮಿಗಳು ಅಲ್ಲಿ ಭೇಟಿಯಾಗಿದ್ದರೆ ಈ ಅನುಭವ ಅವರಿಗೂ ಆಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಬೆಟ್ಟದ ಮೇಲೆ ಕುಳಿತ ಆ ಕ್ಷಣಗಳು ಸ್ವರ್ಗ.. ಸ್ವರ್ಗ ಹೇಗಿರಬಹುದು ಎಂದು ಅರಿಯದ ನಮಗೆ ಕವಿಶೈಲವೇ ಸ್ವರ್ಗಕ್ಕೆ ಮತ್ತೊಂದು ಹೆಸರು ಎನ್ನಬಹುದು.
ಅಲ್ಲಿಂದ ಇಳಿದು ಕವಿಮನೆಗೆ ನಾವು ಹೊರಟೆವು. ಕುಪ್ಪಲಿಯ ಮುಖ್ಯ ಉದ್ದೇಶವೇ ಕವಿಮನೆ. “ಕಾಡು ಮತ್ತು ಕೊಡತಲಿರುವ ಸೊಬಗವೀಡು ನನ್ನ ಮನೆ”. ಕುವೆಂಪು ಅವರ ಪೂರ್ವಜರು ಕಟ್ಟಿಸಿದ್ದ 200 ವರ್ಷಗಳ ಹಳೆಯ ತೊಟ್ಟಿ ಮನೆಯನ್ನು ನವೀಕರಿಸಲಾಗಿದೆ. ಎರಡು ಮಹಡಿಗಳು, ಮಧ್ಯ ಒಳ ಅಂಗಳ ಇರುವ ಈ ಮನೆ, ಆ ಕಾಲದ ಮಲೆನಾಡಿನ ಜಮೀನ್ದಾರರ ಮನೆಯ ಮಾದರಿಯಾಗಿದೆ.
ಟಿಕೆಟ್‌ಗಳನ್ನು ಸಾಲು ಸಾಲಾಗಿ ಪಡೆದ ನಂತರ ನಮ್ಮನ್ನು ಒಳಗೆ ಹೋಗಲು ಅನುಮತಿ ನೀಡಿದರು. ನಮ್ಮ ಚಂದ್ರು ಸರ್ ಟಿಕೆಟ್ ವಿತರಣೆ ಮಾಡುವುದಲ್ಲದೆ ನಮ್ಮನ್ನು ಸ್ವಾಗತಿಸಿದರು. ಆ ರಸಮಯ ನಿಮಿಷಗಳು ಹಾಸ್ಯಾಸ್ಪದವಾಗಿತ್ತು. ಈ ಹಿಂದೆ ಕವಿ ಮನೆಯಂತಹ ಮನೆಯನ್ನು ಎಲ್ಲೂ ಕಂಡಿರಲು ಸಾಧ್ಯವಾಗದ ನಮಗೆ ಕವಿ ಮನೆಯ ಪ್ರತಿ ಒಂದು ಭಾಗವು ನಮಗೆ ಹೊಸದರ ಭಾವವನ್ನು ನೀಡುತ್ತಿತ್ತು.
ಸಾಕಷ್ಟು ವಸ್ತುಗಳನ್ನು, ಪುಸ್ತಕಗಳನ್ನು, ಕುವೆಂಪುರವರಿಗೆ ದೊರೆತ ಪ್ರಶಸ್ತಿಗಳು, ವಿವಾಹ ಮಂಟಪ, ಚಿಕ್ಕ ವಯಸ್ಸಿನ ಫೋಟೋಗಳು, ಕುಟುಂಬದ ಫೋಟೋಗಳು, ಕೆಲವು ಅವಿಸ್ಮರಣೀಯ ಘಳಿಗೆಗಳ ಚಿತ್ರಗಳನ್ನೆಲ್ಲ ಸಂಗ್ರಹಿಸಲಾಗಿದೆ. ಈ ಎಲ್ಲದರ ಮಾಹಿತಿಗಳನ್ನು, ವಸ್ತು ಫೋಟೋ ಹಿಂದಿನ ಕಥೆಗಳನ್ನು ನಮ್ಮ ಸರ್ ಹೇಳುತ್ತಿದ್ದರೆ ನಾವು ಕಲ್ಪನೆಯನ್ನು ಕಲ್ಪಿಸಿ ಅನುಭವಿಸುತ್ತದ್ದೇವು. ಅಂತಹ ಕಲ್ಪನಾ ಲೋಕಕ್ಕೆ ನಮ್ಮನ್ನು ಕರೆದೊಯ್ಯಲು ಕವಿಗಳಿಗೆ ಬಿಟ್ಟರೆ ನಮ್ಮ ಶಿಕ್ಷಕರಿಗೆ ಮಾತ್ರ ಆ ಶಕ್ತಿ ಉಂಟು ಎನ್ನಬಹುದು. ಕೊನೆಯದಾಗಿ ಪುಸ್ತಕ ಮಳಿಗೆಯಲ್ಲಿ ಪುಸ್ತಕಗಳನ್ನು ಕೊಂಡು ಹೊರ ಬಂದೇವು.
ನಂತರ ದರ್ಶಿಸಿದ್ದು ಹೇಮಾಂಗಣದಲ್ಲಿರುವ ತೇಜಸ್ವಿ ಫೋಟೋ ಗ್ಯಾಲರಿ, ಕುವೆಂಪು ಫೋಟೋ ಗ್ಯಾಲರಿ, ವಾಚನಾಲಯಕ್ಕೆ. ತೇಜಸ್ವಿಯವರು ತೆಗೆದಿರುವ ಮಲೆನಾಡಿನ ಹಕ್ಕಿಗಳ ಹಲವಾರು ಚಿತ್ರಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಕುವೆಂಪು ಸಾಹಿತ್ಯಾ ಆಧಾರಿತ ಅಮೂಲ್ಯ ಕಲಾಕೃತಿಗಳನ್ನು ಸಹ ಇಲ್ಲಿ ಪ್ರದರ್ಶಿಸಲಾಗಿದೆ. ದೃಕ್ ಶ್ರವಣ ಕೊಠಡಿಯಲ್ಲಿ ನಮಗೆ ಕುವೆಂಪುರವರ ಜೀವನದ ಬಗ್ಗೆ ಇದ್ದ ಡಾಕ್ಯುಮೆಂಟರಿ ತೋರಿಸಲಾಯಿತು.
ಇಲ್ಲಿಗೆ ನಮ್ಮ ಕುಪ್ಪಳಿಯ ಭೇಟಿ ಕೊನೆಯಾಯಿತು. ಕುಪ್ಪಳಿಯಿಂದ ಹೊರೆಟು ನಾವು ಆಗುಂಬೆಯ ಸೂರ್ಯ ಮುಳುಗುವ ಸ್ಥಳಕ್ಕೆ ಬಂದೆವು. ಅಲ್ಲಿ ಅರ್ಧ ಮುಕ್ಕಾಲು ಗಂಟೆ ಕಾಲ ಕಳೆದು ಅಲ್ಲಿನ ಪ್ರಕೃತಿಯ ಸೊಬಗಿಗೆ ಮೈ ಮರೆತು ಹಸಿರಿನ ಮಡಿಲಲ್ಲೇ ಕಳೆದು ಹೋಗುವ ಆಸೆಯಾಯಿತು. ಪ್ರತಿ ಒಂದು ಅಂಚಿನಲ್ಲೂ ವಿಸ್ಮಯ. ಒಂದಕ್ಕಿಂತ ಒಂದು ಹೆಚ್ಚು ಸುಂದರ. ನಮ್ಮ ಕಣ್ಣುಗಳಿಗೆ, ಮನಸ್ಸಿಗೆ ವೈಭವದ ಹಬ್ಬವಾಗಿತ್ತು. ಅಲ್ಲಿ ಚೇಷ್ಟೆ ಮಾಡುತಿದ್ದ ಮಂಗಗಳು ನಮಗೆ ವಿನೋದ ಭಾವ ತರಿಸುವುದಲ್ಲದೆ ಕೊಂಚ ಭಯವನ್ನು ಸಹ ಉಂಟುಮಾಡಿದವು. ಆ ಪ್ರಕೃತಿಯ ಸೌಂದರ್ಯಕ್ಕೆ ಸಾಕ್ಷಿಯಾದ ನಮ್ಮ ಕಂಗಳೂ ಸಹ ನಿಸರ್ಗ ಮಾತೆಗೆ ಕೃತಜ್ಞತೆಗಳನ್ನು ಅರ್ಪಿಸಿರಬಹುದು.
ಕೊನೆಯದಾಗಿ ತಾಯಿ ಶಾರದೆಯ ಕೃಪೆಗೆ ಪಾತ್ರರಾಗಲು ಶೃಂಗೇರಿಗೆ ಹೊರೆಟು ತಾಯಿಯ ದರ್ಶನವನ್ನು ಮಾಡಿ ಅಲ್ಲಿ ನಡೆಯುತ್ತಿದ್ದ ಉತ್ಸವಗಳನ್ನು ಕಣ್ತುಂಬಿಸಿಕೊಂಡು ಪ್ರಸಾದ ಸ್ವೀಕರಿಸಿ ನಂತರ ಸ್ವಲ್ಪ ಸಮಯ ವಸ್ತುಗಳ ಖರೀದಿಗೆ ಮೀಸಲಿಡಲಾಯಿತು. ನೋಡು ನೋಡುತ್ತಿದ್ದಂತೆ ನಾವು ಬೆಂಗಳೂರಿಗೆ ತಲುಪಿಯೇ ಬಿಟ್ಟೆವು. ಎಷ್ಟು ಬೇಗ ಒಂದು ದಿನ ಕಳೆದುಹೋಗಿತ್ತು. ಅಯ್ಯೋ ! ಮುಗಿದೇ ಹೋಯಿತಲ್ಲ ಎಂದು ಸ್ವಲ್ಪ ಬೇಸರ ಆಗಿದ್ದು ಉಂಟು.
ಮಾನಸ ಜಿ
ಕ್ರಿಸ್ತು ಜಯಂತಿ ಕಾಲೇಜು, ಬೆಂಗಳೂರು