ಕಡಲ ಧೇನಿಸುವ ಬಟ್ಟಲ ಕಂಗಳ ಚೆಲುವೆ | ಗಿರಿ ವಾಲ್ಮೀಕಿ
ಬದುಕಿನಲಿ ಏನೋ ಅರಸಿ
ಹೊರಟವನಿಗೆ
ಅಚಾನಕ್ ಎದುರಾದವಳು
ಕಡಲ ಧೇನಿಸುವ, ಬಟ್ಟಲ ಕಂಗಳ ಹುಡುಗಿ
‘ಮುತ್ತು ಹುಡುಕುವಂತೆ’
ಕಡಲನ್ನೇ ಧೇನಿಸುವ
ಹುಡುಗಿಯ ಎದೆಯಲ್ಲಿ
ಸಹಸ್ರ ಮಿನುಗು
ನಕ್ಷತ್ರಗಳಂತೆ ನೋವು
ಆರಿಸಿಕೋ ಬೇಕಾದುದನ್ನು
ಎಂದು ಎದುರಿಗೆ
ಹರವಿ ಕೂತಳು
ನೋವು ಮತ್ತು ಖುಷಿಯನ್ನು.
ಪುಟಾಣಿ ಕೈಗಳ ಮಗು
ಆಗಸಕ್ಕೆ ಚಾಚಿ
ತಾರೆಗಳ ಎಣಿಸಿದಂತೆ,
ಲೆಕ್ಕ ಹಾಕಿದೆ ಅವಳ ಖುಷಿಯನ್ನು,
ಗುರುತಿಟ್ಟೆ ಆಕೆಯ ನೋವಿನ
ಪುಟಗಳನ್ನು.
ಒಂದು ಹಿಡಿಯಷ್ಟು ಭೇಟಿಯಲ್ಲಿ
ಕೂಡಿ ಹಾಕಿದೆವು
ಬದುಕಿಗಿಡೀ
ಸಾಕಾಗುವಷ್ಟು ಒಲವು
ಮತ್ತು ನಿರೀಕ್ಷಿತ ವಿದಾಯ.
ಅವಳು ಬಿಳ್ಕೊಟ್ಟ ಬಳಿಕವೇ ತಿಳಿಯಿತು
ಆಕೆ ಹುಡುಕುತ್ತಿದ್ದದ್ದು ನನ್ನನ್ನೇ
ಮತ್ತು
ನಾನೂ ಅರಸುತ್ತಿದ್ದೆ ಅವಳನ್ನೇ…
ಗಿರಿ ವಾಲ್ಮೀಕಿ
ಮೈಸೂರು ಮುಕ್ತ ವಿಶ್ವವಿದ್ಯಾಲಯ