ಗುಲಬರ್ಗಾ ವಿಶ್ವವಿದ್ಯಾಲಯದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಲೇಖಕರಿಗೆ, ಕಲಾವಿದರಿಗೆ, ಕಥೆಗಾರರಿಗೆ ಕೊಡಮಾಡುವ 2022ನೇ ಸಾಲಿನ ಗುಲಬರ್ಗಾ ವಿಶ್ವವಿದ್ಯಾಲಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ಜನವರಿಯಲ್ಲಿ ವಿಶ್ವವಿದ್ಯಾಲಯದ ಕಾರ್ಯಸೌಧದ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ರಾಜ್ಯೋತ್ಸವ ಸಮಾರಂಭದಲ್ಲಿ ಕುಲಪತಿ ಪ್ರೊ. ದಯಾನಂದ್ ಅಗಸರ್ ಅವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಸಾರಂಗ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಅವರು ತಿಳಿಸಿದ್ದಾರೆ.
ವಿಶ್ವವಿದ್ಯಾಲಯವು ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿಭಾಗ (ಕಲ್ಯಾಣ ಕರ್ನಾಟಕ ಪ್ರದೇಶದ)ದ ಕನ್ನಡ ಸೃಜನ, ಸೃಜನೇತರ ಲೇಖಕರ ಕೃತಿಗಳಿಗೆ, ಜೀವನ ಕಥನ ಹಾಗೂ ಕನ್ನಡ ಪುಸ್ತಕ ಪ್ರಕಾಶಕರಿಗೆ, ಅನುವಾದ ಲೇಖಕರ ಕೃತಿಗೆ, ಸಮಾಜ ವಿಜ್ಞಾನ, ಜನಪದ ಕಲಾವಿದರಿಗೆ, ಚಿತ್ರ/ಶಿಲ್ಪಕಲಾವಿದರಿಗೆ, ಹಿಂದಿ, ಮರಾಠಿ, ಇಂಗ್ಲೀಷ್ ಹಾಗೂ ಉರ್ದು ಭಾಷಾ ಲೇಖಕರಿಗೆ ಗೌರವಧನ ನೀಡಿ ಪ್ರೋತ್ಸಾಹಿಸುವುದಲ್ಲದೆ, ರಾಜ್ಯಮಟ್ಟದ ವಿಜ್ಞಾನ, ಅಂಬೇಡ್ಕರ್ ಪುಸ್ತಕ ಮತ್ತು ದಿ. ಜಯತೀರ್ಥ ರಾಜ ಪುರೋಹಿತ ಸ್ಮಾರಕ ರಾಜ್ಯ ಮಟ್ಟದ ಕನ್ನಡ ಕಥಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನೀಡುವ ಬಹುಮಾನದ ಪಟ್ಟಿ ಹೊರಬಂದಿದೆ.
ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯ ಮಟ್ಟದ ಕನ್ನಡ ಕಥಾ ಸ್ಪರ್ಧೆಯಲ್ಲಿ ಡಾ. ಜಯದೇವಿ ಗಾಯಕವಾಡ್ ಅವರ ಮಾಯದ ಗಾಯ ಕೃತಿಯು ಚಿನ್ನದ ಪದಕ, ಕು. ರೇಣುಕಾ ಹೆಳವರ್ ಅವರ ತಪ್ತ ಕೃತಿ ಬೆಳ್ಳಿ ಪದಕ ಮತ್ತು ಶಂಕರ್ ಸಿಹಿಮೊಗ್ಗೆ ಅವರ ಕರಿದೊಳು ಕೃತಿ ಕಂಚಿನ ಪದಕಕ್ಕೆ ಆಯ್ಕೆಯಾಗಿವೆ. ಕನ್ನಡ ಸೃಜನ ವಿಭಾಗದಲ್ಲಿ ಅಮರೇಶ್ ಗಿಣಿವಾರ್ ಅವರ ಬಾಂಗ್ಲಾದ ಹಕ್ಕಿಗಳು, ಡಾ. ಶರೀಫ್ ಹಸಮಕಲ್ ಅವರ ಕಣ್ಣ ಬೊಗಸೆಯಲ್ಲಿ, ಮಲ್ಲಿಕಾರ್ಜುನ್ ಕಡಕೋಳ್ ಅವರ ಮುಟ್ಟು, ಡಾ. ನಾಗೇಂಧ್ರ ಮಸೂತಿ ಅವರ ಮುತ್ತಿನ ಮಳೆ, ಮಹಾದೇವ್ ಎಸ್. ಪಾಟೀಲ್ ಅವರ ಸುಡುವ ತಂಗಾಳಿ, ಸೃಜನೇತರ ವಿಭಾಗದಲ್ಲಿ ಡಾ. ಅಮರೇಶ್ ಎನ್. ನುಗಡೋಣಿ ಅವರ ಮಧ್ಯಕಾಲಿನ ಸಾಹಿತ್ಯ ಸಂಸ್ಕøತಿ, ಡಾ. ಸೋಮಶೇಖರ್ ಡಿ. (ಅಪ್ಪಗೆರೆ) ಅವರ ನೆರಳು ಮರದ ಧ್ಯಾನ, ಸಂಗಮೇಶ್ ನಾಗಶೆಟ್ಟಿ ಜನಾದಿ ಅವರ ನಾ ಕಂಡ ಸಂಸ್ಕೃತಿ ಚಿಂತಕರು, ವೆಂಕಟೇಶ್ ಬೇವಿನ್ ಬೆಂಚಿ ಅವರ ಉರಿವ ಬತ್ತಿಯ ಬೆಳಕಿನ ಧ್ಯಾನ, ಎಸ್.ಎಂ. ಜನವಾಡಕರ್ ಅವರ ಧಮ್ಮ ಸುಳುವಿನ ಧರಿನಾಡು ಕೃತಿಗಳಿಗೆ ಪ್ರಶಸ್ತಿ ಲಭಿಸಿದೆ.
ಜಾನಪದ ಸಾಹಿತ್ಯ ಮತ್ತು ಸಂಸ್ಕೃತಿ ವಿಭಾಗದಲ್ಲಿ ಏ.ಕೆ. ರಾಮೇಶ್ವರ್ ಅವರ ಜೀವನ ಕಥನ, ಮಹಿಪಾಲರೆಡ್ಡಿ ಮುನ್ನೂರ್ ಅವರ ಚಂದ್ರಶಿಕಾರಿ, ಶ್ರೀಮಂತ್ ಹೋಳಕರ್ ಅವರ ಸಮಾಜ ವಿಜ್ಞಾನ, ಡಾ. ಪ್ರಕಾಶ್ ಕೆ. ನಾಡಿಗ್ ಅವರ ಆಯುರಾರೋಗ್ಯ, ಡಾ. ಸಿ. ಚಂದ್ರಪ್ಪ ಅವರ ಪೆರಿಯಾರ್, ಅನುವಾದ ವಿಭಾಗದಲ್ಲಿ ಎಫ್.ಸಿ. ಲಕ್ಷ್ಮೇಶ್ವರ್ ಮಠ್ ಅವರ ವಿನಯಶೀಲತೆ ಮಾನವೀಯತೆ ಮಾನವ ಹಕ್ಕುಗಳು, ಗಡಿನಾಡು ವಿಭಾಗದಲ್ಲಿ ಪ್ರೊ. ಜಿ.ಎನ್. ಉಪಾಧ್ಯ ಅವರ ಕನ್ನಡ ಸಾಹಿತ್ಯಕ್ಕೆ ದುಂಡಿರಾಜ್ ಕೊಡುಗೆ, ಹಿಂದಿ ವಿಭಾಗದಲ್ಲಿ ನಾರಾಯಣ್ ಬೋಸಾವಳೆ, ಉರ್ದು ವಿಭಾಗದ ಲೇಖಕರ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಕಾಶಕರ ವಿಭಾಗದಲ್ಲಿ ಪ್ರಭುಲಿಂಗ್ ನೀಲೂರೆ ಅವರ ಬಿಸಿಲನಾಡು ಪ್ರಕಾಶನ, ಜಾನಪದ ಕಲಾವಿದ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಡಾ. ಸಿ. ಮಹಾಲಿಂಗಪ್ಪ, ಚಿತ್ರ, ಶಿಲ್ಪಕಲಾ ಕೃತಿ ವಿಭಾಗದಲ್ಲಿ ಪಲ್ಲವಿ ಎಸ್. ಕೋಳಾರ್ ಅವರ ಫ್ರೀಡಮ್, ಆಜಾಮ್ ಮಹಿಬೂಬಸಾಬ್ ಅವರ ಬ್ರೇತ್ ವಿತ್ ನೇಚರ್, ಆನಂದಕುಮಾರ್ ಪಾಟೀಲ್ ಅವರ ಮದರ್ ನೇಚರ್ ಕಲಾಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕನ್ನಡ ಹಾಗೂ ವಿವಿಧ ಭಾಷಾ ಪುಸ್ತಕ ಲೇಖಕರಿಗೆ, ಜನಪದ ಕಲಾವಿದರಿಗೆ, ಜೀವನ ಕಥನ, ಸಮಾಜ ವಿಜ್ಞಾನ, ಚಿತ್ರ/ ಶಿಲ್ಪಕಲಾವಿದರಿಗೆ, ಪ್ರಕಾಶಕರಿಗೆ 5000 ರೂ.ಗಳ ಗೌರವಧನ ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ಕೊಡಲಾಗುವುದು. ಅದರಂತೆ ರಾಜ್ಯಮಟ್ಟದ ವಿಜ್ಞಾನ ಪುಸ್ತಕಕ್ಕೆ ಗೌರವಧನದ ಜೊತೆಗೆ ಸ್ಮರಣಿಕೆ, ಪ್ರಮಾಣ ಪತ್ರ ನೀಡುವುದು ಹಾಗೂ ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ರಾಜ್ಯ ಮಟ್ಟದ ಸಣ್ಣ ಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತರಿಗೆ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕದೊಂದಿಗೆ ಕ್ರಮವಾಗಿ ತಲಾ 5000, 3,000 ಹಾಗೂ 2,000ರೂ.ಗಳ ಗೌರವಧನ ಹಾಗೂ ಸ್ಮರಣಿಕೆ ನೀಡಲಾಗುತ್ತದೆ.