ಹೆಣ್ಣೇ ನೀ ಹೆಣ್ಣಾಗು | ಸೌಮ್ಯ ನೇತ್ರೆಕರ್
ಹೆಣ್ಣೆ ನೀನೇಕೆ ಇಷ್ಟು ಭಿನ್ನ
ಪಿತೃಸತ್ತೆ ನಿನಗೆ ಖುಷಿಯ ವಿಚಾರವೇ
ಬದುಕು ನಿನ್ನದು ಎಂದೂ ಆಗದು
ಅದೇನಿದ್ದರೂ ನಿನ್ನದಲ್ಲದ ವ್ಯವಸ್ಥೆ
ಮೌಲ್ಯ, ಸಂಪ್ರದಾಯ, ನೈತಿಕತೆ
ಪರಿಭಾಷೆಗಳ ರೂಢಿ…
ನಿನ್ನ ಮನಸ್ಸಿನ ಮೇಲೆ
ಅಡ್ಡಗೋಡೆಯ ದೀಪದಿ
ಅಜ್ಞಾನ ತುಂಬಿಸಿ
ಅಂಧಕಾರವ ಆನಂದದಿ ಮೆರೆಸಿರುವೆ
ಬೇಡವೇ ನಿನಗೆ ಸ್ವಾತಂತ್ರ್ಯ
ಇಲ್ಲವೆ ನಿನಗೆ ಆತ್ಮಚಹರೆ
ನಿನ್ನ ಕೊಲ್ಲುವ ಪಾಶವಾಗಿ
ನಿನ್ನತನವ ನಾಶಮಾಡಿ
ಏಕೆ ನಗುವೆ, ಅಳುವಿನ ನಗು ಸಾಕಲ್ಲವೇ?
ಬಿಡು ಬಿಗುಮಾನ
ಪಿತೃಸತ್ತೆ ಕೊಟ್ಟಿದ್ದೇನು?
ಮಾತೃತ್ವವೇ-ಅದು ನಿನ್ನ ಭ್ರಮೆ
ಮಾತೃತ್ವ ನಿನಗೆ ಜೀತದ ಹೊಣೆ
ಹೋಗಲಿ
ಮಾತೃತ್ವ ನಿನ್ನ ಆಯ್ಕೆಯೇ?
ಆಗುವುದೇ ಆದರೆ ಅದು
ನಿನ್ನ ತಾಯ್ತನ
ಅದಾಗದಿದ್ದರೆ ನಿನ್ನದು ಬಂಜೆತನ
ಮನಸ್ಸೆಂಬ ಮಗುವಿರದ ಬಂಜೆತನ
ಹೆಣ್ಣೇ ನೀ ಹೆಣ್ಣಾಗು
ಸೌಮ್ಯ ನೇತ್ರೆಕರ್
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾಂಡೇಲಿ.