Back To Top

 ಕೊಡೆಯ ಮರೆವಿಗೆ ಅಜ್ಜನೇ ಕಾರಣ | ಶ್ವೇತಾ ಶೆಟ್ಟಿ

ಕೊಡೆಯ ಮರೆವಿಗೆ ಅಜ್ಜನೇ ಕಾರಣ | ಶ್ವೇತಾ ಶೆಟ್ಟಿ

“ನೋಡು ರಸ್ತೆ ದಾಟುವಾಗ ಜಾಗ್ರತೆಯಾಗಿ ಇರಬೇಕು. ಬಸ್ಸು ಬರೋಕ್ಕೆ ಹತ್ತು ನಿಮಿಷ ಮುಂಚೆ ಬಸ್ ಸ್ಟ್ಯಾಂಡ್‌ನಲ್ಲಿ ಇರಬೇಕು. ಆ ಹೈಸ್ಕೂಲ್ ಅಕ್ಕಂದಿರಿದಾರಲ್ಲಾ ಅವರ ಜೊತೇನೆ ಹೋಗು, ಗಡಿಬಿಡಿ ಮಾಡ್ಬೇಡ. ಸಂಜೆನೂ ಅಷ್ಟೇ ಮರೆತು ಅಕ್ಕನ್ನ ಹುಡುಕುತ್ತಾ ನಿಲ್ಲಬೇಡ, ಶಾಲೆ ಬಿಟ್ಟ ತಕ್ಷಣ ಬೇರೆ ಮಕ್ಕಳ ಜೊತೆ ರಸ್ತೆ ದಾಟಿ ಬಿಡು. ಮತ್ತೆ ನಮ್ಮ ಮನೆ ಕಡೆ ಬರೋ ಬಸ್ಸಲ್ಲೇ ಕೂತ್ಕೋ, ಇನ್ನು ಯಾವ್ಯಾವ ಬಸ್ಸು ಹತ್ತಬೇಡ. ಹೀಗೆ ಮುಂದುವರೆದಿತ್ತು ಅಮ್ಮನ ಭಾಷಣ.

ಎರಡನೇ ತರಗತಿಯಲ್ಲಿ ಓದುತ್ತಿದ್ದ ಪೂರ್ವಿ ಇದೇ ಮೊದಲ ಬಾರಿಗೆ ಒಬ್ಬಳೇ ಬಸ್ಸಿನಲ್ಲಿ ಶಾಲೆಗೆ ಹೋಗುವವಳಿದ್ದಳು. ಅಕ್ಕನಿಗೆ ಜ್ವರ ಬಂದಿದ್ದರಿಂದ ಅವಳು ಮನೆಯಲ್ಲಿಯೇ ಇರಬೇಕಾಗಿ ಬಂದಿತ್ತು. ಪೂರ್ವಿಯನ್ನು ತಾನು ಶಾಲೆಗೆ ಕರೆದುಕೊಂಡು ಹೋಗುವುದಾಗಿ ಅಜ್ಜ ಹೇಳಿದ್ದರು.

ಆದರೆ “ಬೆಳಗ್ಗಿನ ಬಸ್ಸುಗಳು ಬಹಳ ರಶ್ಶು. ಮಕ್ಕಳು ಹೇಗೋ ಹೋಗುತ್ತಾರೆ ನಿಮಗೆ ಕಷ್ಟವಾಗುತ್ತೆ” ಎಂದ ಸೊಸೆಯ ಮಾತನ್ನು ಕೇಳಿ ಮಾವ ತಮ್ಮ ಯೋಜನೆಯನ್ನು ಕೈ ಬಿಟ್ಟಿದ್ದರು. ಅಮ್ಮ ಜ್ವರ ಬಂದಿದ್ದ ಮಗಳಿಗೆ ಗಂಜಿ ಕೊಟ್ಟು, ಅವಳಿಗೆ ಕೊಡಬೇಕಿದ್ದ ಮಾತ್ರೆಯನ್ನು ಮಾವನ ಕೈಲಿಕೊಟ್ಟು, ಹೆಗಲಿಗೆ ಬ್ಯಾಗೇರಿಸಿಕೊಂಡು ಕೆಲಸಕ್ಕೆ ಹೋಗೋ ಮುಂಚೆ ಮತ್ತೊಮ್ಮೆ ಪೂರ್ವಿಯನ್ನು ಕರೆದು, “ಇವತ್ತು ಜಾಗೃತೆ ಮಳೆ ಇಲ್ಲ, ಹಾಗಂತ ಕೊಡೆ ಮರಿಬೇಡ” ಎಂದು ಮಗಳನ್ನು ಎಚ್ಚರಿಸಿದ್ದರು.

ಶಾಲೆಗೆ ಹೋಗಲು ಸಮಯವಾಗುತ್ತಾ ಬಂದಿತ್ತು, ಹೈಸ್ಕೂಲ್ ಅಕ್ಕಂದಿರ ದಾರಿಯನ್ನೇ ಕಾಯುತ್ತಿದ್ದಳು ಪೂರ್ವಿ. ಅಷ್ಟರಲ್ಲಿ ಅಜ್ಜನ ಧ್ವನಿ ಕೇಳಿಸಿತು. “ಒಂಚೂರು ಬಾ ಇಲ್ಲಿ”.
“ಏನಜ್ಜಾ? ಶಾಲೆಗೆ ಹೊತ್ತಾಯ್ತು”.
“ಏನಿಲ್ಲ ಟಿ.ವಿ ರಿಮೋಟ್ ಕಾಣಿಸ್ತಿಲ್ಲಒಂಚೂರು ಹುಡುಕಿಕೊಡು”
ಪೂರ್ವಿ ಅತ್ತ-ಇತ್ತ ಹುಡುಕಾಡಿದಳು ಎಲ್ಲೂ ರಿಮೋಟ್ ಕಾಣಿಸ್ಲಿಲ್ಲ.
ಏನೋ ಹೊಳೆದಂತಾಗಿ “ಅಜ್ಜ ಒಂಚೂರು ಏಳಿ” ಆರಾಮ ಕುರ್ಚಿಯಲ್ಲಿ ಕುಳಿತಿದ್ದಅಜ್ಜನನ್ನ ಎಬ್ಬಿಸಿದಳು. ನೋಡಿದರೆ ರಿಮೋಟ್ ಮೇಲೆಯೇ ಕೂತ್ಕೊಂಡು ಅಜ್ಜ ರಿಮೋಟನ್ನು ಹುಡುಕಾಡುತ್ತಿದ್ದರು.

“ಪುಟ್ಟಿ ನೋಡು ಆ ಹುಡುಗೀರೆಲ್ಲಾ ಹೋಗ್ತಿದ್ದಾರೆ ನೀನು ಏನ್ ಮಾಡ್ತಾ ಇದ್ದೀಯಾ?” ಇಂದು ಚಾವಡಿಯ ಹಾಸಿಗೆಯಲ್ಲಿ ಮಲಗಿದ್ದ ಅಜ್ಜಿ ಕಿಟಕಿ ನೋಡುತ್ತಾ ಕೂಗಿದರು.
ಒಳಗಡೆ ಅಜ್ಜನಿಗೆ ರಿಮೋಟ್ ಹುಡುಕಿ ಕೊಡುತ್ತಿದ್ದ ಪೂರ್ವಿಗೆ ಒಮ್ಮೆಲೆ ಭಯವಾಯಿತು. ರಿಮೋಟನ್ನ ಅಜ್ಜನ ಕೈಯಲ್ಲಿಟ್ಟು, ತನ್ನ ಬ್ಯಾಗ್ ಹಿಡಿದು ಓಡಿದಳು. ಹೇಗೋ ಹೈ ಸ್ಕೂಲ್ ಹುಡುಗಿಯರ ಗುಂಪನ್ನು ಸೇರಿಕೊಂಡು ಶಾಲೆಗೆ ಸೇರಿದ ಮೇಲೆ ಮನಸ್ಸು ನಿರಾಳವಾಯಿತು. ಆದರೆ ಅಂದು ಪೂರ್ವಿಯ ದಿನ ಸರಿಯಲ್ಲವೋ ಏನೋ ತರಗತಿಯೊಳಗೆ ಕಾಲಿಡುತ್ತಿದ್ದಂತೆಯೇ ಅವಳಿಗೊಂದು ವಿಷಯ ಗೊತ್ತಾಗಿತ್ತು.

ನನ್ನ ಸ್ನೇಹಿತರ ಕೊಡೆಗಳೆಲ್ಲಾ ಕೊಡೆಯ ಸ್ಟ್ಯಾಂಡಿನ ಮೇಲೆ ರಾರಾಜಿಸುತ್ತಿದ್ದವು. ಆದರೆ ಪೂರ್ವಿ ಅಂದು ಬೆಳಗಿನ ಗಡಿ-ಬಿಡಿಯಲ್ಲಿ ಬ್ಯಾಗಿನ ಪಕ್ಕದಲ್ಲಿದ್ದ ಕೊಡೆಯನ್ನು ಮರೆತೇ ಬಂದಿದ್ದಳು. ಮಳೆರಾಯ ಕೂಡ ಅಂದು ಅವಳಿಗೆ ಮೋಸ ಮಾಡಿದ್ದ. ತನ್ನ ತುಂಟಾಟ ಆರಂಭಿಸಿದ್ದ. ಹೊರಗಡೆ ಧೋ ಎಂದು ಮಳೆರಾಯನ ಆರ್ಭಟ ಶುರುವಾಗಿತ್ತು.

ಇವತ್ತೇ ಇದೆಲ್ಲಾ ಆಗಬೇಕಿತ್ತಾ? ಅಕ್ಕನೂ ಇಲ್ಲ. ಈ ಮಳೆ ನಿಲ್ಲದಿದ್ರೆ ಮನೆಗೆ ಹೇಗೆ ಹೋಗುವುದು? ಮಳೆಯಲ್ಲಿ ನೆನೆದರೆ ಅಕ್ಕನ ಹಾಗೆ ನನಗೂ ಜ್ವರ ಬರುತ್ತೆ, ಜ್ವರ ಬಂದರೆ ಮನೆಯಲ್ಲಿರಬೇಕು ಮತ್ತೆ ನಾಳೆ ಶಾಲೆಯಲ್ಲಿ ನಡೆಯುವ ಸಂಗೀತ ಸ್ಪರ್ಧೆಯಲ್ಲಿ ಹಾಡೂ ಹೇಳೋಕಾಗಲ್ಲ. ಇದೆಲ್ಲಾ ಆಗಿದ್ದು ಅಜ್ಜನಿಂದಲೇ ಎಂದು ಬೇಸರಿಸುತ್ತಾ ಅಜ್ಜನಿಗೆ ಮನದಲ್ಲೇ ಶಪಿಸತೊಡಗಿದಳು.

ಅಂದು ಇಡೀ ದಿನ ಪೂರ್ವಿಗೆ ಕೊಡೆಯದ್ದೇ ಚಿಂತೆ. ಮಧ್ಯಾಹ್ನ ಒಂಚೂರು ಮಳೆ ನಿಂತಾಗ ಸಂತೋಷವಾಗಿತ್ತವಳಿಗೆ, ಆದರೆ ಮಳೆರಾಯ ಇಂದು ಅವಳ ಪರವಾಗಿರಲಿಲ್ಲ. ಶಾಲೆಯ ಗಂಟೆ ಬಾರಿಸಿತು. ರಾಷ್ಟ್ರಗೀತೆಯೂ ಮೊಳಗಿತು. ಪೂರ್ವಿಯ ಚಿಂತೆ ಭಯ ಇನ್ನೂ ಹೆಚ್ಚಾಗತೊಡಗಿತು. ಅಜ್ಜನ ಮೇಲಿನ ಕೋಪವೂ.

ಈಗ ಏನೂ ಮಾಡುವ ಹಾಗಿರಲಿಲ್ಲ ಹೈ ಸ್ಕೂಲ್ ಹುಡುಗಿಯರಿಗೆ ಶಾಲೆ ತಡವಾಗಿ ಮುಗಿಯುತ್ತಿತ್ತು. ಹಾಗಾಗಿ ಅವರೊಂದಿಗೂ ಹೋಗುವ ಹಾಗಿರಲಿಲ್ಲಅವರನ್ನು ಬಿಟ್ಟರೆ ಪೂರ್ವಿಯ ಅಕ್ಕ-ಪಕ್ಕದವರು ಬೇರಾರು ಇರಲಿಲ್ಲ. ಮಳೆ ಇನ್ನೂ ಸುರಿಯುತ್ತಲೇ ಇತ್ತು ಮಕ್ಕಳೆಲ್ಲಾ ಕೊಡೆ ಹಿಡಿದು ಗೇಟಿನತ್ತಓಡುತ್ತಿದ್ದರು. ಪೂರ್ವಿ ಮಾತ್ರ ಹಾಗೇ ನಿಂತಿದ್ದಳು.

ಇವಳನ್ನು ಗಮನಿಸಿದ ಗೆಳತಿ ಲಿಲ್ಲಿ “ಕೊಡೆ ತಂದಿಲ್ವಾ ಪೂರ್ವಿ?” ಎಂದು ಪ್ರಶ್ನೆ ಮಾಡಿದಳು.
“ಇಲ್ಲಾ ಲಿಲ್ಲಿ” ಎಂದು ಹೇಳುವಾಗ ಅವಳ ಕಣ್ಣುಗಳೆರಡೂ ತುಂಬಿದ್ದವು.
“ಹಾಗಾದರೆ ನನ್ನ ಕೊಡೆಯಲ್ಲಿ ಬಾ” ಎಂದು ಕರೆದಳು ಲಿಲ್ಲಿ.
ಪೂರ್ವಿಗೆ ಬೇರಾವ ದಾರಿಯೂ ಇರಲಿಲ್ಲ. ಪೂರ್ವಿ ಮತ್ತು ಲಿಲ್ಲಿ ಮೈದಾನದಲ್ಲಿ ನಡೆಯುತ್ತಾ ಗೇಟಿನ ಕಡೆಗೆ ಸಾಗುತ್ತಿದ್ದರು. ಕೆಲ ಮಕ್ಕಳ ತಂದೆ ತಾಯಿಗಳು ಗೇಟಿನ ಆಚೆ ಬದಿ ಮಕ್ಕಳಿಗಾಗಿ ಕಾಯುತ್ತಿದ್ದರು. ಇವರುಗಳ ಮಧ್ಯೆ ಕಪ್ಪು ಪ್ಯಾಂಟು, ಬಿಳಿ ಶರ್ಟು ತೊಟ್ಟ ವ್ಯಕ್ತಿಯೊಬ್ಬರು ಯಾರನ್ನೋ ಹುಡುಕುತ್ತಿದ್ದರು. ಅವರನ್ನು ನೋಡಿದಾಕ್ಷಣ ಪೂರ್ವಿಗೆ ತನ್ನ ಸಂತೋಷವನ್ನು ತಡೆದುಕೊಳ್ಳಲೇ ಆಗಲಿಲ್ಲ.

“ಲಿಲ್ಲಿ ನಮ್ಮಜ್ಜಬಂದಿದ್ದಾರೆ ಕಣೇ ನನ್ನ ಕರೆದುಕೊಂಡು ಹೋಗಲು!” ಎಂದಳು ಪೂರ್ವಿ.
“ನೀನು ಕೊಡೆ ತಂದಿಲ್ವಲ್ಲಾ ಅದಕ್ಕೇ ಬಂದಿದ್ದಾರೆ ಅನ್ಸುತ್ತೆ”
“ಹೌದು ಕಣೇ! ಥ್ಯಾಂಕ್ಯು ನನ್ನ ಇಲ್ಲಿ ತನಕ ಕರೆದುಕೊಂಡು ಬಂದಿದ್ದಕ್ಕೆ” ಎಂದು ಹೇಳಿ ಪೂರ್ವಿ ಥಟ್ಟನೆ ಅಜ್ಜನ ಕೊಡೆ ಸೇರಿದಳು.
“ಪೂರ್ವಿ ನೀನು ಇಲ್ಲಿದ್ಯಾ ನಿನ್ನ ಹುಡುಕುತ್ತಾ ಇದ್ದೆ. ನೀನು ಕೊಡೆ ಮನೆಯಲ್ಲೇ ಬಿಟ್ಟು ಬಂದಿದ್ದೆ. ಈ ಮಳೆಯಲ್ಲಿ ಹೇಗೆ ಬರ್ತಿಯೋ? ಏನೋ? ಅಂತ ನಾನೇ ಕೊಡೆ ತಗೊಂಡು ಬಂದೆ”
“ಅಜ್ಜ ನನಗೆ ಎಷ್ಟು ಭಯವಾಗಿತ್ತು ಗೊತ್ತಾ? ನಿಮ್ಮ ಮೇಲೆ ಕೋಪಾನೂ ಬಂದಿತ್ತು. ಆದರೆ ಈವಾಗ ಅದೆಲ್ಲ ಮಾಯ ಆಗಿದೆ” ಎಂದಳು ಪೂರ್ವಿ.
“ಹೌದಾ ಪುಟ್ಟಾ ಆಯ್ತು ಬಾ ಹೋಗೋಣ”

ಪೂರ್ವಿ ತನ್ನ ಕೊಡೆಯನ್ನು ಬಿಡಿಸಿ ಅಜ್ಜನ ಜೊತೆ ಹೆಜ್ಜೆ ಹಾಕಿದಳು. ಅಜ್ಜ ಪೂರ್ವಿಯನ್ನು ಅಲ್ಲೇ ಸ್ವಲ್ಪ ದೂರದಲ್ಲಿದ್ದ ಹೋಟೇಲೊಂದಕ್ಕೆ ಕರೆದುಕೊಂಡು ಹೋದರು. ಅವಳ ಇಷ್ಟದ ಗೋಳಿಬಜೆ ಕೊಡಿಸಿದರು. ಮಳೆ ಸುರಿಯುತ್ತಿರುವಾಗ ಬಿಸಿಬಿಸಿ ಗೋಳಿಬಜೆ ತಿನ್ನುತ್ತಾ ಅವಳು ಲೋಕವನ್ನೇ ಮರೆತಿದ್ದಳು. ಎಲ್ಲ ತಿಂದು ಮುಗಿದ ಮೇಲೆ ಅಜ್ಜ ಹೋಟೆಲಿನ ಬಿಲ್ ಪಾವತಿಸಿದರು. ಇಬ್ಬರೂ ಅಲ್ಲಿಂದ ಹೊರಟರು.

ಹೋಟೆಲ್‌ನಿಂದ ಹೊರ ಹೋಗುತ್ತಿರುವಾಗ ಅಜ್ಜಕೊಡೆ ಬಿಡಿಸುತ್ತಾ ಪಕ್ಕಕ್ಕೆ ನೋಡಿದರು. ಪೂರ್ವಿ ಅಲ್ಲಿರಲಿಲ್ಲಅವಳು ಹೋಟೆಲಿನೊಳಕ್ಕೆ ಓಡುತ್ತಿದ್ದಳು. “ಪೂರ್ವಿ” ಎಂದು ಕರೆದರು ಅಜ್ಜ. “ಅಜ್ಜಾ! ಕೊಡೆ”..ಎಂದಳು.

ಶ್ವೇತಾ ಶೆಟ್ಟಿ
ತೃತೀಯ ಬಿ.ಎಸ್‌.ಸಿ 
ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜು, ಕಾರ್ಕಳ

Prev Post

ನೆಲದ ಶ್ರೇಷ್ಠತೆಯನ್ನು ಹೃದಯದಲ್ಲಿ ಅಚ್ಚಾಗಿಸುವ ಕಥಾಗತ | ವಂದನಾ ಹೆಗಡೆ

Next Post

“ಹಂತಕಿ ಐ ಲವ್ ಯೂ” ಸೈಕೋಪಾಥ್ ಒಬ್ಬಳ ಪ್ರೇಮಕಥೆ | ಹಣಮಂತ ಎಂ.ಕೆ.

post-bars

Leave a Comment

Related post