
‘ತುಳು ನಾಡಿನ ಸಂಸ್ಕೃತಿ’: ರೋಹಿತಾಶ್ವ ಯು ಕಾಪಿಕಾಡ್
Mangaluru : ದೈವಾರಾಧನೆಯನ್ನು ತುಳುನಾಡಿನಲ್ಲಿ ಬೇಧ ಭಾವವಿಲ್ಲದೆ ನಂಬುವವರಿದ್ದಾರೆ. ತುಳುವರು ಜಗತ್ತಿನಾದ್ಯಂತ ಸಾಲು ಸಾಲು ಸಾಧನೆಗಳನ್ನು ಮಾಡಿದವರು. ಹೀಗೆ ತುಳು ನಾಡಿನ ಸಂಸ್ಕೃತಿ, ನಾಡು ನುಡಿಯ ಮಹತ್ವವನ್ನು ಅರಿಯದವರಾರಿಲ್ಲ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ರೋಹಿತಾಶ್ವ ಯು ಕಾಪಿಕಾಡ್ ನುಡಿದರು.
ಮಂಗಳೂರು ವಿಶ್ವವಿದ್ಯಾನಿಲಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ಪಾದುವಾ ಕಾಲೇಜ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ ಸಹಯೋಗದಲ್ಲಿ ಮಾರ್ಚ್ 13 ರಂದು ಪಾದುವಾ ಕಾಲೇಜಿನಲ್ಲಿ ನಡೆದ ಗೇನದ ಬೊಟ್ಟು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ರಘುರಾಜ್ ಕದ್ರಿ ಮಾತನಾಡಿ, ತುಳು ಭಾಷೆಯ ಕಾರ್ಯಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯವು ನಿರಂತರ ಸಹಕಾರಿಯಾಗಿರುತ್ತದೆ. ಭಾಷೆಗಳನ್ನು ಮಾತನಾಡುವ ಮೂಲಕ ಉಳಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂದನೀಯ ಫಾ. ಅರುಣ್ ವಿಲ್ಸನ್ ಲೋಬೊ ಮಾತನಾಡಿ, ತಾಯಿ ಭಾಷೆಯನ್ನು ಪ್ರೀತಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದೂ, ಕಾರ್ಯಕ್ರಮಗಳಲ್ಲಿ ತುಳುವಿನಲ್ಲಿ ಮಾತನಾಡಿದ್ದ ದಿನಗಳನ್ನು ಅವರು ನೆನಪು ಮಾಡಿಕೊಂಡರು.
ಪೀಠದ ಸಂಯೋಜಕ ಡಾ. ಮಾಧವ ಎಂ.ಕೆ, ತುಳು ಪೀಠದ ನಿರಂತರವಾಗಿ ನಡೆಯುವ ಚಟುವಟಿಕೆಗಳನ್ನು ವಿವರಿಸುತ್ತಾ ತುಳುವಿನ ಸಾಹಿತ್ಯಕ್ಕೆ ಹೆಚ್ಚು ಕೊಡುಗೆ ಕೊಡುವುದರ ಮೂಲಕ ಭಾಷೆಯನ್ನು ಗಟ್ಟಿಗೊಳಿಸುವ ಪ್ರಯತ್ನ ನಮ್ಮಿಂದ ಆಗಬೇಕು ಎಂದರು.
‘ತುಳು ಬಾಸೆ ಒರಿಪಾವುನ ನಿಲೆಟ್ ನಮ್ಮ ಪಾಲ್’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಅರ್ಪಿತಾ ಶೆಟ್ಟಿಯವರು ತುಳು ಭಾಷೆಗೆ ಮಿಷನರಿಗಳ ಕೊಡುಗೆಯನ್ನು ಮರೆಯುವಂತಿಲ್ಲ ಎಂದರು.
ಮೂಲ ತುಳುವಿನ ಶಬ್ದಗಳ ಬದಲಿಗೆ ಅನ್ಯ ಭಾಷೆಗಳ ಪದಗಳನ್ನೇ ನಾವು ಹೆಚ್ಚು ಬಳಸುತ್ತಿರುವುದು ಭಾಷೆಯ ಅಂತ್ಯಕ್ಕೆ ಕಾರಣವಾಗಬಹುದು ಅದಕ್ಕಾಗಿ ಒಬ್ಬರಿಂದೊಬ್ಬರು ಮಾತನಾಡುವ ಮೂಲಕ, ತುಳು ಸಾಹಿತ್ಯಕ್ಕೆ ಕೊಡುಗೆ ಕೊಡುವುದರ ಮೂಲಕ, ತುಳು ಕೃತಿಗಳನ್ನು ಓದುವ ಮೂಲಕ ತುಳು ಭಾಷೆಯ ಉಳಿವು ಸಾಧ್ಯ ಎಂದು ಮಕ್ಕಳ ಮನ ಮುಟ್ಟುವಂತೆ ನುಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ರೋಶನ್ ಸಾಂತುಮಾಯರ್ ಉಪಸ್ಥಿತರಿದ್ದರು. ಉಪನ್ಯಾಸಕಿ ಅಕ್ಷಯ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ಭೂಮಿಕಾ ವಂದಿಸಿದರು. ತುಳು ಪೀಠದ ಪ್ರಸಾದ್ ಅಂಚನ್ ನಿರೂಪಿಸಿದರು.