ಕಂಬಳ ಓಟಗಾರ ಶ್ರೀನಿವಾಸ ಗೌಡರ ಕುರಿತಾದ ‘ಕಂಬಳ ಶ್ರೀ’ ಕೃತಿ ಬಿಡುಗಡೆ
ಮೂಡುಬಿದಿರೆ (ದಕ್ಷಿಣ ಕನ್ನಡ): ಕಂಬಳದ ವೇಗದ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರ ಬಗ್ಗೆ ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ಬರೆದ ‘ಕಂಬಳ ಶ್ರೀ’ ಕೃತಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಂಗಳವಾರ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, ಶ್ರೀನಿವಾಸ ಗೌಡರು ಶ್ರಮಜೀವಿಯಾಗಿದ್ದು ಕಂಬಳ ಓಟದಲ್ಲಿ ಮಾಡಿದ ಸಾಧನೆ ಅಗಾಧವಾದುದು. ಈ ಕ್ಷೇತ್ರದಲ್ಲಿ ಮಾಡಿದ ಸಾಧನೆಯಿಂದಾಗಿ ಸಿನೆಮಾ, ರೂಪದರ್ಶಿಯ ಸ್ಥಾನಮಾನವೂ ಅವರಿಗೆ ಲಭಿಸಿದೆ. ಕಂಬಳ ಕ್ಷೇತ್ರದಲ್ಲಿ ಶ್ರೀನಿವಾಸ ಗೌಡ ಮಾಡಿದ ಸಾಧನೆ ದಾಖಲೆ ರೂಪದಲ್ಲಿ ಬಂದಾಗ ಮಾತ್ರ ಅದು ಮುಂದಿನ ಪೀಳಿಗೆಗೂ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಈ ಕೆಲಸವನ್ನು ಪ್ರೇಮಶ್ರೀ ಮಾಡಿರುವುದು ಶ್ಲಾಘನೀಯ ಎಂದರು.
ಕಂಬಳ ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ ಮಾತನಾಡಿ, ಕಂಬಳ ಅಕಾಡೆಮಿಯ ಮೊದಲ ಬ್ಯಾಚ್‌ನ ತರಬೇತುದಾರ ಶ್ರೀನಿವಾಸ ಗೌಡ ಐಕಳ ಬಾವ ಕಂಬಳದಲ್ಲಿ ದಾಖಲೆ ಮಾಡಿ ಗಮನಸೆಳೆದಾಗ ಹೆಚ್ಚು ಖುಷಿ ಪಟ್ಟವ ನಾನು. ಕಂಬಳದ ಸಾಧಕರೊಬ್ಬರು ಚಿನ್ನಾಭರಣ ಮಳಿಗೆಗೆ ರಾಯಭಾರಿಯಾಗಿರುವುದು ಕಂಬಳ ಕ್ಷೇತ್ರಕ್ಕೆ ಸಂದ ದೊಡ್ಡ ಗೌರವ. ಅವರ ಸಾಧನೆಯನ್ನು ಗುರುತಿಸಿ ಪುಸ್ತಕ ರೂಪದಲ್ಲಿ ಹೊರ ತಂದಿರುವುದು ಉತ್ತಮ ಕಾರ್ಯ ಎಂದರು.
ಜಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀನಿವಾಸ ಗೌಡರು ಕಂಬಳದ ಓಟದಲ್ಲಿ ಸಾಧನೆ ಮಾಡುವ ಮೂಲಕ ಗೌರವ ತಂದಿದ್ದಾರೆ. ಇಂತಹ ಸಾಧನೆಯನ್ನು ಇನ್ನಷ್ಟು ಓಟಗಾರರು ಮಾಡಬೇಕು ಎಂದರು.
ಲೇಖಕಿ ಜಯಂತಿ ಎಸ್ ಬಂಗೇರ, ಉದ್ಯಮಿಗಳಾದ ಅರುಣ್ ಪ್ರಕಾಶ್ ಶೆಟ್ಟಿ, ಸಿ.ಎಚ್. ಗಫೂರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ವಿಠಲ, ಪ್ರೆಸ್‌ಕ್ಲಬ್ ಅಧ್ಯಕ್ಷ ಯಶೋಧರ ಕೋಟ್ಯಾನ್ ಶುಭ ಹಾರೈಸಿದರು. ಪ್ರೇಮಶ್ರೀ ಕಲ್ಲಬೆಟ್ಟು ಸ್ವಾಗತಿಸಿದರು. ಹರೀಶ್ ಕೆ. ಅದೂರು ವಂದಿಸಿ, ಧನಂಜಯ ಮೂಡುಬಿದಿರೆ ಕಾರ್ಯಕ್ರಮ ನಿರ್ವಹಿಸಿದರು.