
ಆಕಾಶದಲ್ಲಿ ಮಿನುಗುವ ಅಪ್ಪ | ಸೃಷ್ಟಿ
ಉಸಿರು ಚೆಲ್ಲಿ ನಮ್ಮನೆಲ್ಲ ಬಿಟ್ಟು ಯಾರು ಈ ಪ್ರಪಂಚದಿಂದ ದೂರ ಹೋಗ್ತಾರೆ ಅವರು ಆಕಾಶದಲ್ಲಿ ನಕ್ಷತ್ರ ಆಗ್ತಾರಂತೆ…!
ನಮ್ಮಮ್ಮ ಪ್ರತಿನಿತ್ಯ ಈ ಮಾತನ್ನ ನಮ್ಮ ತಂಗಿಗೆ ಹೇಳಿ ನಂಬಿಸುವ ಪ್ರಯತ್ನ ಮಾಡುತ್ತಿದ್ದರು. ಸದಾ ಪ್ರೀತಿ, ನಗು, ವಾತ್ಸಲ್ಯ ತುಂಬಿರೋ ನಮ್ಮ ಮನೆಗೆ ಅಪ್ಪನ ಸಾವು ಏಕಾಏಕಿ ಸಿಡಿಲು ಬಡಿದಂಗಾಯ್ತು. ಆಕಸ್ಮಿಕವಾಗಿ ನಮ್ಮ ತಂದೆ ನಮ್ಮನೆಲ್ಲ ಬಿಟ್ಟು ಹೊರಟು ಹೋದರು. ಅವರು ಹೋದಮೇಲೆ ನನಗೆ ನಾನೇ ನನ್ನನ್ನು ಕನ್ವಿನ್ಸ್ ಮಾಡಿಕೊಂಡೆ. ಇನ್ನು ಮುಂದೆ ಅವರ ಜೊತೆ ಯಾವತ್ತೂ ಮಾತನಾಡೋದಕ್ಕೆ ಸಾಧ್ಯವಾಗಲ್ಲ, ಭೇಟಿ ಮಾಡೋದಕ್ಕೆ ಆಗಲ್ಲ ಅಂತ. ಆದರೆ ನನ್ನ ತಂಗಿ ತುಂಬಾ ಚಿಕ್ಕವಳು. ತಂದೆ ಮರಳಿ ಬಾರದೂರಿಗೆ ಹೋದ ಸಂಗತಿಯನ್ನ ಅರ್ಥ ಮಾಡಿಕೊಳ್ಳುವ ವಯಸ್ಸು ಅವಳದಾಗಿರಲಿಲ್ಲ. ಅಪ್ಪ ಎಲ್ಲೋ ಹೊರಗಡೆ ಹೋಗಿದ್ದಾರೆ ಮತ್ತೆ ಮನೆಗೆ ಬರ್ತಾರೆ ಅಂತ ಕಾಯುತ್ತಾ ಕಾಲ ಕಳೆಯುತ್ತಿದ್ದಳು. ಒಂದರ ಮೇಲೊಂದರಂತೆ ದಿನಗಳು ಉರುಳಿದರೂ ಅಪ್ಪ ಬರಲೇ ಇಲ್ವಲ್ಲಾ..? ಅನ್ನೋ ಪ್ರಶ್ನೆ ಅವಳಿಗೆ ಸದಾ ತಲೆಯಲ್ಲಿ ಗಿರಕಿ ಹೊಡೆಯುವುದಕ್ಕೆ ಶುರುವಾಯಿತು. ಅಪ್ಪ ಮರಳಿ ಮನೆಗೆ ಬರಲ್ವಾ ಅನ್ನೋ ದಿಗಿಲು ನನ್ನ ತಂಗಿಗೆ ದಿನಗಳೆದಂತೆ ಹೆಚ್ಚಾಗುತ್ತಲೇ ಹೋಯ್ತು. ಅಪ್ಪ ಯಾಕೆ ಮನೆಗೆ ಬರುತ್ತಿಲ್ಲ ಎಂದು ಅಮ್ಮನ ಹತ್ತಿರ ಪದೇ ಪದೆ ಕೇಳುತ್ತಾ ಕಣ್ಣೀರಿಡುತ್ತಿದ್ದಳು. ಅಮ್ಮನಿಗೂ ಕಿರಿಕಿರಿಯಾಗುತ್ತಿತ್ತು. ನೋವು, ದುಃಖ ಒತ್ತರಸಿಕೊಂಡು ಬಂದರೂ ಅಮ್ಮ ಸೆರಗಿನಲ್ಲಿ ಕಣ್ಣೀರು ಒರೆಸಿಕೊಂಡು ತಂಗಿಯನ್ನು ಸಂತೈಸುತ್ತಿದ್ದಳು.
ಒಮ್ಮೆ ಧೈರ್ಯ ಮಾಡಿ ಅಮ್ಮ ತಂಗಿಗೆ ಹೇಳಿಯೇ ಬಿಟ್ಟಳು. ಪುಟ್ಟಾ..! ನಿಮ್ಮ ಅಪ್ಪ ಆಕಾಶದಲ್ಲಿ ನಕ್ಷತ್ರ ಆಗಿ ಮಿನುಗುತಿದ್ದಾರೆ ಎಂದು. ಅಮ್ಮನ ಕಡೆ ತಿರುಗಿದ ತಂಗಿ ಧುತ್ತನೆ ಮರುಪ್ರಶ್ನೆ ಕೇಳಿದಳು. ಸ್ಟಾರ್ ಅಂದರೆ ಸೂಪರ್ ಸ್ಟಾರ್..! ಹಾಗಾದ್ರೆ ಅಪ್ಪ ಮನೆಗೆ ಯಾಕೆ ಬರುತ್ತಿಲ್ಲ..? ಹೀಗೆ ಪ್ರಶ್ನೆ ಪುನಃ ತಲೆ ಎತ್ತಿ ನಿಂತಿತು: ಅಮ್ಮನ ಎದುರು. ಅದಕ್ಕೆ ಅಮ್ಮನ ಉತ್ತರವೂ ಸರಳವಾಗಿತ್ತು. ಇನ್ನು ಮೇಲೆ ಅವರು ಆಕಾಶದಲ್ಲೇ ಇರುತ್ತಾರೆ. ಅಲ್ಲಿಂದಲೇ ನಮ್ಮೆಲ್ಲರನ್ನು ನೋಡಿ ಖುಷಿ ಪಡುತ್ತಾರೆ ಎಂದು ಪುಟ್ಟ ತಂಗಿಗೆ ಅರ್ಥವಾಗುವಂತೆ ಹೇಳಿದಳು… ಈ ಮಾತನ್ನು ಕೇಳಿದ ತಕ್ಷಣವೇ ಮನೆಯಿಂದ ಹೊರ ಬಂದ ತಂಗಿ ಆಕಾಶ ನೋಡುತ್ತಾ, ನಕ್ಷತ್ರ ಬರುವುದನ್ನೇ ಕಾಯುತ್ತಾ ನಿಂತಳು. ತಂಗಿಯ ಆತುರತೆ ನೋಡಿ ನನಗೂ ಒಂದು ಕ್ಷಣ ಅದೇ ಸತ್ಯ ಅನ್ನಿಸಿತು. ಅಪ್ಪ ನಿಜವಾಗಲೂ ಸ್ಟಾರ್ ಆಗಿದ್ದಾರೆ..! ಅಂತ ನನಗೆ ನಾನೇ ಸುಳ್ಳು ಭರವಸೆ ತಂದುಕೊಂಡೆ. ಯಾರು ಚಂದ್ರನನ್ನ “ಚಂದಾಮಾಮ” ಅಂತ ಪ್ರೀತಿಯಿಂದ ಕರೆಯುತ್ತಾರೋ ಅಂಥವರಿಗೆ ನಕ್ಷತ್ರದ ಜೊತೆ ಒಡನಾಡುವುದಕ್ಕೆ, ಸಂಬಂಧ ಬೆಸೆಯೋಕೆ ತುಂಬಾ ಹೊತ್ತು ಬೇಕಾಗಲ್ವಂತೆ..! ಅಲ್ವಾ ? ಅನ್ನಿಸಿತು.
ಅವತ್ತಿನಿಂದ ಅವಳು ಅಮ್ಮನ ಹತ್ತಿರ, ನನ್ನ ಹತ್ತಿರ ಅಪ್ಪ ಎಲ್ಲಿ ಹೋಗಿದ್ದಾರೆ ಅಂತ ಕೇಳೋದೇ ಬಿಟ್ಟುಬಿಟ್ಟಳು. ಆದರೆ ಇದು ಅಂತಿಮ ಸತ್ಯವಲ್ಲ ಅಂತ ಗೊತ್ತಿದ್ದ ನನಗೆ ಬೇಸರ ಎಡೆಎತ್ತಿ ನಿಲ್ಲುತ್ತಿತ್ತು. ಅವಳಿಗೆ ನಡೆದ ಘಟನೆಯ ಬಗ್ಗೆ ಸತ್ಯ ಹೇಳಬೇಕೆಂದುಕೊಂಡೆ. ಅಷ್ಟರಲ್ಲಿ ಅವಳು ಓಡೋಡಿ ಬಂದು ಅಪ್ಪ ಬಂದಿದ್ದಾರೆ ಅಕ್ಕ ಎಂದಳು. ನನಗೆ ಗಲಿಬಿಲಿ ಆಯಿತು. ತಕ್ಷಣವೇ ನನ್ನ ಕೈ ಹಿಡಿದು ಮನೆಯಿಂದ ಹೊರ ನಡೆದ ಅವಳು, ಆಕಾಶದ ಕಡೆ ಮುಖ ಮಾಡಿ ನಗುತ್ತಿದ್ದಳು. ನನಗೆ ತಕ್ಷಣ ಅರ್ಥ ಆಯ್ತು. ಇದೆಲ್ಲ ಅಮ್ಮ ಹೇಳಿರುವ ಸುಳ್ಳು.. ಇದೆಲ್ಲ ಭ್ರಮೆ.. ನಾನು ಇನ್ನೇನು ಸತ್ಯ ಹೇಳಲು ಅಣಿಯಾಗಬೇಕು.. ಅಷ್ಟರಲ್ಲಿ ಅವಳು ಒಂದು ನಕ್ಷತ್ರದ ಕಡೆ ಕೈ ಮಾಡಿ ಅಲ್ಲಿ ನೋಡು ಅಪ್ಪ ಬಂದರು ಅಂದಳು. ತಕ್ಷಣ ನಾನು ತಂಗಿ ಮುಖ ನೋಡಿದೆ. ನೋಡಿ ಅಪ್ಪ, ಇವತ್ತು ಅಕ್ಕ ಬಂದಿದ್ದಾಳೆ ಎಂದು ಹಿರಿಹಿರಿ ಹಿಗ್ಗುತಿದ್ದಳು. ಈಗ ನಾನು ಅಕ್ಕ ತುಂಬಾ ಕಿತ್ತಾಡುವುದಿಲ್ಲ, ಅಮ್ಮನಿಗೂ ತೊಂದರೆ ಕೊಡುವುದಿಲ್ಲ ಎಂದು ಅವಳು ಒಂದು ನಕ್ಷತ್ರದ ಜೊತೆ ಮಾತಾಡುತ್ತಾ ಹೋದಳು… ನಾನು ಅವಳನ್ನು ತದೇಕಚಿತ್ತದಿಂದ ನೋಡುತ್ತಾ ನಿಂತೆ. ಆ ನಕ್ಷತ್ರ ನೋಡುತ್ತಿದ್ದಾಗ ಅವಳ ಕಣ್ಣಲ್ಲಿದ್ದ ಆ ಮಿಂಚು, ಆ ಪ್ರೀತಿ ಎದುರು ನನಗೆ ಮಾತೆ ಬರಲಿಲ್ಲ. ಅವತ್ತು ಯಾಕೋ ಮೊದಲನೇ ಬಾರಿ ಅಮ್ಮ ಹೇಳಿದ ಸುಳ್ಳು ನಿಜ ಅನ್ನಿಸಿತು.
ಆಕಾಶ ಹಾಗೂ ಭೂಮಿ ನಡುವೆ ತುಂಬಾ ಅಂತರವಿದೆ ಅಂತ ಹೇಳಿದ್ದು ಯಾರು..? ಮನಪಲ್ಲಟ ಕೇಳುತ್ತಿತ್ತು. ನಿಜಕ್ಕೂ ಅವೆರಡಕ್ಕೂ ಅಂತರವೇ ಇಲ್ಲ ಅನ್ನಿಸಿತು. ತಂಗಿ ನನಗೆ ನಕ್ಷತ್ರ ತೋರಿಸಿ ಅಪ್ಪನ ಜೊತೆ ಮಾತನಾಡಿದ ದಿನದಿಂದ ನನ್ನ ಜೀವನದಲ್ಲಿ ಏನೇ ಒಳ್ಳೆಯದಾಗಲಿ, ಅಥವಾ ಕೆಟ್ಟದ್ದಾಗಲಿ ನಾನು ಆಕಾಶದ ಕಡೆ ನೋಡಿ ಹೇಳುವುದಿಷ್ಟೇ: ಇವತ್ತು ಆಗಿರುವ ಒಳ್ಳೆಯದಕ್ಕೆಲ್ಲ ಕಾರಣ ನೀವೇ ಅಲ್ವಾ ಅಪ್ಪ..! ಹಾಗೆ ಏನೇ ಕೆಟ್ಟದಾದರೂ ನೀವು ಸರಿ ಮಾಡ್ತೀರಾ ಅಲ್ವಾ? ಅನ್ನೋ ನಂಬಿಕೆ ನನಗೆ. ಅಮ್ಮ ಹೇಳಿದ ಹಾಗೆ ಪ್ರಪಂಚದಿಂದ ಹೋದವರು ಆಕಾಶದಲ್ಲಿ ಸ್ಟಾರ್ ಆಗುತ್ತಾರಂತೆ… ಹೌದು ಸೂಪರ್ ಸ್ಟಾರ್ ಆಗ್ತಾರೆ. ಸದಾ ಬ್ಲೆಸಿಂಗ್ ಸ್ಟಾರ್ ಆಗ್ತಾರೆ.
ಸೃಷ್ಟಿ
ಪ್ರಥಮ ಪತ್ರಿಕೋದ್ಯಮ
ಎಸ್‌ಡಿಎಂ ಕಾಲೇಜು
ಉಜಿರೆ