ವಜ್ರದ ಉಂಗುರದ ಪವಾಡ | ಸಿಂಚನ ಜೈನ್. ಮುಟ್ಟದ ಬಸದಿ
ಒಂದು ಊರಿನಲ್ಲಿ ಒಬ್ಬ ಶ್ರೀಮಂತ ಇದ್ದ, ನೂರಾರು ಎಕರೆ ಹೊಲ, ಗದ್ದೆ, ತೋಟ, ಐದಾರು ಕಾರ್ಖಾನೆ ಹೀಗೆ ಹರಡಿತ್ತು ಅವನ ಸಾಮ್ರಾಜ್ಯ. ಬಡತನದಿಂದ ಪರಿಶ್ರಮವಹಿಸಿ ಜೀವನದಲ್ಲಿ ಈ ಸ್ಥಿತಿ ತಲುಪಿದವ. ಬೆವರಿನ ಬೆಲೆ ಚೆನ್ನಾಗಿ ಬಲ್ಲವ. ಖುದ್ದು ತನ್ನ ವಾಹನದಲ್ಲಿ ತೆರಳಿ ಎಲ್ಲವನ್ನು ಉಸ್ತುವಾರಿ ನೋಡಿಕೊಳ್ಳುವವ, ವರಮಾನ ಚೆನ್ನಾಗಿಯೇ ಇತ್ತು.
ಆ ವ್ಯಕ್ತಿಗೆ ಒಬ್ಬನೇ ಮಗ. ತಿಂದುಂಡು ಪೊಗದಸ್ತಾಗಿ ಬೆಳೆದಿದ್ದ, ಬರೀ ಗೆಳೆಯರ ಜೊತೆ ಸುತ್ತುವುದೇ ಅವನ ಕೆಲಸವಾಗಿತ್ತು. ತಂದೆಗೆ ವಯಸ್ಸಾಗುತ್ತಾ ಬಂತು, ಮೊದಲಿನಂತೆ ಉಸ್ತುವಾರಿ ನೋಡಿಕೊಳ್ಳಲು ಆಗುತ್ತಿರಲಿಲ್ಲ. ಕೆಲಸಗಾರರು ಮೈಗಳ್ಳರಾದರು. ಆದಾಯ ಕಡಿಮೆ ಆಗುತ್ತ ಹೋಯ್ತು. ಆ ವ್ಯಕ್ತಿ ಚಿಂತೆಯಾಯ್ತು. ಮಗ ಏನೂ ಮಾಡುತ್ತಿಲ್ಲ ಏನು ಮಾಡುವುದೆಂದು ತೋಚದಾಯ್ತು.
ಅವನಿಗೆ ಗುರುಗಳ ನೆನಪಾಯ್ತು, ಸರಿ ಇನ್ನೇಕೆ ತಡ ಎಂದು ಗುರುಗಳ ಭೇಟಿಗೆ ಹೊರಟ. ಗುರುಗಳು ಏನೆಂದು ಕೇಳಿದರು, ಪರಿಸ್ಥಿತಿ ವಿವರಿಸಿದ, ಗುರುಗಳು ಚಿಂತೆ ಬೇಡ ಒಂದು ವಜ್ರದ ಉಂಗುರ ತರಿಸಿಕೊಡು ಉಪಾಯ ಹೇಳುತ್ತೇನೆ ಎಂದರು. ಸರಿ ಎಂದ ಸಾಹುಕಾರ ವಜ್ರದ ಉಂಗುರ ತರಿಸಿಕೊಟ್ಟ. ಗುರುಗಳು ನೋಡು ಈ ಉಂಗುರ ನಿನ್ನ ಮಗನ ಕೈಗೆ ಹಾಕು, ಅವನು ಏನೂ ಮಾಡುವುದು ಬೇಡ ಸುಮ್ಮನೆ ತೋಟ, ಗದ್ದೆ, ಫ್ಯಾಕ್ಟರಿಗಳಿಗೆ ಒಂದು ಸುತ್ತುದಿನಾ ತೋರಿಸಿ ಬರಬೇಕು ಎಂದು ಆಶೀರ್ವಾದ ಮಾಡಿ ಕೊಟ್ಟರು.
ಆಯ್ತು ಬುದ್ದಿ ಅಂತ ಸಾಹುಕಾರ ಮಗನಿಗೆ ಹೇಳಿ ಹಾಗೆ ಮಾಡುವಂತೆ ಹೇಳಿದ. ಬರುಬರುತ್ತ ಆದಾಯ ಏರಿಕೆ ಆಗತೊಡಗಿತು, ಮೊದಲಿನ ಆದಾಯಕ್ಕಿಂತ ಹೆಚ್ಚಾಗಿ ಬರತೊಡಗಿತು. ಸಾಹುಕಾರನಿಗೆ ಸಂತೋಷ ಮತ್ತೆ ಗುರುಗಳ ಭೇಟಿಯಾಗಿ ವಿಷಯ ತಿಳಿಸಿದ.
ಗುರುಗಳೇ ಎಲ್ಲಾ ತಮ್ಮ ‘ವಜ್ರದ ಉಂಗುರ’ದ ಮಹಿಮೆ ಎಂದು ಹೇಳಿದ. ಅಯ್ಯೋ ಹುಚ್ಚ ಇದು ಉಂಗುರದ ಮಹಿಮೆ ಅಲ್ಲ, ನಿನಗೆ ವಯಸ್ಸಾದ ಕಾರಣ ನೀನು ತೋಟ, ಕಾರ್ಖಾನೆ ಕಡೆ ಹೋಗದ ‘ದಂತಾಗಿತ್ತು, ನಿನ್ನ ಮಗನೋ ಮೈಗಳ್ಳ ಅವನೂ ಹೋಗುತ್ತಿರಲಿಲ್ಲ.
ಮಾಲೀಕರ ಭಯ ಇಲ್ಲದೇ ಕೆಲಸಗಾರರು ಮೈಗಳ್ಳರಾಗಿದ್ದರು, ಈಗ ಆ ಉಂಗುರ ತೋರಿಸುವುದಕ್ಕಾಗಿ ನಿನ್ನ ಮಗ ತೋಟ, ಕಾರ್ಖಾನೆ ಕಡೆ 2 ದಿನಕ್ಕೊಂದು ಬಾರಿ ಭೇಟಿ ಕೊಡ್ತಾ ಇದ್ದಾನೆ, ಕೆಲಸಗಾರರು ಮೊದಲಿನಂತೆ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಪರಿಸ್ಥಿತಿ ಸುಧಾರಿಸಿದೆ. ಉಂಗುರದ ಮಹಿಮೆ ಎಂದು ತಿಳಿದುಕೊಳ್ಳಬೇಡ.
ಸಿಂಚನ ಜೈನ್. ಮುಟ್ಟದ ಬಸದಿ
ಬಿ. ಕಾಮ್ ದ್ವಿತೀಯ ವರ್ಷ
ಎಸ್.ಡಿ.ಎಮ್ ಕಾಲೇಜು, ಹೊನ್ನಾವರ