ಕಿಟಕಿ ಆಚೆಯ ನಿಗೂಢ ನೋಟ | ಶಿಲ್ಪ ಬಿ
“ಭುಂ… ಭುಂ…ಭುಂ…. ಭುರ್ …ಭುರ್…ಭುರ್ ರ್ ರ್ ರ್…..” ಯಾರನ್ನೊ ವಿಚಲಿತಗೊಳಿಸುವ ಕರ್ಕಶ ಸದ್ದು! ಬೈಕಿಂದ ಹುಟ್ಟಿ, ಗಾಳಿಯಲ್ಲಿ ತೇಲಿ, ಕಿಟಕಿಯೊಳು ತೂರಿ mam ನ ಧ್ವನಿಯೊಡನೆ ಸ್ಪರ್ಧಿಸಿ ನಮ್ಮ ಕನ್ನಡ ಕ್ಲಾಸನ್ನು ಆವರಿಸಿಕೊಂಡಿತು.
ಆಹಾ! ಎಂತಹ ಅದ್ಭುತ. ನಿರಂತರವಾಗಿ ನಡೆಯುತ್ತಿರುವ ಕ್ಲಾಸಿನಲ್ಲಿ ಇಂತಹದ್ದೊಂದು ಸದ್ದು ಕೇಳಿಸಬೇಂಕೆಂದರೇ ನಾವೆಲ್ಲರೂ ಅದೆಷ್ಟೊ ಜನುಮಗಳ ಕಾಲ ತಪಸ್ಸು ಮಾಡಿರಬೇಕು. ಜೊತೆಗೆ ಈ ಸದ್ದು ಕನ್ನಡ ಕ್ಲಾಸಿಗೆ, ಕೆಲವೊಮ್ಮೆ biology ಕ್ಲಾಸಿಗೂ ರೆಗ್ಯುಲರ್ ಕಸ್ಟಮರ್.
ಶಿಕ್ಷಕರು ಅದೆಷ್ಟೆ ಅತ್ಯುತ್ತಮವಾಗಿ ಪಾಠ ಮಾಡಿದರು, ಕ್ಲಾಸಿನ ಮಧ್ಯ ಒಳಗಡೆ ಯಾರಾದರೂ ಪ್ರವೇಶಿಸಿದರೇ ಅಥವಾ ಏನಾದರೂ ಹಾಸ್ಯ ನಡೆದರೇ ಅಥವಾ ಇಂತಹದ್ದೊಂದು ಸದ್ದು ತೊಂದರೇ ಕೊಟ್ಟರೇ ನಮಗೆಲ್ಲಿಲ್ಲದ ಖುಷಿ. ಆ ಸದ್ದಿಗೆ ನಾವೆಲ್ಲರೂ ಗೊಳ್ ಎಂದು ಹೊಟ್ಟೆ ಬಿರಿಯುವಂತೆ ನಗುತ್ತೇವೆ. ನಮ್ಮೆಲ್ಲರ ಮುಖ ಕುತೂಹಲದಲ್ಲಿ ಅರಳಿ ಕಿಟಕಿಯೆಡೆ ನಮ್ಮ ಕತ್ತನ್ನು ತಿರುಗಿಸುತ್ತೇವೆ, ಆದರೇ ಕಿಟಕಿಯ ಪಕ್ಕದಲ್ಲೆ ಕುಳಿತವರ ಅದೃಷ್ಟ! ಕಿಟಕಿಯಿಂದಾಚೆ ಇಣುಕಿ ನೋಡುತ್ತಾರೆ. ಪ್ರಪಂಚದ ಯಾವುದೊ ವಿಸ್ಮಯಕರ ಘಟನೆ ಒಂದು ಆ ರಸ್ತೆಯಲ್ಲಿ ನಡೆಯುತ್ತಿದೆ ಏನೊ ಎಂಬಂತೆ.
ಪಾಠ ಮಾಡುವುದರಲ್ಲಿ ತಲ್ಲೀನರಾಗಿದ್ದ mam ಕೋಪದಿಂದ ಕೆಂಡದಂತೆ ಉರಿಯುತ್ತಾರೆ. ಕಿಟಕಿಯಿಂದಾಚೆ ಇಣುಕಿ ನೋಡುತ್ತಾರೆ, ಅಷ್ಟು ಸೊಗಸಾಗಿ ಸಾಗುತ್ತಿದ್ದ ಆ ಪಾಠಕ್ಕೆ ಅಡತಡೆ ಆದಕ್ಕೆ ಇವರಿಗೆ ಸಮಾಧಾನವಾಗುವವರೆಗು, ಅವನ ಕಾಲರ್ ಹಿಡಿದು ಬೈಯ್ದು ಬಿಡುವಷ್ಟು ಕೋ, ಇನ್ನು ಕೋಪ ಹೆಚ್ಚಾದರೇ ಹೊಡೆದೆ ಬಿಡುತ್ತಾರೇನೊ. ಆದರೇ ದುರದೃಷ್ಟವಶಾತ್ ಕ್ಲಾಸಿಂದ ಹೊರಗೆ ಹೋಗಲಿಕ್ಕೂ ಆಗದು, ನಮ್ಮೆದುರು ಆ ಮಟ್ಟಿಗೆ ಬೈಯಲಿಕ್ಕೂ ಆಗದು. ಹೀಗೆ ಸಂಸ್ಕಾರವಿಲ್ಲದೇ ಆಡುವವರ ಮೇಲೆ ಎಂತಹ ಶಿಕ್ಷಕರಿಗಾದರೂ ಕೋಪ ಬರುತ್ತದೆ, ಬರಲೇ ಬೇಕು.
ಘೋರವಾಗಿ ಭೋರ್ಗರೆಯುವ ಅಲೆಗಳಂತಹ ಅವರ ಕೋಪ ಶಾಂತಗೊಂಡಾಗ mam ಹೀಗೆ ನಮ್ಮೆಲ್ಲೊಂದು ಅನುಮಾನ. ನಸುನಗುತ್ತಲೆ ಕೇಳುತ್ತಾರೆ “ಏನ್ರೋ ನೀವೇನಾದರೂ ದಿನಾ ಇದೇ ಸಮಯಕ್ಕೆ ಬಾ ಎಂದು ಅವನಿಗೆ ಹೇಳ್ಕೊಟ್ಟಿದ್ದೀರ?” ಎಂದು. ಮತ್ತೆ ನಮಗೆ ನಗುವೋ ನಗುವು. ನಾವಂತು ಹೇಳಿಕೊಟ್ಟಿಲ್ಲ. ಆದರೇ ಪ್ರತಿನಿತ್ಯ ಬಂದರೇ, ಜಗವೇ ತುಂಬಿ ತುಳುಕುವಂತೆ ನಗಬಹುದು, ಗೊಣ ಗೊಣ ಮಾತಾಡಬಹುದು, ಇದೆಲ್ಲವನ್ನು ಮೀರಿಸಿದ ಏನೋ ಖುಷಿ ಸಿಗುತ್ತದೆಂಬ ಆಶಯ ಎಲ್ಲರ ಮುಖಗಳಲ್ಲಿ ಪ್ರಜ್ವಲಿಸುತ್ತದೆ, ಆ ಪ್ರಶ್ನೆಗೆ ಉತ್ತರವಾಗಿ.
ಆದರೇ ಪಾಪ! ನಾಟಕದಲ್ಲಿ ಬರುವ ಕೊಡಂಗಿ ಇದೆಲ್ಲದರ ನಡುವೆ ತಗಲಾಕಿಕೊಂಡು ಒಂದೇ ಕಣ್ಣಿನಲ್ಲಿ ಅಳುತ್ತಾನೆ, ತನ್ನ ಚಂದದ ಸಂಭಾಷಣೆ, ಹಾಡನ್ನು ನಿರ್ಲಕ್ಷಿಸಿ, ಅದ್ಯಾವೂದೊ ರಾಗ, ತಾಳ, ಸ್ವರವಿಲ್ಲದ ಸದ್ದಿಗೆ ಮುಸಿ ಮುಸಿ ನಗುತ್ತಿದ್ದೇವೆಂದು.
ನನ್ನಲ್ಲಿ ಮಾತ್ರ ಆ ಸದ್ದು ಸಾವಿರ ಪ್ರಶ್ನೆಗಳ ಉತ್ತರಗಳ ಉಗಮಕ್ಕೆ ಕಾರಣವಾಗುತ್ತದೆ. ಬೈಕಿನಲ್ಲಿ ಸದ್ದು ಮಾಡುತ್ತಿರುವವರಾರು? 70, 80 ವರ್ಷದ ಮುದುಕನಂತು ಕಂಡಿತ ಅಲ್ಲ? ಅವನದು ಹದಿಹರಯದ ವಯಸ್ಸು. ಸರ್ವ ಸೃಷ್ಟಿಯನ್ನು ವಿರಹ, ಮೋಹದ ದೃಷ್ಟಿಕೋನದಲ್ಲಿ ವಿವರಿಸಿಬಲ್ಲ ಯೌವ್ವನ. ರಕ್ತದ ಅಣುಅಣುವಿನಲ್ಲು ತೈ ತಕ ತಕ ತೈ ಎನ್ನುವ ಹಾರ್ಮೋನ್‌ಗಳ ರುದ್ರ ನರ್ತನಕ್ಕೆ ತಾಳವಾಕುವ ಪ್ರಾಯ ಅವನದು.
ಹ್ಯಾಂಡಲ್ ಹಿಡಿದು ತಿರುಗಿಸುವಾಗ ಬರುವ ಸದ್ದಿಗೆ, ಎಲ್ಲರೂ ತನ್ನೆಡೆಗೆ ತಿರುಗಿ ನೋಡಬೇಕು. ಅಷ್ಟು ಜನರಲ್ಲಿ ಯಾವುದೊ ಒಂದು ನವಿಲಿಂತಹ ಒಂದು ಕಣ್ಣು ತನ್ನೆಡೆಗೆ ತಿರುಗಿ ನೋಡಬೇಕು..ಮೋಹಕವಾಗಿ ಮುಗುಳ್ನಗಬೇಕು.. ಆ ಮನಸ್ಸು ಆ ಬೈಕಿನ ಸದ್ದಿನ ಸೆಳೆತದಲ್ಲಿ ಸಮ್ಮೋಹನಗೊಳ್ಳಬೇಕು. ಇದೆಲ್ಲವನ್ನು ಕಂಡರು ಕಾಣದವನಂತೆ, ವೇಗವಾಗಿ ಬೈಕ್ ಚಲಿಸುತ್ತ, ಎಲ್ಲರನ್ನೂ ನಿರ್ಲಕ್ಷಸಿ ತನ್ನ ಪಾಡಿಗೆ ತಾನು ಹೋಗಬೇಕು.
ಇದನ್ನೆಲ್ಲ ಯೋಚಿಸುವಾಗ ತಟ್ಟನೆ ಅಪ್ಪನೊಡನೆ ಕುಳಿತು ಕಂಡ ಹಲವು ಹಳೆಯ ಸಿನಿಮಾಗಳು ನನ್ನ ಮನಸ್ಸನ್ನಲ್ಲಿ ಸಾಲು ಸಾಲು ಚಿತ್ರಗಳಾಗಿ ಸಂಚರಿಸುತ್ತವೇ. ಹಿರೋಯಿನ್ ಸ್ನೇಹಿತೆಯರೊಡನೆ, ತಂಪಾಗಿ ಬೀಸುವ ಗಾಳಿಯಲ್ಲಿ ನರ್ತಿಸುವ ಮುಂಗುರುಳನ್ನು ಸರಿಸುತ್ತ, ನಸುನಗುತ್ತ, ಹೆಜ್ಜೆ ಹಾಕುವಾಗ, ಯಾರೊ ಬೈಕಿನಲ್ಲಿ ಜೋರಾಗಿ ಸದ್ದು ಮಾಡುತ್ತಾ ಹಿರೋಯಿನ್ ಸಮೀಪದಲ್ಲಿ ವ್ಹೀಲಿಂಗ್ ಮಾಡುತ್ತಾ ಅವಳೆಡೆಗೆ ಹೋದಾಗ, ಹೀರೊವಿನ ಎಂಟ್ರಿ! ಚಿತ್ರ ಮಂದಿರದಲ್ಲಿ ಶಿಳ್ಳೆಯೊ ಶಿಳ್ಳೆ….. ಡಂ ಡಿಂ ಡಿಶುಂ ಬುಶುಂ ಎಲ್ಲವು ಮುಗಿದು ಮೇಲೆ, ಹೀರೊ ಹಿರೋಯಿನ್ ನಡುವೆ ಅನುರಾಗದ ತಾಳ ರಾಗ ನಾಟ್ಯ..
ಆದರೇ ಇಲ್ಲಿ ಕಿಟಕಿಯ ಆಚೆಗೆ ನಡೆಯುತ್ತಿರುವುದು ಎಲ್ಲವು ನಾನು ಕಂಡ ಸಿನಿಮಾಗಳ ಸಂಪೂರ್ಣ ತದ್ವಿರುದ್ಧ. ಸಿನಿಮಾದಲ್ಲಿ ಹೀಗೆ ಗಾಡಿ ಓಡಿಸಿದವನನ್ನು ಹೊಡೆದ ವ್ಯಕ್ತಿ ಹೀರೊ ಆದ. ಆದರೇ ಇಲ್ಲಿ? ಇಂತಹ ಸದ್ದನ್ನು ಆಲಿಸಿ ಆನಂದಿಸಿ ರೋಮಾಂಚನಗೊಳ್ಳುವವರು ಇದ್ದಾರೆಯೇ? ಹಾಗೆ ರೋಮಾಂಚನಗೊಳ್ಳುತ್ತಾರೆಂಬ ನಂಬಿಕೆ ಆ ಬೈಕ್ ಚಾಲಕನಲ್ಲಿ ಹೇಗೆ ಹುಟ್ಟಿತು?
ಆದರೇ ಪ್ರಕೃತಿಯನ್ನೊಮ್ಮೆ ನೋಡಿದರೇ, ಹಕ್ಕಿ, ಜೇನು, ಹುಳುಗಳನ್ನು ಸೆಳೆಯುವ ಹೂವಿನ ಮೈಬಣ್ಣ, ಸಂಗಾತಿಯನ್ನು ಸೆಳೆಯುವ ಕೋಗಿಲೆಯ ಮಧುರ ಧ್ವನಿ, ನವಿಲಿನ ಗರಿಗಳ ಚಿತ್ತಾರ ಎಲ್ಲವು ಪ್ರಾಕೃತಿಕ ಸೃಷ್ಟಿಯೇ… ಸಣ್ಣ ಇರುವೆಗು ಸಹ ತನ್ನ ಸಂಗಾತಿಯನ್ನು ಒಲಿಸು ಸಾಮರ್ಥ್ಯವನ್ನು ಪ್ರಕೃತಿಯೇ ವರವಾಗಿ ನೀಡಿರುತ್ತದೇ. ನಿಸರ್ಗದಲ್ಲಿ ಯಾವುದು, ಹೇಗೆ, ಯಾವಾಗ ನಡೆಯಬೇಕೊ ಅದು ತನ್ನಷ್ಟಕ್ಕೆ ತಾನು ನಡೆಯುತ್ತದೆ. ಅದನ್ನು ತಡೆಯ ಬಲ್ಲವರಾರು?
ಹಾಗಿದ್ದರೆ ಈ ವಿಷಯ ಪ್ರಕೃತಿಯ ಭಾಗವಾಗಿರುವ ಮಾನವನಿಗು ಅನ್ವಯಿಸುತ್ತದೆ. ಲಕ್ಷ ಲಕ್ಷಕ್ಕೆ ಬೆಲೆ ಬಾಳುವ ಆ ಬೈಕ್ ಏತಕ್ಕೆ? ಆ ಕರ್ಕಶ ಸದ್ದೇತಕೆ? ಆ ಹೇರ್ ಕಲರಿಂಗ್ ಏತಕೆ? ಆ ಮಟ್ಟಿಗೆ ಶ್ರಮವೇತಕೆ? ಅಷ್ಟಕ್ಕೂ ಆ ಸದ್ದಿಗೆ ಒಲಿಯುವರಾರು?
ಅಷ್ಟು ವೇಗವಾಗಿ ಹೋಗುವಾಗ ಜೀವ ಕಾಲವಶವಾದರೇ. ನವ ಜಗತ್ತನ್ನು ಕಾಣುವ ಉತ್ಸಾಹದಲ್ಲಿ ಹಾತೊರೆಯುತ್ತಿರುವ ಮುಂದಿನ ಪ್ರಾಯದ ಆಕಾಂಕ್ಷೆಯನ್ನು ಈ ಹದಿ ಹರೆಯದ ವಯಸ್ಸು ಕೊಲ್ಲಬಹುದೇ?
ಅಷ್ಟಕ್ಕೂ, ಹಾಗೆ ಸದ್ದು ಮಾಡುತ್ತಾ ಬೈಕ್ ಓಡಿಸುವುದು, ಹಾಗೇ ಮಾಡಿದಾಗ ಏನೋ ರೋಮಾಂಚನವಾಗುತ್ತದೆ, ಯಾರೊ ತನ್ನನ್ನು ನೋಡುತ್ತಾರೇ, ಮೋಹಗೊಳ್ಳುತ್ತಾರೆಂಬುದೆಲ್ಲ ಸ್ವಯಂ ಆಲೋಚನೆಗಳಂತೂ ಅಲ್ಲವೇ ಅಲ್ಲ. ಅದನ್ನು ಯಾರೊ ತೋರಿಸಿದ್ದು. ನಮ್ಮ ಇಡೀ ಜಗತ್ತು “ಟ್ರೆಂಡ್” ಎಂಬ ಒಂದೆ ಒಂದೇ ಪದದ ಕೈ ಗೊಂಬೆಯಾಗಿದೆ.
ಯಾರೋ ಸಾಮಾಜಿಕ ಜಾಲಾತಾಣದಲ್ಲಿ ಹಾಕಿದ ಉಡುಪು, ಟ್ರೆಂಡ್ ಅನ್ನೊ ಶೀರ್ಷಿಕೆ ಹೊತ್ತುಕೊಂಡರೇ ಸಾಕು! ಅದು ಚಿಕ್ಕಂದಿನಿಂದಲು ದ್ವೇಷಿಸಿದ ಬಣ್ಣವಾಗಿರಲಿ, ಅದು ಟ್ರೆಂಡ್ ಆದ ಮೇಲೆ ಅದನ್ನು ಧರಿಸಲೇ ಬೇಕು. ದಿನಗಟ್ಟಲೇ online shopping app ಗಳ ಜನುಮ ಜಾಲಾಡಬೇಕು. ಆ ಟ್ರೆಂಡ್ ಅನ್ನು ಪಾಲಿಸಿದವರು ಮಾತ್ರ ಈ ಜಗತ್ತಿಗೆ ಸೇರಿದವರು, ಇಲ್ಲದೇ ಹೋದಲ್ಲಿ ಅವರು ಯಾವುದೋ ಗ್ರಹದ ಏಲಿಯನ್‌ಗಳು ಎಂಬ ದೃಷ್ಟಿಕೋನ ಸಮಾಜದಲ್ಲಿ ಸೃಷ್ಟಿಯಾಗಿದೇ.
ಲಾಸ್ಟ್ ಬೆಂಚಿನಲ್ಲಿ ಕುಳಿತರೆ ಮಾತ್ರ ಕಾಲೇಜಿನ ಬದುಕು ಸಾರ್ಥಕ. ಇಂತಹ ಬಟ್ಟೆಯನ್ನೆ ತೊಡಬೇಕು, ಇಂತಹದ್ದೆ hair style ಮಾಡಬೇಕು, ಹೀಗೆ ವರ್ತಿಸಬೇಕು, ಇಂತಹದ್ದೆ ಬೈಕಿನಲ್ಲಿ ಓಡಾಡಬೇಕು, ಹೀಗೆ ಕರ್ಕಶ ಸದ್ದು ಮಾಡಬೇಕು, ಈ ವಯಸ್ಸಿಗೆ ಫೋನಿನಲ್ಲಿ ಇಂತಹದ್ದೆ app ಗಳಿರಬೇಕು, ಎಲ್ಲವು ಯಾರೊ ರೂಪಿಸಿದ ಟ್ರೆಂಡ್. ಕಿಟಕಿಯಾಚೆಯಿಂದ ಬರುತ್ತಿರುವ ಸದ್ದು ಸಹ ಯಾರೊ ರೂಪಿಸಿದ ಟ್ರೆಂಡ್. ಹಾಗಿದ್ದರೆ ಸ್ವಂತ ಇಚ್ಛೆ, ಆಲೋಚನೆ, ನಡವಳಿಕೆ, ತನ್ನತನ ಎಲ್ಲವು ಎಲ್ಲೊ ಮರೆಯಾಗಿ ಹೋಗಿದೆ. ನಮ್ಮ ಜೀವನ ನಮ್ಮದ್ದಲ್ಲ. ಅದನ್ನು ಹುಡುಕಿ ತರುವವರಾರು?
ಇದನ್ನೆಲ್ಲ ಯೋಚಿಸುವಾಗ ಇದ್ದಕಿದ್ದ ಹಾಗೆ ನಗು ಉಕ್ಕಿದಂತಾಯಿತು. ಆ ಬೈಕಿನ ಸಂಚಲನಕ್ಕೆ ಯಾರಾದರೂ ಮನ ಸೋತು, ಅವರಿಬ್ಬರಿಗು ವಿವಾಹವಾಗಿ, ಒಂದು 30-40 ವರ್ಷಗಳ ನಂತರ ಅವರ ಮೊಮ್ಮಕ್ಕಳಿಗೆ ತಮ್ಮ ಪ್ರೀತಿಯ ಉಗಮದ ಕತೆ ಹೇಳುವಾಗ ಅದೆಷ್ಟು ಹಾಸ್ಯಸ್ಪದವಾಗಿರಬಹುದೆಂದು ಊಹಿಸಿದಾಗ ಮುಖದಲ್ಲಿ ಬಂಧಿಸಲಾಗದ ನಗು..
ನನ್ನ ಸುತ್ತಲು ಕಣ್ಣಾಡಿಸಿದೆ, ಅರ್ಧದಷ್ಟು ಮುಖಗಳು, ವಿವಿಧತೆಯನ್ನು ಕಳೆದುಕೊಂಡ, ಟ್ರೆಂಡ್ ಅನ್ನೊ ಮುಖವಾಡದಲ್ಲಿ ಬಂಧಿತರಾಗಿ ಒಂದೇ ರೂಪದಲ್ಲಿ ಕಾಣುತ್ತಿದ್ದರು. ಕಣ್ಣು ಉಜ್ಜಿಕೊಂಡು, ಪಿಟಿ ಪಿಟಿ ಕಣ್ಣು ಮಿಟುಕಿಸುತ್ತಾ ಪುಸ್ತಕ ನೋಡಿದೇ. ನಾಟಕದಲ್ಲಿ ಕೋಂಡಂಗಿ “ನಗ ಬೇಕೊ ಅಣ್ಣ ನಗ ಬೇಕೊ” ಎಂದು ಕುಣಿಯುತ್ತಿದ್ದನು. ನಾನು ನಕ್ಕಿದೆ.
ಶಿಲ್ಪ ಬಿ.
ದ್ವಿತೀಯ ಪಿ.ಯು.ಸಿ
ಶೇಷಾದ್ರಿಪುರಂ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು