ಹಾಸ್ಟೆಲ್ ಅನ್ನೋದು ಸೆರೆಮನೆಯಲ್ಲ ಅದು ನೆನಪುಗಳ ಅರಮನೆ | ಸಂಜಯ್ ಚಿತ್ರದುರ್ಗ
ಹಾಸ್ಟೆಲ್ ಅನ್ನೋ ಪದ ಕೇಳಿದ ತಕ್ಷಣ, ಒಂದು ಕ್ಷಣ ಈಗ ಇರುವ ಲೋಕವನ್ನೇ ಮರೆಸುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಜೋಗದ ಗುಂಡಿ ನೋಡು ಎಂದ ಕವಿ ಏನಾದರೂ ಹಾಸ್ಟೆಲ್’ನಲ್ಲಿ ಇದ್ದಿದ್ದರೆ ಜೀವನದಲ್ಲಿ ಒಂದು ಬಾರಿಯಾದರೂ ಹಾಸ್ಟೆಲ್’ನಲ್ಲಿ ಇದ್ದು ನೋಡು ಎನ್ನುತ್ತಿದ್ದನೇನೋ. ಹಾಸ್ಟೆಲ್ ಅನ್ನೋದು ಬರೀ ಸಿಹಿ ನೆನಪುಗಳ ಕಂತೆಯಲ್ಲ, ಬದಲಿಗೆ ಜೀವನದಲ್ಲಿ ನಾವು ಎಂದೂ ಮರೆಯದ ಹಲವು ಪಾಠಗಳನ್ನು ಕಲಿಸುತ್ತದೆ.
ಮೊದಲಿಗೆ ಹಾಸ್ಟೆಲ್‌ಗೆ ಕಾಲಿಟ್ಟಾಗ ಇಲ್ಲಿ ನಮ್ಮವರು ಯಾರೂ ಇಲ್ಲ ಎಂದು ಅತ್ತವರಿಗೆ ಲೆಕ್ಕವಿಲ್ಲ. ಹಲವರಿಗೆ ತಾವು ಯಾವುದೋ ಅನ್ಯ ಲೋಕಕ್ಕೆ ಬಂದ ಅನುಭವ ಆಗುತ್ತದೆ. ತಮ್ಮನ್ನು ಬಿಟ್ಟು ಉಳಿದವರು ಎಲ್ಲಾ ಯಾವುದೋ ಅನ್ಯಲೋಕದ ಜೀವಿಗಳೋ ಎಂಬಂತೆ ಭಾಸವಾಗುತ್ತದೆ. ಅದರಲ್ಲೂ ಎಂದೂ ನೋಡದ ವಿಚಿತ್ರಗಳೆಲ್ಲ ಹಾಸ್ಟೆಲ್‌ನ ಮೊದಲ ದಿನವೇ ನೋಡಿದಂತೆ ಆಗಿ, ಈ ಅನ್ಯ ಲೋಕಕ್ಕೆ ನಾನು ಏಕಾದರೂ ಬಂದೇನೋ ಅಂತ ಅನಿಸುತ್ತದೆ.
ವಾರ್ಡನ್ ಅನ್ನೋ ಶಿಸ್ತಿನ ಸಿಪಾಯಿ
ವಾರ್ಡನ್ ಅಂತೂ ಯಾವುದೋ ಮಿಲಿಟರಿ ಕ್ಯಾಂಪಿನಿಂದ ತಪ್ಪಿಸಿಕೊಂಡು ಬಂದ ಶಿಸ್ತಿನ ಸಿಪಾಯಿ ಇರಬೇಕು ಎಂಬ ಭಾವನೆ. ಇನ್ನೂ ಸೀನಿಯರ್‌ಗಳನ್ನು ನೋಡಿದರೆ ಇವರು ಮನುಷ್ಯರ ಅಥವಾ ರಾಕ್ಷಸರ ಸಂತಾನವ ಅನ್ನೋ ಭಯ. ಅಷ್ಟರಲ್ಲೇ ಅಲ್ಲೊಬ್ಬ ನಮಗೆ ಪರಿಚಯವಾಗುತ್ತಾನೆ, ಮನಸಿನ ಕೂನೆಯಲ್ಲಿ ಇಲ್ಲಿ ನನ್ನಂತೆ ಒಬ್ಬನಾದರೂ ಇದ್ದಾನ್ನಲ್ಲ ಎನಿಸಿ, ಒಬ್ಬ ಜೊತೆಗಾರ ಸಿಕ್ಕ ಅಂತ ಖುಷಿಯಾಗುತ್ತದೆ.
ಹಾಸ್ಟೆಲ್‌ನಲ್ಲಿ ಮೊದಲ ದಿನ ಮನೆಯಿಂದ ತರಗತಿಗೆ ಹೋಗುವಂತೆ ರೆಡಿಯಾಗಿ ಊಟಕ್ಕೆ ಹೋದಾಗ ಮೊದಲ ದಿನ ಮನೆ ಊಟಕ್ಕಿಂತ ಇಲ್ಲಿನದೇ ರುಚಿಸುತ್ತದೆ. ತರಗತಿಗೆ ಕಾಲಿಟ್ಟಾಗ ನಮ್ಮದೊಂದು ಹಾಸ್ಟೆಲ್ ಗ್ಯಾಂಗ್ ಹುಟ್ಟಿಕೊಂಡಿರುತ್ತದೆ. ದಿನವೆಲ್ಲಾ ತರಗತಿಯಲ್ಲಿ ನೆಡೆದ ಎಲ್ಲಾ ಘಟನೆಗಳು ಸಂಜೆ ಹಾಸ್ಟೆಲ್ ರೂಮಿನಲ್ಲಿ ಚರ್ಚೆಯ ವಿಷಯವಾಗುತ್ತವೆ. ತರಗತಿಯ ಪಾಠವೊಂದನ್ನು ಬಿಟ್ಟು ಅಷ್ಟೇ.
ಹಾಸ್ಟೆಲ್ ಜೀವನ ಹೀಗೆ ಮೊದಲೆರಡು ತಿಂಗಳು ಕಳೆಯುತ್ತದೆ. ಆಗ ಮನೆಯ ನೆನಪಾಗುತ್ತದೆ, ಅದರಲ್ಲೂ ಅಮ್ಮನ ನೆನಪಾಗುತ್ತದೆ. ಏಕೆಂದರೆ ಮೊದಲಿಗೆ ರುಚಿಯಾಗಿದ್ದ ಹಾಸ್ಟೆಲ್ ಊಟ ಈಗ ಇದೊಂದು ಊಟನಾ, ಅಮ್ಮನ ಅಡುಗೆ ಮುಂದೆ ಹಾಸ್ಟೆಲ್ ಊಟ ಏನೇನು ಅಲ್ಲ ಅನಿಸುತ್ತೆ. ಮತ್ತೆ ಮನೆಗೆ ಹೋಗಿ ಮನೆ ಊಟ ಯಾವಾಗ ಮಾಡೋದು ಅಂತ ಯೋಚನೆ ಶುರುವಾಗುತ್ತೆ. ಆಗ ಇದ್ದೇ ಇದೆಯಲ್ಲ, ನಮ್ಮ ಗ್ಯಾಂಗ್‌ನಲ್ಲಿರುವ ಅಡುಗೆ ಭಟ್ಟರು ಎಲ್ಲಾ ಮುಂದೆ ಬಂದು ನಾವೇ ಏನಾದರೂ ಮಾಡೋನ ಅಂತ ಒಂದು ನಿರ್ಧಾರ ಆಗುತ್ತೆ. ಆದರೆ ಇದನ್ನ ವಾರ್ಡನ್‌ಗೆ ಗೊತ್ತಾಗದಂತೆ ಮಾಡಬೇಕು, ಗೊತ್ತಾದರೆ ಇರೋ ಅಲ್ಪ ಸ್ವಲ್ಪ ಮಾನ ಮರ್ಯಾದೆ ಎಲ್ಲಾ ತೆಗೆದು, ಜೊತೆಗೆ ಗಂಟೆಗಟ್ಟಲೆ ಬಿಟ್ಟಿ ಉಪದೇಶ ಕೇಳೋ ಗೋಳು ಯಾವನಿಗೆ ಬೇಕು ಹೇಳಿ.
ಅಂತೂ ಇಂತೂ ಮಧ್ಯರಾತ್ರಿಯ ಹೊತ್ತಿಗೆ ಎಂದೂ ಅಡುಗೆ ಮನೆ ಮುಕವನ್ನೇ ನೋಡದವರು ಅಡುಗೆ ಭಟ್ಟರಾಗಿ ಏನ್ನನೋ ತಯಾರು ಮಾಡಲು ಹೋದರೆ, ಅದು ಇನ್ನೆನೂ ಆಗಿ, ಅದನ್ನು ತಿನ್ನುವುದು ಹೋಗಲಿ, ಇದು ತಿನ್ನಬಹುದಾ ಅನ್ನೋ ಅನುಮಾನ ಬರುತ್ತೆ. ಏನ್ ಮಾಡೋಕೆ ಆಗುತ್ತೆ ಕಷ್ಟ ಪಟ್ಟು ಮಾಡಿದ್ದು ವ್ಯರ್ಥ ಮಾಡೋ ಆಗಿಲ್ಲ. ಕಷ್ಟ ಪಟ್ಟು ಖಾಲಿ ಮಾಡಿ ಮಲಗೋ ಹೊತ್ತಿಗೆ ದೆವ್ವಗಳು ಕೂಡ ತಮ್ಮ ನೈಟ್ ಶಿಪ್ಟ್ ಮುಗಿಸಿ ಹೋರಟಿರುತ್ತವೆ.
ಮಾರನೇ ದಿನ ತರಗತಿಯಲ್ಲಿ ರಾತ್ರಿಯ ಸಹಸದ ಸಹವಾಸದಿಂದ ಮಾಡೋ ಪಾಠ ಅಮ್ಮನ ಜೋಗುಳವಾದರೆ, ಡೆಸ್ಕ್ ತೊಟ್ಟಿಲು. ಹಾಯಾಗಿ ಕಣ್ಣು ಮುಚ್ಚುವ ಎನ್ನುವಷ್ಟರಲ್ಲಿ ಪಾಠದ ಮಧ್ಯೆ ಪ್ರಶ್ನೆ ಬಂದರೆ ಎಂಬ ಭಯ, ಉತ್ತರ ಹೇಳದೇ ಹೋದರೆ ಗರ್ಲ್ ಫ್ರೆಂಡ್ಸ್ ಎದುರೇ ಮರ್ಯಾದೆ ಹರಣ. ಇದೆಲ್ಲಾ ಗೋಜಲೇ ಬೇಡಾಂತ ನಿದ್ದೆ ಮಾಡಲ್ಲಾ ಅಂತ ಮನಸ್ಸಿನಲ್ಲೇ ಭೀಷ್ಮ ಪ್ರತಿಜ್ಞೆ ಏನೋ ಮಾಡುತ್ತೇವೆ. ಆದರೆ ಅದೆಲ್ಲಾ ಎಷ್ಟು ದಿನ.
ಅಂತೂ ಮೊದಲಿಗೆ ಯಾರೂ ಪರಿಚಯದವರು ಇಲ್ಲ ಎಂದು ಕೊರಗಿದ್ದ ಹಾಸ್ಟೆಲ್ ತುಂಬಾ ನಮ್ಮದೇ ಹಾವಳಿ ಆರಂಭ. ಪೋಷಕರು ಇಷ್ಟ ಹೆಸರಿಗೆ ಅಡ್ಡ ಹೆಸರಿಟ್ಟು, ಎಲ್ಲರುಗೂ ಒಂದೊಂದು ಅಲಿಯಾಸ್ ನಾಮಾಂಕಿತಗಳು ಬರುತ್ತದೆ. ಸ್ಟಡಿ ಟೈಮ್‌ನಲ್ಲಿ ಹಳೆ ಲವ್ ಸ್ಟೋರಿ, ಹೊಸ ಹುಡಿಗಿ ಪರಿಚಯ ಹೀಗೇ ಟೀನೇಜ್‌ನ ಸ್ವಾರಸ್ಯಗಳೇ ತುಂಬುತ್ತದೆ. ಇದರ ಜತೆಯಲ್ಲಿ ಹಾಸ್ಟೆಲ್ ಜಗಳ, ನೈಟ್ ಪಾರ್ಟಿ, ಅದು ಸರಿ ಇಲ್ಲ, ಇದು ಸರಿ ಇಲ್ಲ ಅಂತ ಹೋರಾಟ.
ಅಂತೂ ನಮಗೆ ಗೊತ್ತೇ ಆಗದ ಹಾಗೆ ಫೈನಲ್ ಎಕ್ಸಾಂಗಳು ಕೂಡ ನಮಗಾಗಿ ಕಾದು ಕುಳಿತಿರುತ್ತವೆ, ಅಂತೂ ವರ್ಷ ಪೂರ್ತಿ ಟೆಕ್ಟ್ ಬುಕ್ ಮುಟ್ಟದ ಕೈಗಳು ಅವನ್ನು ಯಾವುದೋ ಮೂಲೆಯಿಂದ ಹೊರ ತೆಗೆದು ಓದತೊಡಗುತ್ತದೆ. ಕ್ಲಾಸಲ್ಲಿ ಇಷ್ಟೂ ದಿನ ಕೇಳಿದ ಜೋಗುಳ ಇದೆಯಾ ಅನ್ನೋ ಅನುಮಾನ ಬಂದು, ಮೇದಾವಿಗಳಿಂದ ಇಂಪಾರ್ಟೆಂಟ್ ಪ್ರಶ್ನೆಗಳನ್ನು ಕೇಳಿ, ಅವನಿಂದಲೇ ಉತ್ತರ ಪಡೆದು ಹೇಗೋ ಅದನ್ನ ಕಂಟಪಾಠ ಮಾಡಿ ಎಕ್ಸಾಂ ಅನ್ನೋ ಯುದ್ದದಲ್ಲಿ ಭಾಗಿಯಾಗುತ್ತೇವೆ.
ಈ ಬಾರಿಯಾದರೂ ಪಾಸ್ ಆಗಬಹುದು ಎನ್ನುವ ಓಯಸಿಸ್ ಆಸೆಯೊಂದಿಗೆ ಮರಳಿ ಹಾಸ್ಟೆಲ್’ಗೆ ಹೋದರೆ ಮೊದಲ ಬಾರಿಗೆ ಹಾಸ್ಟೇಲ್’ಗೆ ಬಂದಾಗ ಅಪರಿಚವಾಗಿದ್ದವರು ಈಗ ಜೀವದ ಆಪ್ತ ಸ್ನೇಹಿತರಾಗಿದ್ದಾರೆ, ಮನೆಯಲ್ಲಿ ಹೇಳದ ಎಷ್ಟೋ ನೆನಪನ್ನು ಹಂಚಿಕೊಂಡವರು ಈಗ ದೂರವಾಗುವ ಸಮಯ ಬಂದಿದೆ. ಆಗ ಊರಿಗೆ ಹೋಗುವ ಆಸೆಗಿಂತ ಇಷ್ಟೂ ದಿನ ಜೊತೆಗಿದ್ದ ಸ್ನೇಹಿತರನ್ನು ಬಿಟ್ಟು ಹೋಗಬೇಕಲ್ಲಾ ಎಂಬ ದುಃಖ. ಕಣ್ಣೀರ ಪಸೆಯನ್ನೇ ಕಾಣದ ನಮ್ಮ ಕಣ್ಣುಗಳಲ್ಲಿ ನೀರು ಕನ್ನಂಬಾಡಿಯನ್ನೆ ತುಂಬಿಸುವಂತೆ ಹರಿಯುತ್ತದೆ. ಕೊನೆಗೆ ಹಾಸ್ಟೆಲ್ ಅನ್ನೋ ನೆನಪಿನ ಅರಮನೆಯಿಂದ ನೆನಪುಗಳ ರಾಶಿಯನ್ನು ಹೊತ್ತು ಬಾರವಾದ ಹೃದಯದಿಂದ ಜೀವನದ ಮುಂದಿನ ನಿಲ್ದಾಣಕ್ಕೆ ನಮ್ಮ ಪ್ರಯಾಣ ಮಾಡುತ್ತೇವೆ.
ಸಂಜಯ್ ಚಿತ್ರದುರ್ಗ
ಪ್ರಥಮ ಎಂ.ಎ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ