ಶಿಲ್ಪ ಕಲೆಯಲ್ಲಿ ಇತಿಹಾಸದ ಪುಟಗಳು | ಸಂತೋಷ್ ಇರಕಸಂದ್ರ
ತಂಗಾಳಿಯನ್ನು ಸೂಸುವ ಸಮೃದ್ಧ ಮರಗಳ ಗುಂಪು. ನೀರಿನಿಂದ ಚಿಮ್ಮುವ ಕಾರಂಜಿಗಳು. ಅಲ್ಲಲ್ಲಿ ನೆಲಕಂಠಿ ಬೆಳೆದ ಹಸಿರು ಪಾಚಿ. ಉದ್ದನೆಯ ಹಳದಿ ಬಿದಿರು, ಸಣ್ಣ ಕಲ್ಲಿನ ಗುಡ್ಡಗಳು, ವಿಶ್ರಮಿಸಲು ಬೆಂಚುಗಳು, ಕನ್ನಡ ನಾಡಿನ ಜನಪದ ಸಾಹಿತ್ಯದ ಕುರುಹುಗಳು ಹಾಗೂ ಚಿತ್ರಪಟಗಳು, ಕಲ್ಲಿನ ಕೆತ್ತನೆಗಳು, ಶಿಲ್ಪ ಶಾಸನಗಳು ಇವೆಲ್ಲವನ್ನು ಒಂದೇ ಕ್ಯಾಂಪಸ್‌ನಲ್ಲಿ ನೋಡುವುದೊಂದು ಖುಷಿ.. ಆ ಖುಷಿಗೊಂದು ಮೆರುಗನ್ನು ತುಮಕೂರು ವಿಶ್ವವಿದ್ಯಾನಿಲಯ ನೀಡಿದೆ.
ತುಮಕೂರು ವಿವಿಯ ಹೆಬ್ಬಾಗಿಲಿನಿಂದ ನೇರವಾಗಿ ಹೊರಡುವ ದಾರಿಯಲ್ಲಿ ಬ್ರಹ್ಮಚಾರಿಯಾದ ಅಂಜನಿ ಪುತ್ರನು ನಮ್ಮನ್ನು ಸ್ವಾಗತಿಸುತ್ತಾನೆ. ದಾರಿಯನ್ನು ಏರಡು ಭಾಗಗಳಾಗಿ ವಿಭಾಗಿಸುವ ಶೋ ಗಿಡಗಳು ಆಯತಕಾರವನ್ನು ಪಡೆದುಕೊಂಡು ಹಸಿರಿನಿಂದ ಕಂಗೊಳಿಸುತ್ತಿರುತ್ತವೆ. ಅವುಗಳ ನಡುವೆ ಒಂಟಿ ಕಾಲಿನಲ್ಲಿ ನಿಂತ ಕಬ್ಬಿಣದ ಕಂಬಗಳು ಕವಿಗಳ, ಸಾಹಿತಿಗಳ, ಶ್ರೇಷ್ಠರ ವಾಕ್ಯಗಳನ್ನು ಪುಸ್ತಕದಂತೆ ತೆರೆದಿಟ್ಟುಕೊಂಡಿರುತ್ತವೆ.
ಆ ಸಾಲುಗಳ ಮೇಲೆ ಕಣ್ಣು ಹಾಯಿಸುತ್ತ ಡಾಂಬರು ರಸ್ತೆಯಲ್ಲಿ ಮುಂದೆ ಸಾಗಿದರೆ, ನಮಗೆ ಅಭಿಮುಖವಾಗಿ ಸಿಮೆಂಟ್‌ನಲ್ಲಿ ಅಚ್ಚು ಹಾಕಿದ ಜಾನಪದ ಕಲಿಯೊಂದು ಕಣ್ಣಿಗೆ ಬೀಳುತ್ತದೆ. ಜಾನಪದ ಕಲೆಗೊಂದು ಆರಾಧನೆ ನೀಡುವುದಕ್ಕೋಸ್ಕರ ಕಲಾರಾಧನೆಯು ನಮ್ಮನ್ನು ತನ್ನೊಳಗೆ ಆದರದಿಂದ ಬರಮಾಡಿಕೊಳ್ಳುತ್ತದೆ.
ಕಲಾರಾಧನೆಯನ್ನು ಪ್ರವೇಶಿಸುತ್ತಿದ್ದಂತೆ ದಾರಿಯ ಎರಡೂ ಬದಿಗಳಲ್ಲಿ ಸ್ಥಳೀಯವಾಗಿ ದೊರೆತಿರುವ ವಿವಿಧ ಶಿಲ್ಪ ಶಾಸನಗಳು, ಜನಪದ ಕಲೆಗಳ ಬಿತ್ತಿ ಚಿತ್ರಗಳು, ವೀರಗಲ್ಲುಗಳು, ಪ್ರತಿ ಕೃತಿಗಳು, ಮಾಸ್ತಿ ಕಲ್ಲುಗಳು, ಸ್ತಂಭಗಳು ಹಾಗೂ 13 ಮತ್ತು 14ನೇ ಶತಮಾನಗಳಿಗೆ ಸೇರಿದ ಕಲ್ಲಿನ ಕೆತ್ತನೆಯ ಅಪರೂಪದ ವಿಗ್ರಹಗಳನ್ನು ಆಯಕಟ್ಟಾಗಿ ಕೂರಿಸಿ ಗ್ರಾನೈಟ್ ಶಿಲೆಯ ಮೇಲೆ ಕಿರು ಪರಿಚಯವನ್ನು ಕೊರೆಯಲಾಗಿದೆ.
ಇಲ್ಲಿರುವ 65 ರಿಂದ 70 ಶಿಲ್ಪ ಶಾಸನಗಳ ಪೈಕಿ 3 ನಂದಿ ಶಿಲ್ಪಗಳು, 3 ಶಾಸನಗಳು, 2 ಮಾಸ್ತಿ ಕಲ್ಲುಗಳು, 11 ವೀರಗಲ್ಲುಗಳು, 3 ನಾಗದೇವತೆಗಳ ವಿಗ್ರಹಗಳು, 3 ಪ್ರತಿಕೃತಿಗಳು, 6 ಜನಪದ ಕುಣಿತಗಳ ಕೆತ್ತನೆಗಳು, 13, 14ನೇ ಶತಮಾನದ ಕಲ್ಲಿನ ವಿಗ್ರಹಗಳು ( ವಾಮನ, ವೈಷ್ಣವಿ, ಗಜಲಕ್ಷ್ಮೀ, ವಿಷ್ಣು ,ಕೂರ್ಮ, ಉಗ್ರನರಸಿಂಹ, ಸೂರ್ಯನಾರಾಯಣ ಹಾಗೂ ಭೈರವಿ ) 7 ಬಿತ್ತಿ ಚಿತ್ರಗಳು, 4 ಸ್ತಂಭಗಳು ಇವುಗಳನ್ನು ಹೊರತುಪಡಿಸಿ ವಾಡೆ, ರಾಗಿ ಬೀಸುವ ಕಲ್ಲು, ವೀರಭದ್ರ, ವಿಜಯ ( ದ್ವಾರಪಾಲಕ ) ಕೋಲೆ ಬಸವ, ಗಾಣದ ಕಲ್ಲು, ರೋಣದ ಕಲ್ಲು, ಕಾಳಿಕಾದೇವಿ, ಗೋವರ್ಧನ ಗಿರಿಧಾರಿ, ಮತ್ತು ಜೈನ ತೀರ್ಥಂಕರನ ಶಿಲ್ಪಗಳು ಪ್ರಮುಖ ಆಕರ್ಷಣೆಗಳಾಗಿವೆ.
ಜಾನಪದ ಕಲೆಗಳ ಬೀಡು:
ಕರ್ನಾಟಕದ ಶೈವ ಸಂಸ್ಕೃತಿಯ ಅವಿಭಾಜ್ಯ ಅಂಗ ಎಂದೇ ಕರೆಯಲಾಗುವ ನಂದಿಯು ನಿಮ್ಮ ಗಮನವನ್ನು ಸೆಳೆಯುತ್ತಾನೆ. ಇದರ ಜೊತೆಗೆ ಅಲಂಕೃತ ನಂದಿಯನ್ನು ಸಹ ನೋಡಬಹುದು. ಇವುಗಳನ್ನೆಲ್ಲ ನೋಡಿಕೊಂಡು ನಡೆಯುವಾಗ ಫೋಟೋವನ್ನು ಕ್ಲಿಕ್ಕಿಸದೆ ಹೋಗುವುದು ಅಸಾಧ್ಯ. ಕರುನಾಡಿನ ಪ್ರಮುಖ ಜಾನಪದ ಕಲೆಗಳಾದ ಕೋಲೆ ಬಸವ, ಹೆಬ್ಬಾರ ಕುಣಿತ, ಮಾಯಮ್ಮನ ಕುಣಿತ, ಮಾರಿ ಕುಣಿತ, ಸೂತ್ರದ ಗೊಂಬೆ, ಪೂಜಾ ಕುಣಿತ, ವೀರಭದ್ರ ಕುಣಿತಗಳ ಚಿತ್ರಗಳನ್ನು ಕಣ್ಣಿಗೆ ಕಟ್ಟುವಂತೆ ಸಿಮೆಂಟ್‌ನಲ್ಲಿ ವರ್ಣಮಯವಾಗಿ ನಿರ್ಮಿಸಲಾಗಿದೆ. ಇಂದು ಎಷ್ಟೋ ಜಾನಪದ ಕಲೆಗಳ ನಶಿಸುವಿಕೆಯ ಸಂದರ್ಭದಲ್ಲಿ ಇವುಗಳು ಮಹತ್ವದ ಪಾತ್ರವಹಿಸುತ್ತವೆ.
ತುಸು ಮುಂದೆ ಬಂದರೆ, ಮಹಾಸತಿ ಪದ್ಧತಿಯ ಸ್ಮಾರಕವೆಂದೆ ಕರೆಯಬಹುದಾದ ಮಾಸ್ತಿಕಲ್ಲು ಎದುರಾಗುತ್ತದೆ. ಇದರೊಟ್ಟಿಗೆ ಊರಿನ ರಕ್ಷಣೆಗಾಗಿ ಆತ್ಮಬಲಿ ಮಾಡಿಕೊಂಡ ತ್ಯಾಗಿಯ ಕೆತ್ತನೆ ಇದೆ. ಇಲ್ಲಿರುವ ವೀರಗಲ್ಲುಗಳ ಪೈಕಿ ಕೆಲವು ವೀರಗಲ್ಲುಗಳಲ್ಲಿ ಕುದುರೆಯ ಮೇಲೆ ಕತ್ತಿ ಹಿಡಿದು ಯುದ್ಧಕ್ಕೆ ಸನ್ನಧನಾಗಿರುವ ಯೋಧನನ್ನು ಕಾಣಬಹುದು. ಹಳ್ಳಿಯ ರಕ್ಷಣೆಗಾಗಿ ಶತ್ರುಗಳೊಂದಿಗೆ ಕಾದಾಡಿ ಮಡಿದ ವೀರಯೋಧರ ಪ್ರತೀಕ ಈ ವೀರಗಲ್ಲುಗಳು.
ಇನ್ನು ಶಾಸನಗಳತ್ತ ಕಣ್ಣಾಯಿಸಿದರೆ, ಇಮ್ಮಡಿ ವೀರ ಬಲ್ಲಾಳನ ಶಾಸನವು ಕಣ್ಣಿಗೆ ಬೀಳುತ್ತದೆ. ಈ ಶಾಸನವು 30 ಸೆಂ.ಮೀ ಅಗಲ, 24 ಸೆಂ.ಮೀ ಎತ್ತರ, ಹಾಗೂ 10 ಸೆಂ.ಮೀ ದಪ್ಪವಿದ್ದು, ವೀರ ಬಲ್ಲಾಳನ ಕಾಲದ ರಾಜಕೀಯ ಮತ್ತು ಸಾಂಸ್ಕೃತಿಕ ಚರಿತ್ರೆಯನ್ನು ಲಿಪಿ ಬದ್ಧಗೊಳಿಸುವ ಪ್ರಮುಖ ಶಾಸನವಾಗಿದೆ. ಇದರೊಟ್ಟಿಗೆ ಜೀನ ಶಾಸನವನ್ನು ಕಾಣಬಹುದು. ಇವಿಷ್ಟು ಕಲಾರಾಧನೆ ಮೊದಲ ಹಂತದಲ್ಲಿ ನೋಡಬಹುದು.
ಕಲೆ ವಾಸ್ತುಶಿಲ್ಪಗಳ ಬೀಡು :
ಕಲಾರಾಧನೆಯ ಎರಡನೇ ಹಂತವು ಮುಖ್ಯವಾಗಿ ಕಲೆ ಸಾಹಿತ್ಯ ವಾಸ್ತುಶಿಲ್ಪಗಳನ್ನು ಒಳಗೊಂಡಿದೆ. ವೃತ್ತಾಕಾರದಲ್ಲಿ 5 ಮೀಟರ್‌ಗೆ ಒಂದರಂತೆ ಮಂಟಪದ ಮೇಲೆ ಕೂರಿಸಿರುವ ಭಿತ್ತಿ ಚಿತ್ರಗಳು ಮನಸ್ಸನ್ನು ತನ್ನತ್ತ ಸೆಳೆಯುತ್ತವೆ. ಈ ವೃತ್ತಾಕಾರದ ಭಿತ್ತಿ ಚಿತ್ರಗಳ ನಡುವೆ 2 ಜೋಡಿಯ 4 ಸ್ತಂಭಗಳನ್ನು 10 ಮೀಟರ್ ಅಂತರದಲ್ಲಿ ನಿಲ್ಲಿಸಲಾಗಿದೆ. ಈ ಸ್ತಂಭಗಳ ಅಂತರದ ನಡುವೆ ಪುಟ್ಟ ಕೊಳವಿದ್ದು, ಕೊಳದ ಕೇಂದ್ರ ಭಾಗದಲ್ಲಿ ಒಂಟಿ ಮಂಟಪದ ಮೇಲೆ ಅಲಂಕಾರಿಕ ನಂದಿಯು ಗಂಭೀರವಾಗಿ ಕುಳಿತಿದ್ದಾನೆ.
ಪಾಚಿಯು ಕೊಳದ ತುಂಬೆಲ್ಲ ಹಸಿರು ಹಾಸಿಗೆಯನ್ನು ಹಾಸಿದಂತೆ ಕಾಣುತ್ತದೆ. ಬಲಭಾಗದಿಂದ ಹೊರಟರೇ ಮೊದಲಿಗೆ 12ನೇ ಶತಮಾನಕ್ಕೆ ಸೇರಿದ ನೀಲಿ ಮಿಶ್ರಿತ ಬಳಪದ ಕಲ್ಲಿನಲ್ಲಿ ಖಡ್ಗ ಸಹಿತವಾಗಿ ಕೆತ್ತಿರುವ ಚಾಮುಂಡಿ ಶಿಲ್ಪದ ದರ್ಶನವಾಗುತ್ತದೆ. ಐರಾವತಗಳೆರಡೂ ಗಜಲಕ್ಷ್ಮಿಯನ್ನು ಸ್ವಾಗತಿಸುತ್ತಿರುವಂತೆ ಅದ್ಭುತವಾಗಿ ಕೆತ್ತಲಾಗಿದೆ. ಶೈವ ದ್ವಾರಪಾಲಕನ ಕೆತ್ತನೆಯನ್ನು ನೋಡಿದರೆ, ಆಶ್ಚರ್ಯವಾಗದೆ ಇರದು.
ಕೆಳಭಾಗದಲ್ಲಿ ಆಯುಧಗಳನ್ನು ಹಿಡಿದ ಬಾಗಿಲವಾಡ, ಮೇಲ್ಭಾಗದಲ್ಲಿ 7 ಜೋಡಿಗಳ 14 ಚೌಕಕಾರದ ಮನೆಗಳನ್ನು ವಿಶಿಷ್ಟವಾಗಿ ಕೆತ್ತಲಾಗಿದೆ. ಈ ಶಿಲೆಯು ನೀಲಿ ಮಿಶ್ರಿತ ಬಳಪದ ಶಿಲೆಯಾಗಿದ್ದು. 83 ಸೆಂ.ಮೀ ಎತ್ತರ, 6.5 ಸೆಂ.ಮೀ ದಪ್ಪ 19 ಸೆಂ.ಮೀ ಅಗಲವಾಗಿದ್ದು 15ನೇ ಶತಮಾನದ ಅಪರೂಪದ ಕೆತ್ತನೆಯಾಗಿದೆ. ಈ ಸಾಲಿನ ಕೊನೆಯಲ್ಲಿ ಕ್ರಿಸ್ತಶಕ 1775ರಲ್ಲಿ ನೀಲಿ ಗಟ್ಟಿ ಶಿಲೆಯಿಂದ ಕೆತ್ತಲಾಗಿರುವ ಶಾಸನವಿದೆ. ಈ ಶಾಸನದ ಮೇಲ್ಭಾಗದಲ್ಲಿ ಎರಡು ನಂದಿಗಳ ನಡುವೆ ಶಿವಲಿಂಗವನ್ನು ಕೆತ್ತಲಾಗಿದೆ. ಶಾಸನದಲ್ಲಿ ಕೆತ್ತಲಾದ ಲಿಪಿಗಳ ಪೈಕಿ ಕೆಲ ಅಕ್ಷರಗಳು ಕನ್ನಡಕ್ಕೆ ಸಮೀಪವಾದವುಗಳಾಗಿವೆ. ಇವುಗಳ ನಡುವೆ 11ನೇ ಶತಮಾನಕ್ಕೆ ಸೇರಿದ ವೀರಗಲ್ಲೊಂದು ಗಮನ ಸೆಳೆಯುತ್ತದೆ. ಕೆತ್ತನೆಕಾರನು ಈ ಶಿಲೆಯನ್ನು ಮೂರು ಸಮ ಭಾಗಗಳನ್ನಾಗಿಸಿಕೊಂಡು ಮೊದಲನೇ ಭಾಗದಲ್ಲಿ ಯುದ್ಧಕ್ಕೆ ಹೋಗುವ ಮುನ್ನ ಶಿವಲಿಂಗವನ್ನು ಇಬ್ಬರು ವೀರರು ಪೂಜಿಸುತ್ತಿರುವಂತೆ, ಎರಡನೇ ಭಾಗದಲ್ಲಿ ವೀರರು ಮಂಟಪದಲ್ಲಿ ಕುಳಿತು ಎಲ್ಲರಿಗೂ ನಮಸ್ಕರಿಸುತ್ತಿರುವಂತೆ ಇನ್ನೂ ಕೊನೆಯಲ್ಲಿ ಕುದುರೆಗಳು, ಬಿಲ್ಲು ಬಾಣಗಳು, ಕತ್ತಿ ಗುರಾಣಿಗಳನ್ನೂ ಹಿಡಿದು ಯುದ್ಧ ಮಾಡುತ್ತಿರುವ ಸನ್ನಿವೇಶವನ್ನು ಚಿತ್ರ ಸಮೇತ ಅತ್ಯಂತ ಸಹಜವಾಗಿ ಕೆತ್ತಲಾಗಿದೆ.
ಏಕಶಿಲೆಗಳ ಅದ್ಭುತ ರಚನೆಗಳು:
ಮತ್ತಷ್ಟು ಉತ್ಸಾಹದಿಂದ ತುಸು ಮುಂದೆ ಬಂದರೆ ಆಯತಾಕಾರದ ಏಕಶಿಲೆಯಲ್ಲಿ ನರಸಿಂಹ, ವರಾಹ ಹಾಗೂ ಕೂರ್ಮ ಶಿಲ್ಪಗಳನ್ನು ಮಂಟಪದ ಸಮೇತವಾಗಿ ಅದ್ಭುತ ಕಲಾ ವೈಖರಿಯಿಂದ ಕೆತ್ತಲಾಗಿದೆ. ವಿಷ್ಣುವಿನ ಮೂರು ರೂಪಗಳನ್ನು ಬಿಳಿ ಬಳಪದ ಶಿಲೆಯಲ್ಲಿ ಕೆತ್ತಲಾಗಿದೆ. 18ನೇ ಶತಮಾನದ ನೀಲಿ ಮಿಶ್ರಿತ ಬಿಳಿ ಬಣ್ಣದ ಪದ್ಮಶಿಲೆಯು ಕಮಲದಂತೆ ಗಮನ ಸೆಳೆಯುತ್ತದೆ. ಈ ಶಿಲೆಯಲ್ಲಿ ತಾವರೆಯನ್ನು ಹೋಲುವ ನಾಲ್ಕು ಸುತ್ತುಗಳಲ್ಲಿ ದಳಗಳನ್ನು ಪೊಣಿಸಲ್ಪಟ್ಟಿದ್ದು, ಮೊದಲ ಸುತ್ತಿನಲ್ಲಿ 24 ದಳ, ಎರಡನೇ ಸುತ್ತಿನಲ್ಲಿ 23 ದಳ, ಮೂರನೇ ಸುತ್ತಿನಲ್ಲಿ 21 ಹಾಗೂ ಕೊನೆಯ ಸುತ್ತಿನಲ್ಲಿ 17 ದಳಗಳನ್ನು ಒಳಗೊಂಡು ಮಧ್ಯಭಾಗದಲ್ಲಿ ಉಬ್ಬಾಗಿದೆ.
ಇದರ ಪಕ್ಕದಲ್ಲಿಯೇ ಏಕಶಿಲೆಯಲ್ಲಿ ಕೆತ್ತಲಾದ 4 ಶ್ರೀದೇವತೆಗಳು, ಉಗ್ರ ನರಸಿಂಹ ಮತ್ತು ಹರಿಹರನ ಶಿಲ್ಪಗಳು ಗಮನ ಸೆಳೆಯುತ್ತವೆ. 13ನೇ ಶತಮಾನಕ್ಕೆ ಸೇರಿದ ವಿಷ್ಣು ಶಿಲ್ಪಗಳ ಬಿತ್ತಿ ಚಿತ್ರಗಳು, ಸೂರ್ಯನಾರಾಯಣ ಶಿಲ್ಪಗಳು ಇತರ ಕೆತ್ತನೆಗಳಿಗಿಂತ ವಿಭಿನ್ನವಾಗಿ ನೋಡುಗರನ್ನು ಆಕರ್ಷಿಸುತ್ತವೆ.
ಈ ಶಿಲ್ಪಗಳನ್ನೆಲ್ಲ ಒಂದು ಸುತ್ತು ಸುತ್ತಿದ ಮೇಲೆ ಮಧ್ಯಭಾಗಕ್ಕೆ ಬಂದು ನಿಂತರೆ ನಾಲ್ಕು ವಿಶೇಷ ಮಾದರಿಯ ಸ್ತಂಭಗಳು ಕಣ್ಣಿಗೆ ಬೀಳುತ್ತವೆ. ರುದ್ರ ಸ್ತಂಭವು 18ನೇ ಶತಮಾನಕ್ಕೆ ಸೇರಿದ್ದು, ನೀಲಿ ಮಿಶ್ರಿತ ಬಿಳಿ ಶಿಲೆಯಿಂದ ಕೂಡಿದ ಸ್ತಂಭದ ನಡುವೆ ಭಕ್ತನ ಉಬ್ಬು ಶಿಲ್ಪವನ್ನು ಚೋಕ್ಕವಾಗಿ ಕೆತ್ತಲಾಗಿದೆ. ಶ್ರೀ ಕಾರ ಸ್ತಂಭವು ಒಡೆಯಂತೆ ಗೋಚರಿಸುತ್ತದೆ. ತನ್ನ ಮೇಲ್ಮೈ ಗೆರೆಗಳಿಂದಲೇ ಕೂಡಿದ್ದು 44ಸೆಂ.ಮೀ ಸುತ್ತಳತೆಯನ್ನು ಹೊಂದಿದೆ.
ಇದೇ ಮಾದರಿಯ ಮತ್ತೆರಡು ಸ್ತಂಭಗಳು ಇವೆ. ಈ ನಾಲ್ಕು ಸ್ತಂಭಗಳ ನಡುವೆ ಬಹಳಷ್ಟು ಅಂತರವಿದ್ದು, ಇವುಗಳ ಮಧ್ಯೆ ನಂದಿಯೊಂದು ಪೂರ್ವಭಿಮುಖವಾಗಿ ಕುಳಿತುಕೊಂಡಿದೆ. ಈ ನಂದೀಶನ ಮುಖಭಾವವು ಗಂಭೀರವಾಗಿ ಏನನ್ನೋ ಪಿಸುಗುಡುವಂತೆ ಅನಿಸುತ್ತದೆ.
ಒಂಟಿಯಾಗಿಯೋ ಜಂಟಿಯಾಗಿಯೋ ಬಿಡುವಿರುವ ಸಮಯದಲ್ಲಿ ಕಲಾರಾಧನೆಯನ್ನು ಒಂದು ಸುತ್ತು ಸುತ್ತಬಹುದು. ಹೊಸದನ್ನು ತಿಳಿಯಬೇಕು, ಕಲಿಯಬೇಕು ಅನ್ನುವವರಿಗಂತೂ ರಸದೂಟವಾಗಬಹುದು. ಜಾನಪದ ಪರಂಪರೆಯ ವೈಭವವನ್ನು ಕಣ್ತುಂಬಿಕೊಳ್ಳಬಹುದು. ನಮ್ಮ ಶಿಲ್ಪ ಶಾಸ್ತ್ರದ ಬಗ್ಗೆ ಹೆಚ್ಚು ಮಾಹಿತಿ ಸಿಗದಿದ್ದರೂ ಸಣ್ಣ ಕಿರು ಚಿತ್ರಣವಂತೂ ದೊರೆಯುವುದರಲ್ಲಿ ಅನುಮಾನವಿಲ್ಲ.
ಸಂತೋಷ್ ಇರಕಸಂದ್ರ
ತುಮಕೂರು ವಿಶ್ವವಿದ್ಯಾನಿಲಯ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಐತಿಹಾಸಿಕ ಶಿಲ್ಪಕಲೆ: