ಸಮಾಜದಲ್ಲಿನ ಅಮಾನುಷಿಕ ಕೃತ್ಯಗಳಿಗೆ ಸ್ವ-ಸಂವಿಧಾನ ಉತ್ತರ | ಶ್ರವಣ್ ನೀರಬಿದಿರೆ
ಬಯಸಿದ್ದು ದೊರಕದೇ ಇದ್ದಾಗ ಉಂಟಾಗುವ ನಿರಾಸೆಯಿಂದ ಮನಸ್ಥಿತಿಯಲ್ಲಿ ಏರುಪೇರಾಗುವುದು ಎಲ್ಲರಲ್ಲೂ ಸಹಜವಾದ ವಿಷಯವಾಗಿದೆ. ಕೆಲವೊಂದಿಷ್ಟು ಕಾಲವಾದ ನಂತರ ಎಲ್ಲವೂ ಸರಿಯಾಗುತ್ತದೆ ಅನ್ನುವುದು ನಮ್ಮ ಪ್ರಜ್ಞೆಯಲ್ಲಿದ್ದರೆ ನಿರಾಸೆಯ ಕಾಲದಲ್ಲಿ ನಾವು ತೆಗೆದುಕೊಳ್ಳಬಹುದಾದ ಕೆಟ್ಟ ನಿರ್ಧಾರಗಳು ಇಲ್ಲವಾಗುತ್ತದೆ. ತಮ್ಮ ನಿರ್ಧಾರಗಳ ಮೇಲೆ ತಮಗೆ ನಿಯಂತ್ರಣ ಸಾಧಿಸಲು ಆಗದೆ ಇರುವುದರಿಂದ ಕಾನೂನಿಗೆ ವಿರುದ್ಧವಾದ ಹಾಗೂ ನೈತಿಕವಾಗಿ ಸರಿಯಲ್ಲದ ಫಟನೆಗಳಿಗೆ ಹಲವರು ಕಾರಣರಾಗುತ್ತಾರೆ. ಕಾನೂನಿಂದ ನಿಯಂತ್ರಿಸುವ ಮೊದಲು ಸ್ವ-ಸಂವಿಧಾನವನ್ನು ತಮಗೆ ತಾವೇ ಅಳವಡಿಸಿಕೊಂಡಾಗ ಮಾತ್ರ ಅಮಾನುಷ ಘಟನೆಗಳು ನಡೆಯದಿರುತ್ತದೆ.
ಪ್ರೀತಿಯನ್ನು, ಮದುವೆಯನ್ನು ನಿರಾಕರಿಸಿದ ಕಾರಣಕ್ಕೆ ಹುಡುಗಿಯರ ಹತ್ಯೆಯಾಗುತ್ತಿರುವುದು ಇತ್ತೀಚಿಗೆ ತೀರಾ ಸಾಮಾನ್ಯವೆಂಬಂತೆ ಸುದ್ದಿಯಾಗುತ್ತಿದೆ. ಕೆಲವೊಂದು ಹತ್ಯೆಗಳು ವಿವಿಧ ಕಾರಣಗಳಿಂದ ಸಂಚಲನ ಮೂಡಿಸಿದರೆ, ಉಳಿದವುಗಳು ಸಣ್ಣ ಕಾಲಂಗಳಲ್ಲಿ ಮೂಡಿ ಮರೆಯಾಗುತ್ತಿವೆ. ಇಂತಹ ವಿಷಯಗಳು ಒಂದಷ್ಟು ಕಾಲ ಸಮಾಜವನ್ನು, ಜನರನ್ನು ಕಾಡಿ ಆ ಕ್ಷಣದ ಆಕ್ರೋಶಕ್ಕೆ ಕಾರಣವಾಗುತ್ತಿದೆಯೇ ಹೊರತು ಮುಂದೇನು ಎನ್ನುವ ಪರಿಹಾರ ಮಾತ್ರ ಗೋಚರಿಸುತ್ತಿಲ್ಲ. ಕಠಿಣ ಕಾನೂನು ಕ್ರಮದ ಭರವಸೆಯನ್ನು ಸರಕಾರಗಳು ನೀಡುತ್ತವೆಯಾದರೂ ಈ ರೀತಿಯಾ ಅನಾಗರಿಕ ಕೃತ್ಯಗಳು ಇಲ್ಲವಾಗಬೇಕಾದರೆ ಮನಸ್ಥಿತಿ, ಮಾನಸಿಕತೆಗಳು ಬದಲಾಗಬೇಕು.
ನನಗೆ ಸಿಗದಿರುವುದು ಇನ್ನಾರಿಗೂ ಸಿಗಬಾರದು ಅಥವಾ ಜೀವಂತವಾಗಿಯೇ ಇರಬಾರದು ಎನ್ನುವುದು ಮನುಷ್ಯನ ಮನಸ್ಸಿನಲ್ಲಿರುವ ವಿಕೃತಿಯಾಗಿದೆ. ಆಕ್ರಮಣಕಾರಿ ಪ್ರವೃತ್ತಿ ಅಥವಾ ದ್ವೇಷ ಸಾಧನೆ ನಾಗರೀಕ ಸಮಾಜದಲ್ಲಿ ಸರಿಯಲ್ಲ. ಮಾನವ ಸಮಾಜ ಕಾಲದಿಂದ ಕಾಲಕ್ಕೆ ವಿಕಾಸ ಹೊಂದಿ ತನ್ನ ಆಲೋಚನ ಕ್ರಮ, ಆಡಳಿತ ಪದ್ಧತಿ ಹಾಗೂ ಸಾಮಾಜಿಕ ಪ್ರಕ್ರಿಯೆಗಳಲ್ಲಿ ಸುಧಾರಣೆ ಹೊಂದುತ್ತಾ ಬಂದಿದೆ. ಈ ಹಂತಗಳಲ್ಲಿ ತನ್ನ ಬುದ್ಧಿ ಮಟ್ಟ ಬೆಳವಣಿಗೆಯ ಕಾರಣ ನೈತಿಕವಾಗಿ ಸರಿ ತಪ್ಪುಗಳನ್ನು ಗುರುತಿಸಿಕೊಂಡಿದೆ. ಇವುಗಳನ್ನು ಬದುಕಿನಲ್ಲಿ ಕಂಡುಕೊಳ್ಳಲು ವಿಫಲವಾದಾಗ ಮಾತ್ರ ನಿರಾಕರಣೆಯ ಕಾರಣಕ್ಕೆ ಕೊಲೆಯಾಗಲು ಸಾಧ್ಯ.
ಕಾನೂನಿನ ಭಯ ಒಬ್ಬ ವ್ಯಕ್ತಿ ತಪ್ಪನ್ನೆಸಗದಂತೆ ತಡೆಯಬಹುದು. ತನಗೆ ಒದಗಬಹುದಾದ ಶಿಕ್ಷೆಗೆ ಹೆದರಿ ತಾನು ಮಾಡಲು ಹೊರಟಿರುವ ಕೃತ್ಯದಿಂದ ಹೊರಗುಳಿಯುವಂತೆ ಮಾಡಬಹುದು. ಆದರೆ ಅದು ಅವನ ಮಾನಸಿಕತೆಯನ್ನು ಬದಲಾಯಿಸಲು ಶಕ್ತವಾಗುವುದಿಲ್ಲ. ಅದಾಗಬೇಕಾದರೆ ಅವನಲ್ಲಿ ಸ್ವ ಸುಧಾರಣೆಯಾಗಬೇಕು. ನೈತಿಕವಾಗಿ ಸರಿ ತಪ್ಪುಗಳನ್ನು ಗುರುತಿಸಿ ತನ್ನಲ್ಲಿ ಅಳವಡಿಸಿಕೊಳ್ಳುವ ಹಂತಕ್ಕೆ ಮಾನವ ಸಮಾಜ ತಲುಪಿದಾಗ ಮಾತ್ರ ಕೊಲೆಯಂತಹ ಹೀನ ಕೃತ್ಯಗಳು ಇಲ್ಲವಾಗಬಹುದು.
ನಾವು ಬದುಕಿನಲ್ಲಿ ಕೈಗೊಳ್ಳುವ ನಿರ್ಧಾರಗಳು ಕೇವಲ ಕಾನೂನು, ಸಂವಿಧಾನದ ಭಯದ ಕಾರಣಕ್ಕಾಗಿ ಸರಿಯಾಗಿರಬಾರದು. ಹೊರತಾಗಿ ಸ್ವಂತ ಪ್ರಜ್ಞೆಯ ಅರಿವಿನಿಂದ ಮೂಡಿದ ಸ್ವ-ಸಂವಿಧಾನದ ಅಡಿಯಲ್ಲಿ ಗಟ್ಟಿಯಾಗಿರಬೇಕು. ಇಲ್ಲವಾದರೇ ಯಾವುದೋ ಒಂದು ಕ್ಷಣದ ಆಕ್ರೋಶ, ದ್ವೇಷದ ಕಾರಣದಿಂದ ಕಾನೂನಿನ ಭಯ ಮೀರಬಹುದು. ಶಿಕ್ಷೆಗೆ ಹೆದರದೇ ದ್ವೇಷ ಸಾಧಿಸಬಹುದು. ಯಾವಾಗ ನಾವು ಅಂತಃಕರಣ, ಮನಃಸಾಕ್ಷಿಯ ಕಾರಣದಿಂದ, ಬೌದ್ಧಿಕ ಕಾರಣದಿಂದ ಸರಿಯಾಗಿರುತ್ತೇವೇಯೋ ಆಗ ಮಾತ್ರ ಸಂಕುಚಿತ ಆಲೋಚನೆಗಳನ್ನು ಮೀರಿ ನಿಂತು ಪ್ರಜ್ಞಾವಂತ ಸಮಾಜವಾಗಲು ಸಾಧ್ಯ. ಇಲ್ಲವಾದಲ್ಲಿ ಇಂತಹ ಕೃತ್ಯಗಳು ಮುಂದೆಯೂ ನಿಯಂತ್ರಣವಿಲ್ಲದೆ ನಡೆಯುತ್ತಿರುತ್ತವೆ. ಆದ್ದರಿಂದ ಕಾನೂನಿನ ಅರಿವಿನ ಜೊತೆಗೆ ನೈತಿಕ ಪ್ರಜ್ಞೆಯನ್ನೂ ಸಮಾಜದಲ್ಲಿ ಬಿತ್ತರಿಸುವುದು ಇಂದಿನ ಅಗತ್ಯವಾಗಿದೆ.
ಶ್ರವಣ್ ನೀರಬಿದಿರೆ
ಪ್ರಥಮ ಜೆ.ಎಂ.ಸಿ
ಎಸ್.ಡಿ.ಎಂ. ಕಾಲೇಜು, ಉಜಿರೆ
One thought on “ಸಮಾಜದಲ್ಲಿನ ಅಮಾನುಷಿಕ ಕೃತ್ಯಗಳಿಗೆ ಸ್ವ-ಸಂವಿಧಾನ ಉತ್ತರ | ಶ್ರವಣ್ ನೀರಬಿದಿರೆ”
ಎಳೆಯ ಪೀಳಿಗೆಯಿಂದ ಬಂದ ಈ ಪ್ರಬುದ್ಧ ಚಿಂತನೆ ಮನ ಮನಗಳನ್ನು ಮುಟ್ಟಲಿ ತಟ್ಟಲಿ